Connect with us

ಅಪ್ಪ–ಮಗನ ಸಂಬಂಧ ಕೆಡಿಸಲು ಬರಬೇಡ | ತಿಪ್ಪಾರೆ‌ಡ್ಡಿಗೆ ಶಾಸಕ ಎಂ.ಚಂದ್ರ‍ಪ್ಪ ಎಚ್ಚರಿಕೆ

ಮುಖ್ಯ ಸುದ್ದಿ

ಅಪ್ಪ–ಮಗನ ಸಂಬಂಧ ಕೆಡಿಸಲು ಬರಬೇಡ | ತಿಪ್ಪಾರೆ‌ಡ್ಡಿಗೆ ಶಾಸಕ ಎಂ.ಚಂದ್ರ‍ಪ್ಪ ಎಚ್ಚರಿಕೆ

CHITRADURGA NEWS | 1 APRIL 2024
ಚಿತ್ರದುರ್ಗ: ‘ಯಡಿಯೂರಪ್ಪ ನನ್ನ ತಂದೆ ಇದ್ದಂತೆ. ಅವರನ್ನು ಪ್ರಶ್ನಿಸುವ ಅಧಿಕಾರ ನನಗೆ ಸಂಪೂರ್ಣವಿದೆ. ನನ್ನ ನೋವು ತೋಡಿಕೊಂಡಿದ್ದೇನೆ. ಅದನ್ನು ಕೇಳಲು ಇವನ್ಯಾರು’ ಎಂದು ಮಾಜಿ ಶಾಸಕ ಜಿ.ಎಚ್‌.ತಿಪ್ಪಾರೆ‌ಡ್ಡಿ ಅವರಿಗೆ ಶಾಸಕ ಎಂ.ಚಂದ್ರ‍ಪ್ಪ ಏಕವಚನದಲ್ಲಿ ಪ್ರಶ್ನಿಸಿದ್ದಾರೆ.

‘ನಾನೇನು ಅವನ ಮನೆಯ ಜೀತದವನಾ? ಇದು ಅಪ್ಪ–ಮಗನ ಸಂಬಂಧ. ಕೆಡಿಸಲು ಮುಂದಾದರೆ ಪರಿಣಾಮ ಎದುರಿಸಬೇಕಾಗುತ್ತದೆ. ನಾನು, ನನ್ನ ಮಗ ಮೀಸೆ ಇರುವ ಪೋತಪ್ಪ ನಾಯಕರೇ. ನೀನು ಮೀಸೆ ಇಲ್ಲದ ನಾಯಕ. ಹಂತ ಹಂತವಾಗಿ ಜೀವನದಲ್ಲಿ ಮೇಲೆ ಬಂದಿದ್ದೇನೆ. ನಿನ್ನಂತೆ ಒಡೆದು ಹಾಳುವ ಮೂಲಕ ಬಂದಿಲ್ಲ. ನಿನ್ನ ಸಮುದಾಯದಲ್ಲಿ ಮಾಡಿದ ಕೆಲಸವನ್ನೇ ಬಿಜೆಪಿಯಲ್ಲಿ ಮಾಡಲು ಬಂದಿದ್ದೀಯಾ. ನಾನು ನಿಂತರೇ ನೆಮ್ಮದಿಯಾಗಿ ಮಲಗಲು ಬೀಡುವುದಿಲ್ಲ ಎಂದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.

ಕ್ಲಿಕ್ ಮಾಡಿ ಓದಿ: ನಾಲ್ವರು ಶಿಕ್ಷಕರು ಅಮಾನತು | ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಕರ್ತವ್ಯ ಲೋಪ

ನಾನು ಬಡತನದಿಂದ ಬಂದವನು. ಸೊಸೈಟಿಯಲ್ಲಿ ಸೀಮೆಎಣ್ಣೆ, ಸಕ್ಕರೆ ಮಾರಾಟ ಮಾಡಿ ಜೀವನ ನಡೆಸಿದ್ದೇನೆ. ನಿನ್ನಂತೆ ಬಂಗಾರದ ಚಮಚದವನು ನಾನಲ್ಲ. ನನಗೆ ಕಷ್ಟ, ಬಡತನದ ಅರಿವಿದೆ. ನಾನು ಜನರ ಹಸಿವು ನೀಗಿಸಿದ್ದೇನೆ ಹೊರತು ಅವರಿಗೆ ನೋವು ತರುವ ಕೆಲಸ ಮಾಡಿಲ್ಲ. ಹತ್ತಿ ಮಿಲ್‌ ನಡೆಸಲು ವಿದ್ಯುತ್‌ ಕಳುವು ಮಾಡಿದಂತೆ ನಾನೇನು ಮಾಡಿಲ್ಲ. ನನ್ನ ಪಕ್ಷ ನಿಷ್ಠೆ ಬಗ್ಗೆ ಮಾತನಾಡುವ ಯೋಗ್ಯತೆ ನಿನಗಿಲ್ಲ. ಎರಡು ಬಾರಿ ಪಕ್ಷೇತರವಾಗಿ ಸ್ಪರ್ಧಿಸಿದ್ದೇ ನಿನ್ನ ಪಕ್ಷ ನಿಷ್ಠೆ ತೋರುತ್ತದೆ’ ಎಂದು ವಾಗ್ದಾಳಿ ನಡೆಸಿದರು.

ಅಮೆರಿಕಾದಲ್ಲೋ, ರಷ್ಯಾದಲ್ಲೋ… ಎಲ್ಲಿ 7 ಬಾರಿ ಶಾಸಕ ಆಗಿದ್ದೀಯಾ? ಚುನಾವಣೆ ಸೋತವನನ್ನು ವಿಧಾನ ಪರಿಷತ್‌ ಸದಸ್ಯನ್ನಾಗಿ ಮಾಡಿದ್ದು ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ನಾನು. ಆದರೆ ಸಿದ್ದೇಶಣ್ಣನ ಮಗನ ಚಿತ್ರದುರ್ಗದಲ್ಲಿ ಫ್ಲೆಕ್ಸ್‌ ಹಾಕಿದರೆ ಕಿತ್ತು ಹಾಕಿಸಿದ್ದು ಯಾರು? ಎಂದು ಪ್ರಶ್ನಿಸಿದರು.

ಕೆಜೆಪಿಯಿಂದ ಸ್ಪರ್ಧಿಸಿ ಸೋತಾಗ ನಾನೂ ಹಿಂದೆ ಗೆದ್ದಿದ್ದಕ್ಕಿಂತ ಹೆಚ್ಚು ಮತ ಪಡೆದಿದ್ದೇನೆ. ಆದರೆ ನೀನು ಸೋತಿದ್ದು 90 ಸಾವಿರ ಮತಗಳ ಅಂತರದಿಂದ ಎಂದು ನೆನಪಿಟ್ಟುಕೋ. ನಿನ್ನ ದುರಂಹಕಾರಕ್ಕೆ ಬೇಸತ್ತಿದ್ದ ಜನ ಒಮ್ಮೆಯೂ ಮುಖ ನೋಡದ ಆತನಿಗೆ ಮತ ನೀಡಿದರು. ಎಲ್ಲವೂ ನಿನ್ನ ಮೇಲಿನ ಕೋಪಕ್ಕೆ ಬಿದ್ದ ಮತಗಳೇ ಹೊರತು ಬೇರೆ ಅಲ್ಲ’ ಎಂದು ಎಂ. ಚಂದ್ರಪ್ಪ ಅವರು ತಿಪ್ಪಾರೆಡ್ಡಿ ಕಾಲೆಳೆದರು.

ಕ್ಷೇತ್ರದಲ್ಲಿ 10 ವರ್ಷದ ಹಿಂದೆ ಮಾಡಿರುವ ಕಾಮಗಾರಿ ಅದಾಗಿಯೇ ಸವಿಯಬೇಕು. ಕಳಪೆ ಕೆಲಸ ಎಂದೂ ಮಾಡಿಲ್ಲ. ಸೋತರೆ ಜನರೇ ಪಶ್ಚಾತ್ತಾಪ ಪಡಬೇಕು. ನಿನ್ನಂತೆ ಕಳಪೆ ಕಾಮಗಾರಿ ಮಾಡಿ ಕಮಿಷನ್‌ ತಿನ್ನುವವನು ನಾನಲ್ಲ. ಗುತ್ತಿಗೆದಾರರಾದ ಕೆಂಪಣ್ಣ, ಮಂಜುನಾಥ್ ಭ್ರಷ್ಟಾಚಾರದ ಆರೋಪ ಮಾಡಿದ್ದು, ಯಾರಿಗೆ. ನನ್ನ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಎಂದರು.

ರಾಜಕೀಯದ ಬಗ್ಗೆ ನನಗೆ ಪಾಠ ಮಾಡುವ ಅಗತ್ಯವಿಲ್ಲ. ಮಗನಿಗೆ ಟಿಕೆಟ್‌ ಕೇಳಿದ್ದು ಧೃತರಾಷ್ಟ್ರ ಪ್ರೇಮ ಅಂತಾ ಹೇಳುವ ಎಂಎಲ್ಸಿ ಕೆ.ಎಸ್.ನವೀನ್ ಸ್ವಲ್ಪ ತಾವು ನಡೆದು ಬಂದ ದಾರಿ ನೋಡಿಕೊಳ್ಳಲಿ. ನನ್ನ ಮನೆಯಲ್ಲಿ ಬಿ.ಎಸ್.ಯಡಿಯೂರಪ್ಪ, ಬಿ.ಟಿ.ಚನ್ನಬಸಪ್ಪ ಇಬ್ಬರ ಫೋಟೋಗಳಿವೆ. ಆದರೆ, ನಿಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ತುಂಬಿದ ಮಾಜಿ ಶಾಸಕ ಉಮಾಪತಿ ಫೋಟೋ ಮನೆಯಲ್ಲೇಕೆ ಇಟ್ಟಿಲ್ಲ. ಮಾತನಾಡುವ ಮುನ್ನ ನಾನು ಎಷ್ಟು ಸರಿಯಾಗಿದ್ದೇನೆ ಎಂದು ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶ್‌, ರತ್ಮಮ್ಮ, ಸಮುದಾಯದ ಮುಖಂಡರಾದ ತಿಪ್ಪೇಸ್ವಾಮಿ, ಬಸವರಾಜ್‌, ಮುರುಗೇಶ್‌, ಸಂಜೀವ್‌ ಕುಮಾರ್‌, ಲವ ಕುಮಾರ್‌, ಮೋಹನ್‌, ಈಶಣ್ಣ, ಮಹಂತೇಶ್, ಬಸವಯ್ಯ, ಸಿದ್ದರಾಮಣ್ಣ, ನಗರಸಭೆ ಸದಸ್ಯರಾದ ಭಾಸ್ಕರ್‌, ಶಶಿ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version