ಮುಖ್ಯ ಸುದ್ದಿ
Sirigere Shri: ಪ್ರತಿಭಟನೆ ಬದಲು ಪೊಲೀಸರಿಗೆ ದೂರು ನೀಡಿ | ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
CHITRADURGA NEWS | 19 AUGUST 2024
ಚಿತ್ರದುರ್ಗ: ಸುಳ್ಳು ಸತ್ಯದ ಬಟ್ಟೆ ಹಾಕಿ ಕೊಂಡು ಓಡಾಡುತ್ತಿದೆ. ಪತಿಗೆ ತನ್ನ ಹೆಂಡತಿ ಗರತಿ ಎಂಬ ನಂಬಿಕೆ ಇದ್ದರೆ ಸಾಕು. ಆತ ತನ್ನ ಹೆಂಡತಿ ಗರತಿ ಎಂದು ಊರೆಲ್ಲಾ ಟಾಂ ಟಾಂ ಹೊಡೆಯುವ ಅಗತ್ಯ ಇಲ್ಲ ಎಂದು ತಮ್ಮ ವಿರುದ್ಧ ಆರೋಪ ಮಾಡಿರುವವರ ಕುರಿತು ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಹೊಳಲ್ಕೆರೆ ತಾಲ್ಲೂಕಿನ ಆರ್.ನುಲೇನೂರು ಗ್ರಾಮದಲ್ಲಿ ಭಾನುವಾರ ನಡೆದ ರಂಗನಾಥ ಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸುಳ್ಳು ಮತ್ತು ಸತ್ಯ ಬಾವಿಯೊಂದರಲ್ಲಿ ಈಜಾಡುತ್ತಿದ್ದವು. ಸುಳ್ಳು ಸತ್ಯಕ್ಕೆ ಗೊತ್ತಾಗದಂತೆ ಬಾವಿಯಿಂದ ಮೇಲೆ ಬಂದು ಸತ್ಯದ ಬಟ್ಟೆ ಹಾಕಿಕೊಂಡು, ತನ್ನ ಬಟ್ಟೆಯನ್ನೂ ತೆಗೆದುಕೊಂಡು ಓಡಿ ಹೋಯಿತಂತೆ. ಸತ್ಯ ಬಾವಿಯ ಮೇಲೆ ಬಂದು ನೋಡಿದಾಗ ಬಟ್ಟೆ ಇರಲಿಲ್ಲವಂತೆ. ಆಗ ಮರ್ಯಾದೆ ಉಳಿಸಿಕೊಳ್ಳಲು ಮತ್ತೆ ಬಾವಿಗೆ ಇಳಿಯಿತಂತೆ. ಹೀಗಾಗಿದೆ ಮಠದ ಪರಿಸ್ಥಿತಿ ಎಂದರು.
ಕ್ಲಿಕ್ ಮಾಡಿ ಓದಿ: ಬಿಜೆಪಿಯಿಂದ ರಾಜ್ಯಪಾಲರ ಅಸ್ತ್ರ | ಹೆದ್ದಾರಿ ಸಂಚಾರ ತಡೆ ನಡೆಸಿದ ಕಾಂಗ್ರೆಸ್
‘ಮಠದ ವಿಚಾರದಲ್ಲಿ ಉಂಟಾಗಿರುವುದು ಬಂಡವಾಳಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷವೇ ಹೊರತು, ಗುರು ಶಿಷ್ಯರ ನಡುವಿನ ಸಂಘರ್ಷ ಅಲ್ಲ. ಹಿರಿಯ ಗುರುಗಳ ಕಾಲದಲ್ಲೂ ಎರಡು ಬಣಗಳಿದ್ದವು. ಅದರಲ್ಲಿ ಒಂದು ಬಣದವರು ಗುರುಗಳನ್ನು ಗೋಳು ಹೊಯ್ದುಕೊಂಡಿದ್ದರು. ಅವರ ವಿರುದ್ಧ ಕಿರಿಯ ಸ್ವಾಮೀಜಿ ಕೊಲೆ ಆರೋಪ ಹೊರಿಸಿದ್ದರು’ ಎಂದು ತಿಳಿಸಿದರು.
‘ಹಿರಿಯ ಗುರುಗಳು, ಕಾಣೆಯಾಗಿದ್ದ ಚಂದ್ರಶೇಖರ ಸ್ವಾಮೀಜಿಯನ್ನು ಮದ್ರಾಸಿನಿಂದ ಕರೆತಂದು ಭಕ್ತರ ಮುಂದೆ ನಿಲ್ಲಿಸಿ ಆರೋಪದಿಂದ ಮುಕ್ತರಾಗಿದ್ದರು. ಆಗಿನ ಆರೋಪಕ್ಕೆ ಹೋಲಿಸಿದರೆ ನನ್ನ ಮೇಲೆ ಮಾಡಿರುವ ಆರೋಪ ದೊಡ್ಡದಲ್ಲ’ ಎಂದರು.
‘ಸಿರಿಗೆರೆ ಮಠದ ಹೆಸರು ಕೆಡಿಸುವವರ ವಿರುದ್ಧ ಪ್ರತಿಭಟನೆ ನಡೆಸುವ ಬದಲು ಪೊಲೀಸರಿಗೆ ದೂರು ನೀಡಿ. ಸಿರಿಗೆರೆ ಮಠದ ಮೇಲೆ ಆರೋಪ ಮಾಡಿರುವವರ ವಿರುದ್ಧ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಲು ಯುವಕರ ಗುಂಪೊಂದು ಮುಂದಾಗಿತ್ತು. ಪ್ರತಿಭಟನೆ ಮೂಲಕ ಮಠದ ವಿಚಾರವನ್ನು ಹಾದಿ ಬೀದಿಯಲ್ಲಿ ರಂಪಾಟ ಮಾಡುವುದು ಬೇಡ ಎಂದು ನಾನೇ ಅವರನ್ನು ತಡೆದೆ. ಸಿರಿಗೆರೆ ಮಠದ ಮೇಲೆ ಆರೋಪ ಬಂದಿರುವುದು ಇದೇ ಮೊದಲಲ್ಲ. ಆರೋಪ ಮಾಡಿರುವವರು ಮಠದ ನಿಷ್ಠಾವಂತ ಭಕ್ತರಲ್ಲ’ ಎಂದರು.
ಶಾಸಕ ಎಂ.ಚಂದ್ರಪ್ಪ ಇದ್ದರು.