ಮುಖ್ಯ ಸುದ್ದಿ
ಡಿ.ಕೆ.ಶಿವಕುಮಾರ್ ಇಂದು ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆಗೆ | ವೈ ಜಂಕ್ಷನ್, ಪಂಪ್ ಹೌಸ್ ಕಾಮಗಾರಿ ವೀಕ್ಷಣೆ
CHITRADURGA NEWS | 3 MARCH 2024
ಚಿತ್ರದುರ್ಗ: ಉಪಮುಖ್ಯಮಂತ್ರಿ ಹಾಗು ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಇಂದು ಮಧ್ಯಾಹ್ನ 3.30 ರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.
ಮಧ್ಯ ಕರ್ನಾಟಕ ಬಯಲು ಸೀಮೆಯ ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆ ಆಗಿರುವ ಭದ್ರಾ ಮೇಲ್ದಂಡೆ ಕಾಮಗಾರಿ ಕಳೆದ ಒಂದೂವರೆ ದಶಕದಿಂದ ಕುಂಟುತ್ತಾ ಸಾಗುತ್ತಿದೆ.
ಕಾಮಗಾರಿಯ ಯೋಜನಾ ವೆಚ್ಚ 3500 ಕೋಟಿಯಿಂದ 21 ಸಾವಿರ ಕೋಟಿಗೆ ಹೆಚ್ಚಳವಾಗಿದೆ.
ದಿನೇ ದಿನೇ ಕಾಮಗಾರಿಯ ಯೋಜನಾ ವೆಚ್ಚ ಹೆಚ್ಚಾಯಿತೇ ಹೊರತು ಬಯಲು ಸೀಮೆಗೆ ನೀರು ಹರಿಯಲಿಲ್ಲ.
ಕಳೆದ ವರ್ಷದ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಮೀಸಲಿಟ್ಟರೂ, ಈವರೆಗೆ ಹಣ ಬಿಡುಗಡೆ ಮಾಡಿಲ್ಲ. ಈ ಸಂಬಂಧ ರೈತರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.
ಸದ್ಯ ಈ ವಿಚಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ರಾಜಕೀಯ ಹಗ್ಗ ಜಗ್ಗಾಟಕ್ಕೆ ವೇದಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭದ್ರಾ ಕಾಮಗಾರಿ ವೀಕ್ಷಣೆ ಮಾಡುತ್ತಿರುವುದು ಗಮನಾರ್ಹವಾಗಿದೆ.
ಮಧ್ಯಾಹ್ನ 3.30ಕ್ಕೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಬ್ಬಿನಹೊಳಲು ಬಳಿ ಕಾಮಗಾರಿಗೆ ತೊಡಕಾಗಿರುವ ಸ್ಥಳ ವೀಕ್ಷಣೆ ಮಾಡಲಿದ್ದಾರೆ.
ಆನಂತರ 4.45ಕ್ಕೆ ಅಜ್ಜಂಪುರ ತಾಲೂಕಿನ ಹೆಬ್ಬೂರು ಬಳಿ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ.
ಸಂಜೆ 5.15ಕ್ಕೆ ವೈ ಜಂಕ್ಷನ್ ಬಳಿ ಪಂಪ್ ಹೌಸ್ ಕಾಮಗಾರಿ ವೀಕ್ಚಣೆ ಮಾಡಲಿದ್ದಾರೆ. ಇದೇ ಜಾಗದಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿಯ ಪ್ರಗತಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಲ್ಲಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಉಪಮುಖ್ಯಮಂತ್ರಿಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.