Connect with us

ಡೀಪ್‍ಫೇಕ್ ಬಗ್ಗೆ ನಿರ್ಲಕ್ಷ್ಯ ಬೇಡ | ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ

ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಮುಖ್ಯ ಸುದ್ದಿ

ಡೀಪ್‍ಫೇಕ್ ಬಗ್ಗೆ ನಿರ್ಲಕ್ಷ್ಯ ಬೇಡ | ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ

ಚಿತ್ರದುರ್ಗ ನ್ಯೂಸ್.ಕಾಂ: ನಟಿ ರಶ್ಮಿಕಾ ಮಂದಣ್ಣ ಪ್ರಕರಣದ ನಂತರ ದೇಶಾದ್ಯಂತ ಡೀಪ್ ಫೇಕ್ ತಂತ್ರಜ್ಞಾನದ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಇಂದು (ನ.17) ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲೂ ಗೃಹ ಸಚಿವರು ಈ ಬಗ್ಗೆ ಮಾತನಾಡಿದ್ದಾರೆ.

ಡೀಪ್‍ಫೇಕ್ ತಂತ್ರಜ್ಞಾನ ಬಳಸಿಕೊಂಡು ಮಹಿಳೆಯರ ಮಾನ ಕಳೆಯುವ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಿವೆ. ಇಂತಹ ಪ್ರಕರಣಗಳನ್ನು ನಿರ್ಲಕ್ಷಿಸುವುದು ಬೇಡ. ಈ ರೀತಿಯ ದೂರುಗಳು ಬಂದಾಗ ತಕ್ಷಣ ಎಫ್‍ಐಆರ್ ದಾಖಲಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಜೈಲಿನಿಂದ ಹೊರಗೆ ಬಂದ ಮುರುಘಾ ಶರಣರು

ರಾಜ್ಯದ ಪ್ರಮುಖ ನಗರಗಳಲ್ಲಿ ಸೈಬರ್ ಕ್ರೈಂ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಮಟ್ಟ ಹಾಕಬೇಕು.ತಾಂತ್ರಿಕ ಪದವೀಧರ ಸಿಬ್ಬಂದಿಗಳನ್ನು ಗುರುತಿಸಿ ಜವಾಬ್ದಾರಿ ನೀಡಬೇಕು. ಸೈಬರ್ ಕ್ರೈಂ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಸರ್ಕಾರದ ಗುರಿಯಾಗಿದೆ. ರಾಜ್ಯದಲ್ಲಿ ಡ್ರಗ್ಸ್ ಸಂಪೂರ್ಣವಾಗಿ ಮಟ್ಟ ಹಾಕಬೇಕು. ಈ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲಿ ಮಾದರಿಯಾಗಿ ಹೊರ ಹೊಮ್ಮಬೇಕು ಎಂದು ತಿಳಿಸಿದರು.

ಪೆಡ್ಲರ್‍ಗಳು ಹೊರ ರಾಜ್ಯಗಳಿಂದ ವಿವಿಧ ಬಗೆಯ ಡ್ರಗ್ಸ್ ಸರಬರಾಜು ಮಾಡುತ್ತಿರುತ್ತಾರೆ. ಈ ಚಲನವಲನಗಳ ಮೇಲೆ ಸೂಕ್ಷ್ಮ ನಿಗಾ ಇರಲಿ. ಹೊರ ರಾಜ್ಯದ ಗಡಿಗಳಲ್ಲಿ ತಪಾಸಣೆ ನಡೆಸಬೇಕು. ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಚಟಗಳಿಗೆ ಮಾರು ಹೋಗುತ್ತಿದ್ದು, ಅವರ ಚಟುವಟಿಕೆಗಳ ಮೇಲೆ ನಿಗಾವಹಿಸುವುದು ಅಗತ್ಯ. ಡ್ರಗ್ಸ್ ಸೇವಿಸುವರು ಅಥವಾ ಪೂರೈಕೆ ಮಾಡುವವರು ಸಿಕ್ಕಿಬಿದ್ದರೆ, ಮೂಲ ಆರೋಪಿಯನ್ನು ಪತ್ತೆ ಹಚ್ಚುವವರೆಗೆ ತನಿಖೆ ಕೈಗೊಳ್ಳಬೇಕು ಎಂದರು.

ಮನೆ ಕಳ್ಳತನ, ಸುಲಿಗೆ, ದರೋಡೆ ಪ್ರಕರಣಗಳನ್ನು ಮಟ್ಟ ಹಾಕಲು, ಆರೋಪಿಗಳ ಚಲವಲನದ ಮೇಲೆ ನಿಗಾವಹಿಸಲು ಪೊಲೀಸರು ಗಸ್ತು ತಿರುಗಬೇಕು. ಠಾಣೆಗಳಲ್ಲಿ ಹೆಲ್ಪಿಂಗ್ ಡೆಸ್ಕ್, ಸಿಸಿ ಕ್ಯಾಮರಾ ಇರಬೇಕು. ದೂರು ನೀಡಲು ಠಾಣೆಗೆ ಬರುವ ಜನರ ಸಮಸ್ಯೆಗಳನ್ನು ಆಲಿಸಬೇಕು. ಠಾಣೆಗಳಲ್ಲಿ ‘ಜನಸ್ನೇಹಿ ಪೊಲೀಸ್’ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು.

ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಪ್ರತಿ ಜಿಲ್ಲೆಗೆ ಇಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನು ನಿಯೋಜಿಸಲಾಗುತ್ತಿದೆ. ಶಾಂತಿ ಸುವಸ್ಥೆ ಕಾಪಾಡಲು ಒಬ್ಬರು, ಅಪರಾಧ ವಿಭಾಗಕ್ಕೆ ಮೊತ್ತಬ್ಬರು ಎಎಸ್‍ಪಿಯನ್ನು ನಿಯೋಜಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.

| ಡಾ.ಜಿ.ಪರಮೇಶ್ವರ್, ಗೃಹ ಸಚಿವರು.

ಇದನ್ನೂ ಓದಿ: ಅಂತರ್ ರಾಜ್ಯ ಶ್ರೀಗಂಧ ಕಳ್ಳರ ಗ್ಯಾಂಗ್ ಅರೆಸ್ಟ್

ಶೋಷಿತ ಸಮುದಾಯಗಳ ರಕ್ಷಣೆ ಮಾಡುವ ಜವಾಬ್ಧಾರಿ ಪೊಲೀಸರ ಮೇಲಿದೆ. ಇದನ್ನು ಅತ್ಯಂತ ಜವಾಬ್ಧಾರಿಯುತವಾಗಿ ಮತ್ತು ಸೂಕ್ಷ್ಮವಾಗಿ ಮಾಡಬೇಕು. ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಾಗುವ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುವ ಪ್ರಮಾಣ ತೀರ ಕಡಿಮೆ ಇದೆ. ಇಡಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಈ ಇಂತಹ ಪ್ರಕರಣಗಳನ್ನು ಠಾಣೆ ಮಟ್ಟದಲ್ಲಿ ರಾಜಿ ಪಂಚಾಯ್ತಿ ಮಾಡುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಆರೋಪಿಗಳು ಕಾನೂನು ಪರಿದಿಯಿಂದ ತಪ್ಪಿಸಿಕೊಳ್ಳಬಾರದು. ಸೂಕ್ತ ಸಾಕ್ಷ್ಯಧಾರ ಕಲೆ ಹಾಕಿ, ಶಿಕ್ಷೆ ಆಗುವಂತೆ ತನಿಖಾಧಿಕಾರಿಗಳು ನೋಡಿಕೊಳ್ಳಬೇಕು. ಹಿರಿಯ ಅಧಿಕಾರಿಗಳು ಆಗಾಗ ತನಿಖೆಯನ್ನು ಪರಿಶೀಲಿಸಿ, ಮಾರ್ಗದರ್ಶನ ಮಾಡಬೇಕು ಎಂದು ಸೂಚಿಸಿದರು.

ಕಿಡಿಗೇಡಿಗಳು ಧರ್ಮ, ಜಾತಿ ಹೆಸರಲ್ಲಿ ಅವಹೇಳನಕಾರಿ ಪೋಸ್ಟ್‍ಗಳನ್ನು ಸೃಷ್ಟಿಸಿ ಗಲಭೆ ಉಂಟು ಮಾಡಲು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿರುತ್ತಾರೆ. ಎಲ್ಲಿಯೋ ನಡೆದ ಘಟನೆಯನ್ನು ತಿರುಚಿ ಶಾಂತಿ ಕದಡುವಂತೆ ಮಾಡುತ್ತಾರೆ. ಈ ಬಗ್ಗೆ ಹೆಚ್ಚು ನಿಗಾ ಇರಲಿ ಎಂದರು.

ಹೆಚ್ಚು ಅಪಘಾತಗಳು ಸಂಭವಿಸುವ (ಬ್ಲಾಕ್ ಸ್ಪಾಟ್) ಸ್ಥಳಗಳನ್ನು ಗುರುತಿಸಿ, ಅಪಘಾತಕ್ಕೆ ಕಾರಣಗಳನ್ನು ಪತ್ತೆಹಚ್ಚಬೇಕು. ರಸ್ತೆಗಳಲ್ಲಿ ಸೂಚನಾಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಅಗತ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಮುಂದಾಗಬೇಕು. ಹೈವೆ ಪ್ಯಾಟ್ರೋಲಿಂಗ್ ಅಚ್ಚುಕಟ್ಟಾಗಿ ನಡೆಸಬೇಕು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಡಿಐಜಿ ತ್ಯಾಗರಾಜ್, ಜಿಲ್ಲಾಧಿಕಾರಿ ದಿವ್ಯಪ್ರಭು, ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version