ಮುಖ್ಯ ಸುದ್ದಿ
EXCLUSIVE – ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೆರೆಮರೆಯ ಕಸರತ್ತು | ಯಾರಾಗಲಿದ್ದಾರೆ ಜಿಲ್ಲೆಗೆ ಸಾರಥಿ | ಯಾರೆಲ್ಲಾ ಆಕಾಂಕ್ಷಿಗಳು..?
ಚಿತ್ರದುರ್ಗ ನ್ಯೂಸ್.ಕಾಂ: ಕಳೆದ ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಬಿಜೆಪಿಯಲ್ಲಿ ಮೋಡ ಮುಸುಕಿದ ವಾತಾವಣ ನಿರ್ಮಾಣವಾಗಿತ್ತು. ಸರ್ಕಾರ ರಚನೆಯಾಗಿ 6 ತಿಂಗಳು ಕಳೆದರೂ ವಿರೋಧ ಪಕ್ಷದ ನಾಯಕರನ್ನೇ ನೇಮಕ ಮಾಡಿರಲಿಲ್ಲ. ಕಾರ್ಯಕರ್ತರು ಕೂಡಾ ಪೂರಾ ಹತಾಶರಾಗಿದ್ದರು.
ಆದರೆ, ಕಳೆದ 15 ದಿನಗಳಿಂದ ಪಕ್ಷದಲ್ಲಿ ಮತ್ತೆ ಲವಲವಿಕೆಯ ವಾತಾವರಣ ಮನೆ ಮಾಡಿದೆ. ರಾಜ್ಯದಿಂದ ಜಿಲ್ಲಾ, ತಾಲೂಕು ಹಂತದವರೆಗೆ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ. ಕಾರಣ ಪಕ್ಷದ ರಾಜ್ಯ ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ.
ಇದನ್ನೂ ಓದಿ: ಕಾರಿನಲ್ಲಿದ್ದ ಹತ್ತು ಲಕ್ಷ ಕಳ್ಳತನ
ಕಳೆದ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅಧಿಕಾರಾವಧಿ ಪೂರ್ಣಗೊಳಿಸಲು ಬಿಡಲಿಲ್ಲ. ಈ ಕಾರಣಕ್ಕೆ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆಯಾಯಿತು ಎನ್ನುವ ಅಭಿಪ್ರಾಯ ವ್ಯಾಪಕವಾಗಿ ಕೇಳಿ ಬಂದಿತ್ತು.
ಈಗ ಬಿಜೆಪಿ ಹೈಕಮಾಂಡ್ ಮತ್ತೆ ಯಡಿಯೂರಪ್ಪ ಅವರಿಗೆ ಮಣೆ ಹಾಕಿದ್ದು, ಅವರ ಪುತ್ರ, ಯುವ ನಾಯಕ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಗಿದೆ.
ಅಧ್ಯಕ್ಷರಾದ ದಿನದಿಂದ ವಿಜಯೇಂದ್ರ ರಾಜ್ಯಾದ್ಯಂತ ಪ್ರವಾಸ ಮಾಡಿ, ಮಠ, ಮಂದಿರಗಳು, ಕಾರ್ಯಕರ್ತರು, ಮುಖಂಡರ ಭೇಟಿ ಮಾಡುತ್ತಿದ್ದಾರೆ. ಎಲ್ಲಾ ಕಡೆಗಳಲ್ಲಿ ಸಾವಿರಾರು ಕಾರ್ಯಕರ್ತರು ಜಮಾವಣೆಯಾಗುತ್ತಿದೆ.
ಇದೇ ವೇಳೆ ವಿರೋಧ ಪಕ್ಷದ ನಾಯಕರನ್ನಾಗಿ ಆರ್.ಅಶೋಕ್ ಅವರನ್ನು ನೇಮಕ ಮಾಡಿರುವುದರಿಂದ ಪಕ್ಷದ ಚಟುವಟಿಕೆಗಳು ಮರಳಿ ಹಳಿಗೆ ಮರಳಲು ಪ್ರಾರಂಭಿಸಿವೆ.
ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭ:
ರಾಜ್ಯ ಘಟಕಕ್ಕೆ ನೂತನ ಅಧ್ಯಕ್ಷರ ನೇಮಕದ ನಂತರ ರಾಜ್ಯ ಪದಾಧಿಕಾರಿಗಳ ಆಯ್ಕೆ ಜೊತೆ ಜೊತೆಗೆ ಜಿಲ್ಲಾ ಘಟಕಗಳ ಪುನಾರಚನೆ ಬಿಜೆಪಿಯಲ್ಲಿ ನಡೆಯುವ ಒಂದು ಸಾಮಾನ್ಯ ಪ್ರಕ್ರಿಯೆ.
ಈಗಾಗಲೇ ಇರುವ ಅಧ್ಯಕ್ಷರು ಹಾಗೂ ಘಟಕಗಳ ಅವಧಿ ಮೂರು ವರ್ಷ ಮುಗಿದಿದ್ದು, ಹೊಸ ಜಿಲ್ಲಾ ಘಟಕಗಳು ರಚನೆಯಾಗಬೇಕಿದೆ.
ಈ ಹಿನ್ನೆಲೆಯಲ್ಲಿ ಹಲವು ಆಕಾಂಕ್ಷಿಗಳು ಕಸರತ್ತು ಪ್ರಾರಂಭಿಸಿದ್ದಾರೆ. ಬೇರೆ ಬೇರೆ ಹಿನ್ನೆಲೆ, ಆಯಾಮಗಳಲ್ಲಿ ತಮಗೆ ಅಧ್ಯಕ್ಷ ಸ್ಥಾನ ಸಿಗಬೇಕು ಎಂದು ಪಕ್ಷದ ವಲಯದಲ್ಲಿ ತಮ್ಮ ಹೆಸರನ್ನು ಹರಿಬಿಟ್ಟಿದ್ದಾರೆ.
ಇದನ್ನೂ ಓದಿ: ಮುರುಘಾ ಶರಣರಿಗೆ ಹೈಕೋರ್ಟ್‍ನಿಂದ ಬಿಗ್ ರಿಲೀಫ್
ಸದ್ಯ ಚಾಲ್ತಿಯಲ್ಲಿರುವ ಹೆಸರುಗಳ ಪೈಕಿ 6 ಜನ ಪ್ರಬಲ ಆಕಾಂಕ್ಷಿಗಳಿದ್ದಾರೆ. ಈ ಹಿಂದಿನ ಅವಧಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಕೀಲರ ಪ್ರಕೋಷ್ಠದಲ್ಲಿದ್ದ ಮಲ್ಲಿಕಾರ್ಜುನ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ, ಮೊಳಕಾಲ್ಮೂರು ಮಂಡಲ ಅಧ್ಯಕ್ಷ ಡಾ.ಮಂಜುನಾಥ್, ಹಾಲಿ ಉಪಾಧ್ಯಕ್ಷ ಸಂಪತ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್ ಹೆಸರುಗಳು ಮುಂಚೂಣಿಯಲ್ಲಿವೆ.
ಇದರಲ್ಲಿ ಪಕ್ಷ ಅಳೆದು ತೂಗಿ, ಯಾರಿಗೆ ಕೊಟ್ಟರೆ ಪ್ಲಸ್ ಆಗಲಿದೆ, ಪಕ್ಷ ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲಿ ಯಾರು ಸಮರ್ಥವಾಗಿ ಮುನ್ನಡೆಸಬಲ್ಲರು ಎಂಬಿತ್ಯಾದಿ ಲೆಕ್ಕಾಚಾರ ಹಾಕಿ ಅಧ್ಯಕ್ಷರ ಆಯ್ಕೆ ಮಾಡಲಿದೆ.
ಆಕಾಂಕ್ಷಿಗಳ ಬಲಾಬಲ ಏನೇನಿದೆ:
ಮಲ್ಲಿಕಾರ್ಜುನ್:
ಕೆ.ಎಸ್.ನವೀನ್ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದಾಗ ಮಲ್ಲಿಕಾರ್ಜುನ್ ಪ್ರಧಾನ ಕಾರ್ಯದರ್ಶಿಯಾಗಿ ಸಮರ್ಥವಾಗಿ ಜವಾಬ್ದಾರಿ ನಿಭಾಯಿಸಿದ್ದರು. ಆನಂತರದ ಅವಧಿಯಲ್ಲಿ ಬಿಜೆಪಿ ವಕೀಲರ ಪ್ರಕೋಷ್ಠದ ಜವಾಬ್ದಾರಿ ಹೊತ್ತು ಕೆಲಸ ಮಾಡಿದ್ದಾರೆ. ಜೊತೆಗೆ ವಿದ್ಯಾರ್ಥಿ ದೆಸಯಿಂದಲೂ ಎಬಿವಿವಿಯಲ್ಲಿ ಕೆಲಸ ಮಾಡಿದ ಹಿನ್ನೆಲೆಯಿದೆ.
ಜಿ.ಟಿ.ಸುರೇಶ್ ಸಿದ್ದಾಪುರ:
ಜಿ.ಟಿ.ಸುರೇಶ್ ಈ ಹಿಂದೆ ಚಿತ್ರದುರ್ಗ ಮಂಡಲದ ಅಧ್ಯಕ್ಷರಾಗಿದ್ದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರು. ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಸಂಘ ಪರಿವಾರದ ನಂಟನ್ನೂ ಹೊಂದಿದ್ದಾರೆ.
ಡಾ.ಮಂಜುನಾಥ್:
ಜಿಲ್ಲೆಯ ಗಡಿ ತಾಲೂಕು ಮೊಳಕಾಲ್ಮೂರು ಮಂಡಲದ ಅಧ್ಯಕ್ಷರಾಗಿ ಹಾಲಿ ಜವಾಬ್ದಾರಿಯಿದ್ದು, ಪಕ್ಷ ಸಂಘಟನೆಯಲ್ಲಿ ಒಳ್ಳೆಯ ಹೆಸರಿದೆ. ಜೊತೆಗೆ ಸಂಘ ಪರಿವಾರದ ಹಿನ್ನೆಲೆ ಹೊಂದಿದ್ದಾರೆ. ವೈದ್ಯರು, ಯುವಕರೂ ಆಗಿರುವುದರಿಂದ ಪಕ್ಷ ಸಂಘಟನೆಗೆ ಜಿಲ್ಲಾಧ್ಯಕ್ಷ ಸ್ಥಾನ ಬಯಸಿದ್ದಾರೆ.
ಇದನ್ನೂ ಓದಿ: ಎನ್‍ಇಪಿ ಜಾರಿಗೊಳಿಸದಿದ್ದರೆ ಜನಾಂದೋಲನ | ಕೆ.ಎಸ್.ನವೀನ್
ಜಯಪಾಲಯ್ಯ:
ಜಯಪಾಲಯ್ಯ ಹಾಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಈ ಹಿಂದೆಯೂ ಇದೇ ಜವಾಬ್ದಾರಿ ನಿಭಾಯಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದವರು. ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಒಮ್ಮೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಮುಖಂಡ ಶ್ರೀರಾಮುಲು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.
ವೆಂಕಟೇಶ್ ಯಾದವ್:
ಹಾಲಿ ರೈತ ಮೋರ್ಚಾದಲ್ಲಿ ಜಿಲ್ಲಾಧ್ಯಕ್ಷರಾಗಿರುವ ವೆಂಕಟೇಶ್ ಯಾದವ್ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎನ್ನುವ ಮಾತು ಪಕ್ಷದ ವಲಯದಲ್ಲಿದೆ. ಈ ಹಿಂದೆ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಪರಿವಾರದ ಹಿನ್ನೆಲೆಯಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಸಂಪತ್‍ಕುಮಾರ್:
ಸಂಪತ್‍ಕುಮಾರ್ ಪಕ್ಷದ ಹಿರಿಯ ಉಪಾಧ್ಯಕ್ಷ. ಕಳೆದ ಲೋಕಸಭೆ ಚುನಾವಣೆ ವೇಳೆ ಪ್ರಮುಖ ಜವಾಬ್ದಾರಿಗಳನ್ನು ಹೊತ್ತು ಸಮರ್ಥವಾಗಿ ನಿಭಾಯಿಸಿದ್ದಾರೆ. ಪಕ್ಷದ ಹಿರಿಯರ ವಲಯದಲ್ಲಿ ಪರಿಚಿತರಾಗಿದ್ದಾರೆ.
ಹೀಗೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಇನ್ನೂ ಹಲವರು ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ, ಪಕ್ಷದ ಚಟುವಟಿಕೆಗಳಲ್ಲಿ ಈವರೆಗೆ ತೊಡಗಿಸಿಕೊಂಡು ಬಂದಿರುವ ಟ್ರ್ಯಾಕ್ ರೆಕಾರ್ಡ್ ಗಮನಿಸಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯ ಕೋರ್ ಕಮಿಟಿಯಲ್ಲಿ ಹೆಸರು ಅಂತಿಮಗೊಳ್ಳಬೇಕು. ಈ ಎಲ್ಲಾ ಪ್ರಕ್ರಿಯೆ ನಂತರ ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗಿವ ವ್ಯಕ್ತಿಗೆ ಜಿಲ್ಲಾಧ್ಯಕ್ಷ ಸ್ಥಾನ ಎನ್ನಲಾಗುತ್ತಿದೆ.