ಮುಖ್ಯ ಸುದ್ದಿ
ಶ್ರೀ ಬಾಗೋಡೇಶ್ವರ ಸ್ವಾಮಿ | ಅದ್ಧೂರಿಯಾಗಿ ಜರುಗಿದ ಜಾತ್ರಾ ಮಹೋತ್ಸವ
CHITRADURGA NEWS | 22 MARCH 2024
ಚಿತ್ರದುರ್ಗ: ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ತಾಲ್ಲೂಕಿನ ಬ್ರಹ್ಮಸಮುದ್ರ ಮಂಡಲದ ಕೋನಾಪುರ ಗ್ರಾಮದಲ್ಲಿ ಗುರುವಾರ ಬಿಲ್ಲಿನ ಕುರುಬರ ಮನೆ ದೇವರಾದ ಶ್ರೀ ಬಾಗೋಡೇಶ್ವರ ಸ್ವಾಮಿಯ ದೊಡ್ಡದೇವರ ಜಾತ್ರೆ, ಅಶ್ವರೂಢ ಬಾಗೋಡೇಶ್ವರ ಸ್ವಾಮಿಯ ನೂತನ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಪೂಜಾರಿ ಪಟ್ಟಾಭಿಷೇಕ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ಇದನ್ನೂ ಓದಿ: ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವಕ್ಕೆ ಹೊರಕೆರೆ ದೇವರಪುರ ಸಜ್ಜು
ಕಾಮಸಮುದ್ರದ ಕರಿಯಣ್ಣ ಸ್ವಾಮಿ, ಪೋಲೇನಹಳ್ಳಿ ಮಾಲೂರಪ್ಪ ಸ್ವಾಮಿ, ವುಡೇವು ಬಾಗೋಡಪ್ಪ ಸ್ವಾಮಿ, ಕೋನಾಪುರದ ಬಾಗೋಡಪ್ಪ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಫಾಲ್ಗುಣ ಶುದ್ಧ ಏಕಾದಶಿಯ ಬುಧವಾರ ಹಂಪಿಗೆ ಕರೆದೊಯ್ದು ತುಂಗಾ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ, ಗ್ರಾಮಕ್ಕೆ ವಾಪಾಸ್ಸಾಗಿ ಅಹೋರಾತ್ರಿ ಭಜನೆ ನಡೆಸಲಾಯಿತು.
ಫಾಲ್ಗುಣ ಶುದ್ಧ ದ್ವಾದಶಿಯ ಗುರುವಾರದಂದು ಸ್ವಾಮಿಯ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ, ಛತ್ರ-ಛಾಮರ, ಉರುಮೆ, ಡೊಳ್ಳು ವಾದ್ಯಗಳ ಸಮೇತ ಮೆರವಣಿಗೆ ಮೂಲಕ ಕರೆದೊಯ್ದು ಗ್ರಾಮದಲ್ಲಿ ಗಂಗಾ ಪೂಜೆ ನಡೆಸಲಾಯಿತು.
ಇದನ್ನೂ ಓದಿ: ರೈತರ ಗಮನಕ್ಕೆ | ಬೋರ್‍ವೆಲ್ ಪ್ರತಿ ಅಡಿಗೆ ರೂ.105 ಫಿಕ್ಸ್
ಬಿಲ್ಲಿನ ಕುರುಬರು ಹಾಗೂ ನೆಂಟರಿಷ್ಟರು ಪರಸ್ಪರ ಮಡಿಲಕ್ಕಿ ಹಾಕುವ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಲಿಂಗಾರೆಡ್ಡಿ ಪುತ್ರ ನಂದನ್ ಚಕ್ರವರ್ತಿಗೆ ಪೂಜಾರಿ ಪಟ್ಟಾಭಿಷೇಕ ಮಹೋತ್ಸವ ಜರುಗಿತು.
ರಾತ್ರಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಯಿತು, ಬಳಿಕ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಫಾಲ್ಗುಣ ಶುದ್ಧತ್ರಯೋದಶಿಯ ಗುರುವಾರದಂದು ಯಲ್ಲಮ್ಮ ಸಾಕಿ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ: ಅಧಿಕಾರಿಗಳ ವಶಕ್ಕೆ ಮಂಕಿ ಮ್ಯಾನ್ ಜ್ಯೋತಿರಾಜ್
ದೊಡ್ಡದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಬಾಗೋಡೇಶ್ವರ ಸ್ವಾಮಿ, ಆರೂಢ ಚನ್ನಮಲ್ಲಪ್ಪಸ್ವಾಮಿ ದೇವಸ್ಥಾನಗಳನ್ನು ತಳಿರು ತೋರಣ, ಪುಷ್ಪಗಳು ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.
ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಚಿತ್ರದುರ್ಗ ತಾಲೂಕಿನ ಐನಹಳ್ಳಿ ಕುರುಬರಹಟ್ಟಿ, ಮಾಳಪ್ಪನಹಟ್ಟಿ, ಮಾಡನಾಯಕನ ಹಳ್ಳಿ, ಕೋನಾಪುರ, ಕಲ್ಯಾಣದುರ್ಗ, ಅನಂತಪುರ, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಭಕ್ತರು ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ನಾಯಕನಹಟ್ಟಿ ರಥಕ್ಕೆ 2.5 ಕೋಟಿ ವಿಮೆ
ಚಿತ್ರದುರ್ಗದ ಪರಮೇಶ್, ಮಾಳಪ್ಪನಹಟ್ಟಿಯ ಸುರೇಶ್ ಉಗ್ರಾಣ, ಬುರುಜನಹಟ್ಟಿ ರಮೇಶ್, ಮತ್ತಿತರರ ಸಹಕಾರದಿಂದ ಸುಮಾರು 7 ಕೆ.ಜಿ.ಯ ಅಶ್ವಾರೂಢ ಬಾಗೋಶ್ವರ ಸ್ವಾಮಿಯ ಬೆಳ್ಳಿಯ ನೂತನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು.
ಮೂರು ದಿನಗಳ ಕಾಲ ಸಾವಿರಾರು ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇದನ್ನೂ ಓದಿ: ಎಎಪಿ ನಿರ್ನಾಮ ಮಾಡಲು ಬಿಜೆಪಿ ಕುತಂತ್ರ
ಶ್ರೀ ಬಾಗೋಡೇಶ್ವರಸ್ವಾಮಿ ದೊಡ್ಡ ಜಾತ್ರೆ ಸುಮಾರು 200 ವರ್ಷಗಳ ನಂತರ ನಡೆಯುತ್ತಿದೆ. ಜಾತ್ರೆ ಇಷ್ಟೊಂದು ಅದ್ಧೂರಿ ಜರುಗಲು ಮುಖ್ಯವಾಗಿ ಚಿತ್ರದುರ್ಗ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರೆ ಯಶಸ್ವಿಗೊಳಿಸಿದ್ದಾರೆ ಎಂದು ಪ್ರಧಾನ ಅರ್ಚಕ ನಿಂಗಾರೆಡ್ಡಿ ಹೇಳಿದರು.