ಮುಖ್ಯ ಸುದ್ದಿ
City council election: ‘ಕೈ’ ಬಲಪಡಿಸಿದ ಜೆಡಿಎಸ್ | ಚಳ್ಳಕೆರೆ ನಗರಸಭೆ ಕಾಂಗ್ರೆಸ್ ತಕ್ಕೆಗೆ
CHITRADURGA NEWS | 30 AUGUST 2024
ಚಿತ್ರದುರ್ಗ: ಇಬ್ಬರು ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ ಪರಿಣಾಮ ಚಳ್ಳಕೆರೆ ನಗರಸಭೆ ಸುಲಭವಾಗಿ ‘ಕೈ’ ವಶವಾಯಿತು. ಅಧ್ಯಕ್ಷರಾಗಿ ಜೈತುನ್ಬಿ, ಉಪಾಧ್ಯಕ್ಷರಾಗಿ ಒ.ಸುಜಾತಾ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಬಿಸಿಎಂ (ಎ) ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿತ್ತು. 31 ಸದಸ್ಯ ಬಲದ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗ ಗುರುವಾರ ಚುನಾವಣೆ ನಡೆಯಿತು. ಕಾಂಗ್ರೆಸ್‌ನ 15, ಜೆಡಿಎಸ್‌ನ ಪ್ರಶಾಂತ್ ಮತ್ತು ಹೊಯ್ಸಳ ಗೋವಿಂದ ಹಾಗೂ ಪಕ್ಷೇತರ ಸದಸ್ಯ ರುದ್ರನಾಯಕ ಅವರು 31ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಜೈತುನ್ಬಿ ಅವರಿಗೆ ಬೆಂಬಲ ಸೂಚಿಸಿದರು.
ಕ್ಲಿಕ್ ಮಾಡಿ ಓದಿ: ಉತ್ತರಾಧಿಕಾರಿ ನೇಮಕದ ಹೊಣೆ ಭಕ್ತರ ಮೇಲಿದೆ
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 1ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಸಾಕಮ್ಮ ಪರ ಜೆಡಿಎಸ್‌ನ 7 ಮತ್ತು ಬಿಜೆಪಿಯ ನಾಲ್ವರು ಸದಸ್ಯರು ಮತ ಚಲಾಯಿಸಿದರು. ಉಪಾಧ್ಯಕ್ಷೆಯಾಗಿ ಕಾಂಗ್ರೆಸ್‌ನ ಒ.ಸುಜಾತಾ ಅವಿರೋಧವಾಗಿ ಆಯ್ಕೆಯಾದರು.
ಕಾಂಗ್ರೆಸ್‌ನ 16 ಸದಸ್ಯರಲ್ಲಿ 15 ಜನ ಹಾಜರಿದ್ದರು. ಅಧಿಕ ಆದಾಯ ಹೊಂದಿದ ಆರೋಪಕ್ಕೆ ಗುರಿಯಾಗಿದ್ದ ಸಾವಿತ್ರಮ್ಮ ಅಸಮಾಧಾನಗೊಂಡು ಚುನಾವಣೆಗೆ ಗೈರಾಗಿದ್ದರು. ಜೆಡಿಎಸ್‌ನ 10 ಸದಸ್ಯರ ಪೈಕಿ ಕೆ.ಸಿ.ನಾಗರಾಜ ಈಚೆಗೆ ರಾಜೀನಾಮೆ ನೀಡಿದ್ದರು.
ಕ್ಲಿಕ್ ಮಾಡಿ ಓದಿ: ಫೇಸ್‌ಬುಕ್ ಜಾಹೀರಾತು ಮೇಲೆ ಕ್ಲಿಕ್ | ಲಕ್ಷಾಂತರ ರೂಪಾಯಿ ವಂಚನೆ
ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ತಹಶೀಲ್ದಾರ್ ರೇಹಾನ್ ಪಾಷ, ಶಾಸಕ ಟಿ.ರಘುಮೂರ್ತಿ, ಜಿಲ್ಲಾ ಕೆಡಿಪಿ ಸಮಿತಿ ಸದಸ್ಯ ಕೆ.ಸಿ.ನಾಗರಾಜ, ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಸಮಿತಿ ಅಧ್ಯಕ್ಷ ಕೆ.ವೀರಭದ್ರಯ್ಯ, ಮಾಜಿ ಅಧ್ಯಕ್ಷ ಟಿ.ಎ.ಟಿ.ಪ್ರಭುದೇವ್ ಇದ್ದರು.