ಮುಖ್ಯ ಸುದ್ದಿ
Rain effect: ರಾತ್ರೋರಾತ್ರಿ ಕಣ್ಮುಚ್ಚಿ ಸುರಿದ ಮಳೆ | ಕೋಡಿ ಬಿದ್ದ ಕೆರೆಗಳು ಗ್ರಾಮಗಳು ಜಲಾವೃತ

CHITRADURGA NEWS | 21 AUGUST 2024
ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಮಂಗಳವಾರ ತಡರಾತ್ರಿ ಮಳೆರಾಯ ಅಬ್ಬರಿಸಿದ್ದು, ಗ್ರಾಮಗಳು ಜಲಾವೃತಗೊಂಡಿವೆ. ಗುಡುಗು, ಮಿಂಚು ಸಹಿತ ಸುರಿದ ಧಾರಕಾರ ಮಳೆ ಹತ್ತಾರು ಅವಾಂತರ ಸೃಷ್ಠಿಸಿದೆ.
ಚಳ್ಳಕೆರೆ, ಮೊಳಕಾಲ್ಮುರು ಭಾಗದಲ್ಲಿ ಹೆಚ್ಚು ಹಾನಿಯಾಗಿದ್ದು, ಜನರು ರಾತ್ರಿಪೂರ್ತಿ ಆತಂಕದಲ್ಲೇ ಕಳೆದಿದ್ದಾರೆ. ಚಳ್ಳಕೆರೆ ಚಳ್ಳಕೆರೆ ನಗರದ ಬಳಿಯ ಹಳ್ಳ ತುಂಬಿ ಹರಿದು ರಹೀಂ ನಗರದ 50 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಜನ ಜೀವನ ಅಸ್ತವ್ಯಸ್ಥವಾಗಿದೆ. ಮನೆಯಲ್ಲಿದ್ದ ಆಹಾರ ಧಾನ್ಯ, ಬಟ್ಟೆಗಳೆಲ್ಲ ನೀರು ಪಾಲಾಗಿವೆ. ಮನೆಗಳಿಗೆ ನುಗ್ಗಿದ ಮಳೆ ನೀರನ್ನು ಹೊರ ಹಾಕಲು ಜನರ ಹರಸಾಹಸ ಪಡುತ್ತಿದ್ದಾರೆ.

ಮಳೆಯಿಂದ ರಸ್ತೆ ಮೇಲೆ ಹರಿಯುತ್ತಿರುವ ನೀರು
ನಾಯಕನಹಟ್ಟಿ ಸಮೀಪದ ಮನಮೈನಹಟ್ಟಿ ಕೆರೆ ಕೋಡಿ ಬಿದ್ದಿದ್ದು, ಮನಮೈನಹಟ್ಟಿ ಜಲಾವೃತವಾಗಿದೆ. ಮೊಳಕಾಲ್ಮುರು ತಾಲ್ಲೂಕಿನ ಹೊಸಕೋಟೆ ಗ್ರಾಮ ಜಲಾವೃತವಾಗಿದ್ದು, ಕಷ್ಟಪಟ್ಟು ಬೆಳದ ಬೆಳೆ ಇನ್ನೆನು ಕೈಗೆ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ರೈತನ ಕನಸು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.

ಕ್ಲಿಕ್ ಮಾಡಿ ಓದಿ: ನೈರುತ್ಯ ರೈಲ್ವೆಗೆ ಬಂಪರ್ | ವೇಗ ಪಡೆಯಲಿದೆ ನೇರ ಮಾರ್ಗ ಕಾಮಗಾರಿ
ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹೊಸಕೋಟೆ ಗ್ರಾಮಕ್ಕೆ ನೀರು ನುಗ್ಗಿದ್ದು ಜನಜೀವನ ತತ್ತರಗೊಂಡಿದೆ. ಗ್ರಾಮದ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮದ ಓಣಿಗಳು ಕೆರೆಯಂತಾಗಿ ಮಾರ್ಪಟ್ಟು ಮಳೆಯ ರುದ್ರ ನರ್ತನಕ್ಕೆ ಗ್ರಾಮಸ್ಥರು ನಲುಗಿ ಹೋಗಿದ್ದಾರೆ.

ಚಳ್ಳಕೆರೆಯಲ್ಲಿ ಜಲಾವೃತಗೊಂಡ ರಸ್ತೆ
ಹೊಸಕೋಟೆ ಗ್ರಾಮದ ದೊಡ್ಡಹಳ್ಳದ ನೀರು ರೈತರ ಹೊಲಗಳಿಗೆ ನುಗ್ಗಿ ಕಳೆದ ಎರಡು ತಿಂಗಳುಗಳಿಂದ ದುಡಿದ ಫಲದಿಂದ ಎದೆಯುವುದಕ್ಕೆ ಬಂದು ನಿಂತಿದ್ದ ಮೆಕ್ಕೆಜೋಳ,ಗಾಳಿ ಮಳೆಯ ರಭಸಕ್ಕೆ ನೆಲಕಚ್ಚಿದೆ, ಲಕ್ಷಾಂತರ ರೂಪಾಯಿ ವ್ಯಯಿಸಿ ಟೊಮೇಟೊ ಬೆಳೆದಿದ್ದ ರೈತನಿಗೆ ಮಳೆಯಿಂದಾಗಿ ಸಿಡಿಲು ಬಡಿದಂತಾಗಿದ್ದು, ಫಸಲಿಗೆ ಬಂದಿದ್ದ ಟೊಮೇಟೊ ಬೆಳೆ ಸಂಪೂರ್ಣವಾಗಿ ತನ್ನ ಕಣ್ಣೇದುರೆ ನೆಲಕಚ್ಚಿರುವುದನ್ನು ನೋಡಿ ಅನ್ನದಾತ ಕಣ್ಣೀರು ಹಾಕುತ್ತಿದ್ದಾನೆ, ಇನ್ನು ವರ್ಷದ ಮಳೆಯಾಶ್ರಿತ ಶೇಂಗಾ ಬೆಳೆ ಜಲಾವೃತವಾಗಿದ್ದು ರೈತರು ಕಂಗಾಲಾಗಿದ್ದಾರೆ.

ಮಳೆಯಿಂದ ರಸ್ತೆ ಮೇಲೆ ಹರಿಯುತ್ತಿರುವ ನೀರು
ಕಳೆದ ಎರಡು ವರ್ಷಗಳಿಂದ ಮಳೆ ಕಾಣದೆ ಬರಗಾಲಕ್ಕೆ ತುತ್ತಾಗಿ ಕಷ್ಟದ ಬದುಕು ಸಾಗಿಸಿದ್ದ ಈ ಭಾಗದ ರೈತರು,ಈ ವರ್ಷ ಅತಿವೃಷ್ಟಿಯ ಹೊಡೆತಕ್ಕೆ ಸಿಲುಕಿದ್ದಾರೆ. ಮುಂಗಾರು ಫಸಲು ಹಾನಿಯಾಗಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಅದರಲ್ಲೂಸಣ್ಣ ರೈತರ ಪಾಡಂತೂ ಹೇಳ ತೀರದಾಗಿದೆ, ಅಧಿಕಾರಿಗಳು ಹಾನಿಗೊಳಗಾದ ಹೊಲಗಳಿಗೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂಬುದು ರೈತರ ಆಗ್ರಹವಾಗಿದೆ.
ಚಿತ್ರದುರ್ಗ ನಗರದ ಸಿಹಿ ನೀರು ಹೊಂಡ ಕೋಡಿ ಬಿದ್ದ ಪರಿಣಾಮ ಸಂತೆಹೊಂಡ ಭರ್ತಿಯಾಗಿದೆ. ಇತ್ತ ತಿಮ್ಮಣ್ಣನಾಯಕನ ಕೆರೆಗೆ ಜೋಗಿಮಟ್ಟಿ ಪ್ರದೇಶದಿಂದ ನೀರು ಹರಿದು ಬರುತ್ತಿದೆ.
