ಮುಖ್ಯ ಸುದ್ದಿ
ದುಶ್ಚಟಗಳಿಂದ ದೂರವಿದ್ದರೆ ಉತ್ತಮ ಬದುಕು | ಎಸ್ಪಿ ರಂಜಿತ್ ಕುಮಾರ್ ಬಂಡಾರು
CHITRADURGA NEWS | 19 DECEMBER 2024
ಚಿತ್ರದುರ್ಗ: ಮಾದಕ ವಸ್ತುಗಳು ಹಾಗೂ ದುಶ್ಚಟಗಳಿಂದ ದೂರವಿದ್ದು, ಯುವ ಜನತೆ ಓದು, ಕ್ರೀಡೆ ಇನ್ನಿತರೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹೇಳಿದರು.
ಕ್ಲಿಕ್ ಮಾಡಿ ಓದಿ: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆಗೆ, ಗೋವಿಂದ ಕಾರಜೋಳ ಏನು ಹೇಳಿದ್ದಾರೆ ನೋಡಿ..
ಜಿಲ್ಲಾ ಪೊಲೀಸ್ ವತಿಯಿಂದ ಗುರುವಾರ ನಗರದ ಟಿಪ್ಪು ವೃತ್ತದಲ್ಲಿ ಅಪರಾಧ ತಡೆ ಮಾಸಾಚರಣೆ ಕಾಯ್ದೆ ಅಡಿಯಲ್ಲಿ ಆಯೋಜಿಸಲಾಗಿದ್ದ ನಶೆ ಮುಕ್ತ ಕರ್ನಾಟಕ ವಿಶೇಷ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವ್ಯಸನವು ದೈಹಿಕ ಮತ್ತು ಮಾನಸಿಕವಾಗಿ ಗಾಢವಾದ ದುಷ್ಪರಿಣಾಮ ಬೀರಲಿದೆ. ಹಾಗಾಗಿ ಯುವ ಜನರು ಜೀವಕ್ಕೆ ಮಾರಕವಾಗುವ ವ್ಯಸನಗಳನ್ನು ಬೆಳೆಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಓದು, ಕ್ರೀಡೆ, ಇನ್ನಿತರೆ ಹವ್ಯಾಸಗಳನ್ನು ರೂಢಿಸಿಕೊಳ್ಳವುದರಿಂದ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಸಾರ್ವಜನಿಕ ವಲಯದಲ್ಲಿ ಮಾದಕ ವಸ್ತುಗಳ ಬಳಕೆ, ಮಾರಾಟ ಮತ್ತು ಶೇಖರಣೆಗೆ ಸಂಬಂಧಿಸಿದಂತೆ ಮಾಹಿತಿ ಕಂಡು ಬಂದಲ್ಲಿ “ಡ್ರಗ್ ಫ್ರೀ ಕರ್ನಾಟಕ ಆ್ಯಪ್” ಮೂಲಕ ಮಾಹಿತಿ ನೀಡಬಹುದು.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಗುರುವಾರದ ಹತ್ತಿ ರೇಟ್ ಇಲ್ಲಿದೆ…
ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು. ಇಂತಹ ಕೃತ್ಯಗಳಲ್ಲಿ ಭಾಗಿಯಾದವರನ್ನು ಎನ್‍ಡಿಪಿಎಸ್ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆ ಮನೋವೈದ್ಯ ಡಾ.ಮಂಜುನಾಥ್ ಮಾತನಾಡಿ, ಇತ್ತೀಚೆಗೆ ಮಾದಕ ವ್ಯಸನ ಹಾಗೂ ಇನ್ನಿತರೆ ದುಶ್ಚಟಗಳ ಬಳಕೆ ಪ್ರಮಾಣ ಹೆಚ್ಚಾಗುತ್ತಿದೆ. ಅದರಲ್ಲೂ 15 ರಿಂದ 17 ವರ್ಷದೊಳಗಿನ ಮಕ್ಕಳೇ ದುಷ್ಕøತ್ಯಗಳಲ್ಲಿ ತೊಡಗಿರುವುದು ಆಶ್ಚರ್ಯಕರ ಸಂಗತಿ. ಮಾದಕ ವಸ್ತುಗಳ ಬಳಕೆಯಿಂದ ತನಗರಿವಿಲ್ಲದೇ ವಿವಿಧ ರೀತಿಯ ದುಷ್ಕ್ಯತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಂತಹ ಕೃತ್ಯಗಳಲ್ಲಿ ಭಾಗಿಯಾದವರಿಗೆ ಆರಂಭಿಕ ಹಂತದಲ್ಲೇ ಸಹಾನುಭೂತಿ ಹಾಗೂ ತಾಳ್ಮೆಯಿಂದ ತಿಳಿ ಹೇಳುವುದಲ್ಲದೇ ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾತನಾಡಿ, ಮಾನವ ಜನ್ಮ ಅಮೂಲ್ಯವಾದುದು. ಇರುವಷ್ಟು ದಿನ ಉತ್ತಮವಾದ ಜೀವನ ನಡೆಸಬೇಕು. ಗಾಂಜಾ, ಹಫೀಮು, ಗುಟುಕದಂತಹ ದುಶ್ಚಟಗಳಿಗೆ ದಾಸರಾಗಬಾರದು. ಅವುಗಳಿಂದ ಹೃದಯಾಘಾತ, ಕಿಡ್ನಿ ಸಮಸ್ಯೆ, ಕ್ಯಾನ್ಸರ್‍ನಂತಹ ಮಾರಕ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಆದ್ದರಿಂದ ಯುವಕರು ಇಂತಹ ದುಶ್ಚಟಗಳಿಗೆ ಬಲಿಯಾಗದೆ ಭವಿಷ್ಯದಲ್ಲಿ ಉತ್ತಮವಾದ ಜೀವನ ರೂಪಿಸಿಕೊಳ್ಳುವುದರ ಜೊತೆಗೆ ಆರೋಗ್ಯ ಬಗ್ಗೆ ಕಾಳಜಿವಹಿಸಬೇಕು ಎಂದು ಸಲಹೆ ನೀಡಿದರು.
ಕ್ಲಿಕ್ ಮಾಡಿ ಓದಿ: ವಾಲ್ಮೀಕಿ ನಾಯಕ ನೌಕರರ ಸಮಾವೇಶ | 135 ಸಾಧಕರು, ವಿದ್ಯಾರ್ಥಿಗಳಿಗೆ ಸನ್ಮಾನ | ಸಚಿವ ಸತೀಶ್ ಜಾರಕಿಹೊಳಿಗೆ ಆಹ್ವಾನ
ಅಪರಾಧ ಠಾಣೆ ಇನ್ಸ್‍ಪೆಕ್ಟರ್ ಎನ್.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಪೊಲೀಸ್ ಉಪಾಧೀಕ್ಷಕ ಪಿ.ಕೆ. ದಿನಕರ್, ಡಿಎಆರ್ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್.ಎಸ್.ಗಣೇಶ್, ಜಿಲ್ಲಾ ವಕ್ಫ್‍ಬೋರ್ಡ್ ಅಧ್ಯಕ್ಷ ಎಂ.ಸಿ.ಓ ಬಾಬು, ನಗರಸಭೆ ಸದಸ್ಯರಾದ ಗೊಪ್ಪೆ ಮಂಜುನಾಥ, ಸೈಯದ್ ಸೈಫುಲ್ಲಾ, ಉಸ್ಮಾನಿಯ ಮಸೀದಿ ಅಧ್ಯಕ್ಷ ಬಾಬು ಪಾಟೀಲ್, ಸ್ಥಳೀಯ ಮುಖಂಡರಾದ ಷಬ್ಬೀರ್, ದಾದಾಪೀರ್ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿ, ವಿವಿಧ ಶಾಲಾ ಕಾಲೇಜು ಮಕ್ಕಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಜಾಥಾ:
ನಶೆ ಮುಕ್ತ ಕರ್ನಾಟಕ ವಿಶೇಷ ಅಭಿಯಾನದ ಅಂಗವಾಗಿ ನಗರದ ಕನಕ ವೃತ್ತದಲ್ಲಿ ಆಯೋಜಿಸಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಚಾಲನೆ ನೀಡಿದರು.
ನಗರದ ಕನಕ ವೃತ್ತದಿಂದ ಆರಂಭವಾದ ಜಾಥಾವು ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕರ, ಬನ್ನಿ ಚಿತ್ರದುರ್ಗ ಜಿಲ್ಲೆಯನ್ನು ನಶೆ ಮುಕ್ತಗೊಳಿಸಲು ನಮ್ಮೊಂದಿಗೆ ಕೈ ಜೋಡಿಸಿ, ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಮುಂತಾದ ಘೋಷಣೆಗಳೊಂದಿಗೆ ಚೇಳಗುಡ್ಡ ರಸ್ತೆ, ಕೋಹಿನೂರ್ ಆಟೋ ನಿಲ್ದಾಣ, ತಾಜ್‍ಪೀರ್ ಲೇಔಟ್, ಫಾತಿಮಾ ಮಸೀದಿಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಟಿಪ್ಪು ವೃತ್ತದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಕ್ಲಿಕ್ ಮಾಡಿ ಓದಿ: ಕನ್ನಡ ಶಿಕ್ಷಕಿ ಟಿ.ಸ್ವೀಟಿ ಕಲಾಂಜಲಿ ನಿಧನ | ಶನಿವಾರ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ
ಈ ಸಂದರ್ಭದಲ್ಲಿ ಚಿತ್ರದುರ್ಗ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪಿ.ಕೆ.ದಿನಕರ್, ಡಿಎಆರ್ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್.ಎಸ್.ಗಣೇಶ್, ಜಿಲ್ಲಾ ಶಸ್ತ್ರಚಿಕಿತ್ಸಕ ರವೀಂದ್ರ, ಮನೋವೈದ್ಯ ಮಂಜುನಾಥ, ಅಪರಾಧ ಠಾಣೆ ಇನ್ಸ್‍ಪೆಕ್ಟರ್ ಎನ್.ವೆಂಕಟೇಶ್, ನಗರಸಭೆ ಸದಸ್ಯ ಗೊಪ್ಪೆ ಮಂಜುನಾಥ್, ಸೈಯದ್ ಸೈಫುಲ್ಲ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿ, ಬಸವೇಶ್ವರ ಮೆಡಿಕಲ್ ಕಾಲೇಜು, ಸರ್ಕಾರಿ ನರ್ಸಿಂಗ್ ಕಾಲೇಜ್, ಜ್ಞಾನವಿಕಾಸ ಹಾಗೂ ಬರಗೇರಮ್ಮ ಶಾಲಾ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.