ಮುಖ್ಯ ಸುದ್ದಿ
Sirigere Swamiji: ಶಿವಕುಮಾರ ಸ್ವಾಮೀಜಿ ಹುಟ್ಟೂರಿಗೆ ಭದ್ರೆ | ನೆರವೇರಿದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಂಕಲ್ಪ
CHITRADURGA NEWS | 24 SEPTEMBER 2024
ಚಿತ್ರದುರ್ಗ: ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಹುಟ್ಟೂರಿಗೆ ಏತ ನೀರಾವರಿ ನೀರು ಹರಿಯಲು ಕ್ಷಣಗಣನೆ ಶುರುವಾಗಿದೆ.
ಸಿರಿಗೆರೆಯಲ್ಲಿ ನಡೆಯುತ್ತಿರುವ ಶಿವಕುಮಾರ ಶ್ರೀಗಳ 32ನೇ ಶ್ರದ್ಧಾಂಜಲಿ ದಿನದಲ್ಲೇ ನೀರು ಹರಿಯುತ್ತಿರುವುದು ಸಂತಸ ತಂದಿದೆ. 70 ಕಿ.ಮೀ. ದೂರದಿಂದ ಹರಿದುಬರಲಿರುವ ಭದ್ರೆಯ ನೀರು ಮಂಗಳವಾರ ಶಿವಕುಮಾರ ಶ್ರೀಗಳ ಹುಟ್ಟೂರಾದ ಮುತ್ತುಗದೂರು ಕೆರೆಗೆ ಬರಲಿದೆ. ಶ್ರದ್ಧಾಂಜಲಿಯ ಅಂತಿಮ ದಿನದ ಕಾರ್ಯಕ್ರಮದೊಳಗೆ ಮುತ್ತುಗದೂರು ಕೆರೆಗೆ ನೀರು ಹರಿಸಲೇಬೇಕೆಂಬ ಸಂಕಲ್ಪ ಹೊಂದಿದ್ದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯ ಅಪೇಕ್ಷೆ ನೆರವೇರಿದಂತಾಗಿದೆ.
ಕ್ಲಿಕ್ ಮಾಡಿ ಓದಿ: ಕೆಲ ಗಂಟೆಗಳಲ್ಲೇ ಪವರ್ ಕಟ್ | ಸಂಜೆಯವರೆಗೂ ಸಮಸ್ಯೆ
ನೀರು ಈಗಾಗಲೇ ಸೂಳೆಕೆರೆಯಿಂದ ಸಾಸಲುಗುಡ್ಡಕ್ಕೆ ತಲುಪಿದೆ. ಬಿ.ದುರ್ಗದ ಬಳಿ ಉಳಿದಿರುವ ಕಾಮಗಾರಿಯನ್ನು ಮುಗಿಸಲು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ಗುತ್ತಿಗೆದಾರರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.
ಈ ಯೋಜನೆ ಕಾರ್ಯಗತವಾದರೆ ಹೊನ್ನಾಳಿ, ಭದ್ರಾವತಿ, ಚನ್ನಗಿರಿ, ದಾವಣಗೆರೆ, ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ 121 ಕೆರೆಗಳಿಗೆ ನೀರು ಬರಲಿದೆ. ಈ ಯೋಜನೆಗೆ ಅಡ್ಡಿಯಾಗಿದ್ದ ಹಲವು ತೊಂದರೆಗಳನ್ನು ತರಳಬಾಳು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಬಗೆಹರಿಸಿದ್ದಾರೆ.
ಪ್ರಾಯೋಗಿಕವಾಗಿ ಮಂಗಳವಾರ ಮುತ್ತುಗದೂರು ಕೆರೆಗೆ ನೀರು ಬರುತ್ತಿದೆ. ಉಳಿದ ಎಲ್ಲ ಕೆರೆಗಳಿಗೆ ನೀರು ಹರಿಸಲು ಪೈಪ್ಲೈನ್ಗಳ ಪರೀಕ್ಷಣಾ ಕೆಲಸ ನಡೆಯುತ್ತಿದೆ. ನಂತರ ಯೋಜನೆ ವ್ಯಾಪ್ತಿಯ ಎಲ್ಲ ಕೆರೆಗಳಿಗೆ ನೀರು ಬರುತ್ತದೆ ಎಂದು ಕೆರೆ ಸಮಿತಿಯ ಸಿ.ಆರ್. ನಾಗರಾಜ್ ತಿಳಿಸಿದರು.
ಶಿವಕುಮಾರ ಶ್ರೀ ಮೂರ್ತಿಯ ಮೆರವಣಿಗೆ: ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿದ ಶಿವಕುಮಾರ ಶ್ರೀಗಳ ಮೂರ್ತಿಯ ವೈಭವಯುತ ಮೆರವಣಿಗೆ ಸೋಮವಾರ ನಡೆಯಿತು. ಮಠದ ಮಹಾದ್ವಾರದ ಬಳಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.
ಈ ವೇಳೆ ಯುವಕರ ಶಿವಸೈನ್ಯ ತಂಡಗಳು ಜೈಕಾರ ಮೊಳಗಿಸಿದವು. ನಂದಿಕೋಲು, ನಾಸಿಕ್ ವಾದ್ಯಗಳ ತಂಡಗಳು ವೈವಿಧ್ಯಮಯ ಕುಣಿತದಿಂದ ನೆರೆದಿದ್ದ ಭಕ್ತರನ್ನು ಆಕರ್ಷಿಸಿದವು. ಮೆರವಣಿಗೆಯಲ್ಲಿ ಭಾಗವಹಿಸಲು ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಹರಿಹರ, ಹರಪನಹಳ್ಳಿ ಮುಂತಾದ ಕಡೆಯಿಂದ ಯುವಕರು ತಂಡಗಳನ್ನು ಕಟ್ಟಿಕೊಂಡು ಆಗಮಿಸಿದ್ದರು.
ಭಜನಾ ತಂಡಗಳು, ಜಾನಪದ ನೃತ್ಯ ತಂಡಗಳು ಪಾಲ್ಗೊಂಡಿದ್ದವು. ಡಿಜೆ ಸಂಗೀತಕ್ಕೆ ಯುವಕರು ಕುಣಿದು ಕುಪ್ಪಳಿಸಿದರು.