ಮುಖ್ಯ ಸುದ್ದಿ
ಮುರುಘಾ ಶರಣರ ಪ್ರಕರಣ | ಮೂರ್ನಾಲ್ಕು ದಿನಗಳಲ್ಲೇ ಬಿಡುಗಡೆ ಸಾಧ್ಯತೆ
ಚಿತ್ರದುರ್ಗ ನ್ಯೂಸ್.ಕಾಂ: ಪೋಕ್ಸೋ ಪ್ರಕರಣದಲ್ಲಿ ಕಳೆದ 14 ತಿಂಗಳಿಂದ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿರುವ ಮುರುಘಾ ಮಠದ ಪೀಠಾಧಿಪತಿ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆದರೆ, ಶ್ರೀಗಳ ಮೇಲೆ ಎರಡನೇ ಪೋಕ್ಸೋ ಪ್ರಕರಣವೂ ದಾಖಲಾಗಿದೆ. ಹಾಗಾಗಿ ಮೊದಲನೇ ಪ್ರಕರಣದಲ್ಲಿ ಜಾಮೀನು ಸಿಕ್ಕಿರುವುದರಿಂದ ಎರಡನೇ ಪ್ರಕರಣದಲ್ಲಿ ಬಿಡುಗಡೆ ಸಾಧ್ಯವೇ ಎನ್ನುವ ಚರ್ಚೆಗಳು ಜಾಮೀನು ಮಂಜೂರಾದ ಕ್ಷಣದಿಂದ ನಡೆಯುತ್ತಿವೆ.
ಆದರೆ, ಈ ಬಗ್ಗೆ ಮುರುಘಾ ಶರಣರ ಪರ ಹಿರಿಯ ನ್ಯಾಯವಾದಿಗಳಾದ ಸಿ.ವಿ.ನಾಗೇಶ್ ಹಾಗೂ ಸಂದೀಪ್ ಪಾಟೀಲ್ ಮಾಧ್ಯಗಳ ಜೊತೆ ಮಾತನಾಡುತ್ತಾ ಕೆಲ ಅಂಶಗಳನ್ನು ಪ್ರಸ್ತಾಪಿಸಿದ್ದು, ಈ ಆಧಾರದಲ್ಲಿ ಶರಣರು ಮೂರ್ನಾಲ್ಕು ದಿನಗಳಲ್ಲೇ ಬಂಧಮುಕ್ತವಾಗಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮುರುಘಾ ಶರಣರಿಗೆ ಜಾಮೀನು ಮಂಜೂರು
ಶರಣರ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಅವರ ಬಂಧನವಾಗಿಲ್ಲ. ಕೇವಲ ಬಾಡಿ ವಾರೆಂಟ್ ಪಡೆದು ಅವರನ್ನು ವಿಚಾರಣೆ ನಡೆಸಿ, ಮೊದಲ ಎಫ್‍ಐಆರ್ ಅನ್ವಯವೇ ಅವರನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.
ಆರೋಪಿ ಯಾವ ಪ್ರಕರಣದಲ್ಲಿ ನ್ಯಾಯಾಂಗ ಬಂಧನವಾಗುತ್ತಾರೋ ಆ ಪ್ರಕರಣದಲ್ಲಿ ಜಾಮೀನು ಸಿಕ್ಕಿದರೆ ಅವರನ್ನು ಬಿಡುಗಡೆ ಮಾಡಬೇಕಾಗುತ್ತದೆ. ಬೇರೆ ಬೇರೆ ಪ್ರಕರಣದಲ್ಲಿ ಹೈಕೋರ್ಟ್ ಈ ರೀತಿಯ ಆದೇಶಗಳನ್ನು ಮಾಡಿದೆ ಎಂದು ವಿವರಿಸಿದ್ದಾರೆ.
ಹಾಗಾಗಿ ಶರಣರ ಬಿಡುಗಡೆಗೆ ಯಾವುದೇ ಅಡ್ಡಿಗಳು ಇಲ್ಲ. ಈ ಸಂಬಂಧ ಹೈಕೋರ್ಟ್ ಈ ಹಿಂದೆ ನೀಡಿರುವ ಆದೇಶ ಹಾಗೂ ಈಗ ಶ್ರೀಗಳಿಗೆ ನೀಡಿರುವ ಜಾಮೀನು ಆದೇಶವನ್ನು ವಿಚಾರಣಾ ನ್ಯಾಯಾಲಯವಾದ ಚಿತ್ರದುರ್ಗ ಸೆಷನ್ಸ್ ಕೋರ್ಟ್‍ಗೆ ಸಲ್ಲಿಸಲಾಗುತ್ತದೆ. ಒಂದು ವೇಳೆ ವಿಚಾರಣಾ ನ್ಯಾಯಲಯ ಒಪ್ಪದಿದ್ದರೆ ಮತ್ತೆ ಹೈಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ ಎಂದು ನ್ಯಾಯವಾದಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.