ಕ್ರೈಂ ಸುದ್ದಿ
ರೈತ ಬಾಂಧವರೇ ಎಚ್ಚರ | ಮೋಟಾರ್, ಪಂಪ್, ಕೇಬಲ್ ಕಳ್ಳತನ | ಜಮೀನಿಗೆ ಪೊಲೀಸರ ಭೇಟಿ ಪರಿಶೀಲನೆ
ಚಿತ್ರದುರ್ಗ ನ್ಯೂಸ್.ಕಾಂ: ಜಮೀನು ತೋಟಗಳಲ್ಲಿ ಕೇಬಲ್ ವೈಯರ್, ಮೋಟಾರ್, ಪಂಪ್ ಪೈಪು ಹಾಗೂ ಸ್ಟಾರ್ಟರ್ ಕಳ್ಳತನಗಳು ನಡೆಯುತ್ತಿದ್ದು ರೈತ ಬಾಂಧವರು ಎಚ್ಚರಿಕೆ ವಹಿಸಬೇಕಿದೆ.
ತಡರಾತ್ರಿ ವೇಳೆ ಯಾರೂ ಇಲ್ಲದ ವೇಳೆ ಜಮೀನುಗಳಿಗೆ ನುಗ್ಗುವ ಕಿಡಿಗೇಡಿ ಕಳ್ಳರ ತಂಡ ಕೇಬಲ್ ಹಾಗೂ ಮೋಟಾರ್ ಪಂಪು ಕಳ್ಳತನ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.
ಇದನ್ನೂ ಓದಿ: ಡ್ರ್ಯಾಗನ್ ತಂದ ಯಶಸ್ಸು: ಚಿತ್ರನಾಯಕನಹಳ್ಳಿ ನಾರಾಯಣರೆಡ್ಡಿಗೆ ಉತ್ತಮ ಆದಾಯ
ಹೊಳಲ್ಕೆರೆ ತಾಲೂಕು ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಪ್ಪ ಎಂಬುವವರ ಜಮೀನಿನಲ್ಲಿ ಗುರುವಾರ ತಡರಾತ್ರಿಯಲ್ಲಿ ಸುಮಾರು 650 ಅಡಿ ಆಳದ ಕೊಳವೆ ಬಾವಿಯಲ್ಲಿದ್ದ ಮೋಟಾರ್, ಪಂಪ್ ಹಾಗೂ ಕೇಬಲ್ ಕಳ್ಳತ ಮಾಡಿರುವ ಘಟನೆ ವರದಿಯಾಗಿದೆ.
ಶುಕ್ರವಾರ ಬೆಳಗ್ಗೆ ರೈತ ಸಿದ್ದಪ್ಪ ಜಮೀನಿಗೆ ಹೋದಾಗ ರೋಲ್ ಪೈಪ್ ಅಲ್ಲಲ್ಲಿ ಮುರಿದು ತುಂಡಾಗಿ ಬಿದ್ದಿರುವುದನ್ನು ಗಮನಿಸಿ ಕೊಳವೆ ಬಾವಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಸಿದ್ದಪ್ಪ ಅವರ ಜಮೀನಿನಲ್ಲಿ ಒಂದೂವರೆ ವರ್ಷದ ಅಡಿಕೆ ಗಿಡಗಳಿದ್ದು, ಇದ್ದ ಒಂದೇ ಕೊಳವೆ ಬಾವಿಯ ಮೋಟಾರ್ ಹಾಗೂ ಪಂಪ್ ಕಳುವು ಮಾಡಿರುವುದರಿಂದ ದಿಕ್ಕು ತೋಚದಂತಾಗಿದ್ದಾರೆ.
ಇಷ್ಟು ದಿನ ಮೇಲೆ ಸಿಗುತ್ತಿದ್ದ ಕೇಬಲ್ ಹಾಗೂ ಸ್ಟಾರ್ಟರ್ ಕಳ್ಳತನ ನಡೆಯುತ್ತಿದ್ದವು. ಆದರೆ, ಈಗ ಕೊಳವೆ ಬಾವಿಯೊಳಗಿನ ರೋಪ್ ಪೈಪ್ ಮೇಲೆಳೆದು, ಬೇಕಾಬಿಟ್ಟಿ ಮುರಿದು ಹಾಕಿ ಕೇಬಲ್, 5 ಎಚ್‍ಪಿ ಮೋಟಾರ್ ಹಾಗೂ ಪಂಪ್ ಕಳುವು ಮಾಡಿರುವುದು ಆತಂಕಕಾರಿ ಸಂಗತಿಯಾಗಿದೆ.
ಈಗಾಗಲೇ ಬರದ ದವಡೆಗೆ ಸಿಲುಕಿರುವ ರೈತರು, ಮಳೆ ಇಲ್ಲದೆ ಪರಿತಪಿಸುತ್ತಿದ್ದಾರೆ. ಇನ್ನೂ ತೋಟ ಮಾಡಿಕೊಂಡಿರುವ ರೈತರು ನೀರು ಹಾಯಿಸಲು ವಿದ್ಯುತ್‍ಗೆ ಪರದಾಡುವಾಗಲೇ ಮೋಟಾರ್, ಪಂಪ್, ಕೇಬಲ್ ಕಳ್ಳತನವಾದರೆ ಮತ್ತು ಕನಿಷ್ಟ 50 ಸಾವಿರ ವೆಚ್ಚ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರು ಎಚ್ಚರಿಕೆ ವಹಿಸಬೇಕಾಗಿದೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆ | ಹೊಳಲ್ಕೆರೆ ಪಟ್ಟಣದಲ್ಲಿ ಸಂಚಾರ ಮಾರ್ಗ ಬದಲು
ಇನ್ನೂ ತೊಡರನಾಳು ಗ್ರಾಮದ ಸಿದ್ದಪ್ಪ ಅವರ ಜಮೀನಿನಲ್ಲಿ ನಡೆದಿರುವ ಕಳುವು ಪ್ರಕರಣ ಕುರಿತು ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಲೇ ಇಲ್ಲಿನ ಪಿಎಸ್‍ಐ ಕಾಂತರಾಜ್ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರ ತಂಡ ಕೂಡಾ ಜಮೀನಿಗೆ ಭೇಟಿ ನೀಡಿ ಕೆಲ ದಾಖಲೆ ಸಂಗ್ರಹಿಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದೆ.