ಮುಖ್ಯ ಸುದ್ದಿ
ಸಂಕ್ರಾಂತಿ ವಿಶೇಷ ಲೇಖನ
CHITRADURGA NEWS | 14 JANAURY 2025
ವಿಶೇಷ ಲೇಖನ : ಸಿ.ಧನಂಜಯ್, ಚಿತ್ರದುರ್ಗ
ಸಂಪ್ರದಾಯಗಳಿಂದ ಸಂಬಂಧ ಸುಧಾರಿಸುವಲ್ಲಿ ಪ್ರಾಚೀನ ಭಾರತೀಯರ ದೂರದೃಷ್ಟಿ ಫಲವಾಗಿ ಕುಟುಂಬದ ಸದಸ್ಯರು ಒಟ್ಟಾಗಿ ದಿನದಲ್ಲಿ ಅಥವಾ ತಿಂಗಳಲ್ಲಿ ಒಂದೆರಡು ಸಲ ಒಂದಿಲ್ಲೊಂದು ಸಂಪ್ರದಾಯಗಳ ಪಾಲನೆ, ಪೂಜೆ, ದೇವಸ್ಥಾನಗಳಿಗೆ ಭೇಟಿ, ಸಹ ಭೋಜನ ಇತ್ಯಾದಿ ಮೂಲಕ ಪರಸ್ಪರರಲ್ಲಿ ಆತ್ಮೀಯತೆ ಸಹಜವಾಗಿ ಚಿಗುರುವಂತೆ ಆಗುತ್ತಿತ್ತು.
Also Read: ಭದ್ರಾ ಮೇಲ್ದಂಡೆ ಯೋಜನೆ ಸಿರಿಗೆರೆ ಶ್ರೀ ಅಂಗಳಕ್ಕೆ | ದಶಕಗಳಿಂದ ಕುಂಟುತ್ತಾ ಸಾಗಿರುವ ಯೋಜನೆಗೆ ಹೊಸ ಬೆಳಕು
ಹದಿನೈದು ದಿನಕ್ಕೊಮ್ಮೆ ಬರುವ ಹುಣ್ಣಿಮೆ, ಅಮವಾಸ್ಯೆ ಯುಗಾದಿ, ನಾಗರಪಂಚಮಿ, ವಿಜಯ ದಶಮಿ, ದೀಪಾವಳಿ, ಸಂಕ್ರಾಂತಿಯಂತಹ ಮುಖ್ಯ ಹಬ್ಬಹರಿದಿನಗಳನ್ನು ಹತ್ತಿರದ ರಕ್ತಸಂಬಂಧಿಗಳ ಜೊತೆ ಒಟ್ಟಾಗಿ ಆಚರಿಸಬೇಕು ಎಂಬ ಅಲಿಖಿತ ನಿಯಮ ಸಂಬಂಧಗಳ ಬಳ್ಳಿ ಹರವಾಗಿ ಹರಡಲು ಸಹಕಾರಿಯಾಗಿದೆ.
ಆಚರಿಸುವ ಪದ್ಧತಿಯಿಂದ ಸಂಬಂಧಿಗಳಲ್ಲಿ ಸೌಹಾರ್ದ ಸಂಬಂಧ ತಾನಾಗಿ ಅರಳುತ್ತಿತ್ತು. ಪರಸ್ಪರ ಕಷ್ಟ ಸುಖಗಳಲ್ಲಿ ಭಾಗಿಯಾಗ ಬೇಕು ಎಂಬ ಭಾವನೆ ಬೆಳೆಯುತ್ತಿತ್ತು. ಬದುಕಿನಲ್ಲಿ ಬರುವ ಬದಲಾವಣೆ (ಕಷ್ಟ ಸುಖ)ಗಳನ್ನು ರಚನಾತ್ಮಕವಾಗಿ ಸ್ವೀಕರಿಸಬೇಕು. ಮನಷ್ಯನಿಗೆ ಹಣಕ್ಕಿಂತ ಸಂಬಂಧ ಮುಖ್ಯವೆಂಬ ಭಾವನೆ ಸಂಕ್ರಾಂತಿ ಹೊಸ ವರುಷ ಹಬ್ಬದ ಆಚರಣೆ ಯಲ್ಲಿದೆ.
ಭರ್ಜರಿ ಭೋಜನ, ಹಾಸ್ಯ, ಸೌಂದರ್ಯಪ್ರಜ್ಞೆ ಜೊತೆಗೆ ಸಂಬಂಧ ಸುಧಾರಿಸುವ, ಬೆಳೆಸುವ, ಗಟ್ಟಿಗೊಳಿಸುವ ಸೂತ್ರವಿದೆ. ಉದ್ಯೋಗ ನಿರ್ಮಿಸುವ ಆರ್ಥಿಕ ಚಿಂತನೆ ಇದೆ. ಸ್ವಾವಲಂಬಿ, ಸ್ವಾಭಿಮಾನಿ ಬದುಕಿನ ಸಂದೇಶವಿದೆ. ಮೇಲಾಗಿ ಋತುಮಾನಗಳಿಗೆ ಅನುಗುಣವಾಗಿ ಬರುವ ಹಬ್ಬಗಳ ಆಹಾರ ವಿಹಾರ ವಿಧಾನಗಳಲ್ಲಿ ಸ್ವಸ್ಥ ಆರೋಗ್ಯದ ಪರಿಕಲ್ಪನೆ ಇದೆ. ಮೇಲಾಗಿ ಸಂಬಂಧ ಸುದಾರಿಸುವ ಎಲ್ಲ ಸುವಿಚಾರಗಳು ಸಂಕ್ರಾಂತಿ ಹೊಸ ವರುಷದ ಆಚರಣೆ ಯಲ್ಲಿವೆ.
ಸಂಕ್ರಾಂತಿ :
ಆರೋಗ್ಯ ಮತ್ತು ಉತ್ಸಾಹವಿದ್ದಲ್ಲಿ ಉತ್ಸವಗಳು ಆರೋಗ್ಯವಂತ ಜೀವನೋತ್ಸಾಹ ವರ್ಧನೆಗೆ ಉತ್ಸವಗಳಿಗೆ ಕಾರಣ ಎಂದರಿತ ಭಾರತದ ಜನರು ಜೀವನದ ಪ್ರತಿಕ್ಷಣದ ಸಂತೋಷವನ್ನು ಉತ್ಸಾಹದಿಂದ ಹಂಚಿಕೊಳ್ಳಲು ಉತ್ಸವ ರೂಪದಲ್ಲಿ ಆಚರಿಸುತ್ತಾರೆ.
ಸಂಕ್ರಾಂತಿ ಹಬ್ಬ ಸಂಬಂಧಗಳ ನೆಲೆಗಟ್ಟಿನಲ್ಲಿ ಅತ್ಯಂತ ಮಹತ್ವದ ಹಬ್ಬ. ನದಿಗಳಿಗೆ ಹೋಗಿ ನದಿ ಸ್ನಾನ ಮಾಡಿ, ದೇವರ ಪೂಜೆ ದರ್ಶನ ಮಾಡುವ ಸಂಪ್ರದಾಯವಿದೆ. ನಾವಾಗಿ ಬಂಧು ಮಿತ್ರ ರಲ್ಲಿಗೆ, ಪರಿಚಿತರಲ್ಲಿಗೆ ಹೋಗಿ ಎಳ್ಳು ಬೆಲ್ಲ ಹಂಚಿ ಸಂಬಂಧ ನವೀಕರಿಸುವ ಹಬ್ಬ. ಎಳ್ಳಿನ ಸ್ನಿಗ್ದತೆಗೆ ಮಧುರ ಬೆಲ್ಲ ಸೇರಿದಾಗ ಅಧರಕ್ಕೆ ಸಿಹಿ ಉದರಕ್ಕೆ ಹಿತ ದೊರಕುತ್ತದೆ.
Also Read: ದಿನ ಭವಿಷ್ಯ | ಜನವರಿ 14 | ಕುಟುಂಬ ಸದಸ್ಯರೊಂದಿಗೆ ವಿವಾದ, ಮಕ್ಕಳ ಆರೋಗ್ಯದಲ್ಲಿ ಎಚ್ಚರ, ಹೊಸ ವಾಹನ ಯೋಗ
ಅದೇ ರೀತಿ ಸಣ್ಣಪುಟ್ಟ ಕಾರಣಕ್ಕೆ ಉಂಟಾದ ವೈಮನಸ್ಸು ಎಳ್ಳ ಬೆಲ್ಲ ಹಂಚಿದಾಗ ತಾನಾಗಿ ಇಲ್ಲವಾಗುತ್ತದೆ. ಶರೀರಕ್ಕೆ ಎಣ್ಣೆಕಾಳುಗಳ ಅವಶ್ಯಕತೆ ಹೆಚ್ಚಾಗಿರುತ್ತದೆ. ಆದ್ದರಿಂದ ಸಂಕ್ರಾಂತಿ ಹಬ್ಬದ ದಿನ ಎಲ್ಲ ಪದಾರ್ಥಗಳಲ್ಲಿ ಎಣ್ಣೆ ಕಾಳುಗಳ ಬಳಕೆ ಇರುತ್ತದೆ. ಎಳ್ಳು ತಿಂದು, ಎಳ್ಳಿನ ಎಣ್ಣೆ ಸ್ನಾನ ಮಾಡಿ, ಎಳ್ಳನ್ನು ದಾನ ಮಾಡಿ, ಹಬ್ಬ ಆಚರಿಸಲಾಗುತ್ತದೆ. ಪರಿಣಾಮವಾಗಿ ದೇಹದ ಆರೋಗ್ಯ ಸ್ಥಿರ ವಾಗುತ್ತದೆ.
ಊಟದಲ್ಲಿ ಸಜ್ಜೆ ರೊಟ್ಟಿ, ದಿದ್ವಳಧಾನ್ಯಗಳ ಕಾಳುಪಲ್ಲೆ, ಎಣ್ಣೆ ಬದನಿ ಕಾಯಿ, ಕೊಸಂಬರಿ, ವಿವಿಧ ತರಕಾರಿ ಹಾಕಿದ ಭರ್ತ, ಅಂಬಲಿ, ಎಳ್ಳಿನ ಹೋಳಿಗೆ, ತುಪ್ಪ, ಹಪ್ಪಳ, ಭಜಿ, ವಿಧ ವಿಧ ಸೊಪ್ಪು (ಪಲ್ಲೆ)ಗಳ ಬಳಕೆ, ಸಿಹಿ ಮತ್ತು ಕರಿದ ಪದಾರ್ಥಗಳ್ಳುಳ್ಳ ಪಾರಂಪರಿಕ ಭೋಜನದ ಸವಿ ಸ್ಮರಿಸಿದಾಗ ಬಾಯಲ್ಲಿ ನೀರೂರುತ್ತದೆ. ದೇಹಕ್ಕೆ ಅವಶ್ಯವಿದ್ದ ಪೋಷಕಾಂಶ ಗಳು ಮತ್ತು ಸಮತೊಲನ ಆಹಾರ ತಾನಾಗಿ ಮತ್ತು ಸಹಜವಾಗಿ ಸಿಗುವ ವ್ಯವಸ್ಥೆ ಭೋಜನದಲ್ಲಿ ರೂಢಿ ಯಾಗಿತ್ತು. ಜನರು ಬದುಕಿರುವಷ್ಟು ಕಾಲ ಉತ್ಸಾಹದಿಂದ ಸಂತೋಷ ದಿಂದ ಇರಬೇಕು. ಜೀವನ ವನ್ನು ಪೂರ್ಣ ಅನುಭವಿಸ ಬೇಕು ಎಂಬ ಸದ್ವಿಚಾರ ನಮ್ಮ ಭಾರತೀಯ ಸಂಸ್ಕೃತಿ ಯ ಭಾಗವಾಗಿತ್ತು.
ಬರೀ ಕ್ರಾಂತಿಯಲ್ಲ ಇದು ಸಂಕ್ರಾಂತಿ:
ಪರಿಪೂರ್ಣತೆಗೆ ಅನುವು ಮಾಡಿಕೊಡುವ ಪ್ರಕೃತಿಯಲ್ಲಿ ಸಹಜ ಪರಿವರ್ತನೆಯೇ ಸಂಕ್ರಾಂತಿ. ಭವಿಷ್ಯದ- ಉತ್ತರೋತ್ತರ ಅಭಿವೃದ್ಧಿಯ ಕನಸಿಗೆ ಮುನ್ನಡಿ ಬರೆಯುವ ಸಂಕ್ರಾಂತಿ ನಮ್ಮದು. ಎಲ್ಲರ ಸಂತೋಷದಲ್ಲಿ ಸಂತೋಷ ಕಾಣುವ ಸಂಕ್ರಾಂತಿ ನಮ್ಮದು. ಸಂಕ್ರಾಂತಿ ಹಬ್ಬ ಪ್ರಕೃತಿಯು ಆಚರಿಸುವ ಹೊಸ ವರುಷವಾಗಿದೆ.
ಸಂಕ್ರಾಂತಿ ಪೂರ್ವದಲ್ಲಿ ಅಂದರೆ ದಕ್ಷಿಣಾಯನದಲ್ಲಿ ರಾತ್ರಿ ದೊಡ್ಡದಿರುತ್ತದೆ. ಅಂಧಕಾರ ಹೆಚ್ಚಾಗಿರುತ್ತದೆ. ಅಂಧಕಾರ ಅಧಿಕವಾಗಿದ್ದ ಚಳಿಗಾಲದ ದಿನಗಳನ್ನು ಮೈಜಾಡಿಸಿ ಕೊಂಡ ಪ್ರಕೃತಿಯು ಪ್ರಕಾಶವನ್ನು ಸಂಭ್ರಮದಿಂದ ಸ್ವಾಗತಿಸುತ್ತದೆ. ಪ್ರಕ್ರತಿಯ ಸಂತೋಷದ ಜೊತೆ ಪುರುಷನು ಜೊತೆಗೂಡಿ ನಲಿಯುವ ಹಬ್ಬ.
Also Read: ಅಡಿಕೆ ಧಾರಣೆ | ಇಂದಿನ ಅಡಿಕೆ ಮಾರುಕಟ್ಟೆಗಳ ನೋಟ
ಸೂರ್ಯನ ಚಲನೆ ಆಧಾರಿತ, ಸೂರ್ಯನು ಮಕರರಾಶಿ ಪ್ರವೇಶಿಸುವ ಉತ್ತರಾಯಣ ಪುಣ್ಯ ಕಾಲವು ಸಂಕ್ರಾಂತಿ ಹಬ್ಬವಾಗಿದೆ. ನದಿ ಸ್ನಾನ, ಸೂರ್ಯ ನಮಸ್ಕಾರ, ದನಕರುಗಳನ್ನು ಸಿಂಗರಿಸಿ ಕೆಂಡ ಹಾಯಿಸುವುದು, ದೃಷ್ಟಿ ನಿವಾಳಿಸುವುದು, ಪತಂಗ ಹಾರಿಸುವುದು ಮುಂತಾದ ರೀತಿಯ ಆಚರಣೆಗಳು ಸಂಕ್ರಾಂತಿ ಮಹಾ ಪರ್ವದಂದು ನಡೆಯುತ್ತವೆ. ಮಹಾ ಭಾರತದ ಯುದ್ಧದಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ಇಚ್ಛಾ ಮರಣಿ ಯಾಗಿದ್ದ ಭೀಷ್ಮನು ಸಂಕ್ರಾಂತಿಯ ಉತ್ತರಾಯಣ ಪುಣ್ಯಕಾಲ ದಂದು ಶರೀರ ತ್ಯಾಗ ಮಾಡಿ ಮೋಕ್ಷ ಪಡೆಯುತ್ತಾನೆ. ಸಂಕ್ರಾಂತಿಯ ದಿನ ಶಬರಿ ಮಲೈಯಲ್ಲಿ ಮಕರ ಜ್ಯೋತಿ ಕಾಣಿಸುತ್ತದೆ.
ಕೃಷಿಕರ ಹಬ್ಬ ಸಂಕ್ರಾಂತಿ :
ಸಂಕ್ರಾಂತಿ ವಾಸ್ತವವಾಗಿ ಕೃಷಿಕರ ಹಬ್ಬ. ಒಂದೆಡೆ ಮುಂಗಾರು ಬೆಳೆ ಮನೆಗೆ ಬಂದ ಸಂಭ್ರಮ ಆಚರಣೆ ಮತ್ತೊಂದೆಡೆ ಹಿಂಗಾರುಬೆಳೆ ಹೊಲದಲ್ಲಿ ನಳನಳಿಸುತ್ತ ಇರುವುದನ್ನು ಕಣ್ಣಾರೆ ಕಂಡು ಸಂಭ್ರಮಿಸುವ ರೀತಿ ನೀತಿ ಕೃಷಿಕರದ್ದಾಗಿದೆ. ದನಕರು ಗಳಿಗೆ ವಿಶೇಷವಾಗಿ ಎತ್ತು ಗಳಿಗೆ ಸ್ನಾನ ಮಾಡಿಸಿ ಶೃಂಗರಿಸಿ ಚಕ್ಕಡಿ ಕಟ್ಟುತ್ತಾರೆ.
ಮನೆಯವರೆಲ್ಲ ಎಳ್ಳು ಮೈಗೆ ಲೇಪಿಸಿ ಕೊಂಡು ಅಭ್ಯಂಜನ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸುತ್ತಾರೆ. ಬಂಧು ಮಿತ್ರ ರೊಡಗೂಡಿ ಹೊಲಕ್ಕೆ ಹೋಗಿ ಭೂತಾಯಿ ಪೂಜಿಸಿ, ಆಟ, ಹಾಡು, ನೃತ್ಯ ಮಾಡಿ ಸಂತೋಷ ಪಡುತ್ತಾರೆ. ಮನೆಯಿಂದ ತಂದ ಬುತ್ತಿ ಬಿಚ್ಚಿ ವಿವಿಧ ಭಕ್ಯಗಳನ್ನು ಸವಿಯುತ್ತಾರೆ. ಯಾದಗಿರಿ ತಾಲ್ಲೂಕಿನ ಮೈಲಾಪೂರದ ಮಲ್ಲಯ್ಯನ ಜಾತ್ರೆಯು ಪ್ರದೇಶದವರಿಗೆಲ್ಲ ಸಂಭ್ರದ ಉತ್ಸವ. ಹೊಲಕ್ಕೆ ಹೋಗಿ ಬಂದ ಮೇಲೆ ಜಾತ್ರೆಗೆ ಹೋಗಿ ಮಲ್ಲಯ್ಯನ ದರ್ಶನ ಮಾಡುತ್ತಾರೆ. ಮೈಲಾಪೂರದ ಕೆರೆಯಲ್ಲಿ ಅರಳಿದ ಕಮಲಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.
ಗುಡಿಯ ಶಿಖರದ ಮೇಲೆ ತುಪ್ಪದ ದೀಪ, ಸರಪಳಿ ಹರಿಯುವುದು. ಇತ್ಯಾದಿ ಕಣ್ತುಂಬ ನೋಡುವುದು ಸಂಕ್ರಾಂತಿ ಸಡಗರ ಮಹತ್ವದ ಘಟ್ಟವಾಗಿದೆ. ಯಾದಗಿರಿ ನಗರದ ಶ್ರೀ ರಾಚೋಟಿ ವೀರಣ್ಣನ ಭಕ್ತರಿಗೆ ಸಂಕ್ರಾಂತಿ ದಿನ ಶ್ರೀ ರಾಚೋಟಿ ವೀರಣ್ಣ ಮತ್ತು ಶ್ರೀ ಬಧ್ರಕಾಳಿಯವರ ವಿವಾಹ ಮಹೋತ್ಸವದ ವಾರ್ಷೀಕೋತ್ಸವದ ಸಂಭ್ರಮದಿನ. ಅಂದು ಸಂಜೆ ನಡೆಯುವ ಅವರೀರ್ವರ ಕಲ್ಯಾಣೋತ್ಸವದಲ್ಲಿ ಭಾಗಿಯಾಗುವುದರಿಂದ ತಮ್ಮ ಮನೆಯಲ್ಲಿ ಸಹ ಮಂಗಲ ಕಾರ್ಯಗಳು, ಮದುವೆ ನಡೆಯುತ್ತವೆ ಎಂಬ ನಂಬಿಕೆ ಇದೆ.
Also Read: ಸಚಿವ ಡಿ.ಸುಧಾಕರ್ ವರ್ತನೆಗೆ ಶಾಸಕ ಬಿ.ಜಿ.ಗೋವಿಂದಪ್ಪ ಅಸಮಧಾನ | ಹಿನ್ನೀರಿನ ರೈತರ ಸಂಕಷ್ಟ ಸೌಜನ್ಯಕ್ಕೂ ಆಲಿಸಿಲ್ಲ
ಸಂಕ್ರಾಂತಿಯನ್ನು ದೇಶದ ಹಲವು ಕಡೆ ಹಬ್ಬವಾಗಿ ಆಚರಿಸುತ್ತಾರೆ. ಆಂದ್ರ, ತೆಲಂಗಾಣ, ತಮಿಳುನಾಡು, ಕೇರಳ, ಪಂಜಾಬ, ಓಡಿಸ್ಸಾ, ಬಿಹಾರ, ನೇಪಾಳದಲ್ಲಿ ಸಹ ವಿಶೇಷವಾಗಿ ಆಚರಿಸಲಾಗುತ್ತದೆ. ಎಲ್ಲ ದೇಶವಾಸಿಗಳ ಜೊತೆ ಸಂತೋಷ, ಸಂಭ್ರಮ, ಉತ್ಸಾಹಗಳನ್ನು ವರ್ಧಿಸುವ ಸಂಕ್ರಾಂತಿಯನ್ನು ಆನಂದದಿಂದ ಆಚರಿಸುತ್ತ ದಿನದ ಪ್ರತಿ ಕ್ಷಣವನ್ನು ಸಂಭ್ರಮಿಸೋಣ.