ಮುಖ್ಯ ಸುದ್ದಿ
ಭದ್ರಾ ಕಾಮಗಾರಿ ಆರಂಭ | ಟ್ರಬಲ್ ಶೂಟರ್ ಡಿಕೆಶಿ ಮಾತುಕತೆ ಫಲಪ್ರದ | ಏಳೆಂಟು ವರ್ಷಗಳಿಂದ ಕಗ್ಗಂಟಾಗಿದ್ದ ಸಮಸ್ಯೆ
CHITRADURGA NEWS | 07 MARCH 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗಕ್ಕೆ ನೀರು ಹರಿಯಲು ಕಳೆದ ಏಳೆಂಟು ವರ್ಷಗಳಿಂದ ಅಡ್ಡಿಯಾಗಿದ್ದ ಅಜ್ಜಂಪುರ ಬಳಿಯ ಅಬ್ಬಿನಹೊಳಲು ಕಾಲುವೆ ಕಾಮಗಾರಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.
ಇಲ್ಲಿನ 33 ರೈತರು ಪರಿಹಾರದಲ್ಲಿ ತಾರತಮ್ಯದ ಕಾರಣಕ್ಕೆ ಕಾಮಗಾರಿಯನ್ನು ತಡೆದು ನಿಲ್ಲಿಸಿದ್ದರು. ಈ ಕಾರಣಕ್ಕೆ ಭದ್ರಾದಿಂದ ಅಬ್ಬಿನಹೊಳಲು ಗ್ರಾಮದವರೆಗೆ ಬಂದಿದ್ದ ಕಾಲುವೆ ಕಾಮಗಾರಿ ಅಲ್ಲಿಗೆ ನಿಂತಿತ್ತು.
ಈ ಗ್ರಾಮದಿಂದ ಮುಂದೆ ಸಿಗುವ ವೈ ಜಂಕ್ಷನ್‍ನಿಂದ ಮತ್ತೆ ಚಿತ್ರದುರ್ಗ ಶಾಖಾ ಕಾಲುವೆ ಬಹುತೇಕ ಪೂರ್ಣಗೊಂಡಿದೆ. ಬಾಟೆಲ್ ನೆಕ್ ರೀತಿಯಲ್ಲಿ ಇದ್ದ ಈ ಅಡ್ಡಿಯನ್ನು ಭದ್ರಾ ಮೇಲ್ದಂಡೆ ಅಧಿಕಾರಿಗಳು ಗುರುವಾರ ಬೆಳಗ್ಗೆ ಕಾಮಗಾರಿ ಆರಂಭಿಸುವ ಮೂಲಕ ಈ ವರ್ಷ ನೀರು ಹರಿಯುವ ಭರವಸೆ ಮೂಡಿಸಿದ್ದಾರೆ.
ಇದನ್ನೂ ಓದಿ: ಮುರುಘಾ ಮಠ ಎಸ್‍ಜೆಎಂ ವಿದ್ಯಾಪೀಠಕ್ಕೆ ಶಿವಯೋಗಿ ಕಳಸದ್ ಅಧ್ಯಕ್ಷ
ಈಗಾಗಲೇ ಹೊಳಲ್ಕೆರೆ ತಾಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸಲು ಅಗತ್ಯ ಪೈಪ್‍ಲೈನ್ ವ್ಯವಸ್ಥೆ ಆಗಿದ್ದು, ನೀರು ಹರಿದರೆ ಈ ತಾಲೂಕಿನ ಕೆರೆಗಳಿಗೆ ಅನುಕೂಲವಾಗಲಿದೆ.
ಪೊಲೀಸ್ ಭದ್ರತೆಯಲ್ಲೇ ಕಾಮಗಾರಿ:
ಬೆಳಗ್ಗೆಯೇ ಸುಮಾರು 170 ಮಂದಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೀಡು ಬಿಟ್ಟಿದ್ದು, ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ಆರಂಭವಾಗಿದೆ.
ನಾಲ್ಕಾರು ಹಿಟಾಚಿ, ಲಾರಿ, ಟಿಪ್ಪರ್ ಸೇರಿದಂತೆ ಕಾಮಗಾರಿ ನಿರ್ವಹಿಸಲು ಅಗತ್ಯ ಇರುವ ಎಲ್ಲ ಯಂತ್ರೋಪಕರಣಗಳು ಸಿದ್ಧವಾಗಿದ್ದು, ತ್ವರಿತವಾಗಿ ಕಾಮಗಾರಿ ಮುಗಿಸಲು ಗುತ್ತಿಗೆದಾರರು, ಇಂಜಿನಿಯರ್‍ಗಳು ಸಿದ್ಧವಾಗಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ರೈಲ್ವೇ ಯೋಜನೆಗಳಿಗೆ ಶುಕ್ರದೆಸೆ | ನೇರ ರೈಲು ಮಾರ್ಗಕ್ಕೆ ಅನುದಾನ ಬಿಡುಗಡೆ
ಟ್ರಬಲ್ ಶೂಟರ್ ಡಿಕೆಶಿ ಮಾತುಕತೆ ಫಲಪ್ರದ:
ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ, ರಾಜಕೀಯ ವಲಯದಲ್ಲಿ ಟ್ರಬಲ್ ಶೂಟರ್ ಎಂದೇ ಹೆಸರಾಗಿರುವ ಡಿ.ಕೆ.ಶಿವಕುಮಾರ್ ಮಾರ್ಚ್ 3 ಭಾನುವಾರ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದರು.
ಈ ವೇಳೆ ಅಬ್ಬಿನಹೊಳಲು ಗ್ರಾಮದ ರೈತರ ಜೊತೆಗೆ ಮಾತುಕತೆ ನಡೆಸಿ, ಅವರ ಸಮಸ್ಯೆ ಆಲಿಸಿ, ಪರಿಹಾರ ಕಂಡುಕೊಳ್ಳಲು ಬೆಂಗಳೂರಿಗೆ ಬರುವಂತೆ ತಿಳಿಸಿದ್ದರು.
ಆದರೆ, ಕಾಮಗಾರಿ ನಿಲ್ಲುವುದರಿಂದ ಯೋಜನಾ ವೆಚ್ಚ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಈ ವೇಳೆ ರೈತರು ಕೂಡಾ ಒಪ್ಪಿಗೆ ಸೂಚಿಸಿದ್ದರು.
ಮರು ದಿನದಿಂದ ಕೆಲಸ ಆರಂಭಿಸುವಂತೆ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಇದನ್ನೂ ಓದಿ: ಶಿವರಾತ್ರಿಗೆ ಅಬ್ಬರಿಸಲಿದ್ದಾನೆ ವರುಣ ದೇವ | ಭರ್ಜರಿ ಮಳೆಯ ಮುನ್ಸೂಚನೆ
ಡಿಕೆಶಿ ಭೇಟಿಯ ಮರುದಿನವೇ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ಕಾಮಗಾರಿ ನಡೆಸಲು ಸೂಕ್ತ ಭದ್ರತೆ ಒದಗಿಸುವಂತೆ ಭದ್ರಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಪತ್ರ ಬರೆದಿದ್ದರು.
ಈ ಎಲ್ಲಾ ಹಿನ್ನೆಲೆಯಲ್ಲಿ ಇಂದಿನಿಂದ ಅಬ್ಬಿನಹೊಳಲು ಬಳಿ ಕಾಮಗಾರಿ ಆರಂಭವಾಗಿದ್ದು, ಒಂದು ತಿಂಗಳಲ್ಲಿ ಮುಗಿಯುವ ಸಾಧ್ಯತೆ ಇದೆ. ಈ ಕಾಮಗಾರಿ ಮುಗಿದರೆ ಮುಂದಿನ ಮಳೆಗಾಲಕ್ಕೆ ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ನೀರು ಹರಿಯುವ ಸಾಧ್ಯತೆ ಇದೆ.
ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಸಹಿ ಸುದ್ದಿ | ಎಕ್ಸ್‍ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ
ಭದ್ರಾ ಕಾಲುವೆ ಹರಿಯುವ ಮಾರ್ಗದಲ್ಲಿ ರೈಲು ಮಾರ್ಗವೂ ಬರುತ್ತಿದ್ದು, ಇದು ಕೂಡಾ ಕಾಮಗಾರಿಗೆ ಅಡ್ಡಿಯಾಗಿತ್ತು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಆಸಕ್ತಿ ವಹಿಸಿ ಮೂರು ವರ್ಷಗಳ ಹಿಂದೆ ರೈಲ್ವೇ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಜೊತೆ ಮಾತುಕತೆ ನಡೆಸಿ, ಈ ಮಾರ್ಗದಲ್ಲಿನ ರೈಲುಗಳ ಮಾರ್ಗ ಬದಲಾಯಿಸಿ ಕಾಮಗಾರಿ ನಡೆಸಿ ಅನುಕೂಲ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.