ಲೋಕಸಮರ 2024
ಹೊಸದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ರೋಡ್ ಶೋ

ಹೊಸದುರ್ಗ: ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಸೋಮವಾರ ಹೊಸದುರ್ಗದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ಬೆಳಗ್ಗೆ 9.30ರ ವೇಳೆಗೆ ತಾಲೂಕಿನ ಮಧುರೆ ಬಳಿ ಇರುವ ಭಗೀರಥ ಗುರುಪೀಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.
ಆನಂತರ ಮಧುರೆಯಲ್ಲಿ ಸಾರ್ವಜನಿಕ ಸಭೆ ನಡೆಸ ಮತಯಾಚನೆ ಮಾಡಿದರು.
ಅಲ್ಲಿಂದ ನೂರಾರು ಬೈಕುಗಳ ರ್ಯಾಲಿಯೊಂದಿಗೆ ಹೊಸದುರ್ಗಕ್ಕೆ ಆಗಮಿಸಿದರು.
ಹೊಸದುರ್ಗದ ಟಿಬಿ ವೃತ್ತದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಬಿ.ಎನ್.ಚಂದ್ರಪ್ಪ, ಬಿಜೆಪಿಯಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಹೋದವರು, ಈ ಕ್ಷೇತ್ರಕ್ಕೆ ಯಾವ ಕೆಲಸವನ್ನೂ ಮಾಡಿಲ್ಲ.
ಈಗ 550 ಕಿ.ಮೀ ದೂರದ ಮುಧೋಳದಿಂದ ಗೋವಿಂದ ಕಾರಜೋಳ ಅವರನ್ನು ಬಿಜೆಪಿ ಕರೆತಂದಿದೆ. ಮುಧೋಳದ ಜನ ತಿರಸ್ಕರಿಸಿರುವ ಗೋವಿಂದ ಕಾರಜೋಳ ಅವರನ್ನು ಚಿತ್ರದುರ್ಗದ ಜನ ಪುರಸ್ಕರಿಸುತ್ತಾರಾ ಎಂದು ಪ್ರಶ್ನಿಸಿದರು.
ಬಿಜೆಪಿಯಿಂದ ಯಾವುದಾದರೂ ಕುಟುಂಬಕ್ಕೆ ಅನುಕೂಲ ಆಗಿದೆಯಾ ಎಂದು ಪ್ರಶ್ನಿಸಿದರು.
ಜನರ ತೆರಿಗೆ ಹಣವನ್ನು ಬಿಜೆಪಿ ಸರ್ಕಾರ ಅಂಬಾನಿ, ಅದಾನಿಗೆ ಕೊಡುವ ಕೆಲಸ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಗ್ಯಾರೆಂಟಿ ಮೂಲಕ ಜನರಿಗೆ ಹಣಕೊಡುತ್ತಿದೆ.
ರಾಮ ಬಿಜೆಪಿಯ ಆಸ್ತಿ ಅಲ್ಲ. ನಮ್ಮ ರಾಮ. ನಮ್ಮೆಲ್ಲರ ಮನೆಗಳಲ್ಲಿ ರಾಮ ಇದ್ದಾನೆ. ನಮ್ಮೆಲ್ಲರ ಮನೆಯಲ್ಲಿ ರಾಮ,ಲಕ್ಷ್ಮಣ, ಸೀತೆಯರಿದ್ದಾರೆ. ಇನ್ನೂ ಎಷ್ಟು ದಿನ ರಾಮ, ಜಾತಿ, ಧರ್ಮ ಇಟ್ಟುಕೊಂಡು ರಾಜಕಾರಣ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಶಾಂತಿಯ ಬೀಜ ಬಿತ್ತಿ, ಸೌಹಾರ್ಧ ವಾತಾವರಣ ನಿರ್ಮಾಣ ಮಾಡುವ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗಾಗಿ ಬಿ.ಎನ್.ಚಂದ್ರಪ್ಪ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಅಗತ್ಯ ಹೊಸದುರ್ಗಕ್ಕೆ ಇದೆ. ಈ ಚುನಾವಣೆಯಲ್ಲಿ ಚಂದ್ರಪ್ಪ ಅವರನ್ನು ಗೆಲ್ಲಿಸೋಣ ಎಂದರು.
ಹೊಸದುರ್ಗ ತಾಲೂಕಿಗೆ ಭದ್ರಾದಿಂದ ಕುಡಿಯುವ ನೀರು ತರುವ 600 ಕೋಟಿ ರೂ. ಯೋಜನೆ ಪ್ರಾರಂಭವಾಗಿದ್ದು, ಮುಂದಿನ ಆರು ತಿಂಗಳಲ್ಲಿ ಮನೆ ಮನೆಗೆ ಕುಡಿಯುವ ನೀರು ತಲುಪಲಿದೆ ಎಂದರು.
ಮಾಜಿ ಶಾಸಕ ಎ.ವಿ.ಉಮಾಪತಿ, ಕಾರೇಹಳ್ಳಿ ಬಸವರಾಜಪ್ಪ, ಪದ್ಮನಾಭ, ವಿಶಾಲಾಕ್ಷಿ ನಟರಾಜ್ ಸೇರಿದಂತೆ ತಾಲುಕಿನ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
