ಮುಖ್ಯ ಸುದ್ದಿ
ಬಾಡೂಟ ಸೇವನೆ | 50 ಕ್ಕೂ ಹೆಚ್ಚು ಜನ ಅಸ್ವಸ್ಥ

CHITRADURGA NEWS | 6 APRIL 2024
ಚಿತ್ರದುರ್ಗ: ಬಾಡೂಟ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ ರಾದ ಘಟನೆ ಹೊಸದುರ್ಗ ತಾಲ್ಲೂಕಿನ ಹಳೇ ಕುಂದೂರು ಗ್ರಾಮದಲ್ಲಿ ನಡೆದಿದೆ. ಬುಧವಾರ ಸಂಜೆ ರಂಗಪ್ಪ ತಂದೆ ಹನುಮಂತಪ್ಪ ಅವರ ಮನೆಯ ದೇವರ ಕಾರ್ಯಕ್ರಮದಲ್ಲಿ, ಮಾಂಸಹಾರಿ ಊಟ ಮಾಡಿದವರು ಅಸ್ವಸ್ಥರಾಗಿದ್ದಾರೆ.
ಮಗಳ ಮದುವೆ ನಂತರ ರಂಗಪ್ಪ ಮನೆಯಲ್ಲಿ ದೇವರ ಕಾರ್ಯ ನಡೆಸಿ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮದ ನೆಂಟರಿಷ್ಠರನ್ನು ಊಟಕ್ಕೆ ಆಹ್ವಾನಿಸಿದ್ದರು. ಕಾರ್ಯಕ್ರಮದಲ್ಲಿ ಊಟ ಮಾಡಿದ ನಾಲ್ಕೈದು ಜನರಿಗೆ ಗುರುವಾರ ಬೆಳಗಿನಿಂದಲೇ ಭೇದಿ ಜ್ಚರ, ಹೊಟ್ಟೆ ಮುರಿತ ನೋವು ಕಾಣಿಸಿಕೊಂಡಿದೆ.
ಅಸ್ವಸ್ಥರು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಂತರ ಶುಕ್ರವಾರ ಕಾರ್ಯಕ್ರಮದಲ್ಲಿ ಊಟಮಾಡಿದ 37 ಗ್ರಾಮಸ್ಥರಲ್ಲಿ ಅಸ್ವಸ್ಥೆ ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಬಾಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತಕ್ಷಣವೇ ತುರ್ತಾಗಿ ಹಳೇ ಕುಂದೂರಿನಲ್ಲಿ ತಾತ್ಕಾಲಿಕ ಚಿಕಿತ್ಸಾ ಘಟಕವನ್ನು ತೆರೆದು ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗಿದೆ.
ಕ್ಲಿಕ್ ಮಾಡಿ ಓದಿ: ಮಳೆಯ ಆಗಮನಕ್ಕೆ ವಾತಾವರಣ ಸಜ್ಜು | ಕೊನೆಗೂ ಮುನಿಸು ತೊರೆದ ಮಳೆರಾಯ
11 ಪ್ರಕರಣಗಳನ್ನು ಹೆಚ್ಚಿನ ಚಿಕಿತ್ಸೆಗೆ ಬಾಗೂರು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಮಾರ್ಚ್ 6 ಶನಿವಾರದಂದು ಕೂಡ 2 ಅಸ್ವಸ್ಥ ಪ್ರಕರಣಗಳು ಬೆಳಕಿಗೆ ಬಂದಿವೆ. ಆದ್ದರಿಂದ ಹೊಸದುರ್ಗ ಸಂಚಾರಿ ಆರೋಗ್ಯ ಘಟಕವನ್ನು ಗ್ರಾಮದಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.
ಪ್ರಕರಣದ ಹಿನ್ನಲೆಯಲ್ಲಿ ಗ್ರಾಮದ 6 ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ದೇವತಾ ಕಾರ್ಯದಲ್ಲಿ ಭಾಗವಹಿಸದರಲ್ಲಿ ಮಾತ್ರ ಭೇದಿ, ಜ್ವರ, ಹೊಟ್ಟೆ ಮುರಿತ, ನೋವು ಕಂಡು ಬಂದಿದೆ. ವಾಂತಿ ಭೇದಿ ಪ್ರಕರಣಗಳ ವಿಷಯ ತಿಳಿದ ತಕ್ಷಣ ತಾಲ್ಲೂಕು ಆರೋಗ್ಯಾಧಿಕರಿಗಳ ಆರ್.ಆರ್.ಟಿ ತಂಡ, ಜಿಲ್ಲಾ ಸರ್ವೇಕ್ಷಣಾ ಕಚೇರಿಯ ಆರ್.ಆರ್.ಟಿ ತಂಡಗಳು ಗ್ರಾಮಕ್ಕೆ ಭೇಟಿ ನೀಡಿ ಚಿಕಿತ್ಸೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ.
ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯ ತಂಡಗಳು ಗ್ರಾಮದ ಪ್ರತಿ ಮನೆ ಮನೆ ಭೇಟಿ ನೀಡಿ ಶುದ್ಧ ಕುಡಿಯುವ ನೀರು, ಬೇಸಿಗೆ ತಾಪಮಾನ ರಕ್ಷಣೆ, ಶುದ್ಧ ಆಹಾರ ಸೇವಿಸುವ ಬಗ್ಗೆ ಸಾರ್ವಜನಿಕರಿಗೆ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಿ ಅರಿವು ಮೂಡಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಎಚ್ಚರ…ಮನೆಯಿಂದ ಹೊರ ಬರಬೇಡಿ | ಹೆಚ್ಚಿದೆ ಸೂರ್ಯನ ಆರ್ಭಟ
ಬಾಗೂರು ಆರೋಗ್ಯಾಧಿಕಾರಿ ಡಾ.ಪರಶುರಾಮ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ವೀರೇಂದ್ರ ಪಾಟೀಲ್, ಜಿಲ್ಲಾ ಆರ್.ಆರ್.ಟಿ. ತಂಡದ ಆರೋಗ್ಯ ನಿರೀಕ್ಷಣಾಧಿಕಾರಿ ಎಮ್.ಹೆಚ್.ಮಂಜುನಾಥ, ವಿಶ್ವನಾಥ. ಆಶಾ ಕಾರ್ಯಕರ್ತೆಯರು ಸಂಚಾರಿ ಆರೋಗ್ಯ ತಪಾಸಣಾ ತಂಡ ಆರೋಗ್ಯ ಜಾಗೃತಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
