ಮುಖ್ಯ ಸುದ್ದಿ
ರೇಣುಕಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿ | ರಂಭಾಪುರಿ ಶ್ರೀ ಒತ್ತಾಯ
CHITRADURGA NEWS | 16 JUNE 2024
ಚಿತ್ರದುರ್ಗ: ಬರ್ಭರವಾಗಿ ಕೊಲೆಯಾಗಿರುವ ಕೆ.ಎಸ್.ರೇಣುಕಸ್ವಾಮಿ ಪತ್ನಿ ಸಹನಾ ಅವರಿಗೆ ಸರ್ಕಾರಿ ಉದ್ಯೋಗ ನೀಡಿ ಸಹಾಯ ಮಾಡಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಒತ್ತಾಯಿಸಿದ್ದಾರೆ.
ಭಾನುವಾರ ಚಿತ್ರದುರ್ಗದಲ್ಲಿರುವ ರೇಣುಕಸ್ವಾಮಿ ಮನೆಗೆ ಭೇಟಿ ನೀಡಿದ ಶ್ರೀಗಳು ಕುಟುಂಬಕ್ಕೆ ಸಾಂತ್ವಾನ ಹೇಳಿ, ಪಾದಪೂಜೆ ನಂತರ ಸರ್ಕಾರದಿಂದ ಹೆಚ್ಚಿನ ಸಹಕಾರ ನೀಡುವಂತೆ ಒತ್ತಾಯ ಮಾಡಿದರು.
ಇದನ್ನೂ ಓದಿ: ನನ್ನಿಂದ ಹೀಗೆ ಆಗೊಯ್ತಲ್ಲ…ಕಣ್ಣೀರಿಟ್ಟ ಅನು ಕುಮಾರ್ | ತಡರಾತ್ರಿ ಆರೋಪಿ ತಂದೆ ಅಂತ್ಯಕ್ರಿಯೆ
ರೇಣುಕಸ್ವಾಮಿ ಕೊಲೆಯಿಂದಾಗಿ ಎಲ್ಲೆಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ. ಆದರೆ, ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಧಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ತನಿಖಾ ವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ. ಕೊಲೆಯ ವಿಚಾರದ ತನಿಖೆ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದರು.
ಈ ತನಿಖೆಯಲ್ಲಿ ಯಾವುದೇ ರಾಜಕಾರಣಿಗಳು ಹಸ್ತಕ್ಷೇಪ ಮಾಡದೇ ನಿಸ್ಪಕ್ಷಪಾತವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ತಪ್ಪಿತಸ್ಥರು ಎಷ್ಟೇ ದೊಡ್ಡವರಾದರೂ ಅವರಿಗೆ ಕಾನೂನಿನ ಅಡಿ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಬೆಳೆ ಕಟಾವು ನಿರ್ಲಕ್ಷ್ಯ ತೋರಿದರೆ ಕ್ರಮ | ಅಧಿಕಾರಿಗಳಿಗೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಕೆ
ರೇಣುಕಸ್ವಾಮಿ ಅವರ ಕೊಲೆ ಅಮಾನವೀಯ ಘಟನೆ. ಬೇರೆಲ್ಲಾ ಕೊಲೆಗಳಿಗಿಂತ ಇದು ಅತ್ಯಂತ ಭೀಕರವಾಗಿದೆ. ಮನುಷ್ಯತ್ವವೇ ಇಲ್ಲದಂತೆ ನಿಕೃಷ್ಟವಾಗಿ ಬರ್ಭರವಾಗಿ ನಡೆದಿರುವ ಈ ಹತ್ಯೆಯನ್ನು ಎಲ್ಲರೂ ಖಂಡಿಸಬೇಕು ಎಂದರು.
ಸಿನಿಮೀಯ ರೀತಿಯಲ್ಲಿ ಒಂದು ಜೀವವನ್ನು ತೆಗೆಯುವಾಗ, ನೀಚ ಸ್ವಭಾವದಿಂದ ವರ್ತನೆ ಮಾಡಿರುವುದು ಮಾನವ ಕುಲಕೋಟಿ ತಲೆ ತಗ್ಗಿಸುವ ವಿಚಾರ. ಈ ಪ್ರಕರಣದಲ್ಲಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: ಕಲಾವಿದರಿಗೆ ಗುರುತಿನ ಚೀಟಿ ನೀಡಲು ಅರ್ಜಿ ಆಹ್ವಾನ
ಯಾವುದೇ ಪಕ್ಷದ ಸರ್ಕಾರ, ರಾಜಕಾರಣಿಗಳು ಈ ಘಟನೆಯನ್ನು ನಿರ್ಧಾಕ್ಷಿಣ್ಯವಾಗಿ ಖಂಡಿಸಿ ಶಿಕ್ಷೆ ಕೊಡಬೇಕು ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ರೇಣುಕಸ್ವಾಮಿ ತಂದೆ ಕಾಶಿನಾಥ ಶಿವನಗೌಡ್ರ, ತಾಯಿ ರತ್ನಪ್ರಭ, ಹಾಗೂ ಪತ್ನಿ ಸಹನಾ ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ. ಸರ್ಕಾರ ಅವರಿಗೆ ಹೆಚ್ಚಿನ ರೀತಿಯಲ್ಲಿ ಸಹಾಯ, ಸಹಕಾರ ನೀಡಿ, ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದು ಶ್ರೀಗಳು ತಿಳಿಸಿದರು.
ಇದನ್ನೂ ಓದಿ: ಫಿಜಿಯೋಥೆರಪಿಸ್ಟ್ ನೇಮಕಾತಿ | ಅರ್ಜಿ ಅಹ್ವಾನ
ಚಿತ್ರದುರ್ಗದಲ್ಲಿ ಎಲ್ಲ ವರ್ಗದ ಸಮಾಜದವರು, ಮಾಧ್ಯಮದವರು ಈ ಘಟನೆಯನ್ನು ಖಂಡಿಸಿರುವುದು ಮನ ತುಂಬಿ ಬಂದಿದೆ. ಇತ್ತೀಚಿನ ಸರ್ಕಾರದಲ್ಲಿ, ಹುಬ್ಬಳ್ಳಿಯಲ್ಲಿ ಅಂಜಲಿ ಹಿರೇಮಠ, ಸ್ನೇಹಾ ಸೇರಿದಂತೆ ಅನೇಕ ಅಮಾಯಕ ಜೀವಗಳು ಬಲಿಯಾಗಿರುವುದು ದುರಾದೃಷ್ಟಕ ಎಂದರು.
ಕುಟುಂಬ ವರ್ಗ ಘಟನೆಯನ್ನು ಮರೆತು, ಸಮಾಜದೊಂದಿಗೆ ಬೆರೆತು, ಜೀವನದಲ್ಲಿ ಮುನ್ನಡೆಯಬೇಕು ಎಂದು ಆಶಿಸಿದರು. ಅಗಲಿದ ರೇಣುಕಸ್ವಾಮಿ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.