ಮುಖ್ಯ ಸುದ್ದಿ
ಕೊಲೆಪಾತಕಿ ನಟ ದರ್ಶನ್‌ಗೆ ಧಿಕ್ಕಾರ | ಕೋಟೆನಾಡಲ್ಲಿ ಕಟ್ಟೆಒಡೆದ ಜನಾಕ್ರೋಶ
CHITRADURGA NEWS | 12 JUNE 2024
ಚಿತ್ರದುರ್ಗ: ನಟ ದರ್ಶನ್ ಮತ್ತು ಆತನ ಗ್ಯಾಂಗ್‌ನಿಂದ ಹತ್ಯೆಯಾದ ಸೌಮ್ಯ ಸ್ವಭಾವದ ಮುಗ್ಧ ಜೀವಿ ರೇಣುಕಾಸ್ವಾಮಿ ಸಾವಿಗೆ ನ್ಯಾಯ ಕೇಳುತ್ತಿದೆ ಚಿತ್ರದುರ್ಗ.
ಪ್ರಕರಣ ಹೊರ ಬರುತ್ತಿದ್ದಂತೆ ಕೋಟೆನಾಡಿ ಜನರು ಕಣ್ಣೀರಾದರು. ಬುಧವಾರ ನಡೆದ ಪ್ರತಿಭಟನೆ ವೇಳೆ ಆಕ್ರೋಶ ಕಟ್ಟೆ ಒಡೆದಿದೆ. ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ರ‍್ಯಾಲಿಗೆ ಜನರು ಸಾಗರದಂತೆ ಸೇರಿದರು.
ಗಾಂಧಿವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮೌನಾಚರಣೆ ನಡೆಸಿದರು. ಅಲ್ಲಿಂದ ಒನಕೆ ಓಬವ್ವ ವೃತ್ತದವರೆಗೂ ಸಾಗಿದ ಪ್ರತಿಭಟನಾಕಾರರು ಮಾರ್ಗದುದ್ದಕ್ಕೂ ಆಕ್ರೋಶ ಹೊರಹಾಕಿದರು. ಜತೆಗೆ ದರ್ಶನ್ ಫೋಟೋಗಳನ್ನು ಆರಿದು ಹಾಕಿ ಚಪ್ಪಲಿ ಸೇವೆ ಮಾಡಿದರು.
‘ಕ್ಷುಲ್ಲಕ ಕಾರಣಕ್ಕಾಗಿ ರೇಣುಕಾಸ್ವಾಮಿಯನ್ನು ಅಜ್ಞಾತ ಪ್ರದೇಶದಲ್ಲಿ ಒಂದು ದಿನವಿಡೀ ಚಿತ್ರಹಿಂಸೆ ಕೊಟ್ಟು ಪ್ರಾಣ ತೆಗೆದಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಸ್ಟಾರ್ ಪಟ್ಟಕ್ಕೆ ಏರಿದವರು ಕಾನೂನು ಕೈಗೆ ತೆಗೆದುಕೊಳ್ಳಬಹುದು, ದುಡ್ಡಿದೆ, ಏನು ಬೇಕಾದರು ಮಾಡಬಹುದು ಎನ್ನುವ ದುರಾಹಂಕಾರ ಮೆಟ್ಟಲು ಈ ಹೋರಾಟ. ಪೊಲೀಸರು, ಗೃಹ ಮಂತ್ರಿಗಳು ಅವರನ್ನು ಉಳಿಸುವ ಪ್ರಯತ್ನ ಅಡಿದರೆ ನಮ್ಮ ಹೋರಾಟ ತೀವ್ರವಾಗುತ್ತದೆ. ಸರ್ಕಾರ ಸಾವುಗೆ ನ್ಯಾಯ ಕೊಡಿಸಬೇಕು. ದರ್ಶನ್ ಅಭಿಮಾನಿ ಸಂಘವನ್ನ ಇವತ್ತೇ ವಿಸರ್ಜನೆ ಮಾಡಿ ರೇಣುಕಾಸ್ವಾಮಿ ಸಾವಿಗೆ ನ್ಯಾಯ ಕೊಡಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಆಗ್ರಹಿಸಿದರು.
ಕ್ಲಿಕ್ ಮಾಡಿ ಓದಿ: ನಟ ದರ್ಶನ್‍ಗೆ ನನ್ನ ಮಗನಿಗೆ ಬಂದ ಸ್ಥಿತಿ ಬರಲಿ
‘ದರ್ಶನ್ ಸಿನಿಮಾಗಳಲ್ಲಿ ಮಾತ್ರ ಆದರ್ಶ ವ್ಯಕ್ತಿ. ಆದರೆ,ನಿಜ ಜೀವನದಲ್ಲಿ ಭಿನ್ನವಾದ ವ್ಯಕ್ತಿ. ತಂದೆ ತಾಯಿಗಳ ಮುಪ್ಪಿನ ಕಾಲದ ನೋವು ಬೇಸರವಾಗುತ್ತದೆ. ಪತ್ನಿ ಗರ್ಭಿಣಿ. ಇದು ನಿಜಕ್ಕೂ ಘೋರ ಅನ್ಯಾಯ. ರಾಜ್ಯದಲ್ಲಿ ಇಂತಹ ಅನೇಕ ಘಟನೆಗಳು ನಡೆದಿದಿದ್ದು,ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ದೂರಿದರು.
‘ಎ1 ಆಗಿದ್ದ ವ್ಯಕ್ತಿ, ಎ2 ಆಗಿದ್ದಾರೆ. ಗೃಹಮಂತ್ರಿ ದರ್ಶನ್ ಪಾತ್ರದ ಬಗ್ಗೆ ತಿಳಿದುಕೊಳ್ಳಬೇಕು. ಭಾರತದ ಕಾನೂನಿನ ಅನ್ವಯ ಕಠಿಣ ಶಿಕ್ಷೆ ಆಗಲೇಬೇಕು. ಮೇಲ್ನೋಟಕ್ಕೆ ನೇರವಾಗಿ ಸಿಕ್ಕಿ ಬಿದ್ದಿದ್ದಾರೆ. ಅವರಿಗೆ ಜೀವಾವಧಿ ಶಿಕ್ಷೆ ಕೊಡುವ ಮೂಲಕ ಆ ಮನೆತನಕ್ಮೆ ನ್ಯಾಯ ಕೊಡಬೇಕು. ಈ ಪ್ರಕರಣ ಹಗುರವಾಗಿ ತೆಗೆದುಕೊಂಡರೆ ಇಡೀ ರಾಜ್ಯದಲ್ಲಿ ಪ್ರತಿಭಟನೆ ಪ್ರಾರಂಭ ಆಗುತ್ತವೆ’ ಎಂದು ಎಚ್ಚರಿಸಿದರು.
‘ಎಲ್ಲ ಸಮುದಾಯಗಳ ಜನತೆ ಸೇರಿ ಪ್ರತಿಭಟನೆ ನಡೆಸುತ್ತಿರುವುದು ಮಾನವೀಯತೆಗೆ ಹಿಡಿದ ಕನ್ನಡಿ. ದರ್ಶನ್ ಅಭಿಮಾನಿಗಳಿಗೆ ಇಂದು ಅವರ ವಿಕೃತಿ ಗೊತ್ತಾಗಿದೆ. ಅಂಧಾಭಿಮಾನಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅಂಧ ಅಭಿಮಾನದ ಕಾರಣಕ್ಕೆ ಆತ ಇಂತಹ ಕೆಲಸ ಮಾಡುತ್ತಿದ್ದಾನೆ. ಕಾಂಗ್ರೆಸ್ ಪಕ್ಷದ ಪ್ರಚಾರಕ ದರ್ಶನ್ ಅವರ ಬಳಿ ಹಣ ಇದೆ, ಜನ ಇದ್ದಾರೆ. ಈ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಬಿಡಬಾರದು’ ಎಂದು ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಆಗ್ರಹಿಸಿದರು.
‘ಜಂಗಮ ಸಮಾಜದ ರೇಣುಕಾ ಸ್ವಾಮಿ ಕ್ರೂರ ಹತ್ಯೆ ಖಂಡಿಸಿ ಚಿತ್ರದುರ್ಗದ ಎಲ್ಲ ಸಮಾಜ, ಎಲ್ಲ ಸಂಘಟನೆಗಳು ಬಂದು ಪ್ರತಿಭಟನೆಯಲ್ಕಿ ಭಾಗಿಯಾಗಿದ್ದಾರೆ. ಡಿ ಬಾಸ್ ಎನ್ನುವ ದರ್ಶನ್, ರೇಣುಕಾಸ್ವಾಮಿ ಹತ್ಯೆ ಮಾಡಿರುವುದು ಘೋರ. ಬ್ರಹ್ಮನೂ ನಿಮ್ಮನ್ನು ಕ್ಷಮಿಸಲಾರ’ ಎಂದು ಮುಖಂಡ ಮರುಳಾರಾಧ್ಯ ಆಕ್ರೋಶ ಹೊರಹಾಕಿದರು.
ಶ್ರೀ ಬಸವನಾಗೀದೇವ ಸ್ವಾಮೀಜಿ, ಕರವೇ ಜಿಲ್ಲಾಧ್ಯಕ್ಷ ರಮೇಶ್, ವಕೀಲರಾದ ಕೆ.ಎನ್.ವಿಶ್ವನಾಥಯ್ಯ ಉಮೇಶ್, ಗುರು, ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಮುಖಂಡರಾದ ಕೆ.ಎಂ.ವೀರೇಶ್, ಪಟೇಲ್ ಶಿವಕುಮಾರ್, ಬಜರಂಗದಳ ರಾಜ್ಯ ಸಂಯೋಜಕ ಪ್ರಭಂಜನ್, ಕೆಇಬಿ ಷಣ್ಮುಖಪ್ಪ, ಮಹಡಿ ಶಿವಮೂರ್ತಿ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.