ಮುಖ್ಯ ಸುದ್ದಿ
ಜಲವರ್ಣ ಕಲಾಕೃತಿಯ ಮಾಂತ್ರಿಕ ಪ್ರಸನ್ನ ಕುಮಾರ್; ಅತ್ಯುತ್ತಮ ಶಿಕ್ಷಕ ಗೌರವ
ಚಿತ್ರದುರ್ಗನ್ಯೂಸ್.ಕಾಂ
ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ)ದ ಟಿ.ಎಸ್.ಪ್ರಸನ್ನ ಕುಮಾರ್ ಒಂದು ಕೈಯಲ್ಲಿ ಪುಸ್ತಕ ಮತ್ತೊಂದು ಕೈಯಲ್ಲಿ ಚಾಕ್ಪೀಸ್ ಹಿಡಿದು ಮಕ್ಕಳ ಮುಂದೆ ನಿಲ್ಲುವ ಶಿಕ್ಷಕ ಇವರಲ್ಲ. ಕ್ಯಾನ್ವಸ್ ಮುಂದೆ ನಿಂತು ಬಣ್ಣಗಳ ಜತೆ ಆಟವಾಡುತ್ತಾ ಜೀವ ಜಗತ್ತು ಸೃಷ್ಠಿಸುವ ಚಿತ್ರಕಲಾ ಶಿಕ್ಷಕ. ವರ್ಲಿ ಕಲೆ, ಜಲವರ್ಣ ಕಲಾಕೃತಿಗಳಲ್ಲಿ (ಲ್ಯಾಂಡ್‍ಸ್ಕೇಪ್) ನೈಪುಣ್ಯತೆ ಸಾಧಿಸಿರುವ ಇವರು 2023–24 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮೂಲತಃ ಚಿತ್ರದುರ್ಗ ತಾಲ್ಲೂಕಿನ ತುರವನೂರು ಗ್ರಾಮದ ಪ್ರಸನ್ನ ಕುಮಾರ್ ಬಾಲ್ಯವನ್ನು ಕಳೆದಿದ್ದು ಗ್ರಾಮೀಣ ಪರಿಸರದಲ್ಲಿ. ಕಿರಾಣಿ ಅಂಗಡಿ ನಡೆಸುತ್ತಿದ್ದ ತಂದೆಗೆ ನೆರವಾಗುತ್ತಾ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸುವ ವೇಳೆಗೆ ಚಿತ್ರ ಬಿಡಿಸುವ ಹವ್ಯಾಸ ಶುರುವಾಗಿದೆ. ಶಾಲಾ ಶಿಕ್ಷಕ ಮಾರ್ಗದರ್ಶನದಲ್ಲೇ ಚಿತ್ರದುರ್ಗದ ಎಸ್ಜೆಎಂ ಚಿತ್ರಕಲಾ ಕಾಲೇಜಿಗೆ ಪ್ರವೇಶ ಪಡೆದು ಪದವಿ ಪೂರ್ಣಗೊಳಿಸಿ ಬಳಿಕ ಮೈಸೂರಿನಲ್ಲಿ ಸ್ನಾತ್ತಕೋತ್ತರ ಪದವಿ ಪೂರ್ಣಗೊಳಿಸುತ್ತಾರೆ. ಲಲಿತಾ ಕಲೆ ಕಾಲೇಜಿನಲ್ಲಿ ಓದುವಾಗಲೇ ಮೈಸೂರಿನ ದಸರಾ ಸ್ತಬ್ಧ ಚಿತ್ರಗಳಿಗೆ ಕೆಲಸ ಮಾಡಿರುವುದು ಇವರ ಹೆಗ್ಗಳಿಕೆ.
ಬಣ್ಣಗಳಲ್ಲಿ ತಮ್ಮದೇ ಮಿಂಚಿನ ನೋಟದೊಂದಿಗೆ ನೆರಳು ಮತ್ತು ಬೆಳಕಿನ ಛಾಯೆಗಳನ್ನು ಅಚ್ಚುಕಟ್ಟಾಗಿ ರಚಿಸುವ ಕಲೆ ಸಿದ್ಧಿಸಿರುವ ಪ್ರಸನ್ನ ಕುಮಾರ್ 2002 ರಲ್ಲಿ ಚಿತ್ರಕಲಾ ಶಿಕ್ಷಕರಾಗಿ ತಾವು ಓದಿದ ತುರವನೂರು ಪ್ರೌಢಶಾಲೆಯಿಂದಲೇ ವೃತ್ತಿ ಜೀವನ ಪ್ರಾರಂಭಿಸಿದ್ದು ವಿಶೇಷ. 2009ಕ್ಕೆ ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ)ಕ್ಕೆ ವರ್ಗಾವಣೆಗೊಂಡು ಆರ್ಥಿಕವಾಗಿ ಹಿಂದುಳಿದ ಮಕ್ಕಳ ಪಾಲಿಗೆ ಚೈತನ್ಯವಾಗುತ್ತಾರೆ.
ಶೈಕ್ಷಣಿಕವಾಗಿ ಚಿತ್ರಕಲೆಯನ್ನು ಮಕ್ಕಳಿಗೆ ಕಲಿಸುತ್ತಾ ಅವರಲ್ಲಿ ಆಸಕ್ತಿ ಗಮನಿಸಿ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ. ಮೈಸೂರಿನ ಲಲಿತಾ ಕಲೆ ಕಾಲೇಜುಗಳಿಗೆ ಪ್ರವೇಶ ಕಲ್ಪಿಸಿ ಕಲಿಕೆ ಖರ್ಚುವೆಚ್ಚವನ್ನು ನಿಭಾಯಿಸುತ್ತಿದ್ದಾರೆ.
ಇದನ್ನೂ ಓದಿ: ಗ್ರಾಮೀಣ ಮಕ್ಕಳ ಪಾಲಿನ ಇಂಗ್ಲೀಷ್ ಗುರು: ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ ಪಡೆದ ಎಸ್.ಗುರುಮೂರ್ತಿ
ವರ್ಲಿ ಕಲೆ, ಜಲವರ್ಣ ಕಲಾಕೃತಿ (ಲ್ಯಾಂಡ್‍ಸ್ಕೇಪ್) ಇವರ ನೆಚ್ಚಿನ ಮಾದರಿ. ಜತೆಗೆ ವಿಜ್ಞಾನದ ಮಾದರಿಗೆ ರಂಗೋಲಿ ಸ್ಪರ್ಶ, ನೀರಿನ ಮೇಲೆ ಚಿತ್ರಕಲೆಯಲ್ಲಿ ವಿದ್ಯಾರ್ಥಿಗಳನ್ನು ಪರಿಣಿತಿಗೊಳಿಸಿದ್ದಾರೆ.
ಡಯಟ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಿಗೆ ವರ್ಲಿ ಕಲೆ ಮೂಲಕ ಹೊಸ ಸ್ಪರ್ಶ ನೀಡಿದ್ದಾರೆ. ಜತೆಗೆ ಸ್ತಬ್ಧ ಚಿತ್ರ, ಮಕ್ಕಳ ಹಬ್ಬ, ಕರ್ನಾಟಕ ಚಿತ್ರಕಲಾ ಪರಿಷತ್ನ ಚಿತ್ರಸಂತೆಯಲ್ಲಿ ಇವರು ಸದಾ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಚಿತ್ರಕಲೆ ಆದರ ಸ್ವರೂಪ ಮತ್ತು ರಸಾನುಭೂತಿಯ ಸ್ವರೂಪ ಇತ್ಯಾದಿಗಳೊಂದಿಗೆ ತಮ್ಮ ಅಂತರಂಗದ ಭಾವನೆಗಳನ್ನು ಕಲ್ಪನಾಶೀಲವಾಗಿ ಪ್ರಕಟಗೊಳಿಸಿ ಸೃಜನಶೀಲತೆಯ ಕಲಾ ಚಟುವಟಿಕೆಗಳನ್ನು ಶಾಲೆಯ ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದಾರೆ.
ಚಿತ್ರಕಲಾ ಶಿಕ್ಷಕರಾದ ಕಸ್ತೂರಿ ರಂಗಪ್ಪ, ಲೋಕೇಶ್ ನಾಡಿಗೇರ್, ಸಿದ್ದರಾಮಪ್ಪ ಜೀರಂಗಿ, ಗೋಪಿ ನಾಯಕ್, ಸೋಮೇಶ್, ಚಿದಾನಂದಪ್ಪ, ದಾದಾ ಚಿತ್ರದುರ್ಗ, ಮಲ್ಲೇಶ್ ಜತೆಗೂಡಿ ತಂಡವಾಗಿ ಕೆಲಸ ಮಾಡುತ್ತಿದ್ದಾರೆ.
ಸರ್ಕಾರಿ ಕಾರ್ಯಕ್ರಮಗಳ ವೇದಿಕೆಗೆ ಕಲಾ ಸ್ಪರ್ಶ ನೀಡುವ ಮೂಲಕ ಗಣ್ಯರ ಮೆಚ್ಚುಗೆಗಳಿಸಿದ್ದಾರೆ. ಕಲಾ ಸೇವೆಯಿಂದಾಗಿ ಅನೇಕ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರತಿ ಮಗುವಿನಲ್ಲಿ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಗುರುವಿನ ಕರ್ತವ್ಯ. ನನ್ನ ಗುರುಗಳು ಮಾಡಿದ ಕಾರ್ಯವನ್ನು ನಾನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಪ್ರಾರಂಭದಲ್ಲಿ ಒಂದಿಷ್ಟು ಸಕಲ ರೀತಿಯಲ್ಲೂ ಶಕ್ತಿ ತುಂಬಿದರೆ ಬಳಿಕ ಅವರು ಚಿತ್ರಕಲೆಗೆ ಆಸ್ತಿಯಾಗುತ್ತಾರೆ.
ಟಿ.ಎಸ್.ಪ್ರಸನ್ನ ಕುಮಾರ್, ಚಿತ್ರಕಲಾ ಶಿಕ್ಷಕ.
(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/J6cH6HirXqYERmT1X09kSk)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ https://www.facebook.com/chitradurganews?mibextid=ZbWKwL)