ಮುಖ್ಯ ಸುದ್ದಿ
ಮೇ.27 ರವರೆಗೆ ಶಿವಮೂರ್ತಿ ಶರಣರು ನ್ಯಾಯಾಂಗ ಬಂಧನಕ್ಕೆ | ಮತ್ತೆ ಚಿತ್ರದುರ್ಗ ಕಾರಾಗೃಹ ಸೇರಿದ ಮುರುಘಾಶ್ರೀ
CHITRADURGA NEWS | 29 APRIL 2024
ಚಿತ್ರದುರ್ಗ: ಸುಪ್ರೀಂ ಕೋರ್ಟ್ ಆದೇಶಾನುಸಾರ ಇಂದು(ಏ.29) ಮಧ್ಯಾಹ್ನ ಚಿತ್ರದುರ್ಗ ನ್ಯಾಯಾಲಯಕ್ಕೆ ಶರಣಾದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಗೆ 2024 ಮೇ 27 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಯಿತು.
ಇಲ್ಲಿನ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಂಕ್ರಪ್ಪ ನಿಂಬಣ್ಣ ಕಲ್ಕಣಿ ಅವರ ಪೀಠ ಮಧ್ಯಾಹ್ನ ನ್ಯಾಯಾಲಯದ ಎದುರು ಹಾಜರಾದ ಶರಣರ ಪ್ರಕರಣದ ವಿಚಾರಣೆ ನಡೆಸಿ ಮೇ.27ರವರೆಗೆ ನ್ಯಾಯಾಂಗ ಬಂಧನ ವಿಧಿಸಿತು. ಅದೇ ದಿನದಿಂದ ವಿಚಾರಣೆ ನಿಗಧಿ ಮಾಡಲು ತೀರ್ಮಾನಿಸಿತು.
ಇದನ್ನೂ ಓದಿ: ಚಿತ್ರದುರ್ಗಕ್ಕೆ ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ
2022 ಆಗಸ್ಟ್ 26 ರಂದು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಬಾಲಕಿಯರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.
ಸದರಿ ದೂರನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಿದ ನಂತರ, 2022 ಸೆಪ್ಟಂಬರ್ 1 ರಂದು ಶಿವಮೂರ್ತಿ ಮುರುಘಾ ಶರಣರನ್ನು ಪೋಕ್ಸೋ ಪ್ರಕರಣದಡಿ ಬಂಧಿಸಲಾಗಿತ್ತು.
ಇದನ್ನೂ ಓದಿ: ಭೀಕರ ಬರಗಾಲದಲ್ಲಿ ಕೋಡಿ ಬಿದ್ದ ಚಿತ್ರದುರ್ಗ ಜಿಲ್ಲೆಯ ಕೆರೆ | ನೀರೆಲ್ಲಿಂದ ಬಂತು ಅಂತಿರಾ, ಈ ಸುದ್ದಿ ಓದಿ..
ಈ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ 2023 ನವೆಂಬರ್ 8 ರಂದು ಹೈಕೋರ್ಟ್ ಚಿತ್ರದುರ್ಗ ಪ್ರವೇಶಿಸಬಾರದು ಎನ್ನುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿತ್ತು.
ಅಂದಿನಿಂದ ಮುರುಘಾ ಶರಣರು ದಾವಣಗೆರೆಯ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ, ಸಂತ್ರಸ್ಥ ಬಾಲಕಿಯ ತಂದೆ ಹೈಕೋರ್ಟ್ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಈ ವರ್ಷ ಬಹಳ ಬಿಸಿಲು ಸ್ವಾಮೀಜಿ | ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್
ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ 2024 ಏಪ್ರಿಲ್ 23 ರಂದು ಒಂದು ವಾರದೊಳಗೆ ಮುರುಘಾ ಶರಣರು ಚಿತ್ರದುರ್ಗದ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗಬೇಕು. ಸಾಕ್ಷಿಗಳ ವಿಚಾರಣೆ ಮುಗಿಯುವವರೆಗೆ ನಾಲ್ಕು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿರಬೇಕು ಎಂದು ನಿರ್ದೇಶನ ನೀಡಿತ್ತು.
ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ಇಂದು ಮಧ್ಯಾಹ್ನ 2.20ಕ್ಕೆ ಮುರುಘಾ ಶ್ರೀಗಳು ನ್ಯಾಯಾಲಯಕ್ಕೆ ಶರಣಾದರು. ವಿಚಾರಣೆ ನಡೆಸಿದ ನಂತರ ನ್ಯಾಯಾಲಯ ಮೇ.27 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತು.
ಇದನ್ನೂ ಓದಿ: ಜನರ ಜೊತೆ ಚಹಾ ಕುಡಿದು, ಹರಟೆ ಹೊಡೆದ ಗೋವಿಂದ ಕಾರಜೋಳ
ನ್ಯಾಯಾಂಗ ಬಂಧನ ಆದೇಶದ ನಂತರ ಶ್ರೀಗಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಿ ಅಲ್ಲಿಂದ ಸಂಜೆ 5 ಗಂಟೆ ವೇಳೆಗೆ ಜಿಲ್ಲಾ ಕಾರಾಗೃಹಕ್ಕೆ ಬಿಡಲಾಯಿತು.