CHITRADURGA NEWS | 20 SEPTEMBER 2024
ಚಿತ್ರದುರ್ಗ: ನಿಯಮ ಉಲ್ಲಂಘಿಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ಹಾಕಿದರೆ ಸಾಲದು, ಪದೇ ಪದೇ ನಿಯಮಬಾಹಿರವಾಗಿ ಮಾರಾಟ ಮಾಡುವವರ ಅಂಗಡಿ ಪರವಾನಿಗೆ ರದ್ದು ಮಾಡಿ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಇದನ್ನೂ ಓದಿ: ಕ್ರೂಸರ್ ಟೈಯರ್ ಬ್ಲಾಸ್ಟ್ | 13 ಮಂದಿ ಪ್ರಾಣಾಪಯಾದಿಂದ ಪಾರು
2003ರ ಕೋಟ್ಪಾ ಕಾಯ್ದೆಯ (cotpa act)ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಿಬಂಧನೆ ವಿಧಿಸಿ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಅಂಗಡಿಗಳಿಗೆ ಪರವಾನಿಗೆ ನೀಡಬೇಕು. ನಿಯಮಗಳನ್ನು ಪಾಲಿಸಿದ ಅಂಗಡಿಗಳ ಮೇಲೆ ದಾಳಿ ನಡೆಸಿ, ಪೋಟೋ ಹಾಗೂ ವಿಡಿಯೋ ಸಹಿತ ವರದಿಯನ್ನು ಸಿದ್ದಪಡಿಸಿ, ಯಾವುದೇ ಮುಲಾಜು ಇಲ್ಲದೆ ಪರವಾನಿಗೆ ರದ್ದುಪಡಿಸಬೇಕು ಎಂದರು.
ಪ್ರೌಢಶಾಲೆ ಹಾಗೂ ಪಿಯು ಹಂತದಲ್ಲೇ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳ ಕಡೆ ಆಕರ್ಷಿತವಾಗುವ ಸಂಭವ ಹೆಚ್ಚು, ಆದ್ದರಿಂದ ಶಾಲಾ ಕಾಲೇಜುಗಳ ಆವರಣಗಳನ್ನು ಕಡ್ಡಾಯವಾಗಿ ತಂಬಾಕು ಮುಕ್ತ ಪ್ರದೇಶವನ್ನಾಗಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾ.ಪಂ. ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ತಂಬಾಕು ದಾಳಿ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಬೇಕು ಎಂದರು.
ಇದನ್ನೂ ಓದಿ: ಗಂಡ ಹೆಂಡತಿಯ ಬರ್ಭರ ಕೊಲೆ
ಬಸ್ ನಿಲ್ದಾಣಗಳು ಸಾರ್ವಜನಿಕ ಸ್ಥಳಗಳಾಗಿವೆ. ಕಾಯ್ದೆ ಅನುಸಾರ ಸಾರ್ವಜನಿಕ ಪ್ರದೇಶಗಳಲ್ಲಿ ತಂಬಾಕು ಉತ್ಪನಗಳ ಮಾರಾಟ ಹಾಗೂ ಉಪಯೋಗ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದರೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮಳಿಗೆಗಳಲ್ಲಿಯೇ ತಂಬಾಕು ಉತ್ಪನ್ನಗಳ ಮಾರಾಟ ಕಂಡು ಬಂದಿದೆ. ಇಂತಹ ಅಂಗಡಿಗಳ ಲೈಸ್ ಟೆಂಡರ್ ರದ್ದು ಪಡಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಿರ್ದೇಶನ ನೀಡಿದರು.
ತಂಬಾಕು ಬಳಕೆಯಿಂದ ದೂರ ಇರುವ ಬದಲಾವಣೆ ಪರ್ವ ಶಾಲಾ ಹಂತದಿಂದಲ್ಲೇ ಪ್ರಾರಂಭವಾಗಬೇಕು. ಇದರಲ್ಲಿ ಶಿಕ್ಷಣ ಇಲಾಖೆಯ ಪಾತ್ರ ಪ್ರಮುಖವಾಗಿದೆ. ಶಿಕ್ಷಕರು ತಂಬಾಕು ಉತ್ಪನಗಳ ಬಳಕೆಯಿಂದ ದೂರವಿದ್ದು ಮಕ್ಕಳಿಗೆ ಮಾದರಿಯಾಗಬೇಕು. ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳ ಮೂಲಕ ಶಾಲೆಗಳಲ್ಲಿ ತಂಬಾಕು ಬಳಕೆಯ ಮೇಲೆ ಕಟ್ಟು ನಿಟ್ಟಿನ ನಿಗಾವಹಿಸಬೇಕು. ಉಪನಿರ್ದೆಶಕರು ಸಹ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಪಾದಾಚಾರಿಗೆ ಅಪರಿಚಿತ ವಾಹನ ಡಿಕ್ಕಿ | ಸ್ಥಳದಲ್ಲೇ ಸಾವು
ಓರಲ್ ಹೆಲ್ತ್ ಸ್ಕ್ರೀನಿಂಗ್ ಕ್ಯಾಂಪ್‍ಗಳ ಮೂಲಕ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೇ ತಪ್ಪದೇ ತಪಾಸಣೆ ನಡೆಸಬೇಕು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಸಹ ರೈತರಿಗೆ ತಂಬಾಕು ಉತ್ಪನ್ನಗಳ ಬಳಕೆ ದುಷ್ಪರಿಣಾಮಗಳನ್ನು ಮನವರಿಕೆ ಮಾಡಲು ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ತಾಲ್ಲೂಕು ಮಟ್ಟದ ಅಧಿಕಾರಿಗಳು ನಿಗದಿ ಪಡಿಸಿದ ಗುರಿಗಿಂತಲೂ ಹೆಚ್ಚಿನ ಸಂಖ್ಯೆ ತಂಬಾಕು ಕಾರ್ಯಚರಣೆ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.
ಈಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ ಕಂಬಾಳಿ ಮಠ ಮಾತನಾಡಿ, ಜಿಲ್ಲಾ ಮಟ್ಟದ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ 1993 ಜನರು ಸೇವೆ ಪಡೆದಿದ್ದಾರೆ. ಇದರಲ್ಲಿ 239 ಜನರಿಗೆ ಚಿಕಿತ್ಸೆ ನೀಡಲಾಗಿದ್ದು, 25 ಜನರು ತಂಬಾಕು ತ್ಯಜಿಸಿ ಆರೋಗ್ಯ ಜೀವನಕ್ಕೆ ಮರಳಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಆಪ್ತರಿಂದ ಧನಲಾಭ | ದೂರ ಪ್ರಯಾಣ ಲಾಭದಾಯಕ | ಭೂ ವಿವಾದಗಳಲ್ಲಿ ಕಿರಿಕಿರಿ
ಜಿಲ್ಲಾ ಕೋಶದ ಸಲಹೆಗಾರ ಪ್ರಭುದೇವ್ ಬಿರಾದಾರ್, ಸರ್ಕಾರ ಸೂಚನೆಯಂತೆ 60 ದಿನಗಳ ಕಾಲ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ತಂಬಾಕು ಮುಕ್ತಗೊಳಿಸಲು ಯುವ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ತಂಬಾಕು ಮುಕ್ತ ಚಿತ್ರದುರ್ಗ ಜಿಲ್ಲೆ ನಮ್ಮಗುರಿ ಎನ್ನುವ ಪೋಸ್ಟರ್‍ಗಳನ್ನು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು.
ಸಭೆಯಲ್ಲಿ ಡಿಡಿಪಿಐ ಮಂಜುನಾಥ್, ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ಜಿಲ್ಲಾ ಮಾನಸಿಕ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿ ಡಾ.ನಾಗರಾಜ್, ಆರ್.ಸಿ.ಹೆಚ್ ಅಧಿಕಾರಿ ಡಾ.ಅಭಿನವ್, ತಾಲ್ಲೂಕು ಆರೋಗ್ಯಾಧಿಕಾರಿ ಬಿ.ವಿ.ಗಿರೀಶ್ ಇತರರಿದ್ದರು.