ಲೋಕಸಮರ 2024
ಗೋವಿಂದ ಕಾರಜೋಳ ಗೆದ್ದರೆ ಕೇಂದ್ರದಲ್ಲಿ ಮಂತ್ರಿ ಆಗ್ತಾರೆ | ಗೂಳಿಹಟ್ಟಿ ಶೇಖರ್

CHITRADURGA NEWS | 22 APRIL 2024
ಚಿತ್ರದುರ್ಗ: ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆದ್ದರೆ ಕೇಂದ್ರದಲ್ಲಿ ಮಂತ್ರಿಯೂ ಆಗುತ್ತಾರೆ ಎಂದು ಹೊಸದುರ್ಗದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್ ಭರವಸೆ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರಿಗೆ ಬೆಂಬಲ ನೀಡಿದ್ದೇನೆ ಎಂದರು.

ನನ್ನದೂ ಗೋವಿಂದ ಜಾರಜೋಳ ಅವರ ಸಂಬಂಧ ತಂದೆ ಮಕ್ಕಳ ಸಂಬಂಧ. ನನ್ನ ಹಿತೈಷಿಗಳು, ಅಭಿಮಾನಿಗಳು ಅವರಿಗೆ ಸಹಾಯ ಮಾಡಲು ಮನವಿ ಮಾಡುತ್ತೇನೆ ಎಂದು ಹೇಳಿದರು.
2008 ರಲ್ಲಿ ಚುನಾವಣೆಗೆ ನಿಂತಾಗ ಹರಿಜನ ಸಮಾಜದಿಂದ ಶೇ.90 ರಷ್ಟು ಮತ ಕೊಟ್ಟಿದ್ದರು. ಆ ಸಮಾಜದ ಋಣ ನನ್ನ ಮೇಲಿದೆ. ಇದೊಂದು ವಿಶೇಷ ಕಾರಣಕ್ಕೆ ಕಾರಜೋಳ ಸಾಹೇಬರಿಗೆ ಬೆಂಬಲ ವ್ಯಕ್ತಪಡಿಸಿದ್ದೇನೆ ಎಂದರು.
ಗೋವಿಂದ ಕಾರಜೋಳ ಅವರು ಬೇರೆ ಬೇರೆ ಖಾತೆಗಳ ಸಚಿವರಾಗಿದ್ದಾಗ ಹೊಸದುರ್ಗ ಕ್ಷೇತ್ರಕ್ಕೆ ಸುಮಾರು 150 ಕೋಟಿ ವಿಶೇಷ ಅನುದಾನ ಕೊಟ್ಟಿದ್ದಾರೆ. ಅನೇಕರು ಅವರನ್ನು ಈ ಜಿಲ್ಲೆಗೆ ಯಾವ ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದರು.
ಸಾಕಷ್ಟು ಜನ ಶಾಸಕರು ಅವರ ಅನುದಾನ ಪಡೆದುಕೊಂಡಿದ್ದಾರೆ. ಅವರು ಹೇಳಬೇಕು.
ಮೂರು ಹೋಬಳಿಗಳಿಗೆ ಸಂಪರ್ಕ ಕಲ್ಪಿಸುವ ದೊಡ್ಡ ಸೇತುವೆ ಕೊಟ್ಟಿದ್ದಾರೆ.
ಬೇರೆಯವರು ಸಂಸದರಾದರೆ ಶಾಸಕರ ಹಿಡಿತದಲ್ಲಿ ಇರುತ್ತಾರೆ. ಆದರೆ, ಕಾರಜೋಳ ಸಾಹೇಬರು ಸ್ವತಂತ್ರವಾಗಿ ಕೆಲಸ ಮಾಡುವ ಮುಗ್ದ ಸ್ವಭಾವದವರು.
ಈಗಾಗಲೇ ಸಾವಿರಾರು ಕೋಟಿ ಅನುದಾನವನ್ನು ಈ ಕ್ಷೇತ್ರಕ್ಕೆ ಕೊಟ್ಟು ಬಂದಿದ್ದಾರೆ.
2014 ರಲ್ಲಿ ನಾನು ಸ್ಪರ್ಧೆ ಮಾಡಿ 2.08 ಲಕ್ಷ ಮತ ಪಡೆದಿದ್ದೆ. ಹೊಸದುರ್ಗ ತಾಲೂಕಿಗೆ ಸೀಮಿತವಾಗದೆ ಎಲ್ಲ ತಾಲೂಕುಗಳಲ್ಲಿ ಅಭಿಮಾನಿಗಳು ಇದ್ದಾರೆ. ಆಗ ಕೆಲವರು ಮೋಸ ಮಾಡಿದಾಗಲೂ ಅಷ್ಟು ಮತ ಪಡೆದಿದ್ದೆ ಎಂದು ಸ್ಮರಿಸಿದರು.
ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಒಂದು ಲಕ್ಷ ಮತ ಹಾಕಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
