ಮುಖ್ಯ ಸುದ್ದಿ
ಚಿತ್ರದುರ್ಗಕ್ಕೆ ಮುಂಗಾರು ಮಳೆ ಸಂಭ್ರಮ | ತುಂಬಿ ಹರಿದ ಹಳ್ಳಕೊಳ್ಳ
CHITRADURGA NEWS | 05 JUNE 2024
ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿದಿವೆ. ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ.
ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಸುತ್ತಮುತ್ತ ಮಂಗಳವಾರ ಮಧ್ಯಾಹ್ನ ಭಾರೀ ಮಳೆ ಸುರಿದಿದ್ದು, ಹಳ್ಳ ತುಂಬಿ ಹರಿದಿದೆ. ಮಧ್ಯಾಹ್ನ 2.15ಕ್ಕೆ ಆರಂಭವಾದ ಮಳೆ 3.30 ರವರೆಗೆ ಬಿರುಸಿನಿಂದ ಸುರಿದಿದೆ. ಗ್ರಾಮದ ಸಮೀಪ ಇರುವ ಐಹೋಣಿ ಗುಡ್ಡ ಪ್ರದೇಶದಲ್ಲಿ ಹೆಚ್ಚು ಮಳೆ ಸುರಿದಿದ್ದರಿಂದ ಕರಿಯಮ್ಮನ ಹಳ್ಳ ತುಂಬಿ ಹರಿದಿದೆ.
ಹಳ್ಳದ ನೀರು ರಸ್ತೆ ಮೇಲೆ ಹರಿದಿದ್ದರಿಂದ ವಾಹನಗಳು ಎರಡೂ ಕಡೆ ನಿಂತಿದ್ದವು. ಮಳೆಯಿಂದ ತಾಳ್ಯ ಕೆರೆಯಲ್ಲಿನ ಗುಂಡಿಗಳು ತುಂಬಿದ್ದು, ಅಡಿಕೆ ಬೆಳೆಗಾರರು ಸಂತಸಗೊಂಡಿದ್ದಾರೆ. ಪಕ್ಕದ ಮದ್ದೇರು, ಘಟ್ಟಿ ಹೊಸಹಳ್ಳಿ, ಕುಮ್ಮಿನ ಘಟ್ಟ, ನೇರಲಕಟ್ಟೆ, ಮದ್ದೇರು ಗ್ರಾಮಗಳ ಸುತ್ತ ಬಿರುಸಿನ ಮಳೆ ಆಗಿದೆ.
ಕ್ಲಿಕ್ ಮಾಡಿ ಓದಿ: ಕೋಟೆನಾಡಿನಲ್ಲಿ ಅರಳಿದ ಕಮಲ | ಗೆಲುವಿನ ಜಯಭೇರಿ ಬಾರಿಸಿದ ಗೋವಿಂದ ಕಾರಜೋಳ
ಮೊಳಕಾಲ್ಮುರು ತಾಲ್ಲೂಕಿನ ಕಸಬಾ ಹೋಬಳಿಯ ವಿವಿಧ ಗ್ರಾಮಗಳ ಸುತ್ತಮುತ್ತ ಮಂಗಳವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ. ಬಿ.ಜಿ.ಕೆರೆ, ಮಾರಮ್ಮನಹಳ್ಳಿ ಕಮರಾ ಕಾವಲು ಪ್ರದೇಶ, ಮಾರಮ್ಮನ ಹಳ್ಳಿ, ಇಸ್ಲಾಂಪುರ, ನೇರ್ಲಹಳ್ಳಿ, ಮೊಳಕಾಲ್ಮುರು, ಎದ್ದಲ ಬೊಮ್ಮಯ್ಯನಹಟ್ಟಿ, ಮೊಗಲಹಳ್ಳಿ, ಮರ್ಲಹಳ್ಳಿ ಬಳಿ ಹೆಚ್ಚಿನ ಮಳೆಯಾಗಿದೆ.
ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಬಿರುಸಾಗಿ ಸುರಿಯಿತು. ಬಿ.ಜಿ.ಕೆರೆ ಹೊಸಕೆರೆಗೆ ನೀರು ಬರುತ್ತಿದ್ದು, ನೇರ್ಲಹಳ್ಳಿ ಬಳಿ ಹಳ್ಳಗಳು ಹರಿಯುತ್ತಿವೆ. ಇಸ್ಲಾಂಪುರ ಬಳಿ ಬ್ರಿಡ್ಜ್ ಕಮ್ ಬ್ಯಾರೇಜ್ ತುಂಬಿ ಹರಿಯುತ್ತಿದೆ.
ಕ್ಲಿಕ್ ಮಾಡಿ ಓದಿ:ಗೋವಿಂದ ಕಾರಜೋಳ ಕೊರಳಿಗೆ ವಿಜಯಮಾಲೆ | ಪೈಪೋಟಿಯಿಲ್ಲದೆ ಗೆದ್ದು ಬೀಗಿದ ಬಿಜೆಪಿ
ರಾವಲಕುಂಟೆ ಸಮೀಪದ ತೋಟಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನೀರು ತುಂಬಿ ಹರಿಯುತ್ತಿರುವ ಪರಿಣಾಮ ಸಂಪರ್ಕ ಕಡಿತವಾಗಿದ್ದು, ಬಳಸು ಮಾರ್ಗದ ಮೂಲಕ ಅವರು ಓಡಾಡಬೇಕಿದೆ ಎಂದು ತೋಟದ ಮಾಲೀಕರು ತಿಳಿಸಿದರು.
ಇದು ಈ ವರ್ಷ ಈ ಭಾಗದಲ್ಲಿ ಸುರಿದ ದೊಡ್ಡ ಮಳೆಯಾಗಿದ್ದು, ತೀವ್ರ ಅಂತರ್ಜಲ ಸಮಸ್ಯೆಯಿಂದ ಆತಂಕ ಕ್ಕೀಡಾಗಿದ್ದ ರೈತರಲ್ಲಿ ಆಶಾಭಾವ ಮೂಡಿಸಿದೆ. ಇದೇ ರೀತಿ ಇನ್ನೆರಡು ಬಾರಿ ಉತ್ತಮ ಮಳೆ ಬಂದಲ್ಲಿ ಅಂತರ್ಜಲ ಮಟ್ಟ ಸುಧಾರಣೆಯಾಗಬಹುದು ಎಂಬ ನಿರೀಕ್ಷೆ ಮೂಡಿಸಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ರೇಷ್ಮೆ (ಹಿಪ್ಪುನೇರಳೆ) ತೋಟಗಳು ನೀರಿಲ್ಲದೇ ಒಣಗುತ್ತಿದ್ದವು. ಅನೇಕರು ಸೊಪ್ಪಿನ ಕೊರತೆಯಿಂದಾಗಿ ಬೆಳೆ ಇಡುವುದನ್ನು ಕೈಬಿಟ್ಟಿದ್ದೆವು. ಈಗ ಬಿದ್ದ ಮಳೆ ಭರವಸೆ ಮೂಡಿಸಿದೆ ಎನ್ನುತ್ತಾರೆ ರೇಷ್ಮೆ ಬೆಳೆಗಾರರು.
ಕ್ಲಿಕ್ ಮಾಡಿ ಓದಿ: ಚುನಾವಣೆ ಫಲಿತಾಂಶ ಘೋಷಣೆಯಲ್ಲಿ ದೇಶದಲ್ಲಿಯೇ ಚಿತ್ರದುರ್ಗ ಮೊದಲು
ಚಳ್ಳಕೆರೆ ನಗರ ಪ್ರದೇಶ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಂಗಳವಾರ ಅರ್ಧಗಂಟೆ ಗುಡುಗು ಸಹಿತ ಮಳೆ ಸುರಿಯಿತು. ಸಾಣಿಕೆರೆ, ಗೋಪನಹಳ್ಳಿ, ರೆಡ್ಡಿಹಳ್ಳಿ, ಸೋಮಗುದ್ದು, ಗಂಜಿಗುಂಟೆ, ದೇವರಮರಿಕುಂಟೆ, ದೊಡ್ಡೇರಿ, ಡಿ.ಉಪ್ಪಾರಹಟ್ಟಿ, ಸಿದ್ದಾಪುರ, ನಗರಂಗೆರೆ, ಹೊಟ್ಟೆಪ್ಪನ ಹಳ್ಳಿ, ನನ್ನಿವಾಳ, ದುರ್ಗಾವರ, ಬೊಮ್ಮಸಮುದ್ರ ಮುಂತಾದ ಗ್ರಾಮಗಳಲ್ಲಿ ಮಳೆಯಾಗಿದೆ.
ಮಳೆಯಿಂದ ಮುಂಗಾರು ಹಂಗಾಮಿನ ಶೇಂಗಾ, ತೊಗರಿ, ನವಣೆ, ಸಜ್ಜೆ, ಅಲಸಂದಿ, ಎಸರು ಬಿತ್ತನೆಗೆ ಭೂಮಿ ಹದಗೊಳಿಸಿಕೊಳ್ಳಲು ಮತ್ತು ಜಾನುವಾರುಗಳ ಮೇವು, ಕುಡಿಯುವ ನೀರಿಗೂ ಅನುಕೂಲವಾಗಿದೆ ಎನ್ನುತ್ತಾರೆ ರೈತರು.