Connect with us

    ಚಿತ್ರದುರ್ಗದಲ್ಲಿ ಡೆಂಗಿ ಬ್ರೇಕ್‌ಫೇಲ್‌ | ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್‌

    dengu workshop

    ಮುಖ್ಯ ಸುದ್ದಿ

    ಚಿತ್ರದುರ್ಗದಲ್ಲಿ ಡೆಂಗಿ ಬ್ರೇಕ್‌ಫೇಲ್‌ | ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್‌

    CHITRADURGA NEWS | 31 MAY 2024
    ಚಿತ್ರದುರ್ಗ: ಜಿಲ್ಲೆಯಲ್ಲಿ ಡೆಂಗಿ ಪ್ರಕರಣ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಬಹು ವರ್ಷಗಳ ಬಳಿಕ ವೈದ್ಯರ ಕೈಮೀರಿ ಹೋಗಿದೆ. ಈ ಮಾಹಿತಿಯನ್ನು ಸ್ವತಃ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಡಾ.ಜಿ.ಪಿ.ರೇಣುಪ್ರಸಾದ್‌ ಬಹಿರಂಗಪಡಿಸಿದ್ದಾರೆ.

    ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಮತ್ತು ದೃಶ್ಯ ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಮಲೇರಿಯಾ ಮತ್ತು ಇತರೆ ಕೀಟಜನ್ಯ ರೋಗಗಳ ನಿಯಂತ್ರಣ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಡೆಂಗಿ ಹರಡುವ ಸೊಳ್ಳೆಗಳ ನಿಯಂತ್ರಣ ಮಾಡುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಅವಶ್ಯಕವಾಗಿದೆ’ ಎಂದು ಹೇಳಿದರು.

    ‘ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಲಾರ್ವ ಸಮೀಕ್ಷೆ ನಡೆಸಲಾಗುತ್ತಿದೆ. ಪ್ರತಿ ಮನೆ ಮನೆಗಳಿಗೂ ತೆರಳಿ ಸೊಳ್ಳೆಗಳ ನಿಯಂತ್ರಣ ಮಾಡುವ ಬಗ್ಗೆ ಜನರಿಗೆ ತಿಳಿ ಹೇಳಲಾಗುತ್ತಿದೆ. ಆದರೂ ಸಾರ್ವಜನಿಕರು ಸೊಳ್ಳೆಗಳ ನಿಯಂತ್ರಣದ ಬಗ್ಗೆ ಆಸಕ್ತಿ ತೋರುತ್ತಿಲ್ಲ’ ಎಂದರು.

    ಕ್ಲಿಕ್ ಮಾಡಿ ಓದಿ: ಮುರುಘಾಮಠದಿಂದ ಸಸಿ ನೆಡುವ ಸಪ್ತಾಹಕ್ಕೆ ಚಾಲನೆ | ಸಂಸ್ಥೆ ಮುಖ್ಯಸ್ಥರಿಗೆ ಸಸಿಗಳ ಪೋಷಣೆ ಹೊಣೆ

    ‘ಸೊಳ್ಳೆ ಕಚ್ಚುವುದರಿಂದ ಮಲೇರಿಯಾ, ಡೆಂಗಿ ಸೇರಿದಂತೆ ಹಲವು ರೋಗಗಳು ಹರಡುತ್ತಿವೆ. ಇದರಿಂದ ಚಿಕಿತ್ಸೆ ನೀಡುವಲ್ಲಿ ತೊಂದರೆ ಉಂಟಾಗುತ್ತಿದೆ. ರೋಗದ ಚಿಕಿತ್ಸೆಗಾಗಿ ಜನರು ಸಹ ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗುತ್ತದೆ. ಡೆಂಗಿ ಹಾಗೂ ಮಲೇರಿಯಾ ಪ್ರಕರಣಗಳು ಹೆಚ್ಚಾದ ತಕ್ಷಣ ಆರೋಗ್ಯ ಇಲಾಖೆ ಕಾರ್ಯ ವೈಖರಿ ಬಗ್ಗೆ ಎಲ್ಲರೂ ಪ್ರಶ್ನಿಸುತ್ತಾರೆ. ಆದರೆ ಆರೋಗ್ಯ ಇಲಾಖೆ ಹೇಳುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

    ‘ಡೆಂಗಿ ಹರಡುವ ಈಡಿಸ್‌ ಸೊಳ್ಳೆ ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತದೆ. ಅದ್ದರಿಂದ ತುಂಬು ತೋಳಿನ ಶರ್ಟ್‌ ಧರಿಸಿ ಕೆಲಸ ಮಾಡುವುದು ಉತ್ತಮ ಅಭ್ಯಾಸವಾಗಿದೆ. ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು. ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇರಿಸಿಕೊಳ್ಳಬೇಕು’ ಎಂದರು.

    ಕ್ಲಿಕ್ ಮಾಡಿ ಓದಿ: ಜಿಲ್ಲಾಸ್ಪತ್ರೆಗೆ ನ್ಯಾಯಾಧೀಶರ ಭೇಟಿ | ಸ್ವಚ್ಛತೆ ಕಾಪಾಡಲು ಸೂಚನೆ

    ‘ಮಳೆಯ ನೀರು ತೆಂಗಿನ ಚಿಪ್ಪು, ಟಯರ್ ಸೇರಿದಂತೆ ಇತರೆ ವಸ್ತುಗಳಲ್ಲಿ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಡೆಂಗೀ ಹಾಗೂ ಮಲೇರಿಯಾ ಹರಡುವ ಸೊಳ್ಳೆಗಳು ಮಳೆ ಹಾಗೂ ಸ್ವಚ್ಛ ನೀರಿನಲ್ಲಿ ಸಂತಾನೋತ್ಪಪ್ತಿ ಮಾಡುತ್ತವೆ. ಹಾಗಾಗಿ ಈ ನೀರಿನ ಆಕರಗಳನ್ನು ಸ್ವಚ್ಚವಾಗಿ ಇರಿಸಬೇಕು. ಸೊಳ್ಳೆ ನಿಯಂತ್ರಣದಲ್ಲಿ ಧೂಮೀಕರಣ ಅಷ್ಟೊಂದು ಪರಿಣಾಮಕಾರಿಯಾಗುವುದಿಲ್ಲ. ಧೂಮೀಕರಣದ ವೇಳೆ ಸೊಳ್ಳೆಗಳು ಧೂಮೀಕರಣ ವ್ಯಾಪ್ತಿಯಿಂದ ಹಾರಿ ಹೋಗಿ ಮತ್ತೆ ಹಿಂದಿರುಗುತ್ತವೆ. ಇದರ ಬದಲು ಸೊಳ್ಳೆಗಳ ಲಾರ್ವಾಗಳ ನಿಯಂತ್ರಣಕ್ಕೆ ಗ್ಯಾಂಬೂಸಿಯಾ ಹಾಗೂ ಗಪ್ಪಿ ಮೀನುಗಳನ್ನು ಜಲಮೂಲಗಳಲ್ಲಿ ಸಾಕುವುದು ಉತ್ತಮ’ ಎಂದು ಸಲಹೆ ನೀಡಿದರು.

    ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಿನಿ ಕಡಿ ಸೊಳ್ಳೆಗಳ ನಿಯಂತ್ರಣ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಈ ವೇಳೆ ಕೇವಲ ತಂಗಿನ ಚಿಪ್ಪು, ಟಯರ್ ಸೇರಿದಂತೆ ದೊಡ್ಡ ನೀರಿನ ಆಕರಗಳಲ್ಲಿ ಮಾತ್ರ ರೋಗವಾಹಕ ಸೊಳ್ಳೆಗಳು ಬೆಳೆಯುತ್ತವೆ ಎಂದು ನಂಬಿಕೆ ಇದೆ. ಆದರೆ ಡೆಂಗೀ ಹಾಗೂ ಮಲೇರಿಯಾ ಹರಡುವ ಸೊಳ್ಳೆಗಳು ಕೇವಲ 5 ಎಂ.ಎಲ್. ನೀರು ಶೇಖರಣೆಯಾಗುವ ಚಿಕ್ಕ ಬಾಟಲಿ ಮುಚ್ಚುಳ, ಪ್ಲಾಸ್ಟಿಕ್ ಟೀ ಲೋಟ ಅಥವಾ ಇತರೆ ತ್ಯಾಜ್ಯಗಳಲ್ಲಿ ಸಂತಾನೋತ್ಪತ್ತಿ ನಡೆಸುತ್ತವೆ. ಆದ್ದರಿಂದ ಮನೆಯ ಸುತ್ತ ಮುತ್ತ ಸಣ್ಣ ತ್ಯಾಜ್ಯಗಳಲ್ಲಿಯೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

    ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಅಧ್ಯಕ್ಷ ದಿನೇಶ್ ಗೌಡಗೆರೆ ಮಾತನಾಡಿ, ‘ಆರೋಗ್ಯ ಇಲಾಖೆ ಕಾರ್ಯಕ್ರಮವು ಅತ್ಯಂತ ಉಪಯುಕ್ತವಾಗಿದೆ. ಇಂತಹ ಕಾರ್ಯಗಾರಗಳನ್ನು ತಾಲ್ಲೂಕು ಹಂತ ಪತ್ರಕರ್ತರಿಗೂ ನೀಡಬೇಕು. ಇದಕ್ಕೆ ಪತ್ರಕರ್ತರ ಸಂಘ ಸಹಕಾರ ನೀಡಲಿದೆ’ ಎಂದರು.

    ಇದೇ ವೇಳೆ ಆರೋಗ್ಯ ಇಲಾಖೆಯಿಂದ ತಜ್ಞ ವೈದ್ಯರನ್ನು ಕರೆಸಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಬಳಿ ಕೋರಿಕೊಂಡರು.

    ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಕಾಶಿ, ಡೆಂಗಿ ಹಾಗೂ ಮಲೇರಿಯಾ ರೋಗದ ಕುರಿತು ಪ್ರಾತ್ಯಕ್ಷತೆ ನೀಡಿದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಾರುತಿ ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top