Connect with us

    ಕಣ್ಮನ ಸೆಳೆದ ನವದುರ್ಗೆಯರ ಅಲಂಕಾರ | ಕೋಟೆನಾಡಲ್ಲಿ ಸಂಕ್ರಾಂತಿ ಸಂಭ್ರಮ

    ಮುಖ್ಯ ಸುದ್ದಿ

    ಕಣ್ಮನ ಸೆಳೆದ ನವದುರ್ಗೆಯರ ಅಲಂಕಾರ | ಕೋಟೆನಾಡಲ್ಲಿ ಸಂಕ್ರಾಂತಿ ಸಂಭ್ರಮ

    CHITRADURGA NEWS | 15 JANUARY 2024
    ಚಿತ್ರದುರ್ಗ (CHITRADURGA): ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕೋಟೆನಾಡಿನ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕಿದವು. ಕಣ್ಮನ ಸೆಳೆಯುವ ಅಲಂಕಾರಕ್ಕೆ ಭಕ್ತರು ಮನಸೋತರು.

    ಭಾನುವಾರ ಮಧ್ಯಾಹ್ನದಿಂದ ಆರಂಭವಾದ ಅಲಂಕಾರಗಳು ತಡರಾತ್ರಿ ಮುಕ್ತಾಯಗೊಂಡವು. ಸೋಮವಾರ ಮುಂಜಾನೆ ವೇಳೆಗೆ ಭಕ್ತರು ದೇವರಕ್ಕೆ ಆಗಮಿಸಿದರು. ಎಲ್ಲೆಡೆಯ ವೈಭವ ಕಂಡು ಪುನೀತರಾದರು. ದೇವಸ್ಥಾನಗಳಲ್ಲಿ ಭಕ್ತರಿಗೆ ಸಿಹಿ ಪೊಂಗಲ್, ಪುಳಿಯೋಗರೆ, ಎಳ್ಳು-ಬೆಲ್ಲವನ್ನು ಭಕ್ತರಿಗೆ ವಿತರಿಸಲಾಯಿತು.

    ಇದನ್ನೂ ಓದಿ: ಹೊಸದುರ್ಗ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತೊಂದು ಆಡಿಯೋ ವೈರಲ್‌

    ಜೋಗಿಮಟ್ಟಿ ರಸ್ತೆಯಲ್ಲಿರುವ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮನಿಗೆ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು. ಅಭಿಷೇಕ, ಹೂವಿನ ಅಲಂಕಾರ, ಮಹಾ ಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

    ದೇವಸ್ಥಾನದ ಮುಂಭಾಗ ಕಬ್ಬಿನ ಜಲ್ಲೆ ಹಾಗೂ ಬಾಳೆದಿಂಡಿನಿಂದ ಸಿಂಗರಿಸಲಾಗಿತ್ತು. ಬಣ್ಣ ಬಣ್ಣ ಹೂವು ಹಾರ, ದ್ರಾಕ್ಷಿ, ಅನಾನಸ್, ಕಿತ್ತಲೆ ಹಣ್ಣುಗಳಿಂದ ದೇವಸ್ಥಾನದ ಒಳಗಡೆ ಅಲಂಕರಿಸಲಾಗಿತ್ತು. ನಗರದ ಕೋಟೆ ರಸ್ತೆಯಲ್ಲಿರುವ ಉಚ್ಚಂಗಿಯಲ್ಲಮ್ಮನನ್ನು ಬಗೆ ಬಗೆಯ ಹೂವು ಹಾರ, ಹಸಿರುಪತ್ರೆ ಹಾಗೂ ನಾನಾ ರೀತಿಯ ಹಣ್ಣುಗಳಿಂದ ಕಣ್ಣು ಕೋರೈಸುವಂತೆ ಅಲಂಕರಿಸಲಾಗಿತ್ತು.

    ಇದನ್ನೂ ಓದಿ: ಅನಂತ ಕುಮಾರ್‌ ಹೆಗಡೆ ಒಬ್ಬ ಹುಚ್ಚ | ಮಾಜಿ ಸಚಿವ ಎಚ್‌.ಆಂಜನೇಯ ಏಕವಚನದಲ್ಲೇ ವಾಗ್ದಾಳಿ

    ಕಿತ್ತಳೆ, ದ್ರಾಕ್ಷಿ, ಸೇಬು, ಅನಾನಸ್ ಹಣ್ಣುಗಳಿಂದ ಉಚ್ಚಂಗಿಯಲ್ಲಮ್ಮನಿಗೆ ಸಿಂಗರಿಸಲಾಗಿತ್ತು. ಬೆಳಗಿನಿಂದ ಸಂಜೆಯತನಕ ಸಹಸ್ರಾರು ಭಕ್ತರು ಉಚ್ಚಂಗಿಯಲ್ಲಮ್ಮನ ದರ್ಶನ ಪಡೆದು ಶ್ರದ್ದಾಭಕ್ತಿಯನ್ನು ಸಮರ್ಪಿಸಿದರು.

    ಐತಿಹಾಸಿಕ ಚಿತ್ರದುರ್ಗದ ಬೆಟ್ಟದಲ್ಲಿರುವ ಏಕನಾಥೇಶ್ವರಿ ಅಮ್ಮನನ್ನು ಮಕರ ಸಂಕ್ರಾಂತಿಯಂದು ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು. ಬೃಹಧಾಕಾರವಾದ ಸುಗಂಧರಾಜ ಹಾರ, ಗುಲಾಬಿ, ಕನಕಾಂಬರ, ಸೇವಂತಿಗೆ, ಹಸಿರುಪತ್ರೆ, ಕಣಗಲ ಹೂವಿನಿಂದ ಸಿಂಗರಿಸಿ ಪೂಜಿಸಲಾಯಿತು. ನೂರಾರು ಭಕ್ತರು ಬೆಟ್ಟವೇರಿ ಏಕನಾಥೇಶ್ವರಿ ಅಮ್ಮನ ದರ್ಶನ ಪಡೆದರು.

    ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಗೆ ಸಾವಿರಾರು ಚೆರ‌್ರಿ, ದ್ರಾಕ್ಷಿ, ನೂರಾರು ಲಾಡು, ಪೇಡಾ, ವಿವಿಧ ವರ್ಣದ ಬರ್ಫಿ ಒಳಗೊಂಡು ಹಲವು ಸ್ವೀಟ್ಸ್‌ಗಳಿಂದ ವಿಶೇಷ ಅಲಂಕಾರ ಸೇವೆ ಜರುಗಿತು.  ದೇಗುಲಗಳು ಗ್ರಾಮೀಣ ಸೊಗಡಿನೊಂದಿಗೆ ಭಕ್ತರನ್ನು ಆಕರ್ಷಿಸಿದವು. ಆವರಣ ಮುಂಭಾಗ ಕಬ್ಬಿನ ಜಲ್ಲೆಯ ರಾಶಿ, ಬೆಲ್ಲದ ಅಚ್ಚಿನ ರಾಶಿ, ಸುತ್ತಲೂ ಹಲವು ಪದಾರ್ಥಗಳಿಂದ ಅಲಂಕರಿಸಲಾಗಿತ್ತು.

    ಜಿಲ್ಲೆಯ ಹಲವು ಗ್ರಾಮೀಣ ಭಾಗಗಳಲ್ಲಿ ರೈತರು ತಾವು ಬೆಳೆದ ರಾಶಿಯನ್ನು ಗುಡ್ಡೆಯಾಕಿ ವಿಶಿಷ್ಟವಾಗಿ ಸಂಕ್ರಾಂತಿ ಹಬ್ಬ ಆಚರಿಸುವ ಪರಂಪರೆ ಇದೆ. ಬರಗಾಲದ ಕಾರಣಕ್ಕೆ ಕೈಸೇರಿದ ಬೆಳೆಯನ್ನೇ ರಾಶಿಯಾಕಿ, ರಾಸುಗಳಿಗೆ ವಿವಿಧ ವಸ್ತುಗಳಿಂದ ಸಿಂಗರಿಸಿ ಆಚರಿಸಿದರು.
    ನಗರ, ಪಟ್ಟಣ, ಹಳ್ಳಿಗಳಲ್ಲಿ ಸಂಜೆ ಹೆಣ್ಣು ಮಕ್ಕಳು ಸ್ನೇಹಿತರಿಗೆ, ನೆರೆ-ಹೊರೆಯವರಿಗೆ, ಸಂಬಂಧಿಕರಿಗೆ ಎಳ್ಳು ಬೆಲ್ಲ ಹಂಚುವ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

    ಸಂಕ್ರಾಂತಿ ಮಹೋತ್ಸವದ ಅಂಗವಾಗಿ ಮಾಸ್ತಮ್ಮದೇವಿಯ ಮೆರವಣಿಗೆ ವಿಜೃಂಭಣೆಯಿಂದ ಸಾಗಿತು. ಉಚ್ಚಂಗಿಯಲ್ಲಮ್ಮ ದೇವಸ್ಥಾನದಿಂದ ಹೊರಟ ಮಾಸ್ತಮ್ಮದೇವಿ ಮೆರವಣಿಗೆ ಸಣ್ಣಗರಡಿ ಸಮೀಪವಿರುವ ದೇವಸ್ಥಾನಕ್ಕೆ ತಲುಪಿತು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು.

    ನಗರಸಭೆ ಸದಸ್ಯರಾದ ಆರ್.ನಾಗಮ್ಮ, ಭಾಸ್ಕರ್, ಗುತ್ತಿಗೆದಾರ ಕುಮಾರಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಮಾಜಿ ಸದಸ್ಯ ಮಹೇಶ್ ಹಾಗೂ ದೇವಸ್ಥಾನದ ಭಕ್ತ ಮಂಡಳಿಯವರು ಮೆರವಣಿಗೆಯಲ್ಲಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top