ಮುಖ್ಯ ಸುದ್ದಿ
ಗೋವಾದಲ್ಲಿ ಮಗನನ್ನು ಕೊಂದ ತಾಯಿ ಚಿತ್ರದುರ್ಗದಲ್ಲಿ ಬಂಧನ | ಬ್ಯಾಗ್‌ನಲ್ಲಿ ಶವದೊಂದಿಗೆ ಕಾರಿನಲ್ಲಿ ಪ್ರಯಾಣ
CHITRADURGA NEWS | 9 JANUARY 2024
ಚಿತ್ರದುರ್ಗ (CHITRADURGA): ಮಗುವನ್ನು ಕೊಲೆ ಮಾಡಿ ಬ್ಯಾಗ್‌ನಲ್ಲಿ ಶವವಿಟ್ಟುಕೊಂಡು ಕಾರಿನಲ್ಲಿ ಗೋವಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಚಿತ್ರದುರ್ಗದ ಐಮಂಗಲ ಠಾಣೆ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ ಅಪ್ ಮೈಂಡ್‌ಫುಲ್ ಎಐ ಲ್ಯಾಬ್ಸ್‌ನ ಸಹ ಸಂಸ್ಥಾಪಕಿ, ಸಿಇಒ ಸುಚನಾ ಸೇಥ್ (39) ಬಂಧಿತ ಮಹಿಳೆ. ಸುಚನಾ ಸೇಥ್ ತನ್ನ 4 ವರ್ಷದ ಮಗನೊಂದಿಗೆ ಶನಿವಾರ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆ ಅರ್ಪಾಟ್‌ಮೆಂಟ್‌ಗೆ ತೆರಳಿದ್ದರು. ಎರಡು ದಿನ ಕೊಠಡಿಯಲ್ಲಿದ್ದ ಸುಚನಾ ಸೇಥ್ ಭಾನುವಾರ ಅರ್ಪಾಟ್‌ಮೆಂಟ್ ಸಿಬ್ಬಂದಿಗೆ ಬೆಂಗಳೂರಿಗೆ ಟ್ಯಾಕ್ಸಿ ಕಾಯ್ದಿರಿಸಲು ಹೇಳಿದ್ದಾಳೆ. ಈ ವೇಳೆ ಸಿಬ್ಬಂದಿ ವಿಮಾನದಲ್ಲಿ ತೆರಳಲು ಸಲಹೆ ನೀಡಿದರೂ ಸಹ ಟ್ಯಾಕ್ಸಿಯಲ್ಲಿ ಹೋಗುವುದಾಗಿ ತಿಳಿಸಿದ್ದಾಳೆ.
ಇದನ್ನೂ ಓದಿ: ಬಯಲುಸೀಮೆ ಜನರ ದಶಕದ ಕನಸು ನನಸಾಗಿಸಿದ ‘ಮೋದಿ’ | ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಅಂತರ ರಾಷ್ಟ್ರೀಯ ಸ್ಪರ್ಶ
ಸೋಮವಾರ ಬೆಳಿಗ್ಗೆ ಅರ್ಪಾಟ್‌ಮೆಂಟ್‌ಗೆ ಬಂದ ಟ್ಯಾಕ್ಸಿಯಲ್ಲಿ ಮಗುವಿನ ಶವವಿದ್ದ ಬ್ಯಾಗ್ ಇರಿಸಿಕೊಂಡು ಪಯಣ ಬೆಳೆಸಿದ್ದಾಳೆ. ಈ ಎಲ್ಲವನ್ನು ಗಮನಿಸಿದ ಸಿಬ್ಬಂದಿ ಅನುಮಾನಗೊಂಡು ಕೊಠಡಿಯನ್ನು ಪರಿಶೀಲಿಸಿದಾಗ ರಕ್ತದ ಕಲೆಗಳು ಪತ್ತೆಯಾಗಿವೆ. ಮಗುವಿನ ಹತ್ಯೆ ಬಗ್ಗೆ ಶಂಕೆಗೊಂಡು ಸಿಬ್ಬಂದಿ ಆಡಳಿತ ಮಂಡಳಿಗೆ ಮಾಹಿತಿ ನೀಡಿದೆ.
ಕೂಡಲೇ ಎಚ್ಚೇತ್ತ ಆಡಳಿತ ಮಂಡಳಿ, ಟ್ಯಾಕ್ಸಿ ಚಾಲಕನನ್ನು ಸಂಪರ್ಕಿಸಿ ಸುಚನಾ ಸೇಥ್ ಅವರ ಜತೆ ಮಾತನಾಡುತ್ತಾ ಮಗುವಿನ ವಿಚಾರ ಪ್ರಸ್ತಾಪಿಸುವಂತೆ ತಿಳಿಸಿದ್ದಾರೆ. ಅದರಂತೆ ಚಾಲಕ ಮಾತನಾಡುತ್ತಾ ಮಗುವಿನ ಬಗ್ಗೆ ಕೇಳಿದಾಗ, ಮಗ ಸ್ನೇಹಿತನೊಂದಿಗೆ ಇದ್ದಾನೆ ಎಂದು ಹೇಳಿ ವಿಳಾಸವನ್ನು ಸಹ ನೀಡಿದ್ದಾಳೆ. ಆದರೆ ಆ ವಿಳಾಸ ನಕಲಿ ಎಂದು ತಿಳಿದು ಬಂದಿದೆ. ಈ ಎಲ್ಲ ವಿಷಯವನ್ನು ಆಡಳಿತ ಸಿಬ್ಬಂದಿ ಗೋವಾ ಪೊಲೀಸರಿಗೆ ತಿಳಿಸಿದ್ದಾರೆ.
ಕೂಡಲೇ ಚಾಲಕನಿಗೆ ಕರೆ ಮಾಡಿದ ಗೋವಾ ಪೊಲೀಸರು ಕೊಂಕಣಿಯಲ್ಲಿ ಮಾತನಾಡಿ ಟ್ಯಾಕ್ಸಿಯನ್ನು ಸಮೀಪದ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲು ಸೂಚಿಸಿದ್ದಾರೆ. ಭಾನುವಾರ ಸಂಜೆ ವೇಳೆಗೆ ರಾಷ್ಟ್ರೀಯ ಹೆದ್ದಾರಿಯ ಐಮಂಗಲ ಬಳಿ ಇದ್ದ ಚಾಲಕ ಕಾರನ್ನು ಹೆದ್ದಾರಿ ಪಕ್ಕದ ಪೊಲೀಸ್ ಠಾಣೆಗೆ ತೆಗೆದು ಕೊಂಡು ಹೋಗಿದ್ದಾನೆ. ಈ ವೇಳೆ ಕಾರನ್ನು ಪರಿಶೀಲಿಸಿದ ಪೊಲೀಸರಿಗೆ ಬ್ಯಾಗ್‌ನಲ್ಲಿ ಮಗುವಿನ ಶವ ಇರುವುದು ಖಚಿತವಾಗಿದೆ. ಕೂಡಲೇ ಸುಚನಾ ಸೇಥ್ (39) ಅವರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಮಗುವಿನ ಹತ್ಯೆಗೆ ಸುಚನಾ ಸೇಥ್ ಈವರೆಗೂ ಕಾರಣ ತಿಳಿಸಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ರಾಶಿ ಅಡಿಕೆ ಬೆಲೆಯಲ್ಲಿ ದೊಡ್ಡ ಜಿಗಿತ | ರೈತರಲ್ಲಿ ಹೊಸ ಭರವಸೆ ಮೂಡಿಸುತ್ತಿರುವ ದರ ಏರಿಕೆ
ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಹಿರಿಯೂರು ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ. ಭಾನುವಾರ ತಡರಾತ್ರಿ ಚಿತ್ರದುರ್ಗಕ್ಕೆ ಆಗಮಿಸಿದ ಗೋವಾ ಪೊಲೀಸರು ಸುಚನಾ ಸೇಥ್ ಅವರನ್ನು ಗೋವಾಕ್ಕೆ ಕರೆದು ಕೊಂಡು ಹೋಗಿದ್ದಾರೆ.
ಮೈಂಡ್‌ಫುಲ್ ಎಐ ಲ್ಯಾಬ್ಸ್‌ನ ಲಿಂಕ್ಡ್ ಇನ್ ಪುಟದ ಪ್ರಕಾರ, ‘2021 ರ ಎಐ ಎಥಿಕ್ಸ್‌ನಲ್ಲಿ 100 ಅದ್ಭುತ ಮಹಿಳೆಯರಲ್ಲಿ ಸುಚನಾ ಸೇಥ್ ಅಗ್ರಸ್ಥಾನದಲ್ಲಿದ್ದರು. ಹಾರ್ವರ್ಡ್ ವಿಶ್ವವಿದ್ಯಾಲಯದ ಬರ್ಕ್‌ಮನ್ ಕ್ಲೈನ್ ಸೆಂಟರ್‌ನಲ್ಲಿ ಸಹವರ್ತಿ ಮತ್ತು ಡೇಟಾ ಸೈನ್ಸ್ ತಂಡಗಳಿಗೆ ಮಾರ್ಗದರ್ಶನ ನೀಡುವಲ್ಲಿ 12 ವರ್ಷದ ಅನುಭವ ಹೊಂದಿದ್ದರು’ ಎಂದು ತಿಳಿದು ಬಂದಿದೆ.