ಮುಖ್ಯ ಸುದ್ದಿ
ಸಾಲು ಎತ್ತಿನ ಗಾಡಿಗಳ ಮಿಂಚೇರಿ ವೈಭವಕ್ಕೆ ದಿನಗಣನೆ; ಆರು ದಿನಗಳ ಉತ್ಸವ
ಚಿತ್ರದುರ್ಗ ನ್ಯೂಸ್.ಕಾಂ
ನುಡಿದಂತೆ ನಡೆದ ಸತ್ಯ ಸಂತ ಗಾದ್ರಿಪಾಲನಾಯಕ ಸ್ವಾಮಿಯ ಸಾಲು ಎತ್ತಿನ ಗಾಡಿಗಳ ಮಿಂಚೇರಿ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದೆ. ಡಿ.23 ರಿಂದ 28ರವರೆಗೆ ಉತ್ಸವ ನಡೆಯಲಿದೆ.
ಉತ್ಸವದ ರೂಪುರೇಷೆಯನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿ, ‘ಹಲವು ವರ್ಷಗಳಿಂದ ಮಿಂಚೇರಿ ಉತ್ಸವವೂ ನಡೆಯುತ್ತಾ ಬಂದಿದೆ. ಇದು ಬುಡಕಟ್ಟು ಜನಾಂಗದ ಸಂಸ್ಕೃತಿಯಾಗಿದೆ. ಬಚ್ಚಬೋರನಹಟ್ಟಿಯಲ್ಲಿ ಡಿ. 23 ರಂದು ಶನಿವಾರ ಬೆಳಿಗ್ಗೆ ದೇವರು ಮುತ್ತಯ್ಯಗಳ ಆಗಮನವಾಗಲಿದೆ 7 ಗಂಟೆಗೆ ದೇವರ ಮಜ್ಜನ ಬಾವಿಯಲ್ಲಿ ಗಂಗಾಪೂಜೆ, 11.30ರಿಂದ ಮಿಂಚೇರಿ ಯಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ’ ಎಂದರು.
ಇದನ್ನೂ ಓದಿ: ಕಾಡುಗೊಲ್ಲರನ್ನು ಎಸ್ಟಿಗೆ ಸೇರ್ಪಡೆಗೊಳಿಸಿ; ಬಿ.ವೈ.ವಿಜಯೇಂದ್ರ ಅವರಿಗೆ ಮನವಿ
‘ಅಂದು ಬೆಳಿಗ್ಗೆ 10 ಗಂಟೆಗೆ ಮಿಂಚೇರಿ ಉದ್ಘಾಟನಾ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಸಿ.ವಿರೇಂದ್ರ ಎಂ.ಚಂದ್ರಪ್ಪ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದ್ರ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.
‘ಬಚ್ಚಬೋರಯ್ಯಹಟ್ಟಿಯಿಂದ ನಿರ್ಗಮಿಸುವ ಯಾತ್ರೆಗೆ ಕಕ್ಕಲು ಬೆಂಚಿಲ್ಲಿ ಪೂಜೆ ಸಲ್ಲಿಸಿ ಸಂಜೆ 7 ಗಂಟೆಗೆ ಕ್ಯಾಸಪುರದ ಬಯಲಿನಲ್ಲಿ ಬೀಡು ಬೀಡಲಾಗುತ್ತದೆ. ಡಿ.24 ರಂದು ಯಾತ್ರೆ ಮುಂದುವರೆದು ಮಧ್ಯಾಹ್ನ 12ಕ್ಕೆ ಸಿರಿಗೆರೆ ಡಿ.ಮದಕರಿಪುರ ವರತಿನಾಯಕ ಕರೆಯ ದಂಡೆಯಲ್ಲಿ ವಿಶ್ರಾಂತಿ ಪಡೆದು, ಅಲ್ಲಿಂದ ಮಿಚೇರಿಗೆ ಪಯಣ ಸಂಜೆ 5 ಗಂಟೆಗೆ ಸ್ವಾಮಿಯ ಮೀಸಲು ಹಾಲಿನ ಕಂಬಿಯ ಪೂಜೆ ನಡೆಯಲಿದೆ’ ಎಂದು ತಿಳಿಸಿದರು.
‘ಡಿ.25 ರಂದು ಬೆಳಿಗ್ಗೆ 5 ಕ್ಕೆ ಹುಲಿರಾಯನ ಮತ್ತು ನಾಯಕರ ಸಮಾಧಿಗೆ ಪೂಜೆ, ಮಧ್ಯಾಹ್ನ 2ಕ್ಕೆ ಸ್ವಾಮಿಯ ಸನ್ನಿಧಿಯಲ್ಲಿ ಬಸವಂತರಿಗೆ ಹಾಗೂ ಚೌಕು ಮಣಿವು ಕಾರ್ಯಕ್ರಮ, ಸಂಜೆ 4ಕ್ಕೆ ಕಣಿವೆ ಮಾರಮ್ಮ ಮಲ್ಲಿಯಮ್ಮ ಹಾಗೂ ಕೊಲ್ಲಪುರದಮ್ಮನವರ ಗಂಗಾಪೂಜೆ, ಡಿ.26ರಂದು ಬೆಳಿಗ್ಗೆ 7ಕ್ಕೆ ಭಿಕ್ಷೆ ಸ್ವೀಕಾರ, 11ಕ್ಕೆ ಸ್ವಾಮಿಯ ಸನ್ನಿಧಿಯಲ್ಲಿ ಪ್ರಸಾದ ಸ್ವೀಕಾರ, ಮಧ್ಯಾಹ್ನ 2ಕ್ಕೆ ಮಿಂಚೇರಿಯಿಂದ ನಿರ್ಗಮನ, ರಾತ್ರಿ 7ಕ್ಕೆ ಕಡ್ಲೇಗುದ್ದು ಬಿಳಿಯ ಸಿದ್ಧರ ಗುಂಡಿಗೆ ಆಗಮನ, ಡಿ.27 ರಂದು ಕ್ಯಾಸಾಪುರದ ಬಳಿಯ ಜನಿಗಿ ಹಳ್ಳಕ್ಕೆ ಗಂಗಾಪೂಜೆ, ಮಧ್ಯಾಹ್ನ 2ಕ್ಕೆ ಚಿತ್ರದುರ್ಗಕ್ಕೆ ಮಿಂಚೇರಿ ಯಾತ್ರೆಯ ಆಗಮನ. ರಾಜಾ ಬೀದಿಗಳಲ್ಲಿ ಮೆರವಣಿಗೆ, ಸಂಜೆ ಕಕ್ಕಲು ಬೆಂಚಿಯಲ್ಲಿ ಬೀಡು ಬಿಡಲಾಗುತ್ತದೆ. ಡಿ.28ರಂದು ಸಂಜೆ 7ಕ್ಕೆ ಗ್ರಾಮದ ಹೊಸ್ತಿಲು ಪೂಜೆಯೊಂದಿಗೆ ಸ್ವಸ್ಥಾನಕ್ಕೆ ಮರಳಲಾಗುತ್ತದೆ. ಗುರು-ಹಿರಿಯರೊಂದಿಗೆ ದೇವರು ಮುತ್ತಯ್ಯಗಳ ಬೀಳ್ಕೂಡುಗೆ ಕಾರ್ಯಕ್ರಮ ನಡೆಯಲಿದೆ’ ಎಂದು ವಿವರಿಸಿದರು.
‘ಡಿ.27ರಂದು ಚಿತ್ರದುರ್ಗ ಪ್ರವೇಶಿಸುವ ಯಾತ್ರೆಯಲ್ಲಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಬಸವ ಪ್ರಭು ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಯಾದಾವನಂದ ಸ್ವಾಮೀಜಿ, ಶಿವಲಿಂಗಾನಂದ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕೇತೇಶ್ವರ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಬಿ.ನಾಗೇಂದ್ರ, ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಮಾಜಿ ಶಾಸಕರುಗಳು, ಅಧಿಕಾರಿಗಳು, ಭಾಗವಹಿಸಲಿದ್ದಾರೆ’ ಎಂದರು.
ಯಾತ್ರೆಯೂ ಸೀಬಾರ, ಗೂಳಯ್ಯನಹಟ್ಟಿ, ಕ್ಯಾಸಪುರ, ಕಡ್ಲೇಗುದ್ದು, ಕೋಣನೂರು, ಚುಕ್ಕೇನಹಳ್ಳಿ, ಸಿರಿಗೆರೆ, ದಡ್ಡಿಗೆನಹಾಳ್, ಮದಕರಿಪುರ, ಮಿಂಚೇರಿ ತಲುಪಲಿದೆ ಎಂದು ತಿಳಿಸಿದರು.
ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ನಗರಸಭೆ ಸದಸ್ಯ ದೀಪು, ತಮಟಕಲ್ಲು ಬಸಣ್ಣ, ಡಿ.ಗೋಪಾಲಸ್ವಾಮಿ ನಾಯಕ, ಬೋರಯ್ಯ, ಕಾಟಿಹಳ್ಳಿ ಕರಿಯಪ್ಪ, ಪ್ರಹ್ಲಾದ್ ಇದ್ದರು.