Connect with us

    ಬಾಯಲ್ಲಿ ಸವೆದ ಪೆಪ್ಪರ್ ಮೆಂಟಿನಾಕಾರದ ಒಂದು ಚಂದ್ರ ಕಂಡರೆ | ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳ ವಿಶೇಷ ಲೇಖನ

    TARABALU 2

    ಮುಖ್ಯ ಸುದ್ದಿ

    ಬಾಯಲ್ಲಿ ಸವೆದ ಪೆಪ್ಪರ್ ಮೆಂಟಿನಾಕಾರದ ಒಂದು ಚಂದ್ರ ಕಂಡರೆ | ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳ ವಿಶೇಷ ಲೇಖನ

    CHITRADURGA NEWS | 9 APRIL 2024
    ಚಿತ್ರದುರ್ಗ: ಭಾರತೀಯರು ವಿಶ್ವದ ಇತರೆ ದೇಶಗಳ ಜನರಂತೆ ದೈನಂದಿನ ವ್ಯವಹಾರದಲ್ಲಿ ಇಂಗ್ಲಿಷ್ ಕ್ಯಾಲೆಂಡರನ್ನೇ ಅನುಸರಿಸುತ್ತಾರೆ. ಆದರೆ ಹಬ್ಬ ಹರಿದಿನಗಳನ್ನು ಆಚರಿಸುವಾಗ ಮಾತ್ರ ಸಾಂಪ್ರದಾಯಿಕವಾಗಿ ದೇಶೀಯ ಪಂಚಾಂಗದ ತಿಥಿ ವಾರ ನಕ್ಷತ್ರಗಳನ್ನು ನೋಡುತ್ತಾರೆ. ಅಂತಹ ಹಬ್ಬಗಳಲ್ಲಿ ಒಂದು ಪ್ರಮುಖವಾದ ಹಬ್ಬ ‘ಯುಗಾದಿ’.

    ಉತ್ತರ ಭಾರತೀಯರು ಸೂರ್ಯನ ಚಲನೆಯನ್ನು ಆಧರಿಸಿ ಸೌರಮಾನ ಯುಗಾದಿಯನ್ನು ಆಚರಿಸಿದರೆ, ದಕ್ಷಿಣ ಭಾರತೀಯರು ಚಂದ್ರನ ಚಲನೆಯನ್ನು ಆಧರಿಸಿ ಚಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ. ಫಾಲ್ಗುಣ ಮಾಸದ ಅಮಾವಾಸ್ಯೆಯ ಮರುದಿನವೇ ಬರುವ ಚೈತ್ರ ಮಾಸದ ಪಾಡ್ಯದ ದಿವಸವೇ ಯುಗಾದಿ ಹಬ್ಬ.

    ನೂತನ ವರ್ಷದ ಮೊದಲ ದಿನ. ಹೊಸ ಚಿಗುರಿನಿಂದ ಗಿಡ ಮರಗಳು ಶೋಭಿಸುವಂತೆ ಜನರು ಮೈಗೆ ಎಣ್ಣೆ ನೀರು ಹಾಕಿಕೊಂಡು ಹೊಸ ಬಟ್ಟೆಯನ್ನು ಉಟ್ಟು ಸಡಗರ ಸಂಭ್ರಮಗಳಿಂದ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ವರಕವಿ ಬೇಂದ್ರೆಯವರ ಮಾತಿನಲ್ಲಿ ಹೇಳುವುದಾದರೆ:

    ಯುಗ ಯುಗಾದಿ ಕಳೆದರೂ
    ಯುಗಾದಿ ಮರಳಿ ಬರುತಿದೆ
    ಹೊಸ ವರುಷಕೆ ಹೊಸ ಹರುಷವ
    ಹೊಸತು ಹೊಸತು ತರುತಿದೆ!

    ಈ ಯುಗಾದಿ ಹಬ್ಬ ಕರ್ನಾಟಕದಲ್ಲಿ ಎಷ್ಟೊಂದು ಪ್ರಸಿದ್ಧವೆಂದರೆ ಗ್ರಾಮೀಣ ಜನರ ಬಾಯಲ್ಲಿ ಒಂದು ಪ್ರಸಿದ್ಧವಾದ ಹಾಗೂ ಅತ್ಯಂತ ಶಕ್ತಿಯುತವಾದ ನಾಣ್ಣುಡಿಯೇ ಇದೆ: ‘ಊರೆಲ್ಲಾ ಉಗಾದಿ ಮಾಡಿದರೆ, ಅಡ್ನಾಡಿ ಅಮಾಸ್ಯೆ ಮಾಡಿತ್ತಂತೆ!’ ಜನರೊಂದಿಗೆ ಹೊಂದಿಕೊಂಡು ಬಾಳುವುದನ್ನು ಬಿಟ್ಟು ತನ್ನದೇ ಆದ ವಿಚಿತ್ರ ರೀತಿಯಲ್ಲಿ ವರ್ತಿಸುವ ಸ್ವಪ್ರತಿಷ್ಠೆಯ ವ್ಯಕ್ತಿಯನ್ನು ಕಂಡು ಹಳ್ಳಿಯ ಜನರು ಆಡುವ ಮೂದಲಿಕೆಯ ಮಾತಿದು.

    ಭಾರತೀಯ ದಾರ್ಶನಿಕರು ಕಾಲವನ್ನು ಎರಡು ಭಾಗವಾಗಿ ವಿಂಗಡಿಸುತ್ತಾರೆ ಒಂದು ಪರ ಮತ್ತೊಂದು ಅಪರ. “ಪರ” ಎಂದು ಕರೆಸಿಕೊಳ್ಳುವ ಕಾಲ ಅಖಂಡ. ಅದರಲ್ಲಿ ಭೂತ, ಭವಿಷ್ಯ ವರ್ತಮಾನಗಳ ಪ್ರಭೇದಗಳು ಇರುವುದಿಲ್ಲ. ಏಕೆಂದರೆ ಅದು ಅನಾದಿ ಮತ್ತು ಅನಂತ. ಅದರ ಅನುಭವ ಮನುಷ್ಯನಿಗೆ ಆಗುವುದು ಕಷ್ಟ. ಏಕೆಂದರೆ ಮನುಷ್ಯನು ಕಾಲ ಮತ್ತು ದೇಶದ ಪರಿಮಿತಿಗೆ ಒಳಪಟ್ಟವನು; ಅವುಗಳನ್ನು ಮೆಟ್ಟಿ ನಿಲ್ಲಲು ಅವನಿಂದ ಸಾಧ್ಯವಿಲ್ಲ. ಕಾಲಾತೀತ, ದೇಶಾತೀತನಾಗಿರಲು ಭಗವಂತನಿಂದ ಮಾತ್ರ ಸಾಧ್ಯ. ಇನ್ನು ಮನುಷ್ಯನ ಗ್ರಹಿಕೆಗೆ ಬರುವ ಕಾಲವನ್ನು ‘ಅಪರ’ ಎಂದು ಕರೆಯುತ್ತಾರೆ.

    ಕ್ಲಿಕ್‌ ಮಾಡಿ ಓದಿ:‌ ಮನೆಯಿಂದಲೇ ಮತದಾನಕ್ಕೆ ಡೇಟ್ ಫಿಕ್ಸ್ | ಕೇವಲ ಮೂರು ದಿನ ಅವಕಾಶ

    ಅದು ಭೂತ, ಭವಿಷ್ಯ, ವರ್ತಮಾನವಾಗಿ ಮನುಷ್ಯನ ಜೀವನದಲ್ಲಿ ಅನುಭವಕ್ಕೆ ಬರುತ್ತದೆ. ನಾಳೆಯ ಭವಿಷ್ಯ ಇಂದಿನ ವರ್ತಮಾನವಾಗಿ ಬಂದು ನಿನ್ನೆಯ ಭೂತಕಾಲಕ್ಕೆ ಖಾಯಂ ಆಗಿ ಸರಿದು ಹೋಗುತ್ತದೆ. ಮತ್ತೆ ನಾಳೆಯ ಭವಿಷ್ಯತ್ ಕಾಲದಲ್ಲಿ ಏನು ಕಾದಿದೆಯೋ ಎಂಬ ಆತಂಕದಲ್ಲಿಯೇ ಮತ್ತೆ ಮನುಷ್ಯ ಸದಾ ಬದುಕುತ್ತಾನೆ.

    ನಾಳೆಯ ಭವಿಷ್ಯ ಇಂದಿನ ವರ್ತಮಾನದಲ್ಲಿ ಅನುಭವಕ್ಕೆ ಬಂದಾಗ ಅದು ಕೆಲವೊಮ್ಮೆ ಸುಖವಾಗಿ ಪರಿಣಮಿಸಿ ಮನುಷ್ಯನ ಮನಸ್ಸನ್ನು ಉಲ್ಲಾಸಗೊಳ್ಳುವಂತೆ ಮಾಡಬಹುದು ಅಥವಾ ಕೆಲವೊಮ್ಮೆ ದುಃಖವಾಗಿ ಪರಿಣಮಿಸಿ ಮನುಷ್ಯನ ಮನಸ್ಸನ್ನು ಘಾಸಿಗೊಳಿಸಬಹುದು. ಹಾಗೆಯೇ ವರ್ತಮಾನ ಕಾಲದಲ್ಲಿ ಸುಖದ ಅನುಭವವನ್ನು ತಂದು ಆಹ್ಲಾದವನ್ನುಂಟುಮಾಡಿ ಭೂತಕಾಲಕ್ಕೆ ಸರಿದು ಹೋದ ಕಾಲ ಸುಖದ ನೆನಪುಗಳನ್ನು ಮತ್ತೆ ಮತ್ತೆ ತಂದು ಕೊಟ್ಟು ಮನುಷ್ಯ ಸದಾ ಅದಕ್ಕಾಗಿ ಹಪ ಹಪಿಸುವಂತೆ ಮಾಡುತ್ತದೆ.

    ಅಂತೆಯೇ ವರ್ತಮಾನದಲ್ಲಿ ದುಃಖದ ಕಹಿ ಅನುಭವವನ್ನುಂಟು ಮಾಡಿ ಭೂತಕಾಲಕ್ಕೆ ಸರಿದು ಹೋದ ಕಾಲ ಮತ್ತೆ ಮತ್ತೆ ನೆನಪಿಗೆ ಬರಬಹುದಾದರೂ ಮನುಷ್ಯ ಅದನ್ನು ಮರೆಯಲು ಬಯಸುತ್ತಾನೆಯೇ ಹೊರತು ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅಷ್ಟೇ ಅಲ್ಲ, ಅಂತಹ ಕಹಿ ಅನುಭವ ಮತ್ತೆ ಭವಿಷ್ಯತ್ತಿನಲ್ಲಿ ಉಂಟಾಗುವುದನ್ನೂ ಸಹ ಬಯಸುವುದಿಲ್ಲ. ಆದರೆ ಕಾಲದ ಗತಿ ಮನುಷ್ಯನ ಇಷ್ಟಾನಿಷ್ಟಗಳನ್ನು ಅವಲಂಬಿಸಿರುವುದಿಲ್ಲ. ಅವನಿಗೆ ಇಷ್ಟ ಇರಲಿ ಇಲ್ಲದಿರಲಿ ಸುಖದುಃಖಗಳು ಮನುಷ್ಯನ ಜೀವನದಲ್ಲಿ ಗೋಡೆಯ ಗಡಿಯಾರದ ಲೋಲಕದಂತೆ ಸದಾ ಓಲಾಡುತ್ತಲೇ ಇರುತ್ತವೆ (Life is a pedulam oscillating between joy and sorrow).

    ಕ್ಲಿಕ್‌ ಮಾಡಿ ಓದಿ:‌ ಲೋಕಸಭೆ ಚುನಾವಣೆ: ದೈನಂದಿನ ಪ್ರಚಾರದ ವೆಚ್ಚದ ಲೆಕ್ಕವಿಡಿ | ಮನೋಹರ್ ಮರಂಡಿ ಸೂಚನೆ

    ಒಮ್ಮೆ ಸುಖ ಬಂದರೆ ಮತ್ತೊಮ್ಮೆ ದುಃಖ. ಅವುಗಳಲ್ಲಿ ಮನುಷ್ಯ ಯಾವಾಗಲೂ ಸುಖವನ್ನೇ ಬಯಸುತ್ತಾನೆ. ಆದರೆ ಜೀವನದಲ್ಲಿ ಹಾಗೆ ಆಗುವುದಿಲ್ಲ. ‘If wishes were horses, beggars would ride’ (ಮನುಷ್ಯನ ಬಯಕೆಗಳು ಕುದುರೆಗಳಾಗಿದ್ದರೆ, ಭಿಕ್ಷುಕರೂ ಅವುಗಳ ಮೇಲೆ ಸವಾರಿ ಮಾಡುತ್ತಿದ್ದರು) ಎಂಬ ಗಾದೆ ಮಾತೊಂದು ಆಂಗ್ಲಭಾಷೆಯಲ್ಲಿದೆ.

    ಜೀವನದ ಗೋಡೆಯ ಗಡಿಯಾರದ ಲೋಲಕ ಸುಖದ ಕಡೆಗೆ ನಿಲ್ಲಲಿ ಎಂದು ಮನುಷ್ಯ ಹಾರೈಸುವುದು ಸಹಜ. ಹಾಗೇನಾದರೂ ಆದರೆ ಮನುಷ್ಯನಿಗೆ ಸುಖದ ತೀವ್ರತರವಾದ ಅನುಭವ ಆಗುವುದಿಲ್ಲ. ಅದರಿಂದ ಜೀವನದಲ್ಲಿ ಸ್ವಾರಸ್ಯ ಇರುವುದಿಲ್ಲ. ಲೋಲಕ ಸದಾ ಚಲಿಸುತ್ತಲೇ ಇರಬೇಕು. ಒಂದೆಡೆ ನಿಲ್ಲುವಂತಾದರೆ ಅದು ಗೋಡೆಯ ಗಡಿಯಾರ ಕೆಟ್ಟಿದೆ ಎಂಬುದರ ಸಂಕೇತ ಎಂಬುದನ್ನು ನಾವು ಮರೆಯಬಾರದು.
    ಒಮ್ಮೊಮ್ಮೆ ದುಃಖ-ದುಮ್ಮಾನಗಳು, ಕಷ್ಟ-ಕೋಟಲೆಗಳು ಹಠಾತ್ತನೆ ಸುನಾಮಿ ಅಲೆಯಂತೆ ಎಲ್ಲಿಂದಲೋ ಬಂದು ಒಂದರ ಮೇಲೊಂದರಂತೆ ಸರದಿಯ ಮೇಲೆ ಬಂದೆರಗಿ ಮನುಷ್ಯನನ್ನು ಜರ್ಝರಿತಗೊಳಿಸುತ್ತವೆ.“Cowards die many a times before their death” (ಹೇಡಿಗಳಾದವರು ಸಾಯುವುದಕ್ಕೆ ಮುಂಚೆ ಅನೇಕ ಸಾರಿ ಸಾಯುತ್ತಾರೆ) ಎಂದು ಷೇಕ್ಸ್ಪಿಯರ್ ಹೇಳುತ್ತಾನೆ. ಅವುಗಳಿಂದ ಪಾರಾಗುವುದು ಕಷ್ಟಸಾಧ್ಯವಾದರೂ ಅಂತಹ ಸಂದರ್ಭಗಳನ್ನು ಧೈರ್ಯವಾಗಿ ಎದುರಿಸಲು ಮನುಷ್ಯ ಸಿದ್ಧನಾಗಿರಬೇಕು.

    “ಅಂಕ ಓಡಿದರೆ ತೆತ್ತಿಗಂಗೆ ಭಂಗವಯ್ಯಾ!
    ಕಾದಿ ಗೆಲಿಸಯ್ಯಾ ಎನ್ನನು ಕಾದಿ ಗೆಲಿಸಯ್ಯಾ!”

    ಎನ್ನುತ್ತಾರೆ ಬಸವಣ್ಣನವರು. ರಣರಂಗದಿಂದ ಸೈನಿಕರು ಹಿಮ್ಮೆಟ್ಟಿದರೆ ಅದು ರಾಜನಿಗೆ ಅವಮಾನ! ಅಂತಹ ಅವಮಾನ ಉಂಟಾಗಬಾರದೆಂದರೆ ರಾಜನಾದವನು ತನ್ನ ಸೈನಿಕರನ್ನು ಹುರಿದುಂಬಿಸಿ ತಾನೂ ಅವರೊಟ್ಟಿಗೆ ನಿಂತು ಯುದ್ಧಭೂಮಿಯಲ್ಲಿ ಶತಾಯ ಗತಾಯ ಹೋರಾಡಬೇಕು. ಹಾಗೆ ಜೀವನವೆಂಬ ರಣರಂಗದಲ್ಲಿ ಕಷ್ಟಕೋಟಲೆಗಳಿಗೆ ಹೆದರಿ ಓಡಿಹೋಗದಂತೆ ಧೈರ್ಯವಾಗಿ ನಿಂತು ಹೋರಾಡಿ ಗೆಲ್ಲುವಂತೆ ಹರಸಲು ಬಸವಣ್ಣನವರು ಭಗವಂತನನ್ನು ಬೇಡಿಕೊಂಡಿದ್ದಾರೆ. ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಹೆದರಿ ಹೇಡಿಯಂತೆ ಹಿಮ್ಮೆಟ್ಟಿ ಓಡುವಂತಾದರೆ ಕೆಟ್ಟ ಹೆಸರು ರಕ್ಷಕನಾದ ದೇವರೇ ನಿನಗೆ ಬರುತ್ತದೆಯೇ ಹೊರತು ನನಗಲ್ಲ ಎಂದು ಭಗವಂತನನ್ನು ಛೇಡಿಸಿ ಅವನ ಅನುಗ್ರಹಕ್ಕಾಗಿ ಹಾತೊರೆದಿದ್ದಾರೆ.

    ಕಹಿ ಇದೆ ಎನ್ನುವ ಕಾರಣಕ್ಕಾಗಿಯೇ ಸಿಹಿಯ ಅನುಭವ ಸಾಧ್ಯವಾಗಿರುವುದು. ಒಂದು ಪಕ್ಷ ಕಹಿ ಇಲ್ಲದೇ ಹೋಗಿದ್ದರೆ ಸಿಹಿ ಏನೆಂದು ಅರ್ಥವೇ ಆಗುತ್ತಿರಲಿಲ್ಲ. ಹಾಗೆಯೇ ಸುಖದ ಅನುಭವ. ದುಃಖ ಯಾರಿಗೂ ಬೇಕಿಲ್ಲ, ನಿಜ, ಆದರೆ ಸುಖ ಏನೆಂದು ತಿಳಿಯುವುದಕ್ಕಾದರೂ ದುಃಖ ಬೇಕೇ ಬೇಕು. ಗೌತಮ ಬುದ್ಧ ಬುದ್ಧನಾಗಿದ್ದು, ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುತ್ತಿದ್ದಾಗ ಅಲ್ಲ; ಹೊರಗೆ ಬಂದು ಜನರ ನೋವು ಸಂಕಷ್ಟಗಳ ಸರಮಾಲೆಯನ್ನು ನೋಡಿ ಮಮ್ಮಲ ಮರುಗಿ ಅಂತರ್ಮುಖಿಯಾಗಿ ಅರಿವಿನ ಕಣ್ದೆರೆದಾಗ.

    ಭವಿಷ್ಯದ ಸಂಗತಿಗಳೆಲ್ಲವೂ ಮನುಷ್ಯನಿಗೆ ತಿಳಿಯುವಂತಾಗಿದ್ದರೆ ಜೀವನದಲ್ಲಿ ಸ್ವಾರಸ್ಯವೆಂಬುದೇ ಇರುತ್ತಿರಲಿಲ್ಲ. ಭವಿಷ್ಯದಲ್ಲಿ ಏನಾಗಬಹುದೆಂದು ಇತರರ ಜೀವನಾನುಭವದಿಂದ ಮನುಷ್ಯ ಊಹಿಸಿಕೊಳ್ಳಬಹುದಾದರೂ ಅದರಿಂದ ಪಾಠ ಕಲಿತುಕೊಳ್ಳುವುದಿಲ್ಲ. ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳುವುದು ಸರಿಯಲ್ಲ ಎಂಬ ನಾಣ್ಣುಡಿಯಂತೆ ಎಲ್ಲ ಗೊತ್ತಿದ್ದರೂ ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಾನೆ. ಸಂಪತ್ತಿನ ಸಂಗ್ರಹಣೆಯ ನಾಗಾಲೋಟದಲ್ಲಿ ಕೊಚ್ಚಿ ಹೋಗುತ್ತಿದ್ದಾನೆ. ಅಜ್ಞಾತ ಇಂಗ್ಲಿಷ್ ಕವಿಯೊಬ್ಬ ಹೀಗೆ ಹೇಳುತ್ತಾನೆ:

    We squander health in search of wealth
    We scheme, toil and save;
    Then we squander wealth in search of health
    All we get is the Grave!

    (ಧನ-ಕನಕ-ಸಂಪತ್ತಿನ ಗಳಿಕೆಯ ಸಂಗ್ರಾಮದಲಿ
    ಹಗಲಿರುಳೆನ್ನದೆ ಚಿಂತಿಸಿ ದುಡಿದು ಕೂಡಿಟ್ಟು
    ಮೋಜು ಮೇಜವಾನಿಯ ಮೃಗಮರೀಚಿಕೆಯ ಬೆನ್ನಟ್ಟಿ
    (ಮೃಗಮರೀಚಿಕೆಯನರಸಿ)
    ಕೊಳ್ಳೆಹೋಹುದವನ ಶರೀರದಾರೋಗ್ಯವೆಲ್ಲ!

    ರೋಗರುಜಿನಗಳಿಂ ನಲುಗಿ ಹಾಸಿಗೆಯ ಹಿಡಿದಾಗ
    ಕಣ್ಣ ಪಿಳಿ ಪಿಳಿ ಬಿಟ್ಟು ಕಳೆದ ಆರೋಗ್ಯವಂ ನೆನಸಿ
    ಮಡದಿ ಮಕ್ಕಳ ಮುಖವ ನೋಡಿ ಗೋಳಿಡುತ
    ಕೊಳ್ಳೆಹೋಹುದವನ ದುಡಿದೆಲ್ಲ ಸಂಪತ್ತು ಆಸ್ಪತ್ರೆಗೆ!

    ಕೊನೆಗೆ ಸಿಕ್ಕಿದ್ದಾದರೂ ಏನವನಿಗೆ? (ಸಿಕ್ಕಿದ್ದು ಏನು ಅವನಿಗೆ?
    ನಾಲ್ಕು ಜನರ ಹೆಗಲ ಮೇಲೆ ಪಯಣ!
    ಎಲ್ಲಿಗೆಂದು ತಿಳಿಯದ ಸ್ಮಶಾನ ಮೌನ!
    ಆರಡಿ ಮೂರಡಿಯ ‘ಮನೆ’ಯಲ್ಲಿ ಚಿರಂತನ ಶಯನ!)

    ಮನುಷ್ಯ ತನ್ನ ಆರೋಗ್ಯವನ್ನೂ ಲೆಕ್ಕಿಸದೆ ರಾತ್ರಿ ಹಗಲೂ ದುಡಿದು ಹೇರಳವಾಗಿ ಹಣವನ್ನು ಗಳಿಸುತ್ತಾನೆ. ಕಳೆದು ಹೋದ ಆರೋಗ್ಯವನ್ನು ಮತ್ತೆ ಪಡೆಯಲು ದುಡಿದ ಹಣವೆಲ್ಲವನ್ನೂ ಆಸ್ಪತ್ರೆಗೆ ಖರ್ಚುಮಾಡುತ್ತಾನೆ. ದುಡಿಮೆಯ ಭರಾಟೆಯಲ್ಲಿ, ಸಂಪತ್ತಿನ ಗಳಿಕೆಯಲ್ಲಿ, ಜೀವನದ ನಿಜವಾದ ಸುಖವನ್ನು ಸವಿಯದೆ ತನ್ನ ಬದುಕನ್ನೇ ಹಾಳು ಮಾಡಿಕೊಳ್ಳುತ್ತಾನೆ.

    ‘ಧರ್ಮ-ಅರ್ಥ-ಕಾಮ-ಮೋಕ್ಷ’ ಎಂಬ ಚತುರ್ವಿಧ ಪುರುಷಾರ್ಥಗಳ ಜಾಗದಲ್ಲಿ ‘ನೌಕರಿ-ಕಾರು-ಬಂಗಲೆ-ಟೀವಿ’ ಎಂಬ ಆಧುನಿಕ ಪುರುಷಾರ್ಥಗಳ ಬೆನ್ನೇರಿ ಹೊರಟಿದ್ದಾನೆ. ಬಂಗಲೆಯಲ್ಲಿ ಬಣ್ಣದ ಟೀವಿಯೇನೋ ಇದೆ. ಆದರೆ ನೋಡಲು ಅವನಿಗೆ ಪುರುಸೊತ್ತಿಲ್ಲ. ಸುಪ್ಪತ್ತಿನ ಹಾಸಿಗೆಯೇನೋ ಇದೆ. ಆದರೆ ಮಲಗಿದರೆ ನಿದ್ರೆ ಬರುವುದಿಲ್ಲ. ನಿದ್ರೆ ಗುಳಿಗೆ ಬೇಕೇ ಬೇಕು. ಹೆಚ್ಚುಕಡಿಮೆ ನುಂಗಿದರೆ ಚಿರನಿದ್ರೆ! ಉಣ್ಣಲು ಷಡ್ರಸೋಪೇತ ಭಕ್ಷ್ಯ ಭೋಜ್ಯಗಳಿವೆ. ಆದರೆ ಸಿಹಿಯುಂಡೆ ತಿನ್ನುವಂತಿಲ್ಲ. ಸಕ್ಕರೆಯುಳ್ಳ ಕಾಫಿ ಕುಡಿಯುವಂತಿಲ್ಲ.

    ದಿನವೂ ಇನ್ಸುಲಿನ್ ಚುಚ್ಚು ಮದ್ದು ತಪ್ಪಿದ್ದಲ್ಲ. ಕಾರು-ಬಂಗಲೆಯಲ್ಲಿ ಹವಾನಿಯಂತ್ರಿತ ವ್ಯವಸ್ಥೆಯೇನೋ ಇದೆ. ಆದರೂ ತಲೆ ಬಿಸಿ, ಚಡಪಡಿಕೆ! ವಾಸದ ಕೊಠಡಿ ತಣ್ಣಗಿದ್ದರೂ, ಮನಸ್ಸಿನೊಳಗೆ ಬೇಗುದಿ? ಹಾಗಾದರೆ ಹಗಲಿರುಳು ದುಡಿದದ್ದು ಏತಕ್ಕಾಗಿ, ಯಾವ ಪುರುಷಾರ್ಥಕ್ಕಾಗಿ? ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂದು ಕನಕದಾಸರು ಹಂಗಿಸಿ ಹಾಡಿದರು.

    ಕ್ಲಿಕ್‌ ಮಾಡಿ ಓದಿ:‌ ಮೇ 14 ರಿಂದ ಉಚ್ಚಂಗಿ ಯಲ್ಲಮ್ಮ ಜಾತ್ರಾ ಮಹೋತ್ಸವ | ದೇವಿಗೆ ಹೊಸ ಬೆಳ್ಳಿ ಮುಖಪದ್ಮ

    ಇಂದಿನ ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಅಸೆಂಬ್ಲಿ-ಪಾರ್ಲಿಮೆಂಟ್ ಚುನಾವಣೆವರೆಗೆ ಈಗ ‘ಎಲ್ಲರೂ ಮಾಡುವುದು ಓಟಿಗಾಗಿ ಮತ್ತೆ ನೋಟಿಗಾಗಿ’ ಎನ್ನುವಂತಾಗಿದೆ. ಮನುಷ್ಯ ತನ್ನ ಹೊಟ್ಟೆ ಪಾಡಿಗಾಗಿ ಮಾತ್ರ ಮಾಡಿದ್ದರೆ ಎಲ್ಲವೂ ಸರಿಹೋಗುತ್ತಿತ್ತು. ಆದರೆ ಮನುಷ್ಯನ ಸ್ವಾರ್ಥಪೂರಿತ ಬಕಾಸುರನ ಹೊಟ್ಟೆಗೆ ಇತಿಮಿತಿಯೇ ಇಲ್ಲ. ಎಷ್ಟಿದ್ದರೂ ಬೇಕು. ಅದೂ ತನಗೇ ಬೇಕು, ಅದನ್ನು ಜೀರ್ಣಿಸಿಕೊಳ್ಳುವ ‘ವಾತಾಪಿ ಜೀರ್ಣೋ ಭವ’ ಶಕ್ತಿ ತನಗಿಲ್ಲ ಎಂಬ ಪರಿವೆ ಅವನಿಗಿಲ್ಲ. ಅಂದರೆ ಇದೆಲ್ಲವನ್ನೂ ಬಿಟ್ಟು ಮಠ ಸೇರಿ ಮೂಗು ಹಿಡಿದು ಧ್ಯಾನ ಮಾಡುತ್ತಾ ಸಂನ್ಯಾಸಿಯಾಗು ಎಂದು ಹೇಳುತ್ತಿಲ್ಲ.

    ಸತಿಪತಿರತಿಸುಖವ ಬಿಟ್ಟರೆ ಸಿರಿಯಾಳ ಚೆಂಗಳೆಯರು?
    ಸತಿಪತಿಸುಖಭೋಗೋಪಭೋಗವಿಳಾಸವ ಬಿಟ್ಟನೆ ಸಿಂಧುಬಲ್ಲಾಳನು?
    ನಿಮ್ಮ ಮುಟ್ಟಿ ಪರಧನ-ಪರಸತಿಯರಿಗೆಳಸಿದರೆ
    ನಿಮ್ಮ ಚರಣಕ್ಕೆ ದೂರ, ಕೂಡಲಸಂಗಮದೇವಾ!”

    ಲೌಕಿಕ ಜೀವನದ ಸುಖ-ಸಂತೋಷಗಳು ಧರ್ಮದ ನೆಲೆಗಟ್ಟಿನ ಮೇಲೆ ನಿಂತಿರಬೇಕು, ಮೋಕ್ಷದ ಗುರಿಯನ್ನು ಹೊಂದಿರಬೇಕು. ದುಃಖ-ದುಮ್ಮಾನಗಳಿಂದ ವಿಮುಕ್ತನಾಗಿ ಶಾಶ್ವತ ಸುಖವನ್ನು ಪಡೆಯುವ ಹಂಬಲವಿರಬೇಕು. ಬದುಕಿನಲ್ಲಿ ಕೇವಲ ಬೆಲ್ಲವೇ ಇಲ್ಲ, ಬೇವೂ ಸಾಕಷ್ಟು ಇದೆ. ಜೀವನದಲ್ಲಿ ಬರುವ ಸುಖ-ದುಃಖಗಳನ್ನು ಸಮಭಾವದಿಂದ ಸ್ವೀಕರಿಸುವ ಅಗತ್ಯವಿದೆಯೆಂದೇ ಯುಗಾದಿಯ ಹಬ್ಬದಂದು ಬೇವು-ಬೆಲ್ಲವನ್ನು ಬಂಧು-ಬಾಂಧವರಿಗೆ, ಆಪ್ತೇಷ್ಟರಿಗೆ ಹಂಚುವ ಸತ್ ಸಂಪ್ರದಾಯ ಇರುವುದು.

    ವರ್ಷಕ್ಕೊಮ್ಮೆ ಯುಗಾದಿಯ ಸಂಜೆಯಂದು ಎಲ್ಲರ ಕಣ್ಣುಗಳು ಪಡುವಣ ದಿಕ್ಕಿನಲ್ಲಿ ಎಳೆವೆಳೆದಿಂಗಳಾದ ಬಿದಿಗೆಯ ಚಂದ್ರನನ್ನು ನೋಡಲು ತವಕಿಸುತ್ತಿರುತ್ತವೆ. ಆದ ಕಾರಣವೇ ನಿತ್ಯ ಜೀವನದಲ್ಲಿ ತಮಗೆ ಬಹಳ ಬೇಕಾದವರು ಅಪರೂಪಕ್ಕೆ ಸಿಕ್ಕರೆ ಸಂತೋಷಪಟ್ಟು ‘ಯುಗಾದಿ ಚಂದ್ರನನ್ನು ನೋಡಿದಂತಾಯಿತು!’ ಎಂದು ಉದ್ಗರಿಸುತ್ತಾರೆ.

    ಆಗಸದಲ್ಲಿ ದಿನವೂ ನಿತ್ಯ ವಿನೂತನ ಚಂದ್ರ ಕಾಣಿಸುತ್ತಿದ್ದರೂ ಬಿದಿಗೆಯ ಚಂದ್ರನನ್ನು ನೋಡುವ ಸಂತೋಷವೇ ಬೇರೆ. ಚಂದ್ರ ಕಂಡ ತಕ್ಷಣವೇ “ಹೋ..!” ಎಂದು ಕೂಗಿ ಕುಣಿದು ಕುಪ್ಪಳಿಸುವ ಮಕ್ಕಳ ಆ ಆನಂದ, ಚಂದ್ರನನ್ನು ನೋಡಿದಿರಾ ಎಂದು ಅಕ್ಕಪಕ್ಕದವರನ್ನು ವಿಚಾರಿಸುವ ಉಭಯಕುಶಲೋಪರಿ, ಚಂದ್ರದರ್ಶನವಾದ ತಕ್ಷಣವೇ ಧನ್ಯತೆಯಿಂದ ಬೀಗಿ ಗುರುಹಿರಿಯರಿಗೆ ಶ್ರದ್ಧಾಭಕ್ತಿಯಿಂದ ಬಾಗಿ ನಮಸ್ಕರಿಸುವ ಭಾವಪರವಶತೆ, ಕಣ್ಣು ಮಂಜಾಗಿ ಸರಿಯಾಗಿ ಕಾಣಿಸದ ಅಜ್ಜ-ಅಜ್ಜಿಗಳಿಗೆ ಚಂದ್ರನೆಲ್ಲಿದ್ದಾನೆಂದು ತೋರಿಸಿಕೊಡುವ ಮೊಮ್ಮಕ್ಕಳ ತವಕ ವರ್ಣಿಸಲಸದಳ.

    ಆ ಮೊಮ್ಮಕ್ಕಳಿಗೇನು ಗೊತ್ತು! ಆಗಸದಲ್ಲಿ ಅವರಿಗೆ ಬಾಯಲ್ಲಿ ಸವೆದ ಪೆಪ್ಪರ್ ಮೆಂಟಿನಾಕಾರದ ಒಂದು ಚಂದ್ರ ಕಂಡರೆ, ಜೀವನದ ಮುಸ್ಸಂಜೆಯಲ್ಲಿರುವ ಆ ಹಿರಿಯರಿಗೆ ಕಾಣಿಸುವುದು ತಮ್ಮ ವಂಶದ ಕುಡಿಯಾದ ಮುದ್ದುಮುಖದ ಆ ಮೊಮ್ಮಕ್ಕಳೇ ಹತ್ತಾರು ಬಗೆಯ ಬಿದಿಗೆಯ ಚಂದ್ರ! ಮುಂದೆ ಮುಗಿಲೆತ್ತರಕ್ಕೆ ಅವರು ಬೆಳೆಯುವಂತಾಗಲಿ ಎಂಬ ಹೆಬ್ಬಯಕೆಯ ಆಶಾಗೋಪುರ!

    ಕರ್ನಾಟಕದ ಮನೆಮನೆಯಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸುತ್ತಿರುವ ಈ ಯುಗಾದಿಯ ಶುಭ ಸಂದರ್ಭದಂದು ಎಲ್ಲರಿಗೂ ನಮ್ಮ ಶುಭಾಶಯಗಳು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top