Connect with us

Kanakadasa jayanti: ಚಿತ್ರದುರ್ಗದಲ್ಲಿ ಕನಕದಾಸರ ಅದ್ದೂರಿ ಜಯಂತಿ ಆಚರಣೆ | ಕನಕ ಪ್ರತಿಮೆಗೆ ವಿಶೇಷ ಅಲಂಕಾರ

ಕನಕ ವೃತ್ತದಲ್ಲಿರುವ ಪ್ರತಿಮೆಗೆ ವಿಶೇಷ ಅಲಂಕಾರ

ಮುಖ್ಯ ಸುದ್ದಿ

Kanakadasa jayanti: ಚಿತ್ರದುರ್ಗದಲ್ಲಿ ಕನಕದಾಸರ ಅದ್ದೂರಿ ಜಯಂತಿ ಆಚರಣೆ | ಕನಕ ಪ್ರತಿಮೆಗೆ ವಿಶೇಷ ಅಲಂಕಾರ

CHITRADURGA NEWS | 18 NOVEMBER 2024

ಚಿತ್ರದುರ್ಗ: ಕಲಿ ಹಾಗೂ ಕವಿಯಾಗಿ ತಮ್ಮ ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು ಸಂತಶ್ರೇಷ್ಠ ಭಕ್ತ ಕನಕದಾಸ(Kanakadasa)ರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಬಣ್ಣಿಸಿದರು.

ಕ್ಲಿಕ್ ಮಾಡಿ ಓದಿ: ಭೀಮಸಮುದ್ರದ ಸುವರ್ಣಮ್ಮ ನಿಧನ

ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಜಿಲ್ಲಾ ಕುರುಬ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಉದ್ಘಾಟಿಸಿ ಮಾತನಾಡಿದರು.

ನೆಲಮೂಲ ಸಂಸ್ಕೃತಿಯ ಸತ್ವ ಹಾಗೂ ಸಾರವನ್ನು ಹೀರಿ ಬೆಳೆದ ಅಪ್ಪಟ ದೇಸಿಯ ಚಿಂತನೆ ಉಳ್ಳ ಕೀರ್ತನಕಾರರು. ಮುಖ್ಯವಾಗಿ ಮಾನವೀಯ ತುಡಿತ ಮಿಡಿತಗಳೊಂದಿಗೆ ತಮ್ಮ ಕೀರ್ತನೆಗಳನ್ನು ರಚಿಸಿದರು ಎಂದು ಹೇಳಿದರು.

ಕನಕದಾಸರು ಕೆಳ ವರ್ಗದಲ್ಲಿ ಜನಿಸಿದರೂ, ಎಲ್ಲಾ ಸಮಾಜದ ನಾಯಕರಾಗಿ ಉದಯಿಸಿದರು. ನಾಡಿನಲ್ಲಿ ಜ್ಯಾತ್ಯಾತೀತ ತತ್ವ ಪಸರಿಸಲು ಕನಕದಾಸರು ಕಾರಣೀಭೂತರಾಗಿದ್ದಾರೆ. ಕೀರ್ತನೆಗಳ ಮೂಲಕ ಅಸಮಾನತೆ ಹಾಗೂ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿದರು. ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ? ಎಂದು ಕುಲೀನ ವರ್ಗದವರು ತಾವು ಎಂದು ಬೀಗುತ್ತಿದ್ದವರನೇ ನೇರವಾಗಿ ಪ್ರಶ್ನಿಸಿದರು.

ಕ್ಲಿಕ್ ಮಾಡಿ ಓದಿ: ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು | ಸ್ಥಳದಲ್ಲೇ ಇಬ್ಬರು ಮೃತ

ಕನಕದಾಸರು ರಚಿಸಿದ ಕೀರ್ತನೆಗಳು ಒಂದು ವಿಶಿಷ್ಟ ಪ್ರಯೋಗ. ಅವರು ಕನ್ನಡ ಸಂಗೀತ ಲೋಕಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಕೀರ್ತನೆಗಳ ಮೂಲಕ ಸಮಾಜದಲ್ಲಿನ ಜಾತಿ ವ್ಯವಸ್ಥೆ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿದರು. ಈ ಕೀರ್ತನೆಗಳು ಸಾಮಾಜಿಕ ನ್ಯಾಯ, ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡುತ್ತವೆ ಮತ್ತು ಕೋಮು ಸೌಹಾರ್ದದ ಭಾವನೆಯನ್ನು ಎತ್ತಿ ತೋರಿಸುತ್ತವೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.

ಕನಕ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಕನಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನಕದಾಸರ ಜಯಂತಿ ಎಂದರೆ ಕನ್ನಡ ಸಾಹಿತ್ಯ ಮತ್ತು ದಾಸ ಸಾಹಿತ್ಯಕ್ಕೆ ವಿಶೇಷವಾದ ಕೃತಜ್ಞತೆ ಸಲ್ಲಿಸುವ ದಿನ. ಕನಕದಾಸರ ಜೀವನ, ಸಂದೇಶ, ಮಾನವ ಕುಲದ ಬದುಕಿಗೆ ಸಂಜೀವಿನಿ ದ್ರವ್ಯ ಇದ್ದಂತೆ. ಕನಕದಾಸರಿಗೆ ಅಧಿಕಾರ, ಶ್ರೀಮಂತಿಕೆ, ಸಂಸಾರ, 78 ಗ್ರಾಮಗಳ ಒಡೆತನವಿತ್ತು, ಅದೆಲ್ಲವನ್ನು ಮೀರಿ ಸಹಜ ಸರಳ ಬದುಕು ನಡೆದು ತೋರಿಸಿದವರು ಕನಕದಾಸರು. ಕನ್ನಡ ಪರಂಪರೆಯ ಜಾತ್ಯಾತೀತ ಮತ್ತು ಮಾನವೀಯ ಮೌಲ್ಯಗಳ ನಿಟ್ಟಿನಲ್ಲಿ ಕನಕದಾಸರು ನಡೆಸಿದ ಏಕಾಂಗಿತನದ ಹೋರಾಟ ನಿಜಕ್ಕೂ ಶ್ಲಾಘನೀಯ ಎಂದು ಸಚಿವ ಡಿ.ಸುಧಾಕರ್ ಹೇಳಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಸಮಾಜಕ್ಕೆ ಸನ್ಮಾರ್ಗ ತೋರಿದ ಮಹನೀಯರನ್ನು ಜಾತಿಗೆ ಸೀಮಿತಗೊಳಿಸಬಾರದು. ಆರಂಭದಲ್ಲಿ ವಿಜಯನಗರ ಸೇನೆಯಲ್ಲಿ ದಂಡನಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ತಿಮ್ಮಪ್ಪ, ತನ್ನ ಹೊಲದಲ್ಲಿ ಸಿಕ್ಕ ಬಂಗಾರವನ್ನು ಜನರಿಗೆ ಹಂಚಿ ಕನಕ ಎಂದು ಪ್ರಸಿದ್ಧರಾದರು ಎಂದರು.

ಕ್ಲಿಕ್ ಮಾಡಿ ಓದಿ: ಸರ್ಕಾರಿ ನೌಕರರ ಸಂಘ | ಯಾವ ಇಲಾಖೆಯಿಂದ ಯಾರು ಆಯ್ಕೆ | ಸಂಪೂರ್ಣ ವಿವರ

ಯುದ್ದದ ಬಗ್ಗೆ ವೈರಾಗ್ಯ ಹೊಂದಿದ ಕನಕ, ಸಮಾಜ ಸುಧಾರಣೆ ಹಾಗೂ ಆಧ್ಯಾತ್ಮದ ಕಡೆ ಮುಖಮಾಡಿ ಸಂತಶ್ರೇಷ್ಠ ಕನಕದಾಸ ಎನಿಸಿದರು. ಸಮಾಜದ ಕೆಳ ವರ್ಗದ ಧ್ವನಿಯಾಗಿದ್ದ ಕನಕದಾಸರ, ತಮ್ಮ ಕೀರ್ತನೆ ಹಾಗೂ ಕೃತಿಗಳಲ್ಲಿ ಜಾತಿ ಹಾಗೂ ಕುಲ ಶ್ರೇಷ್ಠತೆ ಖಂಡಿಸಿದರು. ತಮ್ಮ ಸಾಹಿತ್ಯದಲ್ಲಿ ಸರ್ವರಿಗೂ ಸಮಪಾಲು ಹಾಗೂ ಸಮಬಾಳು ತತ್ವ ಪ್ರತಿಪಾದಿಸಿದರು. ನಾಡಿನ ಎಲ್ಲ ಜನರ ಮನ ಮನೆಗಳಲ್ಲಿ ಕನಕರ ತತ್ವಾದರ್ಶಗಳ ಜ್ಯೋತಿ ಬೆಳಗಬೇಕು ಎಂದರು.

ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಕೆ.ರವಿ ತಮ್ಮ ವಿಶೇಷ ಉಪನ್ಯಾಸದಲ್ಲಿ, ಕನ್ನಡ ನಾಡಿನಲ್ಲೆಡೆ ಉತ್ಸಾಹ ಹಾಗೂ ವಿಜೃಂಭಣೆಯಿಂದ ಕನಕ ಜಯಂತಿ ಆಚರಿಸಲಾಗುತ್ತದೆ. ಕನಕದಾಸರ ಮುಂಡಿಗೆಗಳನ್ನು ಅರ್ಥ ಮಾಡಲು ಅಳವಾದ ಅಧ್ಯಯನ ಬೇಕು ಎಂದು ತಿಳಿಸಿದರು.

ಕನಕನನ್ನು ಕೆಣಕ ಬೇಡ, ಕೆಣಕಿ ತಿಣುಕ ಬೇಡ ಎಂಬ ನಾಣ್ನುಡಿ ಅವರ ಜ್ಞಾನದ ಪ್ರಬುದ್ಧತೆ ತೋರಿಸುತ್ತದೆ. ಶ್ರೇಣಿಕೃತ ವರ್ಗ ಸಂಘರ್ಷದ ಸಮಾಜದಲ್ಲಿ ಕುಲೀನ ಕುಲ ವ್ಯವಸ್ಥೆ ಪ್ರಶ್ನಿಸಿದರು. ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು ಎಲ್ಲ ಜನರ ಬದುಕಿನ ವಾಸ್ತವ ತೆರೆದಿಟ್ಟರು. ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಕನಕ ಅಧ್ಯಯನ ಪೀಠ ತೆರೆಯಲಾಗಿದೆ. ಅವರ ಕೃತಿಗಳ ಭಾಷಾಂತರ ವಿಭಾಗಗಳಿಂದ ತರ್ಜುಮೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕ್ಲಿಕ್ ಮಾಡಿ ಓದಿ: ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ | ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ

ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಹೊರತಂದಿರುವ ಎಚ್.ದಂಡಪ್ಪ ಸಂಪಾದಕತ್ವದ “ಕವಿ ಕನಕದಾಸರು” ಕೃತಿ ಬಿಡುಗಡೆ ಮಾಡಲಾಯಿತು.

ಜಿಲ್ಲಾ ಕುರುಬರ ಸಂಘದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜ ಸೇವಕರಾದ ಎಸ್.ಷಣ್ಮುಖಪ್ಪ, ಎಂ.ತಿಪ್ಪೇಸ್ವಾಮಿ, ಕೆ.ತಿಪ್ಪೆಸ್ವಾಮಿ, ಎಂ.ವಿ.ಮಾಲತೇಶ್, ಪರುಶುರಾಮ, ವೈದ್ಯರಾದ ಡಾ.ಈ.ಸತೀಶ, ಡಾ.ರಶ್ಮಿ.ಡಿ.ಮಲ್ಲಪ್ಪ, ಕೃಷಿಕರಾದ ಬಿ.ಜಗನ್ನಾಥ್, ರೇಣುಕಾ ರಾಜ್, ಸಾಹಿತಿ ಸುಭಾಷ್ ಚಂದ್ರ ದೇವರಗುಡ್ಡ, ಶಿಕ್ಷಣ ಕ್ಷೇತ್ರ ಯೋಗೀಶ್ ಸಹ್ಯಾದ್ರಿ, ಆಡಳಿತ ಕ್ಷೇತ್ರದಲ್ಲಿ ರೂಪಾ ಕುಮಾರಿ, ಪೊಲೀಸ್ ಅಧಿಕಾರಿ ಸುರೇಶ್.ಪಿ, ಪತ್ರಕರ್ತ ಮಾಲತೇಶ್ ಅರಸ್, ಕಾರ್ಮಿಕ ಕ್ಷೇತ್ರದ ತಿಪ್ಪೇಸ್ವಾಮಿ.ಆರ್ ಕನಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತಾ ಬಿ.ಎನ್ ರಾಘವೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗಾರಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಲ್ಲಾ ಗ್ಯಾರಂಟೆ ಯೋಜನೆಗಳ ಅಧ್ಯಕ್ಷ ಶಿವಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಶೀಲ್ದಾರ್ ಡಾ.ನಾಗವೇಣಿ, ತಾ.ಪಂ ಇಓ ರವಿಕುಮಾರ್, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ನಗರಸಭೆ ಸದಸ್ಯ ಪಿ.ಕೆ.ಮೀನಾಕ್ಷಮ್ಮ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಸ್.ಶ್ರೀರಾಮ್, ಕಾರ್ಯದರ್ಶಿ ಬಿ.ಟಿ.ಜಗದೀಶ್, ತಾಲ್ಲೂಕು ಅಧ್ಯಕ್ಷ ಕೆ.ಓಂಕಾರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version