ಮುಖ್ಯ ಸುದ್ದಿ
ವದ್ದಿಕೆರೆ ಸಿದ್ದಪ್ಪನ ದೇಗುಲದ ಹುಂಡಿ ಎಣಿಕೆ | ದಾಖಲೆ ಪ್ರಮಾಣದ ಹಣ ಸಂಗ್ರಹ
ಚಿತ್ರದುರ್ಗ ನ್ಯೂಸ್.ಕಾಂ: ಬಯಲು ಸೀಮೆ ಭಕ್ತರ ಆರಾಧ್ಯ ದೈವ ವದ್ದಿಕೆರೆ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಬುಧವಾರ ನಡೆದಿದ್ದಿ, ದಾಖಲೆ ಪ್ರಮಾಣದಲ್ಲಿ 1.24 ಕೋಟಿ ರೂ. ಹಣ ಸಂಗ್ರಹವಾಗಿರುವುದು ಎಣಿಕೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ: ಡಿಸಿ ದಿವ್ಯಪ್ರಭು ಹೇಳಿದ ಶಿವ-ಪಾರ್ವತಿ ಕಥೆಯ ತಾತ್ಪರ್ಯ ಏನು ಗೊತ್ತಾ..?
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿ ವ್ಯಾಪ್ತಿಯ ಸರ್ಕಾರದ ಮುಜುರಾಯಿ ಇಲಾಖೆಯ ‘ಎ’ ಗ್ರೇಡ್ ವ್ಯಾಪ್ತಿಯಲ್ಲಿರುವ ವದ್ದಿಕೆರೆ ಸಿದ್ದೇಶ್ವರ ಸ್ವಾಮಿ ಯಾನೆ ಕಾಲಭೈರವೇಶ್ವರ ಸ್ವಾಮಿ ಹುಂಡಿಯನ್ನು ದೇವಸ್ಥಾನದ ಅಧಿಕಾರಿಗಳು, ಗ್ರಾಮಸ್ಥರು, ಉಪವಿಭಾಗಾಧಿಕಾರಿ ಕಾರ್ತಿಕ್, ತಹಶೀಲ್ದಾರ್ ರಾಜೇಶ್‍ಕುಮಾರ್ ಮಾರ್ಗದರ್ಶನದಲ್ಲಿ ಹುಂಡಿಗಳ ಎಣಿಕೆ ಕಾರ್ಯ ನಡೆಯಿತು.
ಈ ವೇಳೆ ಮೊದಲ ಬಾರಿಗೆ ಹುಂಡಿಯಲ್ಲಿ 1,24,67,800 ರೂ. ಕಾಣಿಕೆ ಹಣ ಸಂಗ್ರವಗಾಗಿದೆ. ಆದರೆ, ಪ್ರತಿ 6 ತಿಂಗಳಿಗೊಮ್ಮೆ ಹುಂಡಿ ಎಣಿಕೆ ನಡೆಯುತ್ತಿತ್ತು. ಈ ವರ್ಷ ಒಂದು ವರ್ಷದ ನಂತರ ಎಣಿಕೆಯಾಗಿರುವ ಕಾರಣ ಇಷ್ಟು ಮೊತ್ತದ ಹಣ ಸಂಗ್ರಹವಾಗಿದೆ ಎನ್ನಲಾಗಿದೆ.
ಹುಂಡಿ ಎಣಿಕೆ ವೇಳೆ ಭಕ್ತರು ಹರಕೆ ರೂಪದಲ್ಲಿ ಸಲ್ಲಿಸಿರುವ ಬಂಗಾರ ಮತ್ತು ಬೆಳ್ಳಿ ಆಭರಣಗಳು ಕೂಡಾ ಪತ್ತೆಯಾಗಿವೆ. ಹುಂಡಿ ಎಣಿಕೆ ವೇಳೆ ಸಂಗ್ರಹವಾದ ಹಣವನ್ನು ದೇವಸ್ಥಾನದ ಹೆಸರಿನಲ್ಲಿ ತೆರೆದಿರುವ ಉಳಿತಾಯ ಕೆನರಾ ಬ್ಯಾಂಕ್ ಐಮಂಗಲ ಶಾಖೆ ಹಾಗೂ ಪ್ರಗತಿ ಕೃಷ್ಣ ಬ್ಯಾಂಕ್ ಯರಬಳ್ಳಿ ಶಾಖೆಗಳಿಗೆ ಸಮನಾಗಿ ಜಮೆ ಮಾಡಲಾಗಿದೆ.