ಮುಖ್ಯ ಸುದ್ದಿ
ಚಿತ್ರದುರ್ಗದ ಹಿರಿಯ ಸಾಹಿತಿ ಪ್ರೊ.ಎಚ್.ಶ್ರೀಶೈಲ ಆರಾಧ್ಯ ಇನ್ನಿಲ್ಲ | ಉಸಿರು ನಿಲ್ಲಿಸಿದ ಕನ್ನಡ ಮೇಷ್ಟ್ರು
ಚಿತ್ರದುರ್ಗನ್ಯೂಸ್.ಕಾಂ
ಚಿತ್ರದುರ್ಗದ ರಾಜಬೀದಿಯ ‘ಸಿರಿಸಂಪದ’ದಲ್ಲಿ ಮೌನ ಆವರಿಸಿದೆ. ಕನ್ನಡ ಸಾಹಿತ್ಯ ಲೋಕದ ಸಿರಿಯಾಗಿದ್ದ ಪ್ರೊ.ಶ್ರೀಶೈಲ ಆರಾಧ್ಯ ಜೀವನ ಪಯಣ ಮುಗಿಸಿದ್ದಾರೆ. ವಯೋಸಹಜ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕನ್ನಡದ ಮೇಷ್ಟ್ರು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರಾಗಿ 78 ವರ್ಷದ ತುಂಬು ಜೀವನಕ್ಕೆ ವಿದಾಯ ಹೇಳಿದ್ದಾರೆ.
ಹೊಸದುರ್ಗ ತಾಲ್ಲೂಕಿನ ಪುಟ್ಟ ಗ್ರಾಮವಾದ ಸೋಮೇನಹಳ್ಳಿಯಲ್ಲಿ 1946 ರಲ್ಲಿ ಜೆ.ಹಾಲಾರಾಧ್ಯ ಮತ್ತು ಮರುಳಮ್ಮ ದಂಪತಿಯ ಹಿರಿಯ ಮಗನಾಗಿ ಜನಿಸಿದ್ದರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, 9 ನೇ ವಯಸ್ಸಿಗೆ ಸಮೀಪದ ಬೂದಿಹಾಳು ಶ್ರೀರಾಂಪುರದಲ್ಲಿ ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ್ದರು.
ತುಮಕೂರು, ಧಾರವಾಡದಲ್ಲಿ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿಯನ್ನು ಕಲಿತು, ಪ್ರಾರಂಭದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಬಾಳ ಸಂಗಾತಿಯಾಗಿ ಉಮಾದೇವಿ ಬಂದ ಬಳಿಕ ಮಂಡ್ಯ, ಚಳ್ಳಕೆರೆ ಮತ್ತು ಚಿತ್ರದುರ್ಗದ ಕಾಲೇಜಿನಲ್ಲಿ 33 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.
ಇದನ್ನೂ ಓದಿ: ಕೋರ್ಟ್ ನೋಟೀಸ್ ಬಂದ ದಿನವೇ ಮಾರಣಾಂತಿಕ ಹಲ್ಲೆ | 6 ವರ್ಷ ಕಠಿಣ ಜೈಲು ಶಿಕ್ಷೆ
ಸಂಸ್ಕೃತಿ, ಸಾಹಿತ್ಯ, ಇತಿಹಾಸ, ಕೋಟೆ ಕೊತ್ತಲು, ಪ್ರಾಚೀನ ವಸ್ತುಗಳು, ನವರತ್ನಗಳು, ಅವಧೂತರು, ನಂಬಿಕೆ ಆಚರಣೆಗಳು ಇಂಥ ವಿಭಿನ್ನ ವಿಷಯಗಳ ಬಗ್ಗೆ ಸುಮಾರು 30 ಪುಸ್ತಕ ಹೊರ ತಂದಿದ್ದರು. ಚಿತ್ರದುರ್ಗ ಜಿಲ್ಲಾ ಇತಿಹಾಸ ಸಂಶೋಧನ ಮಂಡಳಿ, ಚಿತ್ರದುರ್ಗ ಕೋಟೆ ಸ್ಮಾರಕ ರಕ್ಷಣಾ ವೇದಿಕೆ, ಸ್ಥಳೀಯ ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ, ಗೌರವಾಧ್ಯಕ್ಷರಾಗಿದ್ದರು.
ಎಸ್.ಎಸ್.ರೋಹಿಣಿ ಶೈಲೇಂದ್ರ, ಡಾ.ಎಸ್.ಎಸ್.ಅನುರಾಧ ಡಾ.ನಾಗರಾಜ್ ಪುತ್ರಿಯರು. ಜ.5 (ಶುಕ್ರವಾರ) ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಚಿತ್ರದುರ್ಗದ ದೊಡ್ಡಪೇಟೆಯ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಜೋಗಿಮಟ್ಟಿ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.