ಮುಖ್ಯ ಸುದ್ದಿ
ಜಯದೇವ ಗುರುಗಳ ನೆಚ್ಚಿನ ಶಿಷ್ಯ ಜಯವಿಭವ ಸ್ವಾಮೀಜಿ | ಮುರುಘಮಠದಲ್ಲಿ ಸ್ಮರಣೋತ್ಸವ
CHITRADURGA NEWS | 18 MAY 2024
ಚಿತ್ರದುರ್ಗ: ‘ಚೀನಾದವರು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ ಸಂದರ್ಭದಲ್ಲಿ ದೇಶರಕ್ಷಣೆಯ ಕಾರ್ಯಕ್ಕೆ ಬಂಗಾರದ ಕಿರೀಟ, ದಪ್ಪನೆಯ ಉಂಗುರ, ಸಹಸ್ರಾರು ರೂ.ಗಳ ಕಾಣಿಕೆಯನ್ನು ಅರ್ಪಿಸುವ ಮೂಲಕ ದೇಶಾಭಿಮಾನ ಮೆರೆದು ಲಿಂಗೈಕ್ಯ ಶ್ರೀ ಜಯವಿಭವ ಸ್ವಾಮೀಜಿ ಮಾದರಿಯಾಗಿದ್ದಾರೆ’ ಎಂದು ಸಂಶೋಧಕ ಡಾ.ಬಿ.ರಾಜಶೇಖರಪ್ಪ ತಿಳಿಸಿದರು.
ನಗರದ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶನಿವಾರ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಜಯವಿಭವ ಮುರುಘರಾಜೇಂದ್ರ ಸ್ವಾಮೀಜಿಯ ಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ‘ಜಯದೇವ ಸ್ವಾಮೀಜಿಯ ಉತ್ತರಾಧಿಕಾರಿಗಳಾಗಿ ಬಂದವರು ಶ್ರೀ ಜಯವಿಭವ ಸ್ವಾಮೀಜಿ. ಇವರ ಮೂಲ ಹೆಸರು ಶಿವಲಿಂಗ ಮಹಾದೇವರು. ಇವರಿಗೆ ಜಯವಿಭವ ಸ್ವಾಮೀಜಿ ಎಂದು ಮರು ನಾಮಕರಣ ಮಾಡಿದ್ದು ಜಯದೇವ ಸ್ವಾಮೀಜಿ’ ಎಂದು ಹೇಳಿದರು.
‘ಕಾಶಿಗೆ ಉನ್ನತ ಅಭ್ಯಾಸಕ್ಕೆ ತೆರಳಿ ವೇದೋಪನಿಷತ್ತು, ಆಗಮ ಕಲಿತಿದ್ದರು. ವಿದ್ಯಾಭ್ಯಾಸ ಪೂರ್ಣಗೊಳಿಸಿದ ಚಿತ್ರದುರ್ಗಕ್ಕೆ ಬಂದ ಬಳಿಕ ಮರು ನಾಮಕರಣ ಮಾಡುತ್ತಾರೆ. ಹಿರಿಯ ಜಗದ್ಗುರುಗಳಿಗೆ ಇವರ ಮೇಲೆ ವಿಶೇಷ ಆಸಕ್ತಿ ಇತ್ತು. 1949ರಲ್ಲಿ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿ, 1956ರಲ್ಲಿ ಜಯದೇವ ಜಗದ್ಗುರುಗಳು ಲಿಂಗೈಕ್ಯರಾದ ನಂತರ ಅಧಿಕಾರ ವಹಿಸಿಕೊಂಡಿದ್ದರು’ ಎಂದರು.
‘ಶ್ರೀಗಳು ಸಸ್ಯಪ್ರೇಮಿಗಳು. ಹೂದೋಟವನ್ನು ಮಾಡಿದ್ದರು. ಅವರು ಮಠದ ಪಕ್ಕ ಕಲ್ಪವೃಕ್ಷ ವನ ಮಾಡಿದರು. ಧರ್ಮ, ಸಮಾಜವನ್ನು ಹೇಗೆ ಕೊಂಡೊಯ್ಯಬೇಕೆಂದು ಚಿಂತಿಸುತ್ತಿದ್ದರು. ಶ್ರೀಮಠದ ಆವರಣದಲ್ಲಿ ಅವರು ಲಿಂಗೈಕ್ಯರಾಗುತ್ತಾರೆ. 1964ರಲ್ಲಿ ಬೆಂಗಳೂರಿನಲ್ಲಿ ಅನಾರೋಗ್ಯದಿಂದಾಗಿ, ಶ್ರೀಮಠದ ಮುಂದಿನ ಜಗದ್ಗುರುಗಳನ್ನಾಗಿ ಮಲ್ಲಿಕಾರ್ಜುನ ಶ್ರೀಗಳ ಹೆಸರನ್ನು ಬರೆದಿಟ್ಟಿದ್ದರು’ ಎಂದರು.
ಕ್ಲಿಕ್ ಮಾಡಿ ಓದಿ: ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಪರವಾನಗಿ ನವೀಕರಣ | ಜನರ ಸೇವೆಗೆ ಮುಕ್ತ
‘ಜಯವಿಭವ ಸ್ವಾಮೀಜಿ 18ನೇಯ ಜಗದ್ಗುರುಗಳು. ಅಲ್ಪಕಾಲ ಶ್ರೀಮಠದ ಆಡಳಿತ ನೋಡಿಕೊಂಡರೂ ಸಹ ನೆನಪಿನಲ್ಲಿಟ್ಟುಕೊಳ್ಳುವ ಕೆಲಸಗಳನ್ನು ಮಾಡಿದರು. ಕೃಷಿಪ್ರೇಮ ಅವರಲ್ಲಿ ಹೆಚ್ಚಾಗಿತ್ತು. ಶ್ರೀಮಠದಲ್ಲಿ ಶಾಂತವೀರ ಮುರಿಗಿ ಸ್ವಾಮೀಜಿಗಳಿಂದ ಇಲ್ಲಿಯವರೆಗೆ ಅನೇಕ ಜಗದ್ಗುರುಗಳು ಸಾಹಿತ್ಯ ಕೃತಿಗಳನ್ನು ಬರೆದು ಹೆಸರಾಗಿದ್ದಾರೆ’ ಎಂದು ನುಡಿದರು.
ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ, ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ದಾವಣಗೆರೆ ವಿರಕ್ತ ಮಠದ ಡಾ.ಬಸವ ಪ್ರಭು ಸ್ವಾಮೀಜಿ , ಸರ್ದಾರ್ ಸೇವಾಲಾಲ್ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಶರಣೆ ಅಕ್ಕನಾಗಮ್ಮ ತಾಯಿ, ಭಕ್ತರಾದ ಸುರೇಶ್ ಬಾಬು, ಕೆಇಬಿ ಷಣ್ಮುಖಪ್ಪ, ಎಸ್.ಪರಮೇಶ್, ಗುತ್ತಿನಾಡು ಪ್ರಕಾಶ್, ಕೆ.ಎಂ.ವೀರೇಶ್ ಇದ್ದರು.