ಮುಖ್ಯ ಸುದ್ದಿ
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೋಟೆನಾಡು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಚಿತ್ರದುರ್ಗ ನ್ಯೂಸ್.ಕಾಂ: ಹುಬ್ಬಳ್ಳಿಯಲ್ಲಿ ಅಯೋಧ್ಯೆ ಕರಸೇವಕ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಿರುವ ರಾಜ್ಯ ಸರ್ಕಾರದ ವಿರುದ್ಧ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ವಿರೋಧಿ, ರಾಮ ಮಂದಿರ ವಿರೋಧಿ, ಗ್ಯಾರೆಂಟಿಗಳಲ್ಲಿ ಮೋಸ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹಣ ದುರ್ಬಳಕೆ ಮಾಡಿಕೊಂಡ ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಸರ್ಕಾರ ಎಂದು ಧಿಕ್ಕಾರ ಕೂಗಿದರು.
ಇದನ್ನೂ ಓದಿ: ನಗರಠಾಣೆ ಪೊಲೀಸ್ ಪೇದೆ ಮಹೇಂದ್ರ ನಿಧನ
31 ವರ್ಷಗಳ ಹಳೆಯ ಪ್ರಕರಣ ಕೆದಕಿ ಅಯೋಧ್ಯೆ ಹೋರಾಟದಲ್ಲಿ ಭಾಗಿಯಾಗಿದ್ದ ಕರಸೇವಕ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಿರುವುದು ಈ ಸರ್ಕಾರದ ಹಿಂದೂ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಎ.ಮುರುಳಿ ಮಾತನಾಡಿ, ಬಿಜೆಪಿ ಹುಟ್ಟಿದ್ದೇ ಮಂದಿರವಲ್ಲೇ ಕಟ್ಟುವೆವು ಎಂಬ ಘೋಷಣೆಯಿಂದ. ಈ ಮಾತನ್ನು ಸಾಕಾರ ಮಾಡುವ ಸಂದರ್ಭ ಇದಾಗಿದೆ.
ಇದನ್ನು ಸಹಿಸಿಕೊಳ್ಳಲು ಆಗದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಧೋರಣೆ ಮೂಲಕ ನಮ್ಮ ಕಾರ್ಯಕರ್ತರನ್ನು ಬಂಧಿಸುವ ಕೆಲಸಕ್ಕೆ ಮುಂದಾಗಿದೆ ಎಂದು ದೂರಿದರು.
ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಜನವರಿ 22 ರಂದು ಬಾಲ ರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ. ಇಡೀ ದೇಶಾದ್ಯಂತ ಹಿಂದುಗಳು ಅಂದು ದೀಪ ಬೆಳಗಿಸಿ ರಾಮನ ದೇಗುಲ ಉದ್ಘಾಟನೆಯನ್ನು ದೀಪಾವಳಿಯಂತೆ ಸಂಭ್ರಮಿಸಲು ಕಾತುರರಾಗಿದ್ದಾರೆ. ಈ ಸಂಭ್ರಮವನ್ನು ಕಾಂಗ್ರೆಸ್ಸಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ಇದರ ಪರಿಣಾಮವಾಗಿ ಕಾಂಗ್ರೆಸ್ ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ್ದ ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ಅವರನ್ನು 31 ವರ್ಷಗಳ ಹಳೆಯ ಪ್ರಕರಣವನ್ನು ಕೆದಕಿ ಬಂಧಿಸುವ ಮೂಲಕ ರಾಮ ಮಂದಿರ ವಿರೋಧಿ, ಹಿಂದೂ ವಿರೋಧಿ ವರ್ತನೆ ಮಾಡುತ್ತಿದೆ ಎಂದು ದೂರಿದರು.
ಇದನ್ನೂ ಓದಿ: ಹಕ್ಕಿ ಗೂಡಿಗೆ ಆಹಾರ ಕಲ್ಪಿಸಿದ ಶ್ರೀಗಳು
ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದೂ ವಿರೋಧಿಯಾಗಿ ವರ್ತನೆ ಮಾಡುತ್ತಿದೆ. ಅಭಿವೃದ್ಧಿ ಕೆಲಸಗಳನ್ನು ಬಿಟ್ಟು ವಿಷಯಾಂತರ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ.
ರಾಜ್ಯ ಸರ್ಕಾರದ ವಿರುದ್ಧ ರೈತರು, ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿರುವಾಗ ಜನರ ಗಮನ ಬೇರೆಡೆ ಸೆಳೆಯಲು ಕರ ಸೇವಕರನ್ನು 31 ವರ್ಷದ ನಂತರ ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವ ಮುಖಂಡ ಡಾ.ಸಿದ್ಧಾರ್ಥ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಗೆ ಎಲ್ಲ ತಯಾರಿ ನಡೆಯುತ್ತಿದೆ. ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ ಮನೆ ಮನೆಗೆ ತಲುಪುತ್ತಿದೆ. ಈ ಹಂತದಲ್ಲಿ ಸರಕಾರ ಹಿಂದೂ ವಿರೋಧಿಯಾಗಿ ವರ್ತಿಸುತ್ತಿದೆ. ಇದಕ್ಕೆ ನಾಡಿನ ಜನ ಉತ್ತರ ಕೊಡಲಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ಟಿ.ಜಿ.ನರೇಂದ್ರ, ಟಿ.ವೆಂಕಟೇಶ್ ಯಾದವ್, ಸಂಪತ್ ಕುಮಾರ್, ಮಲ್ಲಿಕಾರ್ಜುನ್, ಪಾಲಯ್ಯ, ಡಾ.ಮಂಜುನಾಥ್, ಜಗದೀಶ್, ರಾಮರೆಡ್ಡಿ, ಶಂಭು, ನಾಗರಾಜ್ ಬೇದ್ರೆ, ವಿಶ್ವನಾಥ್, ಸಿದ್ದೇಶ್, ನವೀನ್ ಚಾಲುಕ್ಯ, ಸುರೇಶ್ ಸಿದ್ದಾಪುರ, ಕಲ್ಲೇಶಯ್ಯ, ನಂದಿ ನಾಗರಾಜ್, ಶಿವಣ್ಣಾಚಾರ್, ಸಿಂಧು, ಸರಸ್ವತಿ, ರಜಿನಿ, ಕವನ, ಕಾಂಚನ, ವೀಣಾ, ಶ್ಯಾಮಲಾ, ಬಸಮ್ಮ ಸೇರಿದಂತೆ ನೂರಾರು ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.