ಮುಖ್ಯ ಸುದ್ದಿ
City Council: ನಗರಸಭೆಯಲ್ಲಿ ಶಾಸಕ ವೀರೇಂದ್ರ ಪಪ್ಪಿ ಮೇಲುಗೈ | ಬಹುಮತವಿದ್ದು ಸೋತ ಬಿಜೆಪಿ | ಪಕ್ಷೇತರ ಸದಸ್ಯೆಗೆ ಒಲಿದ ಅಧ್ಯಕ್ಷ ಗಾದಿ
CHITRADURGA NEWS | 26 AUGUST 2024
ಚಿತ್ರದುರ್ಗ: ಚಿತ್ರದುರ್ಗದ ನಗರಸಭೆಯ ಎರಡನೇ ಅವಧಿಗೆ ಅಧ್ಯಕ್ಷರಾಗಿ 29ನೇ ವಾರ್ಡ್ ಸದಸ್ಯೆ ಬಿ.ಎನ್.ಸುಮಿತಾ ರಾಘವೇಂದ್ರ ಹಾಗೂ ಉಪಾಧ್ಯಕ್ಷರಾಗಿ 33ನೇ ವಾರ್ಡ್‌ನ ಸದಸ್ಯೆ ಜಿ.ಎಸ್.ಶ್ರೀದೇವಿ ಚಕ್ರವರ್ತಿ ಆಯ್ಕೆಯಾಗಿದ್ದಾರೆ.
ತೀವ್ರ ಕುತೂಹಲ ಮೂಡಿಸಿದ್ದ ಚುನಾವಣೆಯಲ್ಲಿ ಬಹುಮತವಿದ್ದರು ಸಹ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಸೋತಿದೆ. ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹಾಕಿದ ಲೆಕ್ಕಚಾರ ಫಲಿಸಿದೆ.
ಎರಡನೇ ಅವಧಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ ‘ಎ’ ಮಹಿಳೆಗೆ ಮೀಸಲಾಗಿತ್ತು. 35 ಸದಸ್ಯ ಬಲದ ಚಿತ್ರದುರ್ಗ ನಗರಸಭೆಯಲ್ಲಿ ಬಿಜೆಪಿಗೆ 17 ಸದಸ್ಯರಿದ್ದಾರೆ. ಜೆಡಿಎಸ್ 6, ಪಕ್ಷೇತರ 7 ಸದಸ್ಯರಿದ್ದು, ಕಾಂಗ್ರೆಸ್ 5 ಸದಸ್ಯ ಸ್ಥಾನಗಳಲ್ಲಿಗೆದ್ದಿತ್ತು. ಅದರಲ್ಲಿಒಬ್ಬ ಸದಸ್ಯರು (ಪೊಲೀಸ್ ಮಲ್ಲಿಕಾರ್ಜುನ್) ಅಕಾಲಿಕ ಮರಣದಿಂದ ಈಗ 4 ಸ್ಥಾನಗಳಿಗೆ ಕುಸಿದಿದೆ.
ಬಿ.ಎನ್.ಸುಮಿತಾ ರಾಘವೇಂದ್ರ ಹಾಗೂ ಜಿ.ಎಸ್.ಶ್ರೀದೇವಿ ಚಕ್ರವರ್ತಿ ತಲಾ 22 ಮತ ಪಡೆಯುವ ಮೂಲಕ ಅಧ್ಯಕ್ಷೆ, ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಸ್ಪಷ್ಟ ಬಹುಮತದೊಂದಿಗೆ ಕಳೆದ ಬಾರಿ ನಿರಾತಂಕವಾಗಿ ಬಿಜೆಪಿ ಅಧಿಕಾರ ನಡೆಸಿತ್ತು. ಆದರೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಬಳಿಕ ನಡೆದ ರಾಜಕೀಯ ಬೆಳವಣಿಗೆಯಿಂದಾಗಿ ಬಹುಮತವಿದ್ದರು ಅಧಿಕಾರ ಕಮಲ ಪಾಳಯದಿಂದ ಕೈ ಜಾರಿದೆ.
ಕ್ಲಿಕ್ ಮಾಡಿ ಓದಿ: ಜಿಲ್ಲೆಯ ರೈತರಿಗೆ ಸಂತಸದ ಸುದ್ದಿ | 10 ಸಾವಿರ ಎಕರೆಯಲ್ಲಿ ದಾಳಿಂಬೆ ಬೆಳೆ ವಿಸ್ತರಣೆ ಗುರಿ
ಸದಸ್ಯರ ಅತೃಪ್ತಿ, ಅಸಮಾಧಾನ ಹಾಗೂ ಪಕ್ಷೇತರ ಸದಸ್ಯರ ಬೆಂಬಲ ಹಾಗೂ ಕಾಂಗ್ರೆಸ್ ಸದಸ್ಯರ ಪಕ್ಷ ನಿಷ್ಠೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹಾದಿಯನ್ನು ಸುಲಭಗೊಳಿಸಿತು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರಸಭೆ ಅಧಿಕಾರವನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಾಷ್ಟ್ರೀಯ ಪಕ್ಷದ ಟಿಕೆಟ್ ಕೈ ತಪ್ಪಿದ್ದರಿಂದ 29ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಬಿ.ಎನ್.ಸುಮಿತಾ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ ಎಂ.ಆಶಾ ಅವರನ್ನು 382 ಮತಗಳಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದರು. ಸುಮಿತಾ 1137 ಹಾಗೂ ಆಶಾ 755 ಮತ ಪಡೆದಿದ್ದರು.
ಕ್ಲಿಕ್ ಮಾಡಿ ಓದಿ: ವಾರದೊಳಗೆ ಭೂಸ್ವಾಧೀನ ಪೂರ್ಣಗೊಳಿಸಿ | ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸೂಚನೆ
ಫಲಿತಾಂಶದ ಬಳಿಕ ಮೊದಲ ಅವಧಿಯಲ್ಲೇ ಬಿ.ಎನ್.ಸುಮಿತಾ ಅವರ ಹೆಸರು ಉಪಾಧ್ಯಕ್ಷ ಸ್ಥಾನಕ್ಕೆ ಬಲವಾಗಿ ಕೇಳಿ ಬಂದಿತ್ತು. ಆದರೆ ಕೊನೆ ಕ್ಷಣದಲ್ಲಿ 28ನೇ ವಾರ್ಡ್‌ನ ಶ್ವೇತಾ ವೀರೇಶ್ ಉಪಾಧ್ಯಕ್ಷೆಯಾಗಿದ್ದರು.
2022ರ ಡಿಸೆಂಬರ್ 14ರಂದು ಚಿತ್ರದುರ್ಗ ನಗರಸಭೆ ಉಪಾಧ್ಯಕ್ಷರಾಗಿದ್ದ 33ನೇ ವಾರ್ಡ್ ಸದಸ್ಯೆ ಶ್ರೀದೇವಿ ಚಕ್ರವರ್ತಿ ಇದೀಗ ಎರಡನೇ ಅವಧಿಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ವಾರ್ಡ್ ನಂ. 33ರಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀದೇವಿ ಚಕ್ರವರ್ತಿ 844 ಮತಗಳಿಸಿ ಗೆಲುವಿನ ನಗೆ ಬೀರಿದ್ದರು. ಪಕ್ಷೇತರವಾಗಿ ಸ್ಪರ್ಧಿಸಿದ್ದ ಗೀತ ಪ್ರಕಾಶ್ 747 ಮತ ಪಡೆದು ಸೋಲುಂಡಿದ್ದರು.
ಚುನಾವಣಾ ಅಧಿಕಾರಿಯಾಗಿ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಕಾರ್ಯನಿರ್ವಹಿಸಿದರು. ತಹಶೀಲ್ದಾರ್ ಡಾ.ನಾಗವೇಣಿ, ನಗರಸಭೆ ಆಯುಕ್ತೆ ಎಂ.ರೇಣುಕಾ ಇದ್ದರು.