Connect with us

    Internal Reservation: ಒಳಮೀಸಲಾತಿಗೆ ಆಗ್ರಹಿಸಿ ಬೀದಿಗಿಳಿದ ಮಾದಿಗ ಸಂಘಟನೆಗಳು | ರಾಜ್ಯ ಸರ್ಕಾರದ ತೀವ್ರ ಆಕ್ರೋಶ

    Madiga protest for Internal Reservation

    ಮುಖ್ಯ ಸುದ್ದಿ

    Internal Reservation: ಒಳಮೀಸಲಾತಿಗೆ ಆಗ್ರಹಿಸಿ ಬೀದಿಗಿಳಿದ ಮಾದಿಗ ಸಂಘಟನೆಗಳು | ರಾಜ್ಯ ಸರ್ಕಾರದ ತೀವ್ರ ಆಕ್ರೋಶ

    CHITRADURGA NEWS | 17 OCTOBER 2024

    ಚಿತ್ರದುರ್ಗ: ಒಳಮೀಸಲಾತಿಗೆ (Internal Reservation) ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

    ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟಿಸಿ, ರಾಜ್ಯ ಸರ್ಕಾರದ ಅಣುಕು ಶವಯಾತ್ರೆ ನಡೆಸಲು ಮುಂದಾದರು. ಆನಂತರ ಅಲ್ಲಿಂದ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿ ವ್ಯಕ್ತಿಯೊಬ್ಬರನ್ನು ಹೊತ್ತು ತಿರುಗುತ್ತಾ ಮತ್ತೊಮ್ಮೆ ಅಣುಕು ಶವಯಾತ್ರೆ ನಡೆಸುವ ಯತ್ನ ನಡೆಯಿತು.

    ಈ ವೇಳೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡ ಜಿ.ಎಚ್.ಮೋಹನ್, ಮಾದಿಗರಿಗೆ ಸಾಮಾಜಿಕ ನ್ಯಾಯ ಸಿಕ್ಕಿದರೆ ಮತ ಬ್ಯಾಂಕ್ ಕೈ ತಪ್ಪುತ್ತದೆ ಎಂಬ ಭೀತಿ ಕಾಂಗ್ರೆಸ್ ಸರ್ಕಾರವನ್ನು ಕಾಡುತ್ತಿದೆ. ಮಾದಿಗ ಸಮಾಜ ಸಹೋಧರರು ಎಂದು ಹೇಳುತ್ತಲೇ ಮಲ್ಲಿಕಾರ್ಜುನ ಖರ್ಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ: ರಾಜ್ಯಮಟ್ಟದ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ | ಚಿತ್ರದುರ್ಗದ ಕಿಲಾರಿ ಜೋಗಯ್ಯ ಸೇರಿ ಐವರು ಪ್ರಶಸ್ತಿಗೆ ಆಯ್ಕೆ

    ಈ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೆಫ್ಟು, ರೈಟು ಮಹಾದೇವಪ್ಪ, ಪರಮೇಶ್ವರ, ಪ್ರಿಯಾಂಕ ಖರ್ಗೆ ಇದ್ದಾರೆ. ಮಾದಿಗರಿಗೆ ಎಲ್ಲಿದೆ ಸ್ಥಾನ. ನಮ್ಮವರು ಯಾವಾಗ ಮೆಡಿಕಲ್, ಇಂಜಿನಿಯರಿಂಗ್, ನರ್ಸಿಂಗ್ ಮಾಡಬೇಕು ಎಂದು ಪ್ರಶ್ನಿಸಿದರು.

    ಸುಪ್ರೀಂ ಕೋರ್ಟ್ ತೀರ್ಪು ನೀಡಿದರೂ ನಮ್ಮ ಸಮಾಜಕ್ಕೆ ನ್ಯಾಯ ಸಿಗುತ್ತಿಲ್ಲ. ಈ ಹಿಂದೆ ಆಂಜನೇಯ ಅವರು ಸದಾಶಿವ ಆಯೋಗ ಜಾರಿ ಮಾಡಲು ಮುಂದಾದಗ ಕೈ ಕೈ ಮಿಲಾಯಿಸಿದವರು ಯಾರು ಎನ್ನುವುದು ನಮಗೆ ಗೊತ್ತಿದೆ ಎಂದರು.

    ಈಗ ಕಾಂಗ್ರೆಸ್ ಸರ್ಕಾರದ ಶವಯಾತ್ರೆ ಮಾಡಿದ್ದೇವೆ. ಮುಂದೆ ನಿಮ್ಮ ಶವಯಾತ್ರೆ ಮಾಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕಾಪ್ಟರ್‍ನಲ್ಲೇ ಓಡಾಡಬೇಕಾಗುತ್ತದೆ. ಕೆಳಗಿಳಿದರೆ ಪಂಚೆ ಗಟ್ಟಿ ಮಾಡಿಕೊಂಡು ರಸ್ತೆಗೆ ಬನ್ನಿ ಎಂದು ಎಚ್ಚರಿಕೆ ನೀಡಿದರು.

    ಇದನ್ನೂ ಓದಿ: ಕಳ್ಳತನವಾಗಿದ್ದ 70 ಮೊಬೈಲ್ ಪತ್ತೆ | ಸೈಬರ್ ಪೊಲೀಸರ ಕಾರ್ಯಕ್ಕೆ ಶ್ಲಾಘನೆ

    ಮುಖಂಡ ಹನುಮಂತಪ್ಪ ದುರ್ಗ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದ ಎಲ್ಲ ರಾಜಕೀಯ ಪಕ್ಷಗಳು ನಮ್ಮ ಮೊಳಕೈಗೆ ತುಪ್ಪ ಸವರುವ ಕೆಲಸ ಮಾಡುತ್ತಾ ಬಂದಿದ್ದಾರೆ. ಮೂರು ದಶಕಗಳ ಕಾಲ ಹೋರಾಟ ಮಾಡಿ ನಮ್ಮ ಅಣ್ಣ, ತಮ್ಮಂದಿರನ್ನು ಕಳೆದುಕೊಂಡಿದ್ದೇವೆ. ನೀವು ಭಿಕ್ಷೆಯ ರೂಪದಲ್ಲಿ ಕೊಡುವ ಸೌಲಭ್ಯ ಬೇಕಾಗಿಲ್ಲ. ಒಳಮೀಸಲಾತಿ ಜಾರಿ ಮಾಡಿ ಎಂದು ಒತ್ತಾಯಿಸಿದರು.

    ಇಷ್ಟು ದಿನ ನಮ್ಮ ಅಣ್ಣ, ತಮ್ಮಂದಿರು ಅಂದುಕೊಂಡವರೇ ಈಗ ಮಗ್ಗುಲ ಮುಳ್ಳಾಗಿದ್ದಾರೆ. ಸರ್ಕಾರ ತಕ್ಷಣ ಒಳಮೀಸಲಾತಿ ಜಾರಿ ಮಾಡದಿದ್ದರೆ ಮುಂದೆ ಉಗ್ರ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ನಡೆಯುವ ಮೂರು ಉಪಚುನಾವಣೆಗಳಲ್ಲಿ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಮುಖಂಡ ಕೆ.ಟಿ.ಶಿವಕುಮಾರ್ ಮಾತನಾಡಿ, ಅ.21ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಳ್ಳಕೆರೆ ಶಾಸಕರ ಮಗಳ ಮದುವೆಗೆ ಆಗಮಿಸುತ್ತಿದ್ದೇವೆ. ಅಂದು ನಮ್ಮ ಮನವಿ ಆಲಿಸಿ ಒಳಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದರೆ ನಿಮಗೆ ಮಾದಿಗರ ಶಾಪ ತಟ್ಟುತ್ತದೆ ಎಂದರು.

    ಇದನ್ನೂ ಓದಿ: ಬೀದಿ ನಾಯಿಗಳ ದಾಳಿ | ಚಿಕಿತ್ಸೆ ಫಲಿಸದೆ ಮೃತಪಟ್ಟ ಬಾಲಕ

    ಮುಖಂಡ ಬಾಳೆಕಾಯಿ ಶ್ರೀನಿವಾಸ್ ಮಾತನಾಡಿ, ದೇಶಕ್ಕೆ ಆಪತ್ತು ಬಂದಾಗ ಏನೂ ಮಾಡದಿದ್ದರೆ ದೇಶದ್ರೋಹಿ ಆಗುತ್ತೇವೆ. ಅದೇ ರೀತಿ ಸಮಾಜಕ್ಕೆ ಆಪತ್ತು ಬಂದಾಗ ಏನು ಮಾಡದಿದ್ದರೆ ಸಮಾಜದ್ರೋಹಿ ಆಗಬೇಕಾಗುತ್ತದೆ. ಸಮಾಜದ ಹೆಸರಿನಲ್ಲಿ ನೌಕರಿ, ಉದ್ಯೋಗ, ಅಧಿಕಾರ ಪಡೆದವರು ಸಮಾಜದ ನೆರವಿಗೆ ಬಾರದಿದ್ದರೆ ರಾಜಿನಾಮೆ ಕೊಟ್ಟು ಹೊರಬನ್ನಿ ಎಂದು ಆಗ್ರಹಿಸಿದರು.

    ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನಾಕಾರರು, ಕಾಂಗ್ರೆಸ್ ಕಳೆದ ವಿಧಾನಸಭೆ ಚುನಾವಣೆ ವೇಳೆ ಒಳಮೀಸಲಾತಿಯನ್ನು 6ನೇ ಗ್ಯಾರೆಂಟಿಯಾಗಿ ಘೋಷಣೆ ಮಾಡುವುದಾಗಿ ಹೇಳಿತ್ತು. ಅದರಂತೆ ಈಗ ಸುಪ್ರೀಂ ಕೋರ್ಟ್ ಕೂಡಾ ತೀರ್ಪು ನೀಡಿದ್ದು, ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

    ಒಳಮೀಸಲಾತಿ ಜಾರಿ ಆಗುವವರೆಗೆ ಬ್ಯಾಗ್‍ಲಾಗ್ ಸೇರಿದಂತೆ ಯಾವುದೇ ಹುದ್ದೆಗಳನ್ನು ಭರ್ತಿ ಮಾಡಬಾರದು. ಜಾತಿ ಗಣತಿ ವಿಚಾರ ಮುನ್ನೆಲೆಗೆ ತಂದು, ಒಳಮೀಸಲಾತಿ ವಿಚಾರವಾಗಿ ನಿರ್ಲಕ್ಷ್ಯ ವಹಿಸಿದರೆ ಸಹಿಸುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

    ಇದನ್ನೂ ಓದಿ: ಬಸವೇಶ್ವರ ವೈದ್ಯಕೀಯ ಕಾಲೇಜು | ನೂತನ ವಿದ್ಯಾರ್ಥಿಗಳಿಗೆ ವೈಟ್‍ಕೋಟ್ ಸಮಾರಂಭ

    ಪ್ರತಿಭಟನೆಯಲ್ಲಿ ಮುಖಂಡರಾದ ಸೂರನಹಳ್ಳಿ ಶ್ರೀನಿವಾಸ್, ಪರಶುರಾಮ್, ಆರ್.ಡಿ.ಮಂಜುನಾಥ್, ಕುಂಚಿಗನಾಳ್ ಮಹಾಲಿಂಗಪ್ಪ, ದೊಡ್ಡಘಟ್ಟ ಲಕ್ಷ್ಮಣ್, ಚಳ್ಳಕೆರೆ ಶಿವಮೂರ್ತಿ, ಹುಲ್ಲೂರು ಶ್ರೀನಿವಾಸ್, ಲಾಯರ್ ಚಂದ್ರಪ್ಪ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ನೂರಾರು ಮಂದಿ ಭಾಗವಹಿಸಿದ್ದರು.

    ಜಿ.ಎಚ್.ಮೋಹನ್ ಹೇಳಿದ ನರಿ ಮತ್ತು ಕರಡಿ ಕಥೆ

    ಮಾದಿಗ ಮುಖಂಡ ಜಿ.ಎಚ್.ಮೋಹನ್ ತಮ್ಮ ಭಾಷಣದಲ್ಲಿ ನರಿ ಮತ್ತು ಕರಡಿಯ ಕಥೆಯೊಂದನ್ನು ಪ್ರಸ್ತಾಪಿಸಿದರು. ಅದರ ಸಾರಾಂಶ ಈ ಕೆಳಗಿನಂತಿದೆ.
    ನರಿ ಮತ್ತು ಕರಡಿ ಜೀತ ಮಾಡಿಕೊಂಡು ಜೀವನ ನಡೆಸುತ್ತಿದ್ದವು. ಒಂದು ಇದನ ನರಿ, ಅಣ್ಣಾ ನಾವಿಬ್ಬರು ಎಷ್ಟು ದಿನ ಜೀತ ಮಾಡೋದು, ನಾವೇ ಭೂಮಿ ಉಳುಮೆ ಮಾಡಿ ಹೊಸ ಬದುಕು ಕಟ್ಟಿಕೊಳ್ಳೋಣ ಎಂದು ಕರಡಿಗೆ ಸಲಹೆ ನೀಡುತ್ತದೆ.

    ಇದಕ್ಕೆ ಒಪ್ಪಿದ ಕರಡಿ, ಹೌದು ನೀನು ಹೇಳುವ ಸಲಹೆ ಚೆನ್ನಾಗಿದೆ ಎಂದು ನರಿಯ ಜೊತೆಗೆ ಭೂಮಿ ಉಳುಮೆಗೆ ಮುಂದಾಗುತ್ತದೆ.

    ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ಧಾರಣೆ ಎಷ್ಟಿದೆ

    ಭೂಮಿಗೆ ರಾಗಿ ಬಿತ್ತನೆ ಮಾಡಿದ ನರಿ ಮೇಲಿನ ಭಾಗ ನನ್ನದು, ಕೆಳಗಿನ ಭಾಗ ನಿನ್ನದು ಎನ್ನುತ್ತದೆ. ಆಗ ನರಿಗೆ ರಾಗಿ, ಕರಡಿಗೆ ರಾಗಿಯ ಹುಲ್ಲು, ಬೇರು ಸಿಗುತ್ತದೆ.
    ಇದರಿಂದ ಕರಡಿ ಬೇಸರವಾಗುತ್ತದೆ. ಆನಂತರ ನರಿ ಆಯ್ತು ಈ ಬಾರಿ ಮೇಲಿನ ಭಾಗ ನೀನು ತೆಗೆದುಕೊ, ಕೆಳಗಿನ ಭಾಗ ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಗೆಣಸು ನಾಟಿ ಮಾಡುತ್ತದೆ.

    ಈಗ ಗೆಣಸು ನರಿಗೆ, ಮೇಲಿನ ಸೊಪ್ಪು ಕರಡಿಗೆ ಸಿಗುತ್ತದೆ. ಇದೇ ರೀತಿಯಲ್ಲಿ ಸಚಿವ ಮಲ್ಲಿಕಾರ್ಜುನ ಖರ್ಗೆ ನಮಗೆ ವಂಚನೆ ಮಾಡುತ್ತಿದ್ದಾರೆ ಎಂದು ಮೋಹನ್ ಕಥೆಯ ಕೊನೆಯಲ್ಲಿ ವಿವರಿಸಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top