ಮುಖ್ಯ ಸುದ್ದಿ
ಬನ್ನಿ…ಒಮ್ಮೆ ಶೌಚಾಲಯ ನೋಡಿ ಬರೋಣ..; ಮೇಳೈಸಿದೆ ಸಾಂಸ್ಕೃತಿಕ ಪರಂಪರೆ ವೈಭವ
ಚಿತ್ರದುರ್ಗ ನ್ಯೂಸ್.ಕಾಂ
ಸಾರ್ವಜನಿಕ ಶೌಚಾಲಯ ಎಂದರೇ ಸಾಕು ಗಬ್ಬು ವಾಸನೆ, ಗೋಡೆಗಳ ಮೇಲೆ ಅಶ್ಲೀಲ ಚಿತ್ರ, ಬಾರದ ನೀರು..ಹೀಗೆ ಹತ್ತಾರು ಸನ್ನಿವೇಶಗಳು ಕಣ್ಮುಂದೆ ಹಾದು ಹೋಗುತ್ತವೆ. ಆದರೆ ಇದೀಗ ಎಲ್ಲವೂ ಬದಲಾಗಿ ಬನ್ನಿ ಒಮ್ಮೆ ಶೌಚಾಲಯ ನೋಡಿಕೊಂಡು ಬರೋಣ ಎಂಬ ವಾತಾವರಣ ಮೂಡಿದೆ. ಎಲ್ಲಿ ಅಂತೀರಾ..ಆಗಿದ್ದರೆ ಈ ಸ್ಟೋರಿ ಓದಿ.
ಹಿರಿಯೂರು ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕ ಬಳಕೆಗೆ ಸಿದ್ಧವಾಗುತ್ತಿರುವ ಶೌಚಾಲಯದ ಗೋಡೆಗಳ ಮೇಲೆ ಸಂಸ್ಕೃತಿ ಅನಾವರಣಗೊಂಡಿದ್ದು. ಬಣ್ಣದಿಂದ ಸಿಂಗಾರಗೊಂಡಿವೆ.
ನಾಡಿನ ಸಂಸ್ಕೃತಿ, ಕಲೆ ಬಿಂಬಸುವ ವರ್ಣಚಿತ್ರಗಳನ್ನು ಶೌಚಾಲಯದ ಗೋಡೆಗಳ ಮೇಲೆ ರಚಿಸಲಾಗುತ್ತಿದೆ. ಯಕ್ಷಗಾನ, ಜನಪದ ನೃತ್ಯ, ಸಂಗೀತ ಪರಂಪರೆ, ಹಳ್ಳಿ ಸೊಗಡು, ನಾಡಿನ ಹಲವು ಸಂಸ್ಕೃತಿಯನ್ನು ಬಿಂಬಿಸುವ ನಾನಾ ರೀತಿಯ ಚಿತ್ರಗಳನ್ನು ಗೋಡೆಗಳಲ್ಲಿ ಚಿತ್ರಿಸಲಾಗುತ್ತಿದೆ.
ಇದನ್ನೂ ಓದಿ: ವಿರೋಧ ಮಾಡಿದವರು ಕಾಂಗ್ರೆಸ್ ಕಾರ್ಯಕರ್ತರಲ್ಲ; ಬಿ.ಎನ್.ಚಂದ್ರಪ್ಪ
ಸ್ವಚ್ಛ ಶೌಚಾಲಯ ಅಭಿಯಾನ ಯೋಜನೆಯಡಿ ನಗರದ ಆರೇಳು ಕಡೆ ಶೌಚಾಲಯಗಳನ್ನು ನಿರ್ಮಿಸಲು ನಗರಸಭೆ ಮುಂದಾಗಿದೆ. ಇವುಗಳಿಗೆ ಬಣ್ಣ ಬಣ್ಣದ ಚಿತ್ತಾರ ಹಾಗೂ ಚಿತ್ರಕಲೆಯ ಸ್ಪರ್ಶ ನೀಡುತ್ತಿರುವುದು ವಿಶೇಷ. ಬಣ್ಣದ ಚಿತ್ತಾರ ಶೌಚಾಲಯವನ್ನು ರಸ್ತೆಯಲ್ಲಿ ಸಂಚರಿಸುವವರು ಕ್ಷಣಹೊತ್ತು ನಿಂತು ನೋಡಿ ಹೋಗುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಮುಖ್ಯವಲ್ಲ; ಮಾಜಿ ಸಂಸದ ಬಿ.ಎನ್.ಚಂದ್ರಪ್ಪ
ಒಡಿಎಫ್ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯದ ಒಳ ಹಾಗೂ ಹೊರಗಿನ ಗೋಡೆಗಳ ಮೇಲೆ ಕಲಾವಿದರು ನಾಡಿನ ಸಂಸ್ಕೃತಿ, ಕಲೆ ಬಿಂಬಸುವ ಚಿತ್ರಗಳನ್ನು ರಚಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಈ ಶೌಚಾಲಯದಲ್ಲಿ ಪುರುಷರಿಗೆ ಐದು ಹಾಗೂ ಮಹಿಳೆಯರಿಗೆ ನಾಲ್ಕು ಶೌಚ ಕೋಣೆಗಳಿವೆ. ಪುರುಷರಿಗೆ ಮೂತ್ರಾಲಯಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ಆಸ್ಪತ್ರೆ ಆವರಣ, ನೆಹರೂ ಮೈದಾನ, ಗಾಂಧಿವೃತ್ತದಲ್ಲಿ ಟಿಎಸ್‌ಟಿ ವಾಣಿಜ್ಯ ಮಳಿಗೆಗೆ ಹೊಂದಿಕೊಂಡಿರುವ ಜಾಗ, ನೆಹರೂ ಮಾರುಕಟ್ಟೆ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ನಿರ್ಮಿಸಿರುವ ಶೌಚಾಲಯಗಳಿಗೂ ಹೊಸರೂಪ ನೀಡಲು ಉದ್ದೇಶಿಸಲಾಗಿದೆ.
ಇದನ್ನೂ ಓದಿ: ಕರಿಕಂಬಳಿ ಹೊದ್ದ ಕಿಲಾರಿಗಳ ನೃತ್ಯ; ಬುಡಕಟ್ಟು ದೈವ ಬೋಸೆರಂಗಸ್ವಾಮಿ ಜಾತ್ರೆ
ಗೌರಿಬಿದನೂರಿನ ಶುಭಂ ಇಂಟರ್ ನ್ಯಾಷನಲ್ ಸೋಷಿಯಲ್ ಟ್ರಸ್ಟ್ ಸಂಸ್ಥೆಯು ಶೌಚಾಲಯಗಳ ನಿರ್ವಹಣೆ ಗುತ್ತಿಗೆ ಪಡೆದಿದೆ. ಇವೆಲ್ಲ ಶೌಚಾಲಯಗಳಲ್ಲಿ ಹಣ ಪಾವತಿಸಿ ಬಳಸುವ ಸೌಲಭ್ಯ ಕಲ್ಪಿಸಲಾಗಿದೆ.
ಪ್ರವಾಸಿ ಮಂದಿರದ ಸಮೀಪ ಚಳ್ಳಕೆರೆ ರಸ್ತೆಯಲ್ಲಿ ಅಪೂರ್ಣಗೊಂಡಿದ್ದ ಶೌಚಾಲಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ವೇದಾವತಿ ಬಡಾವಣೆಯಲ್ಲಿ ₹ 18 ಲಕ್ಷ ವೆಚ್ಚದಲ್ಲಿ ಮತ್ತು ಪ್ರಧಾನ ರಸ್ತೆಯಲ್ಲಿ ₹ 30 ಲಕ್ಷ ವೆಚ್ಚದಲ್ಲಿ (ಆಸ್ಪಿರೇಷನ್ ಟಾಯ್ಲೆಟ್) ಶೌಚಾಲಯ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಮಗಿದಿದೆ ಎನ್ನುತ್ತಾರೆ ಪೌರಾಯುಕ್ತ ಎಚ್. ಮಹಾಂತೇಶ್.