ಮುಖ್ಯ ಸುದ್ದಿ
30 ವರ್ಷಗಳ ಹಿಂದೆ ಚಿತ್ರದುರ್ಗಕ್ಕೆ ಬಂದಿದ್ರು ಮನಮೋಹನ್ ಸಿಂಗ್
CHITRADURGA NEWS | 27 DECEMBER 2024
ಚಿತ್ರದುರ್ಗ: ದೇಶದ ಅತ್ಯುನ್ನತ ಆರ್ಥಿಕ ತಜ್ಞ, ಮಾಜಿ ಪ್ರಧಾನಿ, ಅರ್ಥ ಸಚಿವರಾಗಿ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯುವಂತೆ ಮಾಡಿದ ಮನಮೋಹನ್‍ಸಿಂಗ್ ಕೋಟೆನಾಡು ಚಿತ್ರದುರ್ಗಕ್ಕೆ 30 ವರ್ಷಗಳ ಹಿಂದೆಯೇ ಬಂದು ಹೋಗಿದ್ದಾರೆ.
ಇಂಥದ್ದೊಂದು ವಿಚಾರ ಚಿತ್ರದುರ್ಗದ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಮನಮೋಹನ್ ಸಿಂಗ್ ಅಗಲಿಕೆಗೆ ಬಿ.ಜಿ.ಗೋವಿಂದಪ್ಪ ಸಂತಾಪ
ಚಿತ್ರದುರ್ಗದಲ್ಲಿ ಮಹಿಳೆಯರೇ ಸೇರಿ ಸ್ಥಾಪಿಸಿದ್ದ ಒನಕೆ ಓಬವ್ವ ಬ್ಯಾಂಕ್ ಉದ್ಘಾಟನೆಗೆ ಆಗ ವಿತ್ತ ಸಚಿವರಾಗಿದ್ದ ಮನಮೋಹನ್ ಸಿಂಗ್ ಆಗಮಿಸಿದ್ದರು.
ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ಆರ್ಥಿಕ ಇಲಾಖೆ ಸಚಿವರಾಗಿದ್ದ ಮನಮೋಹನ್‍ಸಿಂಗ್ ಹಾಗೂ ಆಗ ರಾಜ್ಯಸಭೆ ಸದಸ್ಯರಾಗಿದ್ದ ಚಿತ್ರದುರ್ಗದ ಎಚ್.ಹನುಮಂತಪ್ಪ ಅವರ ನಡುವೆ ಉತ್ತಮ ಒಡನಾಟ ಇತ್ತು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಈ ಬಾಂಧವ್ಯದ ಕಾರಣಕ್ಕೆ ಮನಮೋಹನ್‍ಸಿಂಗ್ ಅವರು ದೆಹಲಿಯಿಂದ ಚಿತ್ರದುರ್ಗಕ್ಕೆ ಬಂದು ಹೋಗಿದ್ದಾರೆ. ಮುಂದೆ ಪ್ರಧಾನಿಯಾದಾಗ ಚಿತ್ರದುರ್ಗದ ಜನತೆ, ಅವರನ್ನು ಬಹುವಾಗಿ ಸ್ಮರಿಸಿಕೊಂಡಿದ್ದಾರೆ.
ವೀರವನಿತೆ ಒನಕೆ ಓಬವ್ವನ ಹೆಸರಿನಲ್ಲಿ ಮಹಿಳೆಯರೇ ಸೇರಿ ಕಟ್ಟಿದ್ದ ಒನಕೆ ಓಬವ್ವ ಬ್ಯಾಂಕ್ ಉದ್ಘಾಟನಾ ಸಮಾರಂಭಕ್ಕೆ 1994ರಲ್ಲಿ ಮನಮೋಹನ್ ಸಿಂಗ್ ಬಂದಿದ್ದರು ಎಂದು ಹಲವು ಹಿರಿಯರು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ವಾಣಿವಿಲಾಸ ಸಾಗರ ಜಲಾಶಯ ಮಟ್ಟ 129.40 ಅಡಿ
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಒನಕೆ ಓಬವ್ವ ಮಹಿಳಾ ಬ್ಯಾಂಕ್ ಉದ್ಘಾಟಿಸಲಾಗಿತ್ತು.
ಬ್ಯಾಂಕಿನ ಅಧ್ಯಕ್ಷರಾಗಿ ಜಗದಾಂಬ, ನಿರ್ದೇಶಕರಾಗಿ ವನಮಾಲ ಎಚ್.ಶಿವಪ್ಪ, ಮೋತಿ ವೀರಣ್ಣ ಅವರ ಪತ್ನಿ, ಎಚ್.ಹನುಮಂತಪ್ಪ ಅವರ ಪತ್ನಿ, ನಾಗಮ್ಮ ಕೇಶವಮೂರ್ತಿ ಸೇರಿದಂತೆ ಹಲವು ಪ್ರತಿಷ್ಠಿತರು ಇದ್ದರು. ನೂರಾರು ಮಹಿಳೆಯರು ಬ್ಯಾಂಕಿನ ಸದಸ್ಯರಾಗಿದ್ದರು ಎಂದು ವೀರಶೈವ ಸಮಾಜದ ಹಿರಿಯರಾದ ಎಸ್.ಷಣ್ಮುಖಪ್ಪ ಸ್ಮರಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಾಯಿ ಬಾಯಲ್ಲಿ ನವಜಾತ ಶಿಶು | ಚಿತ್ರದುರ್ಗದಲ್ಲೊಂದು ಅಮಾನವೀಯ ಘಟನೆ
ಮಹಿಳಾ ಬ್ಯಾಂಕ್ ಉದ್ಘಾಟಿಸಿ ಮಹಿಳಾ ಸಬಲೀಕರಣಕ್ಕೆ ದೊಡ್ಡ ಹೆಜ್ಜೆ ಎಂದು 3 ದಶಕಗಳ ಹಿಂದೆಯೇ ಮನಮೋಹನ್‍ಸಿಂಗ್ ಮಾತನಾಡಿದ್ದರು ಎಂದು ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜನಪ್ಪ ಮೆಲುಕು ಹಾಕಿದ್ದಾರೆ.
ದುರಾದೃಷ್ಟವಶಾತ್ ಈ ಬ್ಯಾಂಕ್ ಹೆಚ್ಚು ದಿನ ನಡೆಯಲಿಲ್ಲ. ಮಧ್ಯದಲ್ಲೇ ನಿಂತು ಹೋಗಿದೆ.