ಮುಖ್ಯ ಸುದ್ದಿ
ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್ ವಿಶೇಷ ಸಂದರ್ಶನ | ಗಣೇಶೋತ್ಸವದ ಸಿದ್ಧತೆಗಳನ್ನು ತಿಳಿಯಲು ಈ ಸಂದರ್ಶನ ಓದಿ..
ಚಿತ್ರದುರ್ಗ ನ್ಯೂಸ್.ಕಾಂ
ಚಿತ್ರದುರ್ಗದ ಧ್ವನಿಯಾಗಿ ಹೊರಹೊಮ್ಮುತ್ತಿರುವ ಚಿತ್ರದುರ್ಗ ನ್ಯೂಸ್.ಕಾಂ ಹೊಸ ಪ್ರಯತ್ನಗಳಿಗೆ ತೆರೆದುಕೊಳ್ಳುತ್ತಿದ್ದು, ಈ ಪ್ರಯತ್ನದ ಭಾಗವಾಗಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿರುವ ಹಿಂದೂ ಮಹಾಗಣಪತಿ ಉತ್ಸವ ಸಮಿತಿ-2023ರ ಅಧ್ಯಕ್ಷರಾಗಿ ನಿಯುಕ್ತಿ ಆಗಿರುವ ಜಿ.ಎಂ.ಸುರೇಶ್ ಅವರ ಪುಟ್ಟ ಸಂದರ್ಶನ ನಡೆಸಿದೆ. ಸಂದರ್ಶನದ ಪೂರ್ಣ ವಿವರಗಳು ಇಲ್ಲಿವೆ.
*******
ವಿಶ್ವಹಿಂದೂ ಪರಿಷತ್, ಬಜರಂಗದಳ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ನಡೆಯುವ ಹಿಂದೂ ಮಹಾಗಣಪತಿ ಉತ್ಸವ ದೊಡ್ಡ ಹೆಸರು ಮಾಡಿದೆ. ಈ ಉತ್ಸವಕ್ಕೆ ಪ್ರತಿ ವರ್ಷ ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಈ ವರ್ಷದ ಅಧ್ಯಕ್ಷರಾಗಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಜಿ.ಎಂ.ಸುರೇಶ್ ಆಯ್ಕೆಯಾಗಿದ್ದಾರೆ. ಹೊಳಲ್ಕೆರೆ ತಾಲೂಕಿನ ಗುಂಡೇರಿ ಗ್ರಾಮದ ಜಿ. ಮಾದಪ್ಪ ರತ್ನಮ್ಮ ದಂಪತಿಗಳ ಪುತ್ರ ಜಿ.ಎಂ.ಸುರೇಶ್. 1980ರಲ್ಲಿ ಭದ್ರಾವತಿಯಲ್ಲಿ ಪಿಯುಸಿ ಓದುವಾಗ ಅಲ್ಲಿ ಉಪನ್ಯಾಸಕರಾಗಿದ್ದ ಕೇಶವಮೂರ್ತಿ ಅಯ್ಯಂಗಾರ್ ಮೂಲಕ ಎಬಿವಿಪಿ ಸಂಪರ್ಕಕ್ಕೆ ಬಂದ ಸುರೇಶ್ ಕಳೆದ ನಾಲ್ಕು ದಶಕಗಳಿಂದ ಸಂಘ ಪರಿವಾರದಲ್ಲಿ ಕೆಲಸ ಮಾಡಿಕೊಂಡು ಅನೇಕ ಜವಾಬ್ದಾರಿ ನಿಭಾಯಿಸಿದ್ದಾರೆ.
ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷರಾಗಿದ್ದಕ್ಕೆ ಏನು ಹೇಳುತ್ತೀರಿ..?
ಭದ್ರಾವತಿಯಂತೆ ಚಿತ್ರದುರ್ಗದಲ್ಲೂ ದೊಡ್ಡ ಗಣೇಶೋತ್ಸವ ಆಗಬೇಕೆಂಬ ಮಹದಾಸೆ ಇತ್ತು. ಅದು ಸಾಕಾರಗೊಂಡಿದೆ. ಭದ್ರಾವತಿಯಲ್ಲಿ ಸಾವರ್ಕರ್ ಜನ್ಮಶತಾಬ್ದಿ ಮಾಡಿದ್ದೆ. ಅವರ ಪ್ರೇರಣೆಯೇ ನಾನು ಈ ಮಟ್ಟಕ್ಕೆ ಬೆಳೆಯಲು ಸ್ಪೂರ್ತಿಯಾಗಿದೆ. ಹಿಂದೂ ಮಹಾಗಣಪತಿ ಶುರು ಮಾಡಿದ್ದು ಕೂಡಾ ಸಾವರ್ಕರ್.
ಹಿಂದೂ ಮಹಾಗಣಪತಿ ಉತ್ಸವದ ಸಿದ್ಧತೆ ಹೇಗಿದೆ..?
ಪ್ರತಿ ವರ್ಷದ ಅನುಭವದ ಆಧಾರದಲ್ಲಿ ಮತ್ತಷ್ಟು ಚೆನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಆರಂಭದಲ್ಲಿ ನಮ್ಮ ಗಮನ ಶೋಭಾಯಾತ್ರೆ ಕಡೆಗೆ ಇತ್ತು. ಆನಂತರ ಪ್ರತಿ ದಿನವೂ ಒಳ್ಳೆಯ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ವಿಚಾರಧಾರೆಗಳ ಕಾರ್ಯಕ್ರಮ, ಭಾಷಣಗಳು ಆರಂಭವಾದವು. ಶಾಸ್ತ್ರೋಕ್ತವಾಗಿ ವಿಶೇಷ ಪೂಜೆ ಆರಂಭಿಸಿದೆವು. ಮೈಸೂರು ದಸರಾದಂತೆ ಚಿತ್ರದುರ್ಗ ನಗರದ ಅಲಂಕಾರ ಲೈಟಿಂಗ್ಸ್ ಹಾಕಿಸುವ ಕೆಲಸ ಆಗುತ್ತಿದೆ. ಈಗ ಅನುಭವ ಬಂದಿದೆ. ಪೆಂಡಾಲ್, ಅಲಂಕಾರ ಎಲ್ಲವೂ ಚೆನ್ನಾಗಿ ಆಗುತ್ತಿದೆ. ದೇಣಿಗೆ ಕೊಡುವವರು ಅವರಾಗಿಯೇ ಕೊಡುತ್ತಾರೆ. ಗಣಪತಿಯೇ ಈ ಕಾರ್ಯಕ್ರಮ ನಡೆಸಿಕೊಂಡು ಹೋಗುತ್ತಿದ್ದಾರೆ. ಸಾಕಷ್ಟು ಜನ ಹರಕೆ ಮಾಡಿಕೊಂಡು ಮುಂದಿನ ವರ್ಷ ತೀರಿಸುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿಯ ಆಗಮನಕ್ಕೆ ಭರ್ಜರಿ ಸಿದ್ಧತೆ | ಪೆಂಡಾಲ್ ಅಲಂಕಾರವೇ ಕೌತುಕ
ಹಿಂದೂ ಮಹಾಗಣಪತಿ ಉತ್ಸವಕ್ಕೆ ಎಷ್ಟು ದಿನ ತಯಾರಿ ಮಾಡಿಕೊಳ್ಳುತ್ತೀರಿ..?
ಒಂದೂವರೆ ತಿಂಗಳ ಮೊದಲೇ ಸಿದ್ಧತೆ ಆರಂಭವಾಗಿರುತ್ತದೆ. ಪೆಂಡಾಲ್, ಜಾಗದ ಸ್ವಚ್ಛತೆ, ಅಲಂಕಾರ, ಗಣಪತಿ ತಯಾರಿಗೆ ಹೇಳುವುದು ಹೀಗೆ ಬೇರೆ ಬೇರೆ ಕೆಲಸಗಳು ಮೊದಲೇ ಆರಂಭವಾಗಿರುತ್ತವೆ.
ಈ ವರ್ಷದ ಗಣೇಶೋತ್ಸವದ ಪರಿಕಲ್ಪನೆ ಏನು..?
ಕಾರ್ಯಕ್ರಮ ನಡೆಯುವ ವೇದಿಕೆಗೆ ವಿಶ್ವಹಿಂದೂ ಪರಿಷತ್‍ನ ಹಿರಿಯರಾದ ಹಿರಿಯರಾದ ದಿ.ಜ.ರಾ.ರಾಮಮೂರ್ತಿ ಅವರ ಹೆಸರಿನಲ್ಲಿ ವೇದಿಕೆ ನಿರ್ಮಾಣವಾಗಲಿದೆ. ಈ ವರ್ಷ ಅರಮನೆಯ ದರ್ಬಾರ್ ಮಾದರಿಯಲ್ಲಿ ಗಣಪತಿ ಮಂಟಪ ಸಿದ್ಧವಾಗುತ್ತಿದೆ. ಎಲ್ಲದಕ್ಕೂ ಸಮಿತಿಗಳನ್ನು ಮಾಡಿದ್ದು, ಅವರು ಶ್ರದ್ಧೆಯಿಂದ ಮಾಡುತ್ತಾರೆ.
ಈ ಉತ್ಸವದ ಉದ್ದೇಶ ಏನು ?
ಇಡೀ ಹಿಂದೂ ಸಮಾಜ ಒಟ್ಟಾಗಿ ಶಕ್ತಿ ಪ್ರದರ್ಶನ ಮಾಡುವ ಅವಕಾಶವೇ ಇಲ್ಲ. ಜಾತಿ ಹೆಸರಿನಲ್ಲಿ ಸಮಾವೇಶ ಮಾಡಿದರೆ ಯಾರಿಗೂ ನೋವಾಗುವುದಿಲ್ಲ. ಆದರೆ, ಹಿಂದೂ ಎಂದು ಒಟ್ಟಾದಾಗ ಕೆಲವರಿಗೆ ಸಹಿಸಲು ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಇಡೀ ಸಮಾಜ ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದೇವೆ.
ಶೋಭಾಯಾತ್ರೆ ತುಂಬಾ ಶಾಂತಿಯುತವಾಗಿ ನಡೆಯುವುದು ನಮ್ಮ ವಿಶೇಷ. ಯಾಕೆಂದರೆ ನಮಗೆ ಸಮಾಜ ಸಂಘಟಿತವಾಗಿದೆ. ಎಲ್ಲ ಪಕ್ಷದವರೂ ನಮ್ಮ ಜೊತೆಗೆ ಸೇರುತ್ತಾರೆ. ಪಕ್ಷಾತೀತ ಉತ್ಸವವಾಗಿ ಗಣೇಶೋತ್ಸವ ನಡೆಯುತ್ತಿದೆ. ಬಾಲಗಂಗಾಧರನಾಥ ತಿಲಕರ ಉದ್ದೇಶ ಈಡೇರಿದಂತೆ ನಮ್ಮ ಉತ್ಸವ ನಡೆಯುತ್ತಿದೆ.
ಇಷ್ಟು ದೊಡ್ಡ ಗಣೇಶೋತ್ಸವದ ಸವಾಲುಗಳೇನು..?
ಆರಂಭದಲ್ಲಿ ಸವಾಲುಗಳಿದ್ದವು. ಆರ್ಥಿಕ ಮುಗ್ಗಟ್ಟಿತ್ತು. ಪೊಲೀಸರು ಶೋಭಾಯಾತ್ರೆ ಮಾರ್ಗ, ಗಣಪತಿಯ ಎತ್ತರ, ಹಾಡುಗಳು ಎಲ್ಲದಕ್ಕೂ ಕಿರಿಕಿರಿ ಇತ್ತು. ಆದರೆ, ಈಗ ಎಲ್ಲವೂ ಸರಿಯಾಗಿದೆ. ಸಂಘಟನೆಯ ಶಕ್ತಿ ಕಾರಣಕ್ಕೆ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಆದರೆ, ಈ ಸಂದರ್ಭ ಬಿಟ್ಟು ನಮ್ಮ ಕಾರ್ಯಕರ್ತರ ಮೇಲೆ ಬೇರೆ ಸಂದರ್ಭಗಳಲ್ಲಿ ಕೇಸು ಹಾಕುವ ಕೆಲಸ ಮಾಡುತ್ತಿದ್ದಾರೆ. ಧರ್ಮ, ದೇಶಕ್ಕಾಗಿ ಕೆಲಸ ಮಾಡಿದವರಿಗೆ ತೊಂದರೆ ಕೊಡುವುದು ಸರಿಯಲ್ಲ.
ಮಧ್ಯ ಕರ್ನಾಟಕದಲ್ಲಿ ಇಷ್ಟು ದೊಡ್ಡ ಉತ್ಸವ ಸಂಘಟನೆಯಾಗಿದ್ದೇಗೆ..?
ನಮ್ಮ ಪರಿಕಲ್ಪನೆ ಮೈಸೂರು ದಸರಾ ಮಾದರಿಯಲ್ಲಿ ಹಿಂದೂ ಮಹಾಗಣಪತಿ ನಡೆಯಬೇಕು ಎನ್ನುವುದಾಗಿತ್ತು. ಪೊಲೀಸರು ಜನ ಹೇಗೆ ಬರುತ್ತಾರೆ, ಎಲ್ಲಿ ವಾಹನ ನಿಲ್ಲಿಸುತ್ತಾರೆ, ಎಲ್ಲಿ ಊಟ ಮಾಡುತ್ತಾರೆ ಎನ್ನುವ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾರೆ. ಬೇರೆ ಕಾರ್ಯಕ್ರಮಗಳಿಗೆ ಅವರು ಸಾಕಷ್ಟು ತಯಾರಿ ಮಾಡಿಕೊಂಡರೂ ಯಡವಟ್ಟಾಗಿರುತ್ತದೆ. ಆದರೆ, ಈ ಕಾರ್ಯಕ್ರಮದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ.
ಗಣೇಶೋತ್ಸವದಿಂದ ಯುವಕರಿಗೆ ಏನು ಸಂದೇಶ ನೀಡುತ್ತೀರಿ..?
ಇದೊಂದು ಒಳ್ಳೆಯ ವಿಚಾರ. ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮದ ಮೂಲಕ ರಾಷ್ಟ್ರೀಯ ವಿಚಾರಧಾರೆಗಳನ್ನು ತಿಳಿಸುವ ಕೆಲಸವನ್ನು ಪ್ರತಿ ದಿನ ಸಂಜೆ ಮಾಡಲಾಗುತ್ತಿದೆ. ದೊಡ್ಡ ದೊಡ್ಡ ವಿಚಾರವಂತರನ್ನು ಕರೆಯಿಸಿ ಮಾತನಾಡಿಸುತ್ತೇವೆ. ಇದೆಲ್ಲವೂ ಯುವಕರಿಗಾಗಿಯೇ. ದೇಶದ ಇತಿಹಾಸ, ಸಾವರ್ಕರ್ ಯಾರು, ಸ್ವಾತಂತ್ರ್ಯ ಹೋರಾಟದ ವಿಚಾರಗಳು ಹೊಸ ಪೀಳಿಗೆಗೆ ಗೊತ್ತಾಗಬೇಕು.
ಹಿಂದೂ ಮಹಾಗಣಪತಿ ಉತ್ಸವದಿಂದ ಸಮಾಜಕ್ಕೆ ಲಾಭವೇನು..?
ಹಿಂದೂ ಸಮಾಜವನ್ನು ಒಟ್ಟು ಮಾಡುವ ಕೆಲಸ ಮಾಡುತ್ತಿದ್ದೇವೆ. ಜಾತಿಯ ಮನೋಭಾವನೆ ದೂರ ಮಾಡಿ ಸಮಾಜದಲ್ಲಿ ಸಾಮರಸ್ಯ ನೆಲೆಸುವಂತೆ ಮಾಡಲಾಗುತ್ತಿದೆ. ಚಿತ್ರದುರ್ಗದಲ್ಲಿ ದಲಿತ ಸಮಾಜದ ಸಹಕಾರದಿಂದಲೇ, ಅವರ ಪ್ರೀತಿಯಿಂದ ಈ ಮಟ್ಟಕ್ಕೆ ನಡೆಯುತ್ತಿದೆ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಇಲ್ಲಿ ಜಾತಿ ಘರ್ಷಣೆ, ಕೋಮು ಗಲಭೆಗಳು ನಡೆಯುವುದಿಲ್ಲ. ಎಲ್ಲ ಮಠಾಧೀಶರು ಭಾಗವಹಿಸುತ್ತಾರೆ. ಉತ್ತಮ ವಾತಾವರಣ ನೆಲೆಗೊಂಡಿದೆ.
ಇದರಿಂದ ಚಿತ್ರದುರ್ಗದ ಆರ್ಥಿಕತೆಗೆ ಬಲ ಸಿಗಲಿದೆಯೇ..?
ಲಕ್ಷಾಂತರ ಜನ ಶೋಭಾಯಾತ್ರೆಗೆ ಬರುವುದರಿಂದ ಇಲ್ಲಿನ ಹೋಟೆಲ್, ಲಾಡ್ಜ್ ಎಲ್ಲವೂ ಭರ್ತಿಯಾಗುತ್ತವೆ. ವರ್ತಕರು ನಮ್ಮ ಉತ್ಸವವನ್ನು ಪ್ರೀತಿ ಮಾಡುತ್ತಿದ್ದಾರೆ. ಇನ್ನೂ ಪ್ರತಿ ದಿನ ನಡೆಯುವ ಕಾರ್ಯಕ್ರಮಗಳು, ಗಣೇಶನ ಪೆಂಡಾಲ್ ನೊಡಲು ಸಾವಿರಾರು ಜನ ಬರುವುದರಿಂದ ಅಲ್ಲಿ ಸಾಕಷ್ಟು ವ್ಯಾಪಾರ ಆಗುತ್ತದೆ. ಕೋಟೆ, ಜೋಗಿಮಟ್ಟಿ, ನಾಯಕನಹಟ್ಟಿ ಇನ್ನಿತರೆ ಜಾಗಗಳಿಗೆ ಶೋಭಾಯಾತ್ರೆಗೆ ಬಂದವರು ಹೋಗಿ ಬರುತ್ತಾರೆ. ಇದರಿಂದ ಸಾಕಷ್ಟು ವ್ಯಾಪಾರ ಆಗುತ್ತದೆ. 15 ದಿನ ಜಾತ್ರೆಯಂತೆ ನಡಯುವುದರಿಂದ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಮುಂದಿನ ಮೂರ್ನಾಲ್ಕು ತಿಂಗಳಿಗೆ ಆಗುವಷ್ಟು ವ್ಯಾಪಾರ ಆಗುತ್ತದೆ.