ಮುಖ್ಯ ಸುದ್ದಿ
ಲೋಕಸಭೆ ಚುನಾವಣೆಗೆ ಟಿಕೇಟ್ ಕೇಳಿದ್ದೇನೆ | ಎಂ.ಸಿ.ರಘುಚಂದನ್
ಚಿತ್ರದುರ್ಗ ನ್ಯೂಸ್.ಕಾಂ: ಲೋಕಸಭೆ ಚುನಾವಣೆ ಸಮೀಪಸುತ್ತಿದ್ದಂತೆ ರಾಜಕೀಯ ಚುಟುವಟಿಕೆಗಳು ಗರಿಗೆದರುತ್ತಿವೆ.
ಕೇಂದ್ರದಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿದ್ದು, ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲೂ ಬಿಜೆಪಿ ಸಂಸದರೇ ಆಯ್ಕೆಯಾಗಿದ್ದಾರೆ.
ಮುಂದಿನ ಚುನಾವಣೆಗೆ ಬಿಜೆಪಿಯಿಂದ ಹಾಲಿ ಸಂಸದರೇ ಸ್ಪರ್ಧೆ ಮಾಡುತ್ತಾರಾ ಅಥವಾ ಹೊಸ ಅಭ್ಯರ್ಥಿ ಬರುತ್ತಾರಾ ಎನ್ನುವ ಸಹಜ ಕುತೂಹಲ ಕ್ಷೇತ್ರದಲ್ಲಿ ಮನೆ ಮಾಡಿದೆ.
ಹೊಸ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ಈ ಸಾಲಿಗೆ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಅವರ ಪುತ್ರ, ದೇವರಾಜ್ ಅರಸು ಶಿಕ್ಷಣ ಸಂಸ್ಥೆಯ ಸಿಇಓ ಎಂ.ಸಿ.ರಘುಚಂದನ್ ಸೇರ್ಪಡೆಯಾಗಿದ್ದಾರೆ.
ತಮ್ಮ ಶಿಕ್ಷಣ ಸಂಸ್ಥೆ 40 ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರ ಡೆಸ್ಟಿನಿ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿ ನಂತರ ಪತ್ರಕರ್ತರ ಜೊತೆ ಮಾತನಾಡಿದ ಎಂ.ಸಿ.ರಘುಚಂದನ್, ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲೇ ನಾನು ಪಕ್ಷದ(ಬಿಜೆಪಿ) ಟಿಕೇಟ್ ಕೇಳದ್ದೆ. ಆದರೆ, ವಯಸ್ಸಿನ ಅಂತರದ ಕಾರಣಕ್ಕೆ ಹಿಂದೆ ಸರಿಯಲಾಗಿತ್ತು.
ಈಗ ಮತ್ತೆ ಲೋಕಸಭೆಗೆ ಚುನಾವಣೆ ಹತ್ತಿರವಾಗುತ್ತಿದೆ. ಈಗಾಗಲೇ ಪಕ್ಷದ ವರಿಷ್ಠರ ವಲಯದಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದೇನೆ. ವಿವಿಧ ಹಂತದ ನಾಯಕರ ಜೊತೆಗೆ ಟಿಕೇಟ್ ಕುರಿತು ಮಾತುಕತೆ ನಡೆಸಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಅಂತಿಮವಾಗಿ ನಮ್ಮದು ಶಿಸ್ತಿನ ಪಕ್ಷ. ಯಾರಿಗೇ ಟಿಕೇಟ್ ಕೊಟ್ಟರೂ ಕೆಲಸ ಮಾಡುತ್ತೇವೆ. ಸಂಸದೀಯ ಮಂಡಳಿಯಲ್ಲಿ ತೀರ್ಮಾನ ಮಾಡಿ ಟಿಕೇಟ್ ನೀಡುವುದು ನಮ್ಮ ಪಕ್ಷದ ಪದ್ಧತಿ. ಅಲ್ಲಿಯ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಲು 2 ಡಜನ್ ಆಕಾಂಕ್ಷಿಗಳು
ಈಗಾಗಲೇ ಚಿತ್ರದುರ್ಗ ಲೋಕಸಭೆ ಕ್ಷೇತ್ರ ಕುರಿತು ಪಕ್ಷದಿಂದ ಮೂರು ಬಾರಿ ಸಮೀಕ್ಷೆ ಮಾಡಿದ್ದಾರೆ. ಸಮೀಕ್ಷೆ ಆಧಾರದಲ್ಲೇ ನಮ್ಮ ಪಕ್ಷದಲ್ಲಿ ಟಿಕೇಟ್ ನೀಡುವುದು. ಹಾಗಾಗಿ ನಾನು ಕೂಡಾ ಆಕಾಂಕ್ಷಿ ಎಂದು ವರಿಷ್ಠರ ಬಳಿ ಹೇಳಿದ್ದೇನೆ. ಸಂವಿಧಾನದಲ್ಲಿ ಯಾರು ಸ್ಪರ್ಧಿಸಲು ಅವಕಾಶ ಇರುವುದರಿಂದ ಈ ಬೇಡಿಕೆ ಇಟ್ಟಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನಾನು ಸ್ಥಳೀಯನಾಗಿರುವುದರಿಂದ ಇಲ್ಲಿನ ಸಮಸ್ಯೆಗಳು ಚೆನ್ನಾಗಿ ತಿಳಿದಿವೆ. ಹಾಗಾಗಿ ಸ್ಥಳೀಯರಿಗೆ ಟಿಕೇಟ್ ಕೊಟ್ಟರೆ ಹೆಚ್ಚು ಅನುಕೂಲವಾಗಲಿದೆ. ಆದರೆ, ಕಾಂಗ್ರೆಸ್ ಅಥವಾ ಬಿಜೆಪಿ ರಾಷ್ಟ್ರೀಯ ಪಕ್ಷಗಳಾಗಿರುವುದರಿಂದ ಬೇರೆ ಬೇರೆ ಲೆಕ್ಕಾಚಾರದಲ್ಲಿ ಟಿಕೇಟ್ ನೀಡುವುದು ಇದ್ದೇ ಇರುತ್ತದೆ.
ವಿಶೇಷವಾಗಿ ಚಿತ್ರದುರ್ಗ ಹೊರಗಿನಿಂದ ಬಂದವರಿಗೆ ಹೆಚ್ಚು ಮಣೆ ಹಾಕುವ ಊರಾಗಿದೆ. ಇದು ಸರಿಯೋ ತಪ್ಪೋ ಗೊತ್ತಿಲ್ಲ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯರು ಬರಬೇಕು.
ಒಂದು ವೇಳೆ ನಮಗೆ ಟಿಕೇಟ್ ಸಿಕ್ಕಿದರೆ ಇಡೀ ಕ್ಷೇತ್ರ ಸುತ್ತಾಡಿ ಚುನಾವಣೆ ನಡೆಸುತ್ತೇವೆ. ಎ.ನಾರಾಯಣಸ್ವಾಮಿ ಅಥವಾ ಬೇರೆ ಯಾರಿಗೆ ಕೊಟ್ಟರೂ ಹೊಳಲ್ಕೆರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಕಳೆದ ಲೋಕಸಭೆ ಚುನಾವಣೆ ವೇಳೆ ಎ.ನಾರಾಯಣಸ್ವಾಮಿ ಅವರನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಪಕ್ಷ ಸೂಚನೆ ಕೊಟ್ಟಿತ್ತು. 2018ರ ವಿಧಾನಸಭೆ ಚುನಾವಣೆಯಲ್ಲಿ ಹೊಳಲ್ಕೆರೆ ಕ್ಷೇತ್ರದಲ್ಲಿ ನಮ್ಮ ತಂದೆ ಎಂ.ಚಂದ್ರಪ್ಪ 40 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಎ.ನಾರಾಯಣಸ್ವಾಮಿ ಅವರನ್ನೂ ಅಷ್ಟೇ ಅಷ್ಟೇ ಅಂತರದ ಮತಗಳನ್ನು ಕೊಡಿಸಿದ್ದೇವೆ ಎಂದು ತಿಳಿಸಿದರು.
ಒಟ್ಟಾರೆ, ಬಿಜೆಪಿಯಲ್ಲಿ ಹಾಲಿ ಸಂಸದರು ಇರುವುದರಿಂದ ಆಕಾಂಕ್ಷಿಗಳು ಬಹಿರಂಗವಾಗಿ ಎಲ್ಲಿಯೂ ಕಣಕ್ಕಿಳಿದಿರಲಿಲ್ಲ. ಈಗ ರಘುಚಂದನ್ ಸುದ್ದಿಗಾರರ ಜೊತೆ ಆಕಾಂಕ್ಷಿ ಎನ್ನುವುದನ್ನು ಬಹಿರಂಗಪಡಿಸಿದ್ದು, ಪಕ್ಷ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳಲಿದೆ. ಎನ್ನೂ ಯಾರೆಲ್ಲಾ ಆಕಾಂಕ್ಷಿಗಳು ಮುಂದೆ ಬರುತ್ತಾರೆ ಎನ್ನುವುದನ್ನು ಇನ್ನೂ ಕೆಲ ದಿನಗಳ ಕಾಲ ಕಾದು ನೋಡಬೇಕಾಗಿದೆ.