ಕ್ರೈಂ ಸುದ್ದಿ
ಅಂತರ್ ರಾಜ್ಯ ಶ್ರೀಗಂಧ ಕಳ್ಳರ ಗ್ಯಾಂಗ್ ಅರೆಸ್ಟ್ | ಚಿತ್ರಹಳ್ಳಿ ಪೊಲೀಸರ ಕಾರ್ಯಾಚರಣೆ | ಆನೆದಂತ, ರಕ್ತಚಂದನ, ವನ್ಯಸಂಪತ್ತು ಜಪ್ತಿ
ಚಿತ್ರದುರ್ಗ ನ್ಯೂಸ್.ಕಾಂ: ಹೊಳಲ್ಕೆರೆ ಹಾಗೂ ಚಿತ್ರಹಳ್ಳಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಂತರ್ ರಾಜ್ಯ ಶ್ರೀಗಂಧ ಕಳ್ಳರ ಗ್ಯಾಂಗ್ ಬಲೆಗೆ ಬಿದ್ದಿದೆ.
ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೊಳಾಳು ಬಳಿ ನ.10ರಂದು ಬೆಳಗಿನ ಜಾವ ಗಸ್ತಿನಲ್ಲಿದ್ದ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯ ಪಿಎಸ್‍ಐ ಕಾಂತರಾಜು ನೇತೃತ್ವದ ತಂಡ ಶ್ರೀಗಂಧ ಕಳ್ಳತನ ಮಾಡುತ್ತಿದ್ದ 6 ಜನರನ್ನು ಬಂಧಿಸಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರ ಕುಮಾರ್ ಮೀನಾ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಬಂಧಿತ 6 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಿತ್ರಹಳ್ಳಿ ಪೊಲೀಸರ ಭರ್ಜರಿ ಭೇಟೆ
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಮೂಲದ ಚಂದ್ರಶೇಖರ ಅಲಿಯಾಸ್ ಬೋಟಿ ಚಂದ್ರ ಪ್ರಕರಣದ ಮೊದಲ ಆರೋಪಿ. ಆಂಧ್ರಪ್ರದೇಶದ ಕೊಪ್ಪಂನ ಖಲೀಲ್, ಮಾಹಿತಿದಾರರಾದ ಹೊಸದುರ್ಗ ತಾಲೂಕಿನ ಗೂಳಿಹಟ್ಟಿಯ ಟಿ.ಪ್ರಶಾಂತ್ ರಂಗಸ್ವಾಮಿ, ಕಡೂರು ತಾಲೂಕು ಆಲದಹಳ್ಳಿಯ ಪುನೀತ್ ನಾಯ್ಕ್ ಹಾಗೂ ರಾಮಾನಾಯ್ಕ್ ಬಂಧಿತರು.
ಬಂಧಿತರಿಂದ 91 ಕೆಜಿ 300 ಗ್ರಾಂ ಶ್ರೀಗಂಧ, 15 ಕೆಜಿ 500 ಗ್ರಾಂ ರಕ್ತಚಂದನ, 25 ಕೆ.ಜಿ 400 ಗ್ರಾಂ ತೂಕದ 2 ಆನೆ ದಂತಗಳು, 34 ಕೆ.ಜಿ.100 ಗ್ರಾಂ ತೂಕದ ಪಂಗೋಲಿಯನ್ ಚಿಪ್ಪುಗಳು, 1,10 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ 2 ಕಾರು, 9 ಮೊಬೈಲ್, ಇತರೆ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೊದಲನೆ ಆರೋಪಿ ಚಂದ್ರಶೇಖರ್ ಕಟಾವು ಮಾಡಿ ತಂದ ಶ್ರೀಗಂಧವನ್ನು ಖರೀಧಿಸುತ್ತಿದ್ದ. ಹೊಸದುರ್ಗ ತಾಲೂಕಿನ ಪ್ರಶಾಂತ್ ಮತ್ತು ರಂಗಸ್ವಾಮಿ ಜಿಲ್ಲೆಯ ಯಾವ ಭಾಗದಲ್ಲಿ ಶ್ರೀಗಂಧ ಬೆಳೆಯಲಾಗಿದೆ ಎನ್ನುವ ಮಾಹಿತಿ ನೀಡುತ್ತಿದ್ದರು. ಆಂಧ್ರದ ಖಲೀಲ್, ಪುನೀತ್ ನಾಯ್ಕ್ ಹಾಗೂ ರಾಮಾನಾಯ್ಕ್ ಸಹಾಯದಿಂದ ಕಟಾವು ಮಾಡುತ್ತಿದ್ದ ಎನ್ನುವ ಅಂಶಗಳು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿವೆ.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರಾಗಿದ್ದ ಬಿ.ಎಸ್.ರೇಖಾ ವರ್ಗಾವಣೆ
ವಿವಿಧ ಠಾಣೆಗಳ 7 ಪ್ರಕರಣಗಳಲ್ಲಿ ಬೇಕಾಗಿದ್ದವರು:
ಬಂಧಿತ ಆರೋಪಿಗಳ ವಿರುದ್ಧ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ 166/2023 ಕಲಂ 399, 402 ಐಪಿಸಿ ಅಡಿಯಲ್ಲಿ ದೂರು ದಾಖಲಿಸಿದ್ದು, ಆರೋಪಿತರು ಗ್ಯಾಂಗ್ ಕಟ್ಟಿಕೊಂಡು ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮದ ದಿನೇಶ್, ಸಾಸಲು ಗ್ರಾಮದ ಪ್ರಶಾಂತ್‍ಕುಮಾರ್, ಚಿಕ್ಕಂದವಾಡಿ ಗ್ರಾಮದ ಸುರೇಶ್, ಹೊಳಲ್ಕೆರೆಯ ಆನಂದಪ್ಪ, ಎನ್.ಜಿ.ಹಳ್ಳಿಯ ದ್ಯಾಮಪ್ಪ, ಶ್ರೀರಾಂಪುರದ ವಿನಯ್, ಐಮಂಗಲ ಠಾಣೆ ವ್ಯಾಪ್ತಿಯ ಗೋಗುದ್ದು ಗ್ರಾಮದ ನಾಗರಾಜ ಎಂಬುವವರ ತೋಟಗಳಲ್ಲಿ ಗಂಧದ ಮರಗಳನ್ನು ಕಳ್ಳತನ ಮಾಡಿದ್ದಾರೆ.
ಸದರಿ ಆರೋಪಿಗಳು, ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯ 2, ರಾಂಪುರ ಠಾಣೆಯ 1, ಐಮಂಗಲ ಠಾಣೆಯ 2 ಪ್ರಕರಣಗಳು ಸೇರಿದಂತೆ ಒಟ್ಟು 7 ಪ್ರಕರಣಗಳಲ್ಲಿ ಬೇಕಾಗಿದ್ದರು.
ಶ್ರೀಗಂಧದ ಜೊತೆ ರಕ್ತಚಂದನ, ಆನೆ ದಂತ, ಚಿಪ್ಪುಗಳು:
ಶ್ರೀಗಂಧದ ಜೊತೆಗೆ ಬಂಧಿತರು ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದ ಹೊರವಲಯದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ರಕ್ತಚಂದನ, ಆನೆದಂತ, ಪೆಂಗೋಲಿಯನ್ ಚಿಪ್ಪುಗಳನ್ನು ಜಪ್ತಿ ಮಾಡಲಾಗಿದೆ. ಇದಕ್ಕಾಗಿಯೇ ಚಂದ್ರಶೇಖರ್ ಹಿರಿಯೂರು ಮತ್ತು ಹೊಸದುರ್ಗದಲ್ಲಿ ಎರಡು ಬಾಡಿಗೆ ಮನೆ ಮಾಡಿಕೊಂಡಿದ್ದ ಎಂದು ಎಸ್ಪಿ ಹೇಳಿದ್ದಾರೆ.
ಚಿತ್ರಹಳ್ಳಿ ಗೇಟ್ ಠಾಣೆಯ ಪಿಎಸ್‍ಐ ಕಾಂತರಾಜ್ ತಮ್ಮ ಸಿಬ್ಬಂದಿಯೊಂದಿಗೆ ಹೊಳಲ್ಕೆರೆ ತಾಲೂಕು ಕೊಳಾಳು ಬಳಿ ನ.10ರಂದು ಬೆಳಗಿನ ಜಾವ ಗಸ್ತಿನಲ್ಲಿದ್ದಾಗ ಅನುಮಾನಾಸ್ಪದವಾಗಿ ನಿಂತಿದ್ದ ಮಾರುತಿ ಇಕೋ ವಾಹನ ಪರಿಶೀಲಿಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಶ್ರೀಗಂಧ ಬೆಳೆಗಾರರಿಗೆ ತಲೆನೋವಾಗಿದ್ದ ಗ್ಯಾಂಗ್:
ಜಿಲ್ಲೆಯಲ್ಲಿ ಆಗಿಂದ್ದಾಗ್ಗೆ ಶ್ರೀಗಂಧ ಬೆಳೆಗಾರರು ತೊಟದಲ್ಲಿ ಬೆಳೆದಿರುವ ಮರಗಳಿಗೆ ರಕ್ಷಣೆ ಕೊಡಿ ಎಂದು ಪೊಲೀಸರು, ಅರಣ್ಯ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದರು. ಕಳ್ಳತನ ನಡೆದಾಗೆಲ್ಲಾ ಬಂದು ದೂರು ನೀಡುತ್ತಿದ್ದರು. ಆದರೆ, ಕಿಲಾಡಿ ಗ್ಯಾಂಗ್ ಎಲ್ಲಿಯೂ ಸಿಕ್ಕಿರಲಿಲ್ಲ.
ಶ್ರೀಗಂಧ ಬೆಳೆಗಾರ ಉಪ್ಪರಿಗೇನಹಳ್ಳಿಯ ಕೆ.ಸಿ.ದಿನೇಶ್ ಅವರ ತೋಟದಲ್ಲಿ ಅಕ್ಟೊಬರ್ 22 ಮತ್ತು ನ.4 ರಂದು ರಾತ್ರಿ ಸಮಯದಲ್ಲಿ ಶ್ರೀಗಂಧದ ಮರಗಳ ಕಳ್ಳತನ ನಡೆದಿರುವ ಬಗ್ಗೆ ದೂರು ದಾಖಲಿಸಿದ್ದರು.
ಇದರೊಟ್ಟಿಗೆ ರೈತ ಸಂಘಟನೆಗಳು ಹಾಗೂ ಶ್ರೀಗಂಧ ಬೆಳೆಗಾರರ ಸಂಘದ ಪದಾಧಿಕಾರಿಗಳು ಪೊಲೀಸ್ ವರಿಷ್ಠಾಧಿಕಾರಿ ಭೇಟಿ ಮಾಡಿ ತಮ್ಮ ಸಂಕಷ್ಟ ಹೇಳಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಎಎಸ್‍ಪಿ ಕುಮಾರಸ್ವಾಮಿ, ಡಿವೈಎಸ್‍ಪಿ ಅನಿಲ್‍ಕುಮಾರ್, ಹೊಳಲ್ಕೆರೆ ಸಿಪಿಐ ಎಂ.ಬಿ.ಚಿಕ್ಕಣ್ಣನವರಿಗೆ ರಾತ್ರಿ ಗಸ್ತು ಹೆಚ್ಚಿಸುವಂತೆ ಎಸ್ಪಿ ಧಮೇಂದ್ರಕುಮಾರ್ ಮೀನಾ ಸೂಚನೆ ನೀಡಿದ್ದರು.
ಇದನ್ನೂ ಓದಿ: ದೀಪಾವಳಿಗೆ ಜಿಲ್ಲಾಧಿಕಾರಿ ಮಹತ್ವದ ಸೂಚನೆ
ಸದರಿ ಶ್ರೀಗಂಧ ಕಳ್ಳರ ಅಂದರ್ ಕಾರ್ಯಾಚರಣೆಯಲ್ಲಿ ಹೊಳಲ್ಕೆರೆ ಸಿಪಿಐ ಎಂ.ಬಿ.ಚಿಕ್ಕಣ್ಣನವರ್, ಚಿತ್ರಹಳ್ಳಿ ಠಾಣೆ ಪಿಎಸ್‍ಐ ಕಾಂತರಾಜು, ಪಿಎಸ್‍ಐ ಸುರೇಶ್, ಸಿಬ್ಬಂದಿಗಳಾದ ರುದ್ರೇಶ್, ರಾಜಶೇಖರ್, ಆರ್.ಡಿ.ರಮೇಶ್‍ಕುಮಾರ್, ನಿರಂಜನ, ರಮೇಶ, ಅವಿನಾಶ, ಮಂಜುನಾಥ, ಶ್ರೀಧರ, ಶೌರ್ಯ, ಯಶೋಧರ, ಅಹಮ್ಮದ್ ನದಾಫ್, ಶೋಭಾ ಹಾಗೂ ಸುಲೋಚನ ಭಾಗವಹಿಸಿದ್ದರು.
ಎಲ್ಲ ಸಿಬ್ಬಂದಿಗಳ ಪತ್ತೆ ಕಾರ್ಯವನ್ನು ಎಸ್ಪಿ ಧಮೇಂದ್ರಕುಮಾರ್ ಮೀನಾ ಶ್ಲಾಘಿಸಿ, ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಿದ್ದಾರೆ.