ಮುಖ್ಯ ಸುದ್ದಿ
ಸಿರಿಗೆರೆಯಲ್ಲಿ ಲಿಂ.ಶಿವಕುಮಾರ ಶಿವಾಚಾರ್ಯ ಶ್ರೀಗಳ ಶ್ರದ್ಧಾಂಜಲಿ ಸಭೆ ಸಮಾರೋಪ | ಯಾರೆಲ್ಲಾ ಭಾಗವಹಿಸಿದ್ರು, ಏನೇನು ಹೇಳಿದ್ರು ಪೂರ್ಣ ವಿವರ ಇಲ್ಲಿದೆ
ಚಿತ್ರದುರ್ಗ ನ್ಯೂಸ್. ಕಾಂ: ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 31ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಸಿರಿಗೆರೆಯಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಬಿಜೆಪಿ ಯುವ ಮುಖಂಡ, ಶಾಸಕ ಬಿ.ವೈ.ವಿಜಯೇಂದ್ರ, ಶಾಸಕರಾದ ಡಾ.ಎಂ.ಚಂದ್ರಪ್ಪ, ಡಿ.ಜಿ.ಶಾಂತನಗೌಡ್ರು, ಮಾಜಿ ಸಚಿವ ಎಚ್.ಆಂಜನೇಯ ಸೇರಿದಂತೆ ಅನೇಕ ಗಣ್ಯರು ಸಾವಿರಾರು ಭಕ್ತರು ಭಾಗವಹಿಸಿದ್ದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ ಅಖಾಡಕ್ಕೆ ಕಾಂಗ್ರೆಸ್; ಮೈಸೂರು ನಾಯಕನ ಹೆಗಲಿಗೆ ಚಿತ್ರದುರ್ಗ ಅಭ್ಯರ್ಥಿ ಆಯ್ಕೆ ಹೊಣೆ
ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರ ಅಭಿಪ್ರಾಯಗಳು:
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:
ಮರುಳಸಿದ್ಧರ ಪರಂಪರೆಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಸದಾ ನಿಷ್ಠುರ ನಡೆ ನುಡಿ ಇಟ್ಟುಕೊಂಡಿದ್ದರು. ಇಂದಿನ ಗುರುಗಳಾದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಕೂಡಾ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ.
ಮರುಳಸಿದ್ಧರ ಪರಂಪರೆಯೆಂದರೆ ವ್ಯಕ್ತಿ ವಿಕಸನ, ಆತ್ಮ ಶುದ್ದತೆ ಆನಂತರ ಸಮಾಜದ ಶುದ್ಧತೆಯಾಗಿದೆ. ಕೀಳರಿಮೆ ಹೋಗಲು ಆತ್ಮಶಕ್ತಿ ಹೆಚ್ಚಾಗಬೇಕು. ಕಾಲ ಬದಲಾಗಿದೆ. ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನ ಮಾಡುತ್ತೇವೆ. ಆದರೆ, ಯಾರನ್ನು ಮೆಚ್ಚಿಸಲು ಆಗಲ್ಲ. ಸತ್ಯ, ಸನ್ಮಾರ್ಗದಲ್ಲಿ ನಡೆದಾಗ ಯಾರನ್ನು ಮೆಚ್ಚಿಸುವ ಅಗತ್ಯ ಬರುವುದಿಲ್ಲ ಎಂದರು.
ದೇಶಕ್ಕೆ ದೊಡ್ಡ ಚರಿತ್ರೆ ಇದೆ. ಆದರೆ, ಚಾರಿತ್ರ್ಯ ಬೇಕಾಗಿದೆ. ಸರಿ, ತಪ್ಪು ಯಾವುದು ಎನ್ನುವುದು ಗೊತ್ತಾಗಬೇಕು. ಬಹಳಷ್ಟು ಜನ ಆಚಾರ್ಯರಿದ್ದಾರೆ, ಆಚರಣೆ ಇಲ್ಲ. ಬಹಳಷ್ಟು ಸಂಘರ್ಷ ಇದೆ. ಸಮನ್ವಯ ಇಲ್ಲ. ಅನ್ಯಾಯ ಮಾಡಬೇಡ ಮತ್ತು ಸಹಿಸಬೇಡ ಎನ್ನುವುದನ್ನು ನಮ್ಮ ಗುರುಗಳು ಹೇಳಿಕೊಟ್ಟಿದ್ದಾರೆ ಎಂದು ಹೇಳಿದರು.
ಹಿಂದಿನ ಗುರುಗಳನ್ನು ಕೋರ್ಟ್ ಕಟಕಟೆಗೆ ಎಳೆಯಲಾಗಿತ್ತು. ಆದರೆ, ಇಂದು ಈ ಮಠದಲ್ಲೇ ಜಂಗಮ ಕೋರ್ಟ್ ನಿರ್ಮಾಣವಾಗಿದೆ. ನಿಷ್ಠುರವಾಗಿ ನ್ಯಾಯ ನೀಡುವ ಕೆಲಸವನ್ನು ಗುರುಗಳು ಮಾಡುತ್ತಿದ್ದಾರೆ. ಇಂತಹ ಮಠ ಭಾರತದಲ್ಲಿ ಮತ್ತೊಂದಿಲ್ಲ ಎಂದು ಶ್ಲಾಘಿಸಿದರು.
ಅರಣ್ಯ ಸಚಿವತರಾದ ಈಶ್ವರ ಖಂಡ್ರೆ:
ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಸಿದ್ದಿಪುರುಷರು. ಸಮ ಸಮಾಜ ನಿರ್ಮಾಣ ಮಾಡುವ ಬಸವಣ್ಣನ ಆಶಯದಂತೆ ಕೆಲಸ ಮಾಡಿದವರು. ಅಸ್ಪೃಶ್ಯತೆ, ಕಂದಾಚಾರ, ಮೂಢನಂಬಿಕೆ ಹೋಗಲಾಡಿಸಿ ಉತ್ತಮ ಸಮಾಜ ನಿರ್ಮಾಣ ಮಾಡುವ ಕನಸು ಕಂಡಿದ್ದರು ಎಂದು ಸ್ಮರಿಸಿದರು.
ಸರ್ಕಾರಗಳಿಂದ ರೈತರಿಗಾಗಿ ಅನೇಕ ಕಾರ್ಯಕ್ರಮ ನೀಡಿದರೂ ಪ್ರಯೋಜನ ಆಗುತ್ತಿಲ್ಲ. ಇರುವ ನ್ಯೂನ್ಯತೆ ಸರಿಪಡಿಸಬೇಕು. ಫಸಲ್ ಬಿಮಾ ಯೋಜನೆ ತುಟಿಗೆ ತುಪ್ಪ ಹಚ್ಚಿದಂತಿದೆ. ಇವು ಸರಿಯಾಗದಿದ್ದರೆ ರೈತರ ಉದ್ದಾರ ಆಗುವುದಿಲ್ಲ ಎಂದರು.
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್:
ಶ್ರೀ ಶಿವಕುಮಾರ ಸ್ವಾಮಿಗಳು ಮುತ್ತಗದೂರಿನ ಮುತ್ತು ಎಂದೇ ಹೆಸರಾಗಿದ್ದರು. ತರಳಬಾಳು ಹುಣ್ಣಿಮೆ ಕಾರ್ಯಕ್ರಮದ ಮೂಲಕ ಜನರಲ್ಲಿ ಏಕತೆಯ ಬೀಜ ಬಿತ್ತಿದ್ದಾರೆ. ಮಠದ ಜವಾಬ್ದಾರಿ ವಹಿಸಿಕೊಂಡ ನಂತರ ಹಗಲಿರುಳು ದುಡಿದು ಮಠ ಹಾಗೂ ಭಕ್ತರನ್ನು ಕಟ್ಟಿ ಬೆಳೆಸಿದ್ದಾರೆ.
ಸಿರಿಗೆರೆ ಗುರುಗಳು ಗುಡುಗಿದರೆ ವಿಧಾನಸೌಧ ನಡುಗುತ್ತದೆ ಎನ್ನುವ ಮಾತಿತ್ತು. ಈಗಿನ ಗುರುಗಳು ಕೂಡಾ ನೀರಾವರಿ ಯೋಜನೆಗಳಿಗೆ ಒತ್ತು ನೀಡಿ, ರೈತರ ಕಲ್ಯಾಣಕ್ಕೆ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಯುವ ಮುಖಂಡ, ಶಾಸಕ ಬಿ.ವೈ.ವಿಜಯೇಂದ್ರ:
ಸಿರಿಗೆರೆ ಎಂದರೆ ಗುರುವಿನ ಸಿರಿ, ಆಧ್ಯಾತ್ಮಿಕ ಸಿರಿ, ಸಾಮಾಜಿಕ ಸಿರಿ, ಜ್ಞಾನದ ಸಿರಿ ಎಂದು ನಾನು ಗಮನಿಸಿದ್ದೇನೆ. ಬಸವಾದಿ ಶರಣರ ಸಮಕಾಲಿನರಾಗಿದ್ದ ಮರುಳಸಿದ್ದರು ಈ ಪೀಠದ ಪುಣ್ಯ ಪುರುಷರಾಗಿದ್ದರೆ. ಅವರು ಬೆಳಗಿದ ಜ್ಯೋತಿ ಇಂದು ಲಕ್ಷಾಂತರ ಮಕ್ಕಳಿಗೆ ಬೆಳಕಾಗಿದೆ. ಮರುಳಸಿದ್ದರ ಹಾದಿಯಲ್ಲೇ ಇಂದಿನ ಗುರುಗಳು ನಡೆದು ಸಿರಿಗೆರೆ ಹಿರಿಮೆಗೆ ಗರಿ ಮೂಡಿಸಿದ್ದಾರೆ. ಎಲ್ಲ ವಿಷ ವರ್ತುಲ ಬೇಧಿಸಿ ಸಿರಿಗೆರೆ ಮಠವನ್ನು ಬೆಳೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ಮಾತನ್ನು ಎಷ್ಟು ಕೇಳುತ್ತಿದ್ದರೋ ಗೊತ್ತಿಲ್ಲ. ಆದರೆ, ಸಿರಿಗೆರೆ ಗುರುಗಳು ಹೇಳುವ ಮಾತನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದರು. ಸಿರಿಗೆರೆ ಗುರುಗಳು ನಮ್ಮ ತಂದೆಯವರಿಗೆ ಪ್ರೇರಣೆಯಾಗಿದ್ದರು ಎಂದು ಸ್ಮರಿಸಿದರು.
ಯಡಿಯೂರಪ್ಪ ಅವರಿಗೆ ರಾಜಕೀಯ ಜನ್ಮ ನೀಡಿದರು ಶಿಖಾರಿಪುರ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಶ್ರೀಗಳು ಪ್ರೇರಣೆ. ರಾಜಕೀಯ ಏಳುಬೀಳುಗಳ ನಡುವೆ ಶ್ರೀಗಳ ಮಾರ್ಗದರ್ಶನದಲ್ಲಿ ತಂದೆ ಬೆಳೆದಿದ್ದರೆ ನಾನು ಇಂದು ಶಾಸಕನಾಗಿ ಇಲ್ಲಿ ಬಂದು ನಿಲ್ಲಲು ಶ್ರೀಗಳ ಆಶೀರ್ವಾದ ಕಾರಣ ಎಂದು ಎಂದರು.
ರೈತ ಸಂಘದ ರಾಜ್ಯಧ್ಯಕ್ಷ, ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ:
ಸರ್ಕಾರದ ಯೋಜನೆಗಳಿಗೆ ಭೂಸ್ವಾಧೀನ ಮಾಡಿದಾಗ ಆ ಭೂಮಿಗೆ ರೈತರೇ ಮಾಲಿಕರಾಗಿರುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಒತ್ತಾಯ ಮಾಡಿದ್ದಾರೆ. ಸರ್ಕಾರಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಭೂ ಸ್ವಾಧೀನ ಮಾಡಿಕೊಂಡು ಕೊಟ್ಟ ಹಣ ರೈತರಲ್ಲಿ ಉಳಿಯುವುದಿಲ್ಲ. ಆ ಹಣದ ಬದಲು ಪ್ರತಿ ಆರು ತಿಂಗಳಿಗೊಮ್ಮೆ ರೈತ ಏನು ಬೆಳೆ ಬೆಳೆಯುತ್ತಿದ್ದ ಎನ್ನುವ ಆಧಾರದಲ್ಲಿ ಪರಿಹಾರ ನೀಡಬೇಕು ಎನ್ನುವ ಚಿಂತನೆ ಅದ್ಬುತವಾಗಿದೆ ಎಂದರು.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಮುಂಬೈ ಡಿಜೆ | ದಾವಣಗೆರೆಯಲ್ಲಿ ಡಿಜೆ ಸೀಕ್ರೇಟ್ ರಿವಿಲ್ ಮಾಡಿದ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ)
ಮಾಜಿ ಸಚಿವ ಎಚ್.ಆಂಜನೇಯ:
ಸಿರಿಗೆರೆ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಬಹಳ ಹಿಂದೆಯೇ ಸಹಪಂಕ್ತಿ ಭೋಜನ ಆರಂಭಿಸುವ ಮೂಲಕ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ. ನಮಗೆ ಮೆಡಿಕಲ್ ಕಾಲೇಜು ಬೇಡ, ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡುವ ಶಾಲೆಗಳು ಸಾಕು ಎಂದು ಸಾಕ್ಷರತೆ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಒಂದು ಸರ್ಕಾರ ಮಾಡುವ ಕೆಲಸವನ್ನು ಸಿರಿಗೆರೆ ಮಠ ಮಾಡುತ್ತಿದೆ ಎಂದು ಸ್ಮರಿಸಿದರು.
ಬಿಜೆಪಿ ಯುವ ಮುಖಂಡ ಜಿ.ಎಂ.ಅನಿತ್‍ಕುಮಾರ್:
ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಶ್ರೀಗಳು ವ್ಯಕ್ತಿ ಆಗಿರಲಿಲ್ಲ, ಶಕ್ತಿ ಆಗಿದ್ದರು. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಶಾಲೆಗಳನ್ನು ತೆರೆದು ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಚಣ ನೀಡಿದ್ದಾರೆ. ಅವರಿಂದ ಮಾಡಿದ ಕೆಲಸಗಳ ಕಾರಣಕ್ಕೆ ಸತತ 31 ವರ್ಷಗಳಿಂದ ಅವರ ಶ್ರದ್ಧಾಂಜಲಿ ಕಾರ್ಯಕ್ರಮದ ಮೂಲಕ ಸ್ಮರಿಸುತ್ತಿದ್ದೇವೆ ಎಂದರು.
ಹಿರೆಕೆರೂರು ಶಾಸಕ ಯು.ಬಿ.ಬಣಕಾರ್:
ಲಿಂಗೈಕ್ಯ ಹಿರಿಯ ಗುರುಗಳು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಕೆಲಸಗಳಿಂದ ಇಂದಿಗೂ ನಮ್ಮ ನಡುವೆ ಪ್ರೇರಣೆಯಾಗಿದ್ದಾರೆ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ;
ರೈತರ ಬಗ್ಗೆ ಎಲ್ಲರೂ ಭಾಷಣ ಮಾಡುತ್ತೇವೆ. ಆದರೆ, ರೈತರ ಪರಿಸ್ಥಿತಿ ಸುಧಾರಣೆ ಆಗಿಲ್ಲ. ಸರ್ಕಾರಗಳು ಕೂಡಾ ರೈತರಿಗೆ ಸರಿಯಾದ ಯೋಜನೆ ರೂಪಿಸುತ್ತಿಲ್ಲ. ಸರ್ಕಾರಕ್ಕೆ ರೈತನ ಸಮಸ್ಯೆ ಗೊತ್ತಿದ್ದರೂ, ಗೊತ್ತಿಲ್ಲದಂತೆ ನಡೆಯುತ್ತದೆ. ಕೃಷಿ ಕುಟುಂಬದ ಹಿನ್ನೆಲೆ ಇಲ್ಲದವರು ಕೃಷಿ ಮಂತ್ರಿ ಆಗುತ್ತಾರೆ. ಅಧಿಕಾರಿಗಳು ಹೇಳಿದ್ದನ್ನು ಕೇಳಿಕೊಂಡು ಕುಳಿತುಬಿಡುತ್ತಾರೆ ಎಂದರು.
ಬೆಂಗಳೂರಿನ ಇನ್ ಸೈಟ್ ಐಎಎಸ್ ಕೋಚಿಂಗ್ ಕೇಂದ್ರದ ಮುಖ್ಯಸ್ಥ ವಿನಯ್:
ಮುಂದಿನ ದಿನಗಳಲ್ಲಿ ಸಿರಿಗೆರೆ ಮಠದಲ್ಲಿ ಐಎಎಸ್, ಕೆಎಎಸ್ ಕೋಚಿಂಗ್ ಕೇಂದ್ರ ಆರಂಭವಾಗಬೇಕು. ಇದಕ್ಕೆ ಇನ್ ಸೈಟ್ ಕೊಚಿಂಗ್ ಸೆಂಟರ್ ಎಲ್ಲ ಸಹಕಾರ ನೀಡುತ್ತದೆ. ಹಿಂದೆ ರಾಜ್ಯದಲ್ಲಿ ಪ್ರತಿ ವರ್ಷ 8-10 ಐಎಎಸ್, ಐಪಿಎಸ್ ಅಧಿಕಾರಿಗಳು ಬರುತ್ತಿದ್ದರು. ಈಗ ಆ ಸಂಖ್ಯೆ 30 ರವರೆಗೆ ತಲುಪಿದೆ. ನಮ್ಮ ಕೇಂದ್ರದ ಕೊಡುಗೆಯೂ ಇದೆ.
ಸರ್ಕಾರ ಈಗ ಸಾಕಷ್ಟು ಗ್ಯಾರೆಂಟಿಗಳನ್ನು ಕೊಟ್ಟಿದೆ. ಅವುಗಳ ಜೊತೆಗೆ ರೈತರಿಗಾಗಿ ಜಲಭಾಗ್ಯ ಎಂಬ 6ನೇ ಗ್ಯಾರೆಂಟಿ ಕೊಟ್ಟರೆ ಹೆಚ್ಚು ಅನುಕೂಲವಾಗುತ್ತದೆ. ಇಂತಹ ಯೋಜನೆಯಿಂದ ರಾಜ್ಯದ ಎಲ್ಲ ಕೆರೆಗಳು ಭರ್ತಿಯಾದರೆ ರೈತರು ಹರ್ಷಗೊಳ್ಳುತ್ತಾರೆ.
ಹಿರಿಯ ಗುರುಗಳಾದ ಶ್ರೀ ಶಿವಕುಮಾರ ಸ್ವಾಮೀಜಿ ಹಲವು ಕಷ್ಟಗಳನ್ನು ಎದುರಿಸಿ ಸಮಾಜ ಕಟ್ಟಿದ್ದಾರೆ. ಸಾಹಿತ್ಯ, ಸಾಂಸ್ಕøತಿಕ, ರಾಜಕೀಯವಾಗಿ ಕ್ರಾಂತಿ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು, ಜಯಚಾಮರಾಜ ಒಡೆಯರ್ ಜೊತೆಗೆ ಗುರುಗಳ ಜೊತೆಗೆ ಆತ್ಮೀಯತೆ ಇದ್ದರೂ ಅದು ವ್ಯಾವಹಾರಿಕವಾಗಿರಲಿಲ್ಲ. ಜನರ ಪರವಾಗಿ ಕೆಲಸ ಮಾಡಿದ್ದಾರೆ.| ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ.