Connect with us

ಕನ್ನಡ ಕಲಿತು ವ್ಯಾಕರಣದ ಗುರುವಾದ ಶಿವಣ್ಣ

ಚಳ್ಳಕೆರೆ

ಕನ್ನಡ ಕಲಿತು ವ್ಯಾಕರಣದ ಗುರುವಾದ ಶಿವಣ್ಣ

ಚಿತ್ರದುರ್ಗನ್ಯೂಸ್‌.ಕಾಂ
ಶಾಲೆ, ಓದು, ಕನ್ನಡ ನಮ್ಮ ಭಾಷೆ ಎಂಬ ಚಿಕ್ಕ ಕಲ್ಪನೆಯಿಲ್ಲದೆ ಕೂಲಿ ಮಾಡುತ್ತ ಬಾಲ್ಯ ಕಳೆದ ವ್ಯಕ್ತಿ ಇಂದು ವಿದ್ಯಾರ್ಥಿಗಳ ಪಾಲಿನ ಕನ್ನಡ ವ್ಯಾಕರಣದ ಅಚ್ಚುಮೆಚ್ಚಿನ ಗುರು.

ನಿವೃತ್ತಿ ಅಂಚಿನಲ್ಲಿರುವ ಚಿತ್ರದುರ್ಗ ತಾಲ್ಲೂಕು ತುರವನೂರಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ)ದ ಸಹ ಶಿಕ್ಷಕ ಎನ್‌.ಶಿವಣ್ಣ 2023–24 ನೇ ಸಾಲಿನ ಜಿಲ್ಲಾಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಹೋಬಳಿಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿಗ್ರಾಮ ತಿಪ್ಪಾರೆಡ್ಡಿ ಹಳ್ಳಿ ಮೂಲದ ಎನ್‌.ಶಿವಣ್ಣ ಶಾಲೆ ಮೆಟ್ಟಿಲು ತುಳಿದಿದ್ದು ಹನ್ನೊಂದನೇ ವಯಸ್ಸಿನಲ್ಲಿ.

ಮನೆಯಲ್ಲಿನ ಬಡತನದ ಕಾರಣಕ್ಕೆ ತಂದೆ ಜತೆ ನಿತ್ಯ ಹೊಲದ ಕೂಲಿ ಕೆಲಸಕ್ಕೆ ಹೋಗುತ್ತಾ ಬಾಲ್ಯ ಕಳೆದಿದ್ದಾರೆ. ನನ್ನ ದೊಡ್ಡ ಮಗನು ಶಾಲೆಗೆ ಹೋಗಬೇಕು ಎಂದು ಒಂದು ದಿನ ರಾತ್ರಿ ಇವರ ತಂದೆ ನಾಗಯ್ಯ ಮಾಡಿದ ನಿರ್ಧಾರ ಬದುಕಿನ ದಿಕ್ಕನ್ನು ಬದಲಿಸಿತು.

1964ರ ಜುಲೈ 19 ರಂದು ಜನಿಸಿದ ಶಿವಣ್ಣ, ತಿಪ್ಪಾರೆಡ್ಡಿಹಳ್ಳಿ ಸರ್ಕಾರಿ ಶಾಲೆಗೆ ಪ್ರವೇಶ ಪಡೆದು ಏಳನೇ ತರಗತಿ ಪೂರ್ಣಗೊಳಿಸುತ್ತಾರೆ. ತೆಲುಗು ಮಾತ್ರ ತಿಳಿದಿದ್ದ ಇವರಿಗೆ ಶಾಲೆಯ ಆರಂಭದ ದಿನದಲ್ಲಿ ಭಾಷೆ, ವಯಸ್ಸಿನ ಸಮಸ್ಯೆ ಇನ್ನಿಲ್ಲದಂತೆ ಕಾಡಿದೆ. ಆದರೆ ಯಾವುದಕ್ಕೂ ಯೋಚಿಸದೆ ಶಿಕ್ಷಕರ ಸಹಕಾರದಿಂದ ಕನ್ನಡ ಕಲಿಯುತ್ತಾರೆ.

ಚಳ್ಳಕೆರೆಯ ಬಿಎಂಜಿಎಚ್‌ಎಸ್‌ ಪ್ರೌಢಶಾಲೆಗೆ ಪ್ರವೇಶ ಪಡೆದು  ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದುತ್ತಾರೆ. ಜಗಳೂರಿನ ನಳಂದ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪಿಯುಸಿ ಬಳಿಕ ಐಟಿಸಿ ಶಿಕ್ಷಕರ ತರಬೇತಿ ಪಡೆದು ಪದವಿ ಅಂತಿಮ ವರ್ಷದಲ್ಲಿದ್ದಾಗ ಶಿಕ್ಷಕ ವೃತ್ತಿಗೆ ನೇಮಕವಾಗುತ್ತಾರೆ.

ಇದನ್ನೂ ಓದಿ: ಜಲವರ್ಣ ಕಲಾಕೃತಿಯ ಮಾಂತ್ರಿಕ ಪ್ರಸನ್ನಕುಮಾರ್: ಅತ್ಯುತ್ತಮ ಶಿಕ್ಷಕ ಗೌರವ

1989 ಮಾರ್ಚ್‌ 8 ರಂದು ಮೊಳಕಾಲ್ಮುರು ತಾಲ್ಲೂಕಿನ ತಿಮ್ಮಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ವೃತ್ತಿ ಜೀವನ ಆರಂಭಿಸುತ್ತಾರೆ. ಬಳಿಕ ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿ, ಪಗಡಲಬಂಡೆಯಲ್ಲಿ ಕಾರ್ಯ ನಿರ್ವಹಿಸುವಾಗ 2006 ಜುಲೈ 20 ರಂದು ಬಡ್ತಿ ಪಡೆದ ಇವರು ತುರವನೂರಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ)ದಲ್ಲಿ ಕನ್ನಡ ಸಹ ಶಿಕ್ಷಕನಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.

ಕನ್ನಡ ವ್ಯಾಕರಣವನ್ನು ಸರಳ ಮತ್ತು ಸುಲಲಿತವಾಗಿ ಕಲಿಸುವ ಕಲೆಯನ್ನು ಶಿವಣ್ಣ ಕರಗತ ಮಾಡಿಕೊಂಡಿದ್ದಾರೆ.
‘ಗಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಕನ್ನಡ ಕಲಿಕೆ ನಿಜಕ್ಕೂ ಕಷ್ಟ. ಆದರೆ ಇವರಿಗೆ ನನ್ನ ಜೀವನದ ಅನುಭವ ಹೇಳುತ್ತಾ ಭಾಷೆಯನ್ನು ಅಚ್ಚುಕಟ್ಟಾಗಿ ಕಲಿಸುವ ಕಾರ್ಯ ಮಾಡುತ್ತಿದ್ದೇನೆ. ಕೋವಿಡ್‌ ಸಮಯದಲ್ಲಿ ಆನ್‌ಲೈನ್‌ ಮೂಲಕ ವ್ಯಾಕರಣ ತರಗತಿ ಮಾಡಿದ್ದೇನೆ’ ಎನ್ನುತ್ತಾರೆ ಶಿವಣ್ಣ.

ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕಗಳಿಸುವ ವಿದ್ಯಾರ್ಥಿಗೆ ವೈಯಕ್ತಿಕವಾಗಿ ₹ 1,000 ಪ್ರೋತ್ಸಾಹ ಧನ ನೀಡುತ್ತಿದ್ದಾರೆ. ಜತೆಗೆ ಜನಪದ ಗೀತೆಗಳ ಸಂಗ್ರಹ ಕಾರ್ಯವನ್ನು ಮಾಡುತ್ತಿರುವುದು ಇವರ ವಿಶೇಷ.

ಯಾವುದೇ ಮಗು ಶಿಕ್ಷಣದಿಂದ ವಂಚಿತ ಆಗಬಾರದು ಎಂಬ ಕಾರಣಕ್ಕೆ ಗ್ರಾಮೀಣ ಭಾಗದಲ್ಲಿ ಮನೆ ಮನೆ ಭೇಟಿ ಮಾಡಿ ಪಾಲಕರಿಗೆ ಶಿಕ್ಷಣದ ಮಹತ್ವ ತಿಳಿಸುತ್ತಿದ್ದಾರೆ. ತಾವು ಸೇವೆ ಸಲ್ಲಿಸಿದ ಶಾಲೆಗಳಲ್ಲಿ ಮರಗಿಡಗಳನ್ನು ಬೆಳೆಸಿ ಹಸಿರು ಪರಿಸರ ನಿರ್ಮಿಸಿದ್ದಾರೆ.

ಸಕಲ ಸಮಸ್ಯೆಗೂ ಶಿಕ್ಷಣವೊಂದೇ ಪರಿಹಾರ ಎಂಬುದನ್ನು ಬದುಕು ಕಲಿಸಿದೆ. ಭಾಷೆ ವಿಚಾರದಲ್ಲಿ ಬಾಲ್ಯದಲ್ಲಿ ಅನುಭವಿಸಿದ ಕಷ್ಟ ಯಾವುದೇ ಮಕ್ಕಳಿಗೆ ಬರಬಾರದು ಎಂಬ ಕಾರಣಕ್ಕೆ ಗ್ರಾಮೀಣ ಭಾಗದ ಮಕ್ಕಳಿಗೆ ಕನ್ನಡ ವ್ಯಾಕರಣವನ್ನು ಸುಲಭದ ಕಲಿಕೆಯಂದು ಅರ್ಥ ಮಾಡಿಸಿರುವ ಆತ್ಮತೃಪ್ತಿ ನನಗಿದೆ.
ಎನ್‌.ಶಿವಣ್ಣ, ಸಹ ಶಿಕ್ಷಕ.

(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/J6cH6HirXqYERmT1X09kSk)

(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ  https://www.facebook.com/chitradurganews?mibextid=ZbWKwL)

Click to comment

Leave a Reply

Your email address will not be published. Required fields are marked *

More in ಚಳ್ಳಕೆರೆ

To Top
Exit mobile version