ಮುಖ್ಯ ಸುದ್ದಿ
ಚಳ್ಳಕೆರೆ ತಾಲೂಕಿನಲ್ಲಿ ಬೆಳೆವಿಮೆ ಅವ್ಯವಹಾರ | ಸಿಒಡಿ ತನಿಖೆಗೆ ಒತ್ತಾಯಿಸಿದ ಶಾಸಕ ಟಿ.ರಘುಮೂರ್ತಿ
ಚಿತ್ರದುರ್ಗ ನ್ಯೂಸ್.ಕಾಂ: ರಾಜ್ಯದಲ್ಲಿ ಬೆಳೆ ವಿಮೆ ವಿಚಾರದಲ್ಲಿ ಸಾಕಷ್ಟು ಅನ್ಯಾಯ ಹಾಗೂ ಅವ್ಯವಹಾರ ನಡೆಯುತ್ತಿದ್ದು, ಈಬಗ್ಗೆ ಸಿಓಡಿ ತನಿಖೆಗೆ ವಹಿಸಬೇಕು ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಬೆಳಗಾವಿ ಅಧಿವೇಶನದಲ್ಲಿ ಒತ್ತಾಯಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ಪಿ.ಮಹಾದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಅವ್ಯವಹಾರವನ್ನು ಉದಾಹರಣೆಯಾಗಿ ನೀಡಿದ ಅವರು, ರಾಜ್ಯಾದ್ಯಂತ ಸುಮಾರು 2500 ಕೋಟಿಯಷ್ಟು ಬೆಳೆವಿಮೆ ಕಟ್ಟಲಾಗುತ್ತದೆ. ಇದು ಒಂದು ತಾಲೂಕಿನ ಸಮಸ್ಯೆ ಅಲ್ಲ, ರಾಜ್ಯದ ಸಮಸ್ಯೆ ಎಂದು ಗಮನ ಸೆಳೆದರು.
ಇದನ್ನೂ ಓದಿ: ಹನಿ ನೀರಾವರಿ ಅಳವಡಿಕೆಗೆ ಅರ್ಜಿ ಆಹ್ವಾನ
ಚಳ್ಳಕೆರೆ ತಾಲೂಕಿನ ಪಿ.ಮಹಾದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆಯಡಿ ನೋಂದಾಯಿತ ಖಾತೆದಾರರಿಗೆ ಬೆಳೆ ವಿಮೆ ಪರಿಹಾರ ನೀಡುವಲ್ಲಿ ಅವ್ಯವಹಾರವಾಗಿರುವುದನ್ನು ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಅವರ ಗಮನಕ್ಕೂ ತರಲಾಗಿದೆ ಎಂದರು.
ತಾಲೂಕಿನ ಬೀಳು ಭೂಮಿ ಹಾಗೂ ನೋಂದಾಯಿತ ಬೆಳೆಯಲ್ಲದ ಬೇರೆ ಬೆಳೆಗಳಿಗೆ 80 ಪ್ರಕರಣಗಳಲ್ಲಿ 83 ಲಕ್ಷಕ್ಕೂ ಹೆಚ್ಚು ಬೆಳೆ ವಿಮೆ ದುರುಪಯೋಗವಾಗಿದೆ. ಮೂಲ ಖಾತೆದಾರರ ಬದಲಿಗೆ ಬೇರೆಯೊಬ್ಬರನ್ನು ನೋಂದಣಿ ಮಾಡಿಸಿದ 2 ಪ್ರಕರಣಗಳಲ್ಲಿ 1.90 ಲಕ್ಷ ರೂ. ಬೆಳೆ ವಿಮೆ ಹಣ ಪಡೆದು ವಂಚಿಸಲಾಗಿದೆ ಎಂದು ದಾಖಲೆ ನೀಡಿದರು.
ಇದನ್ನೂ ಓದಿ: ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಕೆ ಧಾರಣೆ
ಈ ವಿಚಾರಕ್ಕೆ ಸಂಬಂಧಿಸಿದಂತೆ ಚಳ್ಳಕೆರೆ ತಾಲೂಕಿನ 20 ಪಂಚಾಯಿತಿ ವ್ಯಾಪ್ತಿಯನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕರಾದ ಟಿ.ರಘುಮೂರ್ತಿ ಆಗ್ರಹಿಸಿದರು.