ಮೊಳಕಾಳ್ಮೂರು
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ರಭಸಕ್ಕೆ ಉರುಳಿತು ಟ್ಯಾಂಕರ್ | ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ
CHITRADURGA NEWS | 25 JANUARY 2024
ಚಿತ್ರದುರ್ಗ: ನೀರು ತುಂಬಿದ ಟ್ಯಾಂಕರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಘಟನೆ ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದ ವೀರಭದ್ರಪ್ಪನವರ ತೋಟದ ಬಳಿ ನಡೆದಿದೆ.
ಬುಧವಾರ ಸಂಜೆ ಬಿ.ಜಿ.ಕೆರೆ ಗ್ರಾಮದ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ನೀರಿನ ಟ್ಯಾಂಕರ್ ಲಾರಿ ಉರುಳಿಬಿದ್ದಿದ್ದು, ಬಸ್ ಜಖಂಗೊಂಡಿದೆ. ಹೆದ್ದಾರಿಯ ಡಿವೈಡರ್ ಮೇಲಿರುವ ಸಸಿಗಳಿಗೆ ನೀರುಣಿಸುವಾಗ ಘಟನೆ ನಡೆದಿದೆ.
ಇದನ್ನೂ ಓದಿ: ನಿರ್ಮಾಣವಾಯ್ತು 21 ಅಡಿ ಎತ್ತರದ ಮುಳ್ಳಿನ ದೇಗುಲ | ಪುರಲ್ಲಹಳ್ಳಿಯಲ್ಲಿ ಬುಡಕಟ್ಟು ವೈಭವ
ರಸ್ತೆಯ ಒಂದು ಬದಿಯಲ್ಲಿ ಕಡಿಮೆ ವೇಗದಲ್ಲಿ ನೀರು ತುಂಬಿದ ಟ್ಯಾಂಕರ್ ಲಾರಿಯು ಸಾಗುತ್ತಿತ್ತು. ಬಳ್ಳಾರಿಯಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸೊಂದು ವೇಗವಾಗಿ ಬಂದು ಟ್ಯಾಂಕರ್‌ನ ಹಿಂಬದಿಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: ಜಮೀನಿನಲ್ಲಿ ನಾಗರಹಾವು ಕಚ್ಚಿ ಬಾಲಕ ಸಾವು
ಡಿಕ್ಕಿಯ ರಭಸಕ್ಕೆ ಲಾರಿಯು ರಸ್ತೆ ಮಧ್ಯದಲ್ಲಿ ಉರುಳಿಬಿದ್ದಿದೆ. ಬಸ್ ಮುಂಬದಿಯ ಒಂದು ಭಾಗ ಜಖಂಗೊಂಡಿದೆ. ಘಟನೆಯಲ್ಲಿ 5 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಗೊಂಡವರನ್ನು ಮೊಳಕಾಲ್ಮುರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಬಸ್ ಚಾಲಕ ಪರಶುರಾಂ ಅವರನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದವನಿಗೆ 6 ತಿಂಗಳು ಸಜೆ
ಘಟನಾ ಸ್ಥಳಕ್ಕೆ ಮೊಳಕಾಲ್ಮುರು ಪೊಲೀಸ್ ವೃತ್ತ ನಿರೀಕ್ಷಕ ವಸಂತ ಆಸೋದೆ, ಪಿಎಸ್‌ಐ ಪಾಂಡುರಂಗಪ್ಪ ಭೇಟಿ ನೀಡಿ ಪರಿಶೀಲಿಸಿ, ರಸ್ತೆಯ ಮೇಲೆ ಬಿದ್ದಿದ್ದ ಟ್ಯಾಂಕರ್ ಲಾರಿಯನ್ನು ಕ್ರೇನ್ ಮೂಲಕ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮೊಳಕಾಲ್ಮುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.