ಮುಖ್ಯ ಸುದ್ದಿ
ಮಗುವನ್ನು ಕೊಂದ ತಾಯಿ ಪ್ರಕರಣ | ಬಂಧನಕ್ಕೆ ನೆರವಾದ ಐಮಂಗಲ ಪೊಲೀಸ್

CHITRADURGA NEWS | 9 JANUARY 2024
ಚಿತ್ರದುರ್ಗ (CHITRADURGA): ಹೆತ್ತ ಮಗುವನ್ನು ಕೊಲೆ ಮಾಡಿ ಶವ ಬ್ಯಾಗ್‌ನಲ್ಲಿಟ್ಟು ಕೊಂಡು ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ ಅಪ್ ಮೈಂಡ್‌ಫುಲ್ ಎಐ ಲ್ಯಾಬ್ಸ್‌ನ ಸಹ ಸಂಸ್ಥಾಪಕಿ, ಸಿಇಒ ಸುಚನಾ ಸೇಥ್ (39) ಅವರ ಬಂಧನಕ್ಕೆ ಚಿತ್ರದುರ್ಗ ಜಿಲ್ಲೆಯ ಐಮಂಗಲ ಠಾಣೆ ಪೊಲೀಸರು ಗೋವಾ ಪೊಲಿಸರಿಗೆ ನೆರವಾಗಿದ್ದಾರೆ.
ಸೋಮವಾರ ಸಂಜೆ ಹಂತಕಿಯನ್ನು ಐಮಂಗಲ ಪೊಲೀಸರು ಬಂಧಿಸಿದ ಬಳಿ ಬಳಿಕ ಸ್ಥಳಕ್ಕಾಗಮಿಸಿದ ಗೋವಾ ಪೊಲೀಸರು ವಶಕ್ಕೆ ಪಡೆದು ಗೋವಾಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ.
ಹಂತಕಿಯ ಬಂಧನ ವಿಚಾರವನ್ನು ಚಿತ್ರದುರ್ಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಮಾಧ್ಯಮವರಿಗೆ ಖಚಿತ ಪಡಿಸಿದ್ದಾರೆ. ‘ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆ ಅರ್ಪಾಟ್‌ಮೆಂಟ್‌ನಿಂದ ಬ್ಯಾಗ್ ಜತೆಗೆ ಬೆಂಗಳೂರಿಗೆ ಸುಚನಾ ಸೇಥ್ ಪ್ರಯಾಣ ಬೆಳೆಸಿದ್ದರು. ಅರ್ಪಾಟ್‌ಮೆಂಟ್‌ನ ಆಡಳಿತ ಮಂಡಳಿ ತಿಳಿಸಿದ ವಿಷಯದ ಆಧಾರದ ಮೇಲೆ ಬ್ಯಾಗ್‌ನಲ್ಲಿ ಮಗುವಿನ ಶವವಿರುವುದನ್ನು ಗೋವ ಪೊಲೀಸರು ಖಚಿತ ಪಡಿಸಿಕೊಂಡಿದ್ದಾರೆ. ಕೂಡಲೇ ಕಾರು ಹೋಗುವ ಸ್ಥಳದ ಆಧಾರದ ಮೇಲೆ ಐಮಂಗಲ ಪೊಲೀಸ್ ಠಾಣೆಗೆ ಸಂಪರ್ಕಿಸಿ ಆರೋಪಿ ಬಂಧನಕ್ಕೆ ನೆರವಾಗುವಂತೆ ಕೋರಿದ್ದರು’ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಗೋವಾದಲ್ಲಿ ಮಗನನ್ನು ಕೊಂದ ತಾಯಿ ಚಿತ್ರದುರ್ಗದಲ್ಲಿ ಬಂಧನ | ಬ್ಯಾಗ್‌ನಲ್ಲಿ ಶವದೊಂದಿಗೆ ಕಾರಿನಲ್ಲಿ ಪ್ರಯಾಣ
‘ಕಾರಿನ ಚಾಲಕನಿಗೆ ಐಮಂಗಲ ಠಾಣೆಗೆ ಹೋಗುವಂತೆ ಸೂಚಿಸಿದ್ದಾರೆ. ಅದರಂತೆ ಚಾಲಕ ಠಾಣೆ ಸಮೀಪಿಸುತ್ತಿದ್ದಂತೆ ಪೊಲೀಸರು ಕಾರನ್ನು ಪರಿಶೀಲಿಸಿದಾಗ ಬ್ಗಾಗ್‌ನಲ್ಲಿ ಮಗುವಿನ ಶವ ಇರುವುದು ಖಚಿತವಾಗಿದೆ. ಕೂಡಲೇ ಸುಚನಾ ಸೇಥ್ ಅವರನ್ನು ವಶಕ್ಕೆ ಪಡೆದು ಗೋವಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇದತ ತನಿಖೆಯನ್ನು ಉತ್ತರ ಗೋವಾದ ಕಲಾಂಗುಟೆ ಠಾಣೆ ಪೊಲೀಸರು ನಡೆಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
