ಮುಖ್ಯ ಸುದ್ದಿ
ಫೇಕ್ ಗಿರಾಕಿಗಳಿಗೆ ದೇವ್ರು ಒಳ್ಳೆದು ಮಾಡ್ಲಿ | ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅಸಮಾಧಾನ | ಚಿತ್ರದುರ್ಗ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಅಚ್ಚರಿ ಅಭ್ಯರ್ಥಿ ಎಂಟ್ರಿ !
CHITRADURGA NEWS | 13 MARCH 2024
ಚಿತ್ರದುರ್ಗ: ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಬಿಸಿಲಿಗೆ ಸ್ಪರ್ಧೆಯೊಡ್ಡಿದ್ದಂತೆ ಏರುತ್ತಿದೆ. ಕಣದಲ್ಲಿ ಗೆಲುವಿಗೆ ತಂತ್ರ ರೂಪಿಸುವ ನಾಯಕರು ಇದೀಗ ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ವರಿಷ್ಠರು ಸುಲಭ ಅಂದು ಕೊಂಡಿದ್ದ ಕ್ಷೇತ್ರಗಳು ಕ್ಷಣದಿಂದ ಕ್ಷಣಕ್ಕೆ ಜಟಿಲ ಸ್ಥಿತಿಗೆ ತಿರುಗುತ್ತಿವೆ. ಕಾಂಗ್ರೆಸ್, ಬಿಜೆಪಿ ಈಗಾಗಲೇ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಬಿಜೆಪಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ರಾಜ್ಯದ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರಿಲ್ಲ. ಆದರೆ ಕಾಂಗ್ರೆಸ್ ಪಟ್ಟಿಯಲ್ಲಿ 7 ಕ್ಷೇತ್ರದ ಹೆಸರು ಘೋಷಣೆಯಾಗಿವೆ. ಈ ನಡುವೆ ಕಾಂಗ್ರೆಸ್‌ಗೆ ರಾಜ್ಯದ 9 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಅದರಲ್ಲಿ ‘ಕೈ’ ಕಗ್ಗಂಟು ನಂ.1 ಚಿತ್ರದುರ್ಗ ಎಂಬುದು ಕುತೂಹಲ.
ಕ್ಲಿಕ್ ಮಾಡಿ ಓದಿ: https://chitradurganews.com/victory-yatra-of-karataka-damanaka/
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ‘ಬಿ ಫಾರಂ’ ಜತೆ ನಾಮಪತ್ರ ಸಲ್ಲಿಕೆ ಮಾತ್ರ ಬಾಕಿ ಉಳಿದಿದೆ ಎಂಬ ಲೆಕ್ಕಾಚಾರದಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರಿದ್ದರು. ಆದರೆ ಕೊನೆ ಕ್ಷಣದಲ್ಲಿ ನಡೆದ ಬೆಳವಣಿಗೆಯಲ್ಲಿ ಟಿಕೆಟ್ ತಪ್ಪುವುದು ಖಚಿತವಾಗಿದೆ. ರಾಜ್ಯ ಸರ್ಕಾರ ಸಚಿವರ ಪುತ್ರ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎದುರು ಸೋಲು ಕಂಡಿದ್ದ ಬಿ.ಎನ್.ಚಂದ್ರಪ್ಪ ಈ ಬಾರಿ ಟಿಕೆಟ್ ಪಡೆಯಲು ಹೈಕಮಾಂಡ್ ಹಂತದಲ್ಲಿ ಇನ್ನಿಲ್ಲದ ಲಾಬಿ ನಡೆಸಿದ್ದರು. ಆದರೆ ಚಂದ್ರಪ್ಪ ವಿರುದ್ಧ ಇರುವ ನಕಲಿ ಜಾತಿ ಪ್ರಮಾಣ ಪತ್ರದ ಆರೋಪದಿಂದಾಗಿ ಹೈಕಮಾಂಡ್ ಟಿಕೆಟ್ ತಡೆಹಿಡಿದೆ ಎನ್ನಲಾಗಿದೆ.
ಕ್ಲಿಕ್ ಮಾಡಿ ಓದಿ: https://chitradurganews.com/rescheduling-of-charges-against-muruga-sharanru/
ಈ ಎಲ್ಲ ಬೆಳವಣಿಗೆ ಬಗ್ಗೆ ಅಸಮಾಧಾನ ಹೊರಹಾಕಿರುವ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ‘ಚಿತ್ರದುರ್ಗ ಕ್ಷೇತ್ರಕ್ಕೆ ಬಹುತೇಕ ನನ್ನ ಹೆಸರು ಅಂತಿಮವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅಧಿಕೃತ ಪಟ್ಟಿಯಲ್ಲಿ ಹೆಸರು ಇಲ್ಲವಾಗಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ನಾನು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ. ಯಾಕೆ ಹೋಲ್ಡ್ ಆಯಿತು ಎಂದು ವರಿಷ್ಠರನ್ನ ಕೇಳಲು ಹೋಗಿಲ್ಲ. ತಾಂತ್ರಿಕವಾಗಿ ತಡೆ ಹಿಡಿಯಲಾಗಿತ್ತು ಎಂಬ ಭಾವನೆ ನನ್ನದು’ ಎಂದಿದ್ದಾರೆ.
ಚಿತ್ರದುರ್ಗ ಟಿಕೆಟ್ ವಿಚಾರದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಆರೋಪದ ಹಿನ್ನೆಲೆಯಲ್ಲಿ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕಡೆಯವರು ಎಸ್‌ಪಿ ಅವರಿಗೆ ದೂರು ಕೊಟ್ಟಿದ್ದಾರೆ. ನನ್ನದು ಒರಿಜಿನಲ್, ಎಲ್ಲಾ ಫೇಕ್ ಮಾಡಿದ್ದಾರೆ. ಕೆಲ ಆಕಾಂಕ್ಷಿಗಳು ನನ್ನ ಜಾತಿ ಪ್ರಮಾಣ ಪತ್ರ ಫೇಕ್ ಮಾಡಿದ್ದಾರೆ. ನಕಲಿ ಪ್ರಮಾಣ ಪತ್ರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಸತತ ಹತ್ತು ವರ್ಷಗಳಿಂದ ತೇಜೋವಧೆ ಮಾಡುತ್ತಿದ್ದಾರೆ. ಆದರೆ ಚಂದ್ರಪ್ಪ ಏನು ಎಂದು ಮತದಾರನಿಗೆ ಗೊತ್ತಿದೆ. ಹೃದಯ ವೈಶಾಲ್ಯತೆಯಿಂದ ಚಿತ್ರದುರ್ಗ ಮತದಾರರು ಗೆಲ್ಲಿಸಿದ್ದರು. ಫೇಕ್ ಗಿರಾಕಿಗಳಿಗೆ ದೇವರ ಒಳ್ಳೆಯದು ಮಾಡಲಿ. ಟಿಕೆಟ್ ಕೇಳಲು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶವಿದೆ. ಆದರೆ ಇನ್ನೊಬ್ಬರನ್ನು ತೇಜೋವಧೆ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ವೇಳೆ ಟಿಕೆಟ್ ಕೈತಪ್ಪಿ ಸಚಿವರ ಪುತ್ರ, ಇಲ್ಲವೇ ಮತ್ತೊಬ್ಬರು ಅಖಾಡಕ್ಕೆ ಎಂಟ್ರಿಯಾದರೆ ಬಿ.ಎನ್.ಚಂದ್ರಪ್ಪ ಅವರ ನಡೆ ಏನೆಂಬುದು ಸದ್ಯದ ಕುತೂಹಲ.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಪರಿಚಯ: ಬಿ.ಎನ್.ಚಂದ್ರಪ್ಪ ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆಯರು. ಚಿಕ್ಕಮಗಳೂರಿನ ನಾಗಪ್ಪ ಮತ್ತು ಲಕ್ಷಮ್ಮ ದಂಪತಿಯ ಪುತ್ರ ಬಿ.ಎನ್.ಚಂದ್ರಪ್ಪ ಅಕ್ಟೋಬರ್ 1, 1955ರಲ್ಲಿ ಜನಿಸಿದರು. ಸಮಾಜ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
1986 ರಿಂದ 1991ರ ತನಕ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಬಳಿಕ ಮರು ಆಯ್ಕೆಗೊಂಡು ಉಪಾಧ್ಯಕ್ಷರು ಆದರು. 2001-2003 ಲಿಡ್ಕರ್ ಮಂಡಳಿಯ ಅಧ್ಯಕ್ಷರಾಗಿದ್ದರು. 2014-2019ರ ತನಕ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಆಗ ಹಲವಾರು ಸ್ಥಾಯಿ ಸಮಿತಿಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
2009ರ ಚುನಾವಣೆಯಲ್ಲಿ ಬಿಜೆಪಿಯ ಜನಾರ್ದನ ಸ್ವಾಮಿ ಚಿತ್ರದುರ್ಗದ ಸಂಸದರಾಗಿ ಆಯ್ಕೆಯಾಗಿದ್ದರು. 2014ರ ಚುನಾವಣೆಯಲ್ಲಿ ಮೊದಲ ಬಾರಿಗೆ ದಲಿತ ಎಡಗೈ ಸಮುದಾಯಕ್ಕೆ ಸೇರಿದ ಬಿ.ಎನ್.ಚಂದ್ರಪ್ಪ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಈ ವೇಳೆ ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ ಎಂಬ ಆರೋಪದ ನಡುವೆಯೂ 4,47,511 ಮತಗಳನ್ನು ಪಡೆದು ಚಿತ್ರದುರ್ಗದಿಂದ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದ್ದರು.
ಎರಡು ಬಾರಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಬಿ. ಎನ್. ಚಂದ್ರಪ್ಪ ಅವರು ಸೋಲು ಅನುಭವಿಸಿದ್ದರು. 2014ರಲ್ಲಿ ನೇರವಾಗಿ ಲೋಕಸಭೆ ಪ್ರವೇಶ ಪಡೆದಿದ್ದರು. ಆದರೆ 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ವಿರುದ್ಧ ಸೋಲು ಕಂಡಿದ್ದರು. ಈಗ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾರೆ.