ಮುಖ್ಯ ಸುದ್ದಿ
ಹೊಸ ವರ್ಷದ ದಿನ ಕೋಟೆ, ಆಡುಮಲ್ಲೇಶ್ವರ, ಮುರುಘಾ ವನಕ್ಕೆ ಬಂದ ಪ್ರವಾಸಿಗರೆಷ್ಟು ಗೊತ್ತಾ..?
ಚಿತ್ರದುರ್ಗ ನ್ಯೂಸ್.ಕಾಂ: ಹೊಸ ವರ್ಷ ಅಂದ್ರೆನೇ ಹಾಗೇ, ಎಲ್ಲರಿಗೂ ಸಂಭ್ರಮ. ಬಾಯಲ್ಲಿ ಯುಗಾದಿ ನಮ್ಮ ಹೊಸ ವರ್ಷ ಅಂತಾ ಹೇಳಿದರೂ, ಡಿಸೆಂಬರ್ 31ರ ರಾತ್ರಿ ಕೇಕ್ ಸಿದ್ಧಪಡಿಸಿಕೊಂಡು, ಪಾರ್ಟಿಗೆ ಅಣಿಯಾಗುವವರ ಸಂಖ್ಯೆಯೂ ದೊಡ್ಡ ಮಟ್ಟದಲ್ಲಿದೆ.
ಸ್ನೇಹಿತರು, ಕುಟುಂಬದವರು, ಪ್ರೀತಿ ಪಾತ್ರರು ಒಟ್ಟಿಗೆ ಸೇರಿ ಸಂತೋಷಪಡಲು, ಪಾರ್ಟಿ ಮಾಡಲು ಒಂದು ಕಾರಣ ಹುಡುಕುವವರು ಸಾಕಷ್ಟಿದ್ದಾರೆ.
ಏನೇ ಇರಲಿ, ಈ ವರ್ಷದ ಹೊಸ ವರ್ಷವನ್ನು ಜನ ಭರ್ಜರಿ ಎಂಜಾಯ್ ಮಾಡಿದ್ದಾರೆ. ತೋಟ, ಮನೆ, ಫಾರ್ಮ್ ಹೌಸ್, ಗೋವಾ, ಬೀಚ್, ರೆಸಾರ್ಟ್, ಹೋಂ ಸ್ಟೇಗಳಿಗೆ ಹೋಗಿ ಸಂಭ್ರಮಿಸಿ ಬಂದಿದ್ದಾರೆ.
ಇದನ್ನೂ ಓದಿ: ನಸುಕಿನ ದರೋಡೆ ಟೀಮಿಗೆ ಗೋವಾದಲ್ಲಿ ಹೆಡೆಮುರಿ | 10 ಜನರ ಬಂಧನ
ಈ ನಡುವೆ ಅನೇಕರು ಹೊಸ ವರ್ಷದ ದಿನದಂದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪರಿಪಾಠವನ್ನೂ ಇಟ್ಟುಕೊಂಡಿದ್ದಾರೆ. ಇನ್ನೂ ಕೆಲವರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ.
2024 ಜನವರಿ 1 ಹೊಸ ವರ್ಷದಂದು ಚಿತ್ರದುರ್ಗದ ಐತಿಹಾಸಿಕ ಕೋಟೆ, ಮುರುಘಾ ಮಠದ ಮುರುಘಾ ವನ, ಆಡುಮಲ್ಲೇಶ್ವರ, ವಾಣಿವಿಲಾಸ ಸಾಗರ ಜಲಾಶಯ, ನಾಯಕನಹಟ್ಟಿ, ವದ್ದಿಕೆರೆ ಸೇರಿದಂತೆ ಬಹುತೇಕ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳು ಭರ್ತಿಯಾಗಿದ್ದವು.
ಚಿತ್ರದುರ್ಗದ ಕೋಟೆಗೆ ಬಂದಿದ್ದ ಪ್ರವಾಸಿಗರಲ್ಲಿ ಶೇ.90 ರಷ್ಟು ಯುವಕ, ಯುವತಿಯರಿದ್ದರು. ಅನೇಕರು ಕೈಯಲ್ಲಿ ಕೇಕ್ ಹಿಡಿದು ಕೋಟೆಗೆ ತಂದು ಕೇಕ್ ಕತ್ತರಿಸಿ ಪರಸ್ಪರ ತಿನ್ನಿಸುವ ಮೂಲಕ ಸಂಭ್ರಮ ಹಂಚಿಕೊಂಡರು.
ಚಿತ್ರದುರ್ಗ ಜಿಲ್ಲೆಯ ಬೇರೆ ಬೇರೆ ತಾಲೂಕು, ಬೇರೆ ಜಿಲ್ಲೆಗಳಿಂದಲೂ ಪ್ರವಾಸಿಗರು ಬಂದು ಹೊಸ ವರ್ಷವನ್ನು ಕೋಟೆಯಲ್ಲಿ ಸ್ನೇಹಿತರು, ಗೆಳೆಯ, ಗೆಳತಿಯರು, ಪ್ರೀತಿ ಪಾತ್ರರ ಜೊತೆಗೆ ಕಳೆಯುವ ಮೂಲಕ ಸ್ಮರಣೀಯವಾಗಿಸಿಕೊಂಡರು.
ಐತಿಹಾಸಿಕ ಕೋಟೆಗೆ ಒಂದೇ ದಿನ 7 ಸಾವಿರ ಪ್ರವಾಸಿಗರು
ನಗರದ ಐತಿಹಾಸಿಕ ಕೋಟೆಗೆ ಸೋಮವಾರ ಒಂದೇ ದಿನ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಬರೋಬ್ಬರಿ 7 ಸಾವಿರ ದಾಟಿತ್ತು. ಇದರಿಂದ ಒಂದೇ ದಿನ ಕೋಟೆಯಿಂದ ಬಂದ ಆದಾಯ 1.75 ಲಕ್ಷ ರೂ. ದಾಟಿತ್ತು.
ಕೋಟೆ ಪ್ರವೇಶಕ್ಕೆ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ ಹಣ ಪಾವತಿಸುವುದು, ಆನ್‍ಲೈನ್ ಮೂಲಕ ಮೊದಲೇ ಟಿಕೇಟ್ ಪಡೆಯುವುದು ಹಾಗೂ ಸ್ಥಳದಲ್ಲೇ ಟಿಕೇಟ್ ಪಡೆಯುವ ಆಫ್‍ಲೈನ್ ವ್ಯವಸ್ಥೆ ಮಾಡಲಾಗಿತ್ತು.
ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಕೋಟೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು.
ಮುರುಘಾ ಮಠಕ್ಕೆ ಜನವೋ ಜನ:
ಇನ್ನೂ ನಗರದ ಪ್ರಮುಖ ಪ್ರವಾಸಿ ತಾಣಗಳಾದ ಕೋಟೆ, ಆಡುಮಲ್ಲೇಶ್ವರಕ್ಕೆ ಹೋಲಿಕೆ ಮಾಡಿದರೆ ಮುರುಘಾ ಮಠದಲ್ಲಿರುವ ಮುರುಘಾ ವನಕ್ಕೆ ಅತೀ ಹೆಚ್ಚು ಜನ ದಾಂಗುಡಿ ಇಟ್ಟಿದ್ದಾರೆ.
ಬರೋಬ್ಬರಿ 14763 ಮಂದಿ ಮುರುಘಾ ವನಕ್ಕೆ ಭೇಟಿ ನೀಡಿದ್ದು, ಮಠದ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಕೋಟೆಗೆ ಬಂದ ಪ್ರವಾಸಿಗರ ಸಂಖ್ಯೆಗೆ ಹೋಲಿಕೆ ಮಾಡಿದರೆ ಮುರುಘಾ ಮಠಕ್ಕೆ ಬಂದವರ ಸಂಖ್ಯೆ ದುಪ್ಪಟ್ಟಾಗಿದೆ.
ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ ಆಡುಮಲ್ಲೇಶ್ವರ ಮೃಗಾಲಯಕ್ಕೆ ಹೊಸ ವರ್ಷದ ಅಂಗವಾಗಿ ಸೋಮವಾರ ದೊಡ್ಡವರು-ಮಕ್ಕಳು ಸೇರಿ 4211 ಜನ ಭೇಟಿ ನೀಡಿದ್ದಾರೆ. ಇದರಿಂದ ಒಂದೇ ದಿನ 1,89,950 ರೂ. ಆದಾಯ ಬಂದಿದೆ ಎಂದು ಆಡುಮಲ್ಲೇಶ್ವರ ಆರ್‍ಎಫ್‍ಓ ಎನ್.ವಾಸುದೇವ ಮಾಹಿತಿ ನೀಡಿದ್ದಾರೆ.
ಒಟ್ಟು 580 ಬೈಕುಗಳು, 183 ಆಟೋ, 211 ಕಾರುಗಳು, 14 ಟಿಟಿ/ಬಸ್ಸು ವಾಹನಗಳು ಆಡುಮಲ್ಲೇಶ್ವರಕ್ಕೆ ಬಂದಿವೆ.