ಹಿರಿಯೂರು
liquor transport: ಮದ್ಯ ಸಾಗಣೆ ಮೇಲೆ ಮಹಿಳಾ ಟೀಂ ಹದ್ದಿನ ಕಣ್ಣು | ತಕ್ಕ ಪಾಠ ಕಲಿಸಲು ನಿರ್ಧಾರ

CHITRADURGA NEWS | 05 AUGUST 2024
ಚಿತ್ರದುರ್ಗ: ಮದ್ಯ ಸಾಗಣೆ ಮೇಲೆ ಮಹಿಳಾ ಟೀಂ ಹದ್ದಿನ ಕಣ್ಣಿಟ್ಟಿದೆ. ಮದ್ಯ ಮಾರಾಟ ಮಾಡುವವರು ಕಂಡು ಬಂದರೆ ತಕ್ಕ ಪಾಠ ಕಲಿಸಲು ಟೀಂ ನಿರ್ಧರಿಸಿದೆ.
ಹಿರಿಯೂರು ತಾಲ್ಲೂಕಿನ ಕೂನಿಕೆರೆ ಗ್ರಾಮದಲ್ಲಿ ಹಾಡಹಗಲೇ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಹಿಳೆಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಿರಿಯೂರಿನ ಮದ್ಯದಂಗಡಿಯಿಂದ ಚೀಲವೊಂದರಲ್ಲಿ ಮದ್ಯದ ಬಾಟಲಿಗಳನ್ನು ತುಂಬಿಕೊಂಡು ಬೈಕಿನಲ್ಲಿ ತರುತ್ತಿದ್ದ ಶಿವಪುರ ಗ್ರಾಮದ ಚಿದಾನಂದನನ್ನು ಮಹಿಳೆಯರು ತಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಚಿದಾನಂದ ಮಹಿಳೆಯರಿಗೆ ಉಡಾಫೆಯ ಉತ್ತರ ನೀಡಿದಾಗ ಗುಂಪು ಹೆಚ್ಚಿದೆ. ತಕ್ಷಣ ಪೊಲೀಸರಿಗೆ ಕರೆ ಮಾಡಿ ತಿಳಿಸಿ, ನಂತರದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನು ಓದಿ: ದುಂದು ವೆಚ್ಚಕ್ಕೆ ಕಡಿವಾಣ ಹಾಕಿ | ಡಾ.ಬಸವಕುಮಾರ ಸ್ವಾಮೀಜಿ
ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ತಡೆಗಟ್ಟುವಂತೆ ಅಬಕಾರಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೆವು. ತಾಲ್ಲೂಕು ಕಚೇರಿ ಮುಂದೆ ಈಚೆಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಕೂಡ ಸಲ್ಲಿಸಿದ್ದೆವು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಮದ್ಯ ಮಾರಾಟ ಎಗ್ಗಿಲ್ಲದೆ ನಡೆದಿತ್ತು. ಅಧಿಕಾರಿಗಳನ್ನು ನಂಬಿದರೆ ಪ್ರಯೋಜನವಿಲ್ಲ ಎಂದು ಮಹಿಳೆಯರು ಮದ್ಯ ಸಾಗಿಸುವವರ ಮೇಲೆ ನಿಗಾ ಇಟ್ಟಿದ್ದೆವು. ಭಾನುವಾರ ಒಬ್ಬರು ಸಿಕ್ಕಿ ಬಿದ್ದಿದ್ದಾರೆ ಎಂದು ಮಹಿಳೆಯರು ತಿಳಿಸಿದ್ದಾರೆ.
ಈ ಬಾರಿ ಪೊಲೀಸರಿಗೆ ಹಿಡಿದು ಕೊಟ್ಟಿದ್ದೇವೆ. ಇನ್ನೊಮ್ಮೆ ಯಾರಾದರೂ ಅಕ್ರಮ ಮದ್ಯ ಮಾರಲು ತಂದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
