Connect with us

LATEST NEWS-ಪ್ರಪ್ರಥಮ ಅಂತರ್ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಸಾಣೇಹಳ್ಳಿ ಶ್ರೀಗಳ ಆಯ್ಕೆ

Sri Sanehalli Panditaradhya Swamiji

ಮುಖ್ಯ ಸುದ್ದಿ

LATEST NEWS-ಪ್ರಪ್ರಥಮ ಅಂತರ್ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಸಾಣೇಹಳ್ಳಿ ಶ್ರೀಗಳ ಆಯ್ಕೆ

ಚಿತ್ರದುರ್ಗ ನ್ಯೂಸ್.ಕಾಂ: ಪ್ರಪ್ರಥಮ ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಣೇಹಳ್ಳಿ ಮಠದ ಡಾ.ಶ್ರೀ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ.

2023 ಡಿಸೆಂಬರ್ 30 ಹಾಗೂ 31 ರಂದು ಸಾಣೇಹಳ್ಳಿಯಲ್ಲಿ ಚಿತ್ರದುರ್ಗ-ಚಿಕ್ಕಮಗಳೂರು ಎರಡೂ ಜಿಲ್ಲೆಗಳನ್ನೊಳಗೊಂಡ ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈ ಸಮ್ಮೇಳನಕ್ಕೆ ಶ್ರೀಗಳು ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಎರಡು ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಸಭೆಯಲ್ಲಿ ಶ್ರೀಗಳ ಹೆಸರನ್ನು ಅನುಮೋದಿಸಲಾಗಿದೆ.

ಶ್ರೀಗಳು ಸ್ವತಃ ವೈಚಾರಿಕ ಲೇಖಕರಾಗಿ, ನಾಟಕಕಾರರಾಗಿ, ರಂಗ ಸಂಘಟಕರಾಗಿ ರಾಜ್ಯದಲ್ಲಿ ಮನೆಮಾತಾಗಿದ್ದಾರೆ. ಅವರ ನಾಟಕ ಚಟುವಟಿಕೆಗಳು ರಾಜ್ಯ, ದೇಶದ ಗಡಿಗಳನ್ನು ಮೀರಿವೆ. ಸಾಣೇಹಳ್ಳಿ ಪುಟ್ಟ ಗ್ರಾಮವನ್ನು ತಮ್ಮ ರಂಗ ಚಟುವಟಿಕೆಗಳ ಮೂಲಕ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಪಂಡಿತಾರಾಧ್ಯರಿಗೆ ಸಲ್ಲುತ್ತದೆ.

ಇದನ್ನೂ ಓದಿ: ಸಾಣೇಹಳ್ಳಿ ಶ್ರೀಗಳ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ: ದೇಶದ ಮೊದಲ ವಚನ ಅಭಿಯಾನಕ್ಕೆ ಪ್ರಶಂಸೆ

ಚಿತ್ರದುರ್ಗ ಜಿಲ್ಲೆಯ ತಳಕು ಮತ್ತು ಬೆಳಗೆರೆ ಸಾಹಿತ್ಯಕ್ಕೆ ಹೆಸರು ಪಡೆದರೆ, ಸಾಣೆಹಳ್ಳಿ ಗ್ರಾಮವು ರಂಗಭೂಮಿ ಚಟುವಟಿಕೆಗೆ ರಾಜ್ಯ ಮತ್ತು ದೇಶದಲ್ಲಿ ಗಮನ ಸೆಳೆದಿದೆ. ಇದರ ಹಿಂದಿನ ಪೂರ್ಣ ಪ್ರಯತ್ನ ಶ್ರೀ ಗಳದ್ದಾಗಿದೆ. ಇವರ ಸಾಹಿತ್ಯ, ರಂಗಭೂಮಿ, ವಚನ ಸಾಹಿತ್ಯ ಪ್ರಸಾರ, ಶಿಕ್ಷಣ, ದಾಸೋಹಗಳ ಕೊಡುಗೆಗಳನ್ನು ಸ್ಮರಿಸಿ, ಕಸಾಪದ ಎರಡೂ ಜಿಲ್ಲಾ ಘಟಕಗಳು ಶ್ರೀ ಪಂಡಿರಾಧ್ಯರನ್ನು ಪ್ರಥಮ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಘೋಷಿಸಿದೆ.

ಸಾಹಿತ್ಯ ಕೃಷಿಯಲ್ಲಿ ಸಾಣೇಹಳ್ಳಿ ಶ್ರೀಗಳು:
50 ಕ್ಕೂ ಹೆಚ್ಚು ಸ್ವತಂತ್ರ ವೈಚಾರಿಕ ಕೃತಿಗಳು, 6 ನಾಟಕ ಮತ್ತು 1 ಪ್ರವಾಸ ಕಥನ, ಎರಡು ವಚನ ಕೃತಿಗಳನ್ನು ಪಂಡಿತಾರಾಧ್ಯ ಶ್ರೀಗಳು ರಚಿಸಿದ್ದಾರೆ. 2004 ರಲ್ಲಿ ಹೊಸದುರ್ಗದಲ್ಲಿ ಜರುಗಿದ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇದೀಗ ಮೊದಲ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಎರಡೂ ಜಿಲ್ಲೆಗಳ ಕಸಾಪದ ಪದಾಧಿಕಾರಿಗಳ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಮತ್ತು ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹಾಗೂ ಎರಡೂ ಜಿಲ್ಲೆಗಳ ಕಸಾಪ ಪದಾಧಿಕಾರಿಗಳ ಪೂರ್ಣ ಒಮ್ಮತದಿಂದ ಸಮ್ಮೇಳನಾಧ್ಯಕ್ಷರ ಆಯ್ಕೆ ಜರುಗಿದೆ.

ಪಂಡಿತಾರಾಧ್ಯ ಶ್ರೀಗಳಿಗೆ 1998 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ‘ಗೌರವ ಫೆಲೋಷಿಪ್’, 2004 ರಲ್ಲಿ ಕರ್ನಾಟಕ ಸರ್ಕಾರ ‘ರಾಜ್ಯೋತ್ಸವ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ‘ಫಾಲ್ ಹ್ಯಾರಿಸ್’ ಪ್ರಶಸ್ತಿ ನೀಡಿದೆ. 2007 ರಲ್ಲಿ ‘ಕೆ.ವಿ.ಶಂಕರೇಗೌಡ’ ಸೇವಾ ಪ್ರಶಸ್ತಿ, 2010ರಲ್ಲಿ ‘ದುರ್ಗದ ಸಿರಿ’ ಪ್ರಶಸ್ತಿ, 2012ರಲ್ಲಿ ಕುವೆಂಪು ವಿವಿ ‘ಗೌರವ ಡಾಕ್ಟರೇಟ್’ ಹಾಗೂ ಆಳ್ವಾಸ್ ‘ನುಡಿಸಿರಿ’ ಪ್ರಶಸ್ತಿ ಮತ್ತು 2013ರಲ್ಲಿ ದುಬೈ ‘ಶ್ರೀರಂಗ’ ಧ್ವನಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ಹಿನ್ನೆಲೆ:
1951 ಸೆಪ್ಟಂಬರ್ 4 ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ಜನನ. ಪೂರ್ವಾಶ್ರಮದ ತಂದೆ ನಾಗಯ್ಯ, ತಾಯಿ ಶಿವನಮ್ಮ.

ಪ್ರಾಥಮಿಕ ಶಿಕ್ಷಣವನ್ನು ಹೆಡಿಯಾಲದಲ್ಲಿ, ಪ್ರೌಢ ಶಿಕ್ಷಣವನ್ನು ಸುಣಕಲ್ಲು ಬಿದರಿಯಲ್ಲಿ, ಕಾಲೇಜು ಶಿಕ್ಷಣವನ್ನು ಸಿರಿಗೆರೆಯಲ್ಲಿ ಪಡೆದರು. ಮೈಸೂರು ವಿವಿಯಿಂದ 1974 ರಲ್ಲಿ ತತ್ವ ಶಾಸ್ತ್ರ ವಿಷಯದಲ್ಲಿ ಸ್ನಾತಕೊತ್ತರ ಪದವಿಯನ್ನು ಪ್ರಥಮ ರ್ಯಾಂಕನ್ನು ಚಿನ್ನದ ಪದಕದೊಂದಿಗೆ ಪಡೆದರು.

1977 ಡಿಸೆಂಬರ್ 25 ರಂದು ಸಾಣೆಹಳ್ಳಿಯ ಪೀಠಾಧ್ಯಕ್ಷರಾದರು. 1987 ರಲ್ಲಿ ಶ್ರೀ ಶಿವಕುಮಾರ ಕಲಾ ಸಂಘ ಸ್ಥಾಪಿಸಿದರು. 1990 ರಲ್ಲಿ ಶಿವಸಂಚಾರ ರೆಫರರ್ಟರಿ ಆರಂಭಿಸಿದರು. 2003 ರಲ್ಲಿ ಸಿ.ಜಿ.ಕೆ. ಆಸಕ್ತಿಯಿಂದ 5 ಸಾವಿರ ಆಸನಗಳ ಸಾಮಥ್ರ್ಯದ ಗ್ರೀಕ್ ಮಾದರಿಯ ಸುಸಜ್ಜಿತ ಬಯಲು ರಂಗ ಮಂದಿರ ಸಾಣೇಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿದೆ.

ಕಳೆದ 12 ವರ್ಷಗಳಿಂದ ಶ್ರೀ ಶಿವಕುಮಾರ ಕಲಾಸಂಘದ ವತಿಯಿಂದ ಶ್ರೀ ಶಿವಕುಮಾರ ರಂಗ ಪ್ರಶಸ್ತಿ ನೀಡುತ್ತಲಿದೆ. 2007 ರಲ್ಲಿ ಭಾರತ ಸಂಚಾರ, ಶಿವದೇಶ ಸಂಚಾರದ ಮೂಲಕ ಭಾರತಾಧ್ಯಂತ ಪರ್ಯಟನೆ ಮಾಡಿ 21 ರಾಜ್ಯಗಳಲ್ಲಿ ಮರಣವೇ ಮಹಾ ನವಮಿ, ಶರಣ ಸತಿ, ಲಿಂಗಪತಿ, ಜಂಗಮದೆಡೆಗೆ ಸೇರಿದಂತೆ ಶರಣ ತತ್ವ ಪ್ರತಿಪಾದಿಸುವ 10 ನಾಟಕಗಳನ್ನು ಹಿಂದಿ ಅವತರಣಿಕೆಯಲ್ಲಿ ಪ್ರದರ್ಶಿಸಿತು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version