ಮುಖ್ಯ ಸುದ್ದಿ
13.90 ಕೋಟಿ ಕಾಮಗಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೂಮಿ ಪೂಜೆ
CHITRADURGA NEWS | 16 AUGUST 2024
ಚಿತ್ರದುರ್ಗ: ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆ.ಎಂ.ಇ.ಆರ್.ಸಿ) ಅನುದಾನದಡಿ ಚಿತ್ರದುರ್ಗ ತಾಲ್ಲೂಕಿಗೆ ರೂ.18 ಕೋಟಿ ಮೊತ್ತದ ಕಾಮಗಾರಿಗಳು ಮಂಜೂರಾಗಿವೆ. ಇದರಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು ರೂ.11 ಕೋಟಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಹೇಳಿದರು.
ಕ್ಲಿಕ್ ಮಾಡಿ ಓದಿ: Rain report; ಮತ್ತೋಡುನಲ್ಲಿ 49.6 ಮಿ.ಮೀ ಮಳೆ | ಜಿಲ್ಲೆಯಲ್ಲಿ 21 ಮನೆ ಹಾನಿ
ಹಿರೇಗುಂಟನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ಶುಕ್ರವಾರ ವೈದ್ಯಾಧಿಕಾರಿ, ಶುಶ್ರೂಷಕರು ಹಾಗೂ ಗ್ರೂಪ್ ಡಿ ನೌಕರರ ವಸತಿ ಗೃಹ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಕೆ.ಎಂ.ಇ.ಆರ್.ಸಿ ಅನುದಾನದಲ್ಲಿ ಸಿದ್ದಾಪುರ, ಪಂಡರಹಳ್ಳಿ, ಭೀಮಸಮುದ್ರ ಗ್ರಾಮಗಳಲ್ಲಿ ನೂತನ ಆಯುಷ್ಮಾನ್ ಆರೋಗ್ಯ ಉಪಕೇಂದ್ರಗಳ ನಿರ್ಮಾಣಕ್ಕೆ ರೂ.75 ಲಕ್ಷ ನಿರ್ಮಾಣ ಕಾಮಗಾರಿಗೆ ರೂ.5 ಲಕ್ಷ ಜಿ.ಎಸ್.ಟಿ ಸೇರಿ ಒಟ್ಟು ರೂ.80 ಲಕ್ಷ ಅನುದಾನ ಮೀಸಲಿರಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಅನುದಾನವು ಲಭ್ಯವಿದ್ದು, ಯಾವುದೇ ಹಣಕಾಸಿನ ತೊಂದರೆಯಿಲ್ಲ ಆರೆಂಟು ತಿಂಗಳಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಹೇಳಿದರು.
ರೂ.2.90 ಕೋಟಿ ವೆಚ್ಚದಲ್ಲಿ ಭೀಮಸಮುದ್ರ ಪಿಹೆಚ್‍ಸಿ ಅಭಿವೃದ್ಧಿ:
ಭೀಮಸಮುದ್ರ ಗ್ರಾಮದಲ್ಲಿ ಶುಕ್ರವಾರ ಸಂಸದ ಗೋವಿಂದ ಎಂ ಕಾರಜೋಳ ಹಾಗೂ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಕೆ.ಎಂ.ಇ.ಆರ್.ಸಿ ಅನುದಾನದಡಿ ರೂ.2.90 ಕೋಟಿ ವೆಚ್ಚದಲ್ಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿ ಹಾಗೂ ತಲಾ ರೂ.75 ಲಕ್ಷ ವೆಚ್ಚದಲ್ಲಿ ಎರಡು ನೂತನ ಆಯುಷ್ಮಾನ್ ಆರೋಗ್ಯ ಉಪಕೇಂದ್ರಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಗೋವಿಂದ ಎಂ. ಕಾರಜೋಳ, ಆರೋಗ್ಯ ಕೇಂದ್ರಗಳ ಕಟ್ಟಡ ಕಾಮಗಾರಿಗಳು ಬೇಗ ಪೂರ್ಣಗೊಂಡು ಸಾರ್ವಜನಿಕರಿಗೆ ಇದರ ಲಾಭ ದೊರಕುವಂತಾಗಬೇಕು ಎಂದರು.
ಕ್ಲಿಕ್ ಮಾಡಿ ಓದಿ: ಯಲ್ಲದಕೆರೆ-ಹಿರಿಯೂರು ಮಾರ್ಗಕ್ಕೆ KSRTC ಬಸ್ ಸೌಲಭ್ಯ
ಇದೇ ವೇಳೆ ಗ್ರಾಮದಲ್ಲಿ ನೂತನ ಸಿ.ಸಿ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಸಿದ್ದಾಪುರ, ಪಂಡರಹಳ್ಳಿ ಗ್ರಾಮಗಳಲ್ಲಿ ಕೂಡ ಕೆ.ಎಂ.ಇ.ಆರ್.ಸಿ ಅನುದಾನ ಅಡಿ ಆಯುಷ್ಮಾನ್ ಆರೋಗ್ಯ ಉಪಕೇಂದ್ರಗಳ ನಿರ್ಮಾಣ ಮಾಡಲಾಗುತ್ತಿದೆ.
ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ತಮ್ ಕಿನ್ ಬಾನು, ಹಿರೇಗುಂಟನೂರು ಗ್ರಾ.ಪಂ. ಅಧ್ಯಕ್ಷ ಸಿ.ರಾಧಮ್ಮ, ಭೀಮಸಮುದ್ರ ಗ್ರಾ.ಪಂ.ಅಧ್ಯಕ್ಷೆ ರಾಧಾ.ಆರ್, ಗೊಡಬನಹಾಳ್ ಗ್ರಾ.ಪಂ. ಅಧ್ಯಕ್ಷ ಮಧು ತಾ.ಪಂ. ಪ್ರಭಾರಿ ಇಓ ಚಂದ್ರಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಬಿ.ವಿ.ಗಿರೀಶ್ ಸೇರಿದಂತೆ ಇತರೆ ಜನಪ್ರತಿನಿಧಿಗಳು ಇದ್ದರು.